ಈ ಲೇಖನ ಉದಯವಾಣಿ ದಿನಪತ್ರಿಕೆಯ ‘ಆರೋಗ್ಯವಾಣಿ’ ಪುರವಣಿಯಲ್ಲಿ 2025ರ ಜುಲೈ 20ರಂದು ಪ್ರಕಟವಾಗಿದೆ. Read this article in English
ಆರೋಗ್ಯವೇ ಭಾಗ್ಯ ಎಂಬ ಮಾತಿದೆ. ಆದರೆ ಅನಿರೀಕ್ಷಿತವಾಗಿ ಎದುರಾಗುವ ಕಾಯಿಲೆಗಳು, ಅಪಘಾತ ಅಥವಾ ಶಸ್ತ್ರಚಿಕಿತ್ಸೆಗಳು ಕೇವಲ ದೈಹಿಕ ಹಾಗೂ ಮಾನಸಿಕ ಆಘಾತವನ್ನಷ್ಟೇ ತರುವುದಿಲ್ಲ, ಜೊತೆಗೆ ಬೃಹತ್ ಆಸ್ಪತ್ರೆ ವೆಚ್ಚವನ್ನೂ ಹೆಗಲಿಗೆ ಹಾಕುತ್ತವೆ. ಇಂಥ ಆರ್ಥಿಕ ಆಘಾತಗಳಿಂದ ನಮ್ಮನ್ನು ಮತ್ತು ನಮ್ಮ ಕುಟುಂಬವನ್ನು ರಕ್ಷಿಸಿಕೊಳ್ಳಲು ಇರುವ ಪ್ರಾಯೋಗಿಕ ದಾರಿಯೇ ಆರೋಗ್ಯ ವಿಮೆ. ಆದರೂ, ಇಂದಿಗೂ ಅನೇಕರು ವಿಮೆ ಮಾಡಿಸಲು ಹಿಂದೇಟು ಹಾಕುತ್ತಾರೆ ಹಾಗೂ ಇದರ ನಿಯಮಗಳ ಬಗ್ಗೆ ಗೊಂದಲಕ್ಕೊಳಗಾಗುತ್ತಾರೆ.
ಈ ಲೇಖನವು ಆರೋಗ್ಯ ವಿಮೆಯ ಪ್ರಾಮುಖ್ಯತೆ, ಪಾಲಿಸಿ ಖರೀದಿಸುವ ಮುನ್ನ ತಿಳಿಯಬೇಕಾದ ಅಂಶಗಳು ಮತ್ತು ಅದನ್ನು ಜಾಣ್ಮೆಯಿಂದ ಬಳಸುವ ಬಗೆಯನ್ನು ಸರಳವಾಗಿ ವಿವರಿಸುತ್ತದೆ.
ಆರೋಗ್ಯ ವಿಮೆ ಏಕೆ ಮುಖ್ಯ?
ಕಾರಿನ ಏರ್ಬ್ಯಾಗ್ ಅಥವಾ ವಿಮಾನದ ಸೀಟಿನ ಕೆಳಗಿರುವ ಪ್ಯಾರಾಚೂಟ್ನಂತೆಯೇ ಆರೋಗ್ಯ ವಿಮೆ ಕೂಡ. ಅವನ್ನು ಬಳಸುವ ಪರಿಸ್ಥಿತಿ ಎಂದಿಗೂ ಬಾರದಿರಲಿ ಎಂದೇ ನಾವು ಬಯಸುತ್ತೇವೆ. ಆದರೆ ಅನಾಹುತವೊಂದು ಸಂಭವಿಸಿದಾಗ, ಅವು ನಮ್ಮೊಂದಿಗಿದ್ದರೆ ಎಷ್ಟೊಂದು ನಿರಾಳವಲ್ಲವೇ?
ಅದೇ ರೀತಿ, ನೀವು ಆಸ್ಪತ್ರೆ ಮೆಟ್ಟಿಲು ಹತ್ತದೆ ವರ್ಷಗಳ ಕಾಲ ಆರೋಗ್ಯವಾಗಿರಬಹುದು. ಅದಕ್ಕಾಗಿ ಕಟ್ಟಿದ ವಿಮಾ ಕಂತು (ಪ್ರೀಮಿಯಂ) ದಂಡವಲ್ಲ; ಅದು ನಿಮ್ಮ ನೆಮ್ಮದಿ ಹಾಗೂ ಕುಟುಂಬದ ಆರೋಗ್ಯ ಭದ್ರತೆಯ ಮೇಲಿನ ಹೂಡಿಕೆ.
ನೀವು ಕ್ಲೇಮ್ ಮಾಡುವ ಪ್ರಮೇಯವೇ ಬರಲಿಲ್ಲವೆಂದರೆ, ವಾಸ್ತವದಲ್ಲಿ ಅದೊಂದು ಆಶೀರ್ವಾದ.
ವಿಮೆ ಇಲ್ಲದಿದ್ದರೆ
ವಿಮೆ ಇಲ್ಲದಿದ್ದರೆ, ದಿಢೀರ್ ಎದುರಾಗುವ ಕಾಯಿಲೆಯೊಂದು ನಿಮ್ಮ ಜೀವಮಾನದ ಉಳಿತಾಯವನ್ನು ಕರಗಿಸಬಹುದು, ಆಸ್ತಿ ಮಾರುವಂತೆ ಮಾಡಬಹುದು ಅಥವಾ ಸಾಲದ ಶೂಲಕ್ಕೆ ತಳ್ಳಬಹುದು. ವಿಮೆ ಇದ್ದರೆ, ಆಸ್ಪತ್ರೆಯ ಬಿಲ್ನ ಚಿಂತೆ ಬಿಟ್ಟು ಚಿಕಿತ್ಸೆಯತ್ತ ಮಾತ್ರ ಗಮನ ಹರಿಸಬಹುದು.
ಜೊತೆಗೆ, ಪ್ರತಿ ಕೆಲವು ವರ್ಷಗಳಿಗೊಮ್ಮೆ ನಿಮ್ಮ ಪಾಲಿಸಿಯನ್ನು ಪರಿಶೀಲಿಸುವುದು ಮುಖ್ಯ. ವಯಸ್ಸು, ಕುಟುಂಬದ ಗಾತ್ರ ಮತ್ತು ಆದಾಯ ಬದಲಾದಂತೆ, ಪಾಲಿಸಿಯನ್ನೂ ಮೇಲ್ದರ್ಜೆಗೇರಿಸಬೇಕಾಗುತ್ತದೆ. ಆಡ್-ಆನ್ಗಳನ್ನು ಸೇರಿಸುವುದು, ಕವರೇಜ್ ಹೆಚ್ಚಿಸುವುದು ಅಥವಾ ಹೆಚ್ಚು ಸಮಗ್ರವಾದ ಪ್ಲಾನ್ಗೆ ಬದಲಾಗುವುದು ಸೂಕ್ತ.
ಉದ್ಯೋಗದಾತರು ನೀಡುವ ವಿಮೆಯನ್ನೇ ನೆಚ್ಚಿಕೊಳ್ಳದಿರಿ
ಕೆಲಸ ಮಾಡುವ ಅನೇಕರಿಗೆ ತಮ್ಮ ಕಂಪನಿಯೇ ಗ್ರೂಪ್ ಇನ್ಶುರೆನ್ಸ್ ಒದಗಿಸಿರುತ್ತದೆ. ಇದು ಉಪಯುಕ್ತವಾದರೂ, ಸಾಮಾನ್ಯವಾಗಿ ಸಾಕಾಗುವುದಿಲ್ಲ. ನೀವು ನಿವೃತ್ತರಾದಾಗ ಅಥವಾ ಕೆಲಸ ಬದಲಿಸಿದಾಗ ಈ ವಿಮೆ ರದ್ದಾಗುತ್ತದೆ. ಇದು ನಿಮ್ಮ ಪೋಷಕರಿಗೆ ಅನ್ವಯಿಸದಿರಬಹುದು ಅಥವಾ ಕೆಲವು ಚಿಕಿತ್ಸೆಗಳಿಗೆ ಮಿತಿಗಳನ್ನು ಹೊಂದಿರಬಹುದು.
ಹಾಗಾಗಿ, ನಿಮ್ಮ ನಿಯಂತ್ರಣದಲ್ಲಿರುವ ಮತ್ತು ಜೀವಮಾನವಿಡೀ ಮುಂದುವರಿಸಬಹುದಾದ ವೈಯಕ್ತಿಕ ಅಥವಾ ಕೌಟುಂಬಿಕ ಪಾಲಿಸಿಯನ್ನು ಖರೀದಿಸುವುದು ಜಾಣತನ.
ಟಾಪ್-ಅಪ್ ಪಾಲಿಸಿ
ಇದರ ಜೊತೆಗೆ ಟಾಪ್-ಅಪ್ ಪಾಲಿಸಿಗಳ ಬಗ್ಗೆಯೂ ಯೋಚಿಸಿ. ಇವು ಕಡಿಮೆ ಕಂತಿನಲ್ಲಿ ಹೆಚ್ಚು ಕವರೇಜ್ ನೀಡುವ ಆಯ್ಕೆಗಳು. ಆಸ್ಪತ್ರೆಯ ವೆಚ್ಚವು ನಿಮ್ಮ ಮೂಲ ವಿಮೆಯ ಮಿತಿಯನ್ನು ದಾಟಿದಾಗ ಮಾತ್ರ ಇವು ಸಕ್ರಿಯಗೊಳ್ಳುತ್ತವೆ ಮತ್ತು ಬೃಹತ್ ವೈದ್ಯಕೀಯ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸುತ್ತವೆ.
ವಿಮಾ ಕಂಪನಿಯನ್ನು ಬದಲಾಯಿಸಬಹುದು (ಪೋರ್ಟಿಂಗ್)
ನಿಮ್ಮ ಪ್ರಸ್ತುತ ವಿಮಾ ಪಾಲಿಸಿಯ ಬಗ್ಗೆ ಅಸಮಾಧಾನವಿದ್ದರೆ, ಮೊಬೈಲ್ ನಂಬರ್ ಪೋರ್ಟ್ ಮಾಡುವಂತೆಯೇ ವಿಮೆಯನ್ನೂ ಬೇರೆ ಕಂಪನಿಗೆ ಬದಲಾಯಿಸಬಹುದು. ಪಾಲಿಸಿ ನವೀಕರಿಸುವ ಕನಿಷ್ಠ 45 ದಿನಗಳ ಮೊದಲು ನೀವು ಅರ್ಜಿ ಸಲ್ಲಿಸಬೇಕು. ಪೋರ್ಟಿಂಗ್ ಮಾಡುವುದರಿಂದ ನಿಮ್ಮ ವೇಟಿಂಗ್ ಪೀರಿಯಡ್ ಹಾಗೂ ಇತರ ಪ್ರಯೋಜನಗಳನ್ನು ಹೊಸ ಕಂಪನಿಗೆ ವರ್ಗಾಯಿಸಿಕೊಳ್ಳಬಹುದು.
ನೀವು ಅರ್ಥಮಾಡಿಕೊಳ್ಳಲೇಬೇಕಾದ ಪ್ರಮುಖ ವಿಚಾರಗಳು
ಪಾಲಿಸಿಯನ್ನು ಖರೀದಿಸುವ ಮುನ್ನ ಈ ಕೆಳಗಿನ ಮೂಲಭೂತ ಅಂಶಗಳು ತಿಳಿದಿರಲಿ:
1. ಮೊದಲೇ ಇರುವ ಕಾಯಿಲೆಗಳು
ಪಾಲಿಸಿ ಖರೀದಿಸುವಾಗ ಮಧುಮೇಹ, ರಕ್ತದೊತ್ತಡ, ಅಸ್ತಮಾದಂತಹ ಯಾವುದೇ ಕಾಯಿಲೆಗಳಿದ್ದರೂ ಪ್ರಾಮಾಣಿಕವಾಗಿ ತಿಳಿಸಿ. ಅವನ್ನು ಮುಚ್ಚಿಟ್ಟರೆ ಮುಂದೊಮ್ಮೆ ಕ್ಲೇಮ್ ತಿರಸ್ಕೃತವಾಗಬಹುದು. ಇಂತಹ ಕಾಯಿಲೆಗಳಿಗೆ ಸಾಮಾನ್ಯವಾಗಿ 2 ರಿಂದ 4 ವರ್ಷಗಳ ವೇಟಿಂಗ್ ಪೀರಿಯಡ್ ಇರುತ್ತದೆ.
ನನ್ನ ರೋಗಿಯೊಬ್ಬರ ಅನುಭವ
ಇತ್ತೀಚೆಗಷ್ಟೇ ನನ್ನ ಬಳಿ ಒಬ್ಬರು ರೋಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಬಳಿ ಉತ್ತಮ ಕವರೇಜ್ ಇರುವ ವಿಮೆಯಿತ್ತು. ಆದರೆ, ಪಾಲಿಸಿ ಖರೀದಿಸುವಾಗ ತಮಗಿದ್ದ ಅಸ್ತಮಾ ಕಾಯಿಲೆಯ ಬಗ್ಗೆ ಅವರು ಕಂಪನಿಗೆ ತಿಳಿಸಿರಲಿಲ್ಲ. ಅಸ್ತಮಾ ಇದೆ ಎಂದು ಹೇಳಿದರೆ ಕಂತು ಹೆಚ್ಚಾಗುತ್ತದೆ, ಹೇಳದಿದ್ದರೆ ಸುಲಭವಾಗಿ ಪಾಲಿಸಿ ಸಿಗುತ್ತದೆ ಎಂದು ಏಜೆಂಟ್ ಒಬ್ಬರು ತಪ್ಪು ಸಲಹೆ ನೀಡಿದ್ದರು.
ದುರದೃಷ್ಟವಶಾತ್, ಬಿಲ್ ಕ್ಲೇಮ್ ಮಾಡುವಾಗ ವಿಮಾ ಕಂಪನಿಯು ರೋಗಿಯ ಹಳೆಯ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿ, ಅಸ್ತಮಾ ಮುಚ್ಚಿಟ್ಟಿದ್ದನ್ನು ಪತ್ತೆಹಚ್ಚಿ ಸಂಪೂರ್ಣ ಕ್ಲೇಮ್ ಅನ್ನು ತಿರಸ್ಕರಿಸಿತು. ವರ್ಷಗಟ್ಟಲೆ ಪ್ರಾಮಾಣಿಕವಾಗಿ ಕಂತು ಕಟ್ಟಿದ್ದರೂ, ಆ ರೋಗಿ ಮತ್ತು ಕುಟುಂಬ ಆರ್ಥಿಕವಾಗಿ ಹೈರಾಣಾಗಬೇಕಾಯಿತು.
ಇತರರು ಏನೇ ಹೇಳಿದರೂ, ಮೊದಲೇ ಇರುವ ಕಾಯಿಲೆಗಳನ್ನು ಮುಚ್ಚಿಡದಿರುವುದು ಬಹಳ ಮುಖ್ಯ.
ವೈದ್ಯರು ಮತ್ತು ವಕೀಲರ ಬಳಿ ಎಂದಿಗೂ ಸುಳ್ಳು ಹೇಳಬಾರದು ಎನ್ನುತ್ತಾರೆ. ಈಗ ಆ ಪಟ್ಟಿಗೆ ಮೂರನೆಯದನ್ನೂ ಸೇರಿಸಿ: ಆರೋಗ್ಯ ವಿಮಾ ಕಂಪನಿ.
2. ಕವರೇಜ್ ಮತ್ತು ಮಿತಿಗಳು
ಒಂದು ವರ್ಷದಲ್ಲಿ ನಿಮ್ಮ ಪಾಲಿಸಿ ಗರಿಷ್ಠ ಎಷ್ಟು ಮೊತ್ತವನ್ನು ಪಾವತಿಸುತ್ತದೆ ಎಂಬುದೇ ಸಮ್ ಇನ್ಶೂರ್ಡ್. ನಗರ ಪ್ರದೇಶದಲ್ಲಿರುವ ನಾಲ್ಕು ಜನರ ಕುಟುಂಬಕ್ಕೆ ಕನಿಷ್ಠ ₹10 ಲಕ್ಷ ಕವರೇಜ್ ಇರುವುದು ಸೂಕ್ತ. ರೂಮ್ ಬಾಡಿಗೆ ಅಥವಾ ನಿರ್ದಿಷ್ಟ ಚಿಕಿತ್ಸೆಗಳ ಮೇಲಿರುವ ಸಬ್-ಲಿಮಿಟ್ಗಳನ್ನು ಗಮನಿಸಿ. ಸಾಧ್ಯವಾದಷ್ಟು ಇಂತಹ ಮಿತಿಗಳಿಲ್ಲದ ಪಾಲಿಸಿಯನ್ನೇ ಆಯ್ದುಕೊಳ್ಳಿ.
3. ರೂಮ್ ಬಾಡಿಗೆಯ ಅರ್ಹತೆ
ನಿಮ್ಮ ಪಾಲಿಸಿಯು ಕೇವಲ ಜನರಲ್ ವಾರ್ಡ್ ಅಥವಾ ಶೇರ್ಡ್ ರೂಮ್ಗೆ ಮಾತ್ರ ಅನ್ವಯಿಸಬಹುದು. ಅರ್ಹತೆ ಪರಿಶೀಲಿಸದೆ ಪ್ರೈವೇಟ್ ರೂಮ್ಗೆ ದಾಖಲಾದರೆ, ಬಿಲ್ನಲ್ಲಿನ ವ್ಯತ್ಯಾಸದ ಮೊತ್ತವನ್ನು ನೀವೇ ಭರಿಸಬೇಕಾಗುತ್ತದೆ.
4. ಆಸ್ಪತ್ರೆಗೆ ದಾಖಲಾಗುವ ಮುನ್ನ ಮತ್ತು ನಂತರದ ವೆಚ್ಚ
ಉತ್ತಮ ಪಾಲಿಸಿಗಳು ಆಸ್ಪತ್ರೆಗೆ ದಾಖಲಾಗುವ 30 ದಿನಗಳ ಮುನ್ನ ಹಾಗೂ ಡಿಸ್ಚಾರ್ಜ್ ಆದ 90 ದಿನಗಳವರೆಗಿನ ಪರೀಕ್ಷೆಗಳು, ಸ್ಕ್ಯಾನಿಂಗ್, ವೈದ್ಯರ ಭೇಟಿ ಮತ್ತು ಔಷಧಿಗಳ ವೆಚ್ಚವನ್ನು ಭರಿಸುತ್ತವೆ.
5. ಡೇ ಕೇರ್ ಚಿಕಿತ್ಸೆಗಳು
ಆಧುನಿಕ ವೈದ್ಯಕೀಯ ಬೆಳವಣಿಗೆಯಿಂದಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ (cataract), ಕೀಮೋಥೆರಪಿ ಅಥವಾ ಡಯಾಲಿಸಿಸ್ಗೆ 24 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಉಳಿಯುವ ಅಗತ್ಯವಿಲ್ಲ. ಇಂತಹ ಡೇ ಕೇರ್ ಚಿಕಿತ್ಸೆಗಳನ್ನೂ ನಿಮ್ಮ ಪಾಲಿಸಿ ಕವರ್ ಮಾಡಬೇಕು.
6. ಒಪಿಡಿ ಮತ್ತು ಒಳರೋಗಿ ವೆಚ್ಚಗಳು
ಹೆಚ್ಚಿನ ಮೂಲ ಪಾಲಿಸಿಗಳು ಒಳರೋಗಿಗಳ ವಿಭಾಗದ ವೆಚ್ಚಗಳಾದ ಆಸ್ಪತ್ರೆ ವಾಸ, ಶಸ್ತ್ರಚಿಕಿತ್ಸೆ ಮತ್ತು ಐಸಿಯು ಬಿಲ್ಗಳನ್ನು ಮಾತ್ರ ಪಾವತಿಸುತ್ತವೆ. ವಿಶೇಷ ಆಡ್-ಆನ್ ಸೇರಿಸದ ಹೊರತು ಕನ್ಸಲ್ಟೇಷನ್, ಹಲ್ಲಿನ ಚಿಕಿತ್ಸೆ ಮತ್ತು ಪರೀಕ್ಷೆಗಳಂತಹ ಹೊರರೋಗಿ (OPD) ವೆಚ್ಚಗಳನ್ನು ಭರಿಸುವುದಿಲ್ಲ.
7. ಕನ್ಸ್ಯೂಮಬಲ್ಸ್
ಗ್ಲೌಸ್, ಸಿರಿಂಜ್ ಮುಂತಾದ ವಸ್ತುಗಳಿಗೆ ಆಸ್ಪತ್ರೆಗಳು ಶುಲ್ಕ ವಿಧಿಸುತ್ತವೆ. ಕೆಲವು ಪಾಲಿಸಿಗಳು ಇವನ್ನು ಕವರ್ ಮಾಡುವುದಿಲ್ಲ. ಇಂತಹ ವೈದ್ಯಕೀಯೇತರ ವೆಚ್ಚಗಳನ್ನು ನಿಮ್ಮ ಪಾಲಿಸಿ ಭರಿಸುತ್ತದೆಯೇ ಅಥವಾ ಅದಕ್ಕಾಗಿ ಪ್ರತ್ಯೇಕ ಆಡ್-ಆನ್ ಇದೆಯೇ ಎಂದು ಪರಿಶೀಲಿಸಿ.
8. ಕ್ಲೇಮ್ ಪ್ರಕ್ರಿಯೆ ಮತ್ತು ಪೂರ್ವಾನುಮತಿ
- ಕ್ಯಾಶ್ಲೆಸ್ ಕ್ಲೇಮ್ಗಾಗಿ ನಿಮ್ಮ ವಿಮಾ ಕಂಪನಿಯ ನೆಟ್ವರ್ಕ್ನಲ್ಲಿರುವ ಆಸ್ಪತ್ರೆಯನ್ನೇ ಆರಿಸಿಕೊಳ್ಳಬೇಕು.
- ಮೊದಲೇ ನಿಗದಿಯಾದ ಚಿಕಿತ್ಸೆಯಾಗಿದ್ದರೆ 3-5 ದಿನಗಳ ಮುಂಚಿತವಾಗಿ ವಿಮಾ ಕಂಪನಿಗೆ ಮಾಹಿತಿ ನೀಡಬೇಕು.
- ತುರ್ತು ಸಂದರ್ಭದಲ್ಲಿ, ದಾಖಲಾದ 24 ಗಂಟೆಗಳೊಳಗೆ ಮಾಹಿತಿ ನೀಡಬೇಕು. ದಾಖಲಾಗುವಾಗಲೇ ವಿಮೆಯ ಬಗ್ಗೆ ತಿಳಿಸಿದರೆ, ಸಾಮಾನ್ಯವಾಗಿ ಆಸ್ಪತ್ರೆಯವರೇ ಈ ಪ್ರಕ್ರಿಯೆಯನ್ನು ನೋಡಿಕೊಳ್ಳುತ್ತಾರೆ.
- ನೆಟ್ವರ್ಕ್ನಲ್ಲಿ ಇರದ ಆಸ್ಪತ್ರೆಗೆ ದಾಖಲಾದರೆ, ಮೊದಲು ನೀವೇ ಬಿಲ್ ಪಾವತಿಸಿ ಆಮೇಲೆ ವಿಮಾ ಕಂಪನಿಯಿಂದ ಮರುಪಾವತಿ ಪಡೆಯಬಹುದು.
ನೆಟ್ವರ್ಕ್ ಆಸ್ಪತ್ರೆಯಲ್ಲಿದ್ದ ಮಾತ್ರಕ್ಕೆ ಕ್ಯಾಶ್ಲೆಸ್ ಸೌಲಭ್ಯ ತಾನಾಗಿಯೇ ಸಿಗುವುದಿಲ್ಲ ಎಂಬುದನ್ನು ನೆನಪಿಡಿ. ಚಿಕಿತ್ಸೆಯು ಪಾಲಿಸಿಯ ವ್ಯಾಪ್ತಿಗೆ ಬರುತ್ತದೆಯೇ ಮತ್ತು ಆಸ್ಪತ್ರೆಗೆ ದಾಖಲಾಗುವುದು ವೈದ್ಯಕೀಯವಾಗಿ ಅನಿವಾರ್ಯವೇ ಎಂಬುದರ ಮೇಲೆ ಅನುಮತಿ ನಿರ್ಧಾರವಾಗುತ್ತದೆ.
9. ಕ್ಲೇಮ್ ಸೆಟಲ್ಮೆಂಟ್ ರೇಶಿಯೋ (CSR)
ಒಂದು ವಿಮಾ ಕಂಪನಿಯು ಎಷ್ಟು ಶೇಕಡಾ ಕ್ಲೇಮ್ಗಳನ್ನು ಅನುಮೋದಿಸುತ್ತದೆ ಎಂಬುದನ್ನು ಇದು ಸೂಚಿಸುತ್ತದೆ. 90% ಕ್ಕಿಂತ ಹೆಚ್ಚು CSR ಇರುವ ಕಂಪನಿಯನ್ನು ಆರಿಸಿಕೊಳ್ಳಿ. ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI) ಪ್ರತಿ ವರ್ಷ ಈ ಡೇಟಾವನ್ನು ಪ್ರಕಟಿಸುತ್ತದೆ.
ವಿಶೇಷ ಕವರೇಜ್ ಸನ್ನಿವೇಶಗಳು
- 1. ಗರ್ಭಧಾರಣೆ ಮತ್ತು ನವಜಾತ ಶಿಶುವಿನ ಆರೈಕೆ: ಮೆಟರ್ನಿಟಿ ಕವರ್ ಅನ್ನು ಆಡ್-ಆನ್ ಆಗಿ ಪಡೆಯಬಹುದು, ಆದರೆ ಇದಕ್ಕೆ 2-4 ವರ್ಷಗಳ ವೇಟಿಂಗ್ ಪೀರಿಯಡ್ ಇರುತ್ತದೆ. ಮೆಟರ್ನಿಟಿ ಕವರ್ ಸಕ್ರಿಯವಾಗಿದ್ದರೆ ಕೆಲವು ಪಾಲಿಸಿಗಳು ನವಜಾತ ಶಿಶುವಿಗೂ ಮೊದಲ ದಿನದಿಂದಲೇ ಕವರೇಜ್ ನೀಡುತ್ತವೆ.
- 2. ಮಕ್ಕಳು: ಫ್ಯಾಮಿಲಿ ಫ್ಲೋಟರ್ ಪ್ಲಾನ್ನಲ್ಲಿ ಮಕ್ಕಳನ್ನೂ ಸೇರಿಸಿಕೊಳ್ಳಬಹುದು. ಕೆಲವು ಪಾಲಿಸಿಗಳು ಲಸಿಕೆ ವೆಚ್ಚ ಮತ್ತು ವಾರ್ಷಿಕ ಆರೋಗ್ಯ ತಪಾಸಣೆಯನ್ನೂ ಒದಗಿಸುತ್ತವೆ.
- 3. ಹಿರಿಯ ನಾಗರಿಕರು: ನಿಮ್ಮ ಪೋಷಕರಿಗೆ 60 ವರ್ಷ ದಾಟಿದ್ದರೆ, ಸಾಮಾನ್ಯವಾಗಿ ಅವರಿಗಾಗಿ ಪ್ರತ್ಯೇಕ ಹಿರಿಯ ನಾಗರಿಕರ ಪಾಲಿಸಿ ಬೇಕಾಗುತ್ತದೆ. ಇವುಗಳ ಪ್ರೀಮಿಯಂ ಹೆಚ್ಚಿರುತ್ತದೆ ಮತ್ತು ಬಿಲ್ನ ಶೇಕಡಾ 20-30 ರಷ್ಟು ಹಣವನ್ನು ನೀವೇ ಕಟ್ಟಬೇಕೆಂಬ ಕೋ-ಪೇಮೆಂಟ್ ನಿಯಮಗಳಿರಬಹುದು.
ಸೂಕ್ತ ಪಾಲಿಸಿಯನ್ನು ಆರಿಸಿಕೊಳ್ಳುವುದು ಹೇಗೆ?
ಒಂದು ಸಾಮಾನ್ಯ ಪಾಲಿಸಿಯೊಂದಿಗೆ ಈಗಲೇ ವಿಮೆ ಮಾಡಿಸಲು ಆರಂಭಿಸಿ. ನಿವೃತ್ತಿಯಾಗುವವರೆಗೆ ಅಥವಾ ಕಾಯಿಲೆ ಬರುವವರೆಗೆ ಕಾಯಬೇಡಿ. ಭವಿಷ್ಯದಲ್ಲಿ ನಿಮ್ಮ ಅಗತ್ಯ ಮತ್ತು ಬಜೆಟ್ಗೆ ತಕ್ಕಂತೆ ಕವರೇಜ್ ಹೆಚ್ಚಿಸಿಕೊಳ್ಳಬಹುದು.
ಮುಖ್ಯವಾದ ಅಂಶ
ಆನ್ಲೈನ್ನಲ್ಲಿ ಪಾಲಿಸಿಗಳನ್ನು ಹೋಲಿಸಿ ನೋಡುವಾಗ ಎಚ್ಚರವಿರಲಿ. ತಟಸ್ಥ ಸಲಹೆಗಾರರಂತೆ ಕಾಣುವ ಅನೇಕ ವೆಬ್ಸೈಟ್ಗಳು ಮತ್ತು ಆ್ಯಪ್ಗಳು, ತಮಗೆ ಕಮಿಷನ್ ನೀಡುವ ಕಂಪನಿಯ ಪಾಲಿಸಿಗಳನ್ನೇ ಮುಂದಿಡುತ್ತವೆ. ಸರ್ಕಾರದ ಮಾನ್ಯತೆ ಪಡೆದ ಪೋರ್ಟಲ್ಗಳನ್ನು ಬಳಸಿ ಅಥವಾ ನಂಬಲರ್ಹ, ಸ್ವತಂತ್ರ ಸಲಹೆಗಾರರನ್ನು ಸಂಪರ್ಕಿಸಿ. ವಿಮಾ ಉತ್ಪನ್ನಗಳನ್ನು ಮಾರಾಟ ಮಾಡದೆ, ಕೇವಲ ನಿಷ್ಪಕ್ಷಪಾತ ಸಲಹೆ ನೀಡುವ beshak.org ಅಂತಹ ಒಂದು ಸ್ವತಂತ್ರ ವೇದಿಕೆಯಾಗಿದೆ.
ವಂಚಕ ಏಜೆಂಟ್ಗಳ ಬಗ್ಗೆ ಎಚ್ಚರವಿರಲಿ. ಕೆಲವರು ವಿಮೆಯಿಂದ ಅಸಾಧ್ಯವಾದ ಲಾಭ ಅಥವಾ ರಿಟರ್ನ್ಸ್ ಬರುತ್ತದೆ ಎಂದು ಸುಳ್ಳು ಭರವಸೆ ನೀಡುತ್ತಾರೆ. ದಾಖಲೆಗಳನ್ನು ಸುರಕ್ಷಿತವಾಗಿಡಿ, ಎಲ್ಲಾ ನಿಯಮಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಸಂಪೂರ್ಣ ಪಾರದರ್ಶಕತೆಯನ್ನು ನಿರೀಕ್ಷಿಸಿ.
ನೀವು ಕ್ಲೇಮ್ ಮಾಡಲೇ ಇಲ್ಲವೆಂದಾದರೆ?
ಅದು ನಿಜಕ್ಕೂ ಒಳ್ಳೆಯ ಸುದ್ದಿ! ಕಾರಿನ ಏರ್ಬ್ಯಾಗ್ಗಳನ್ನು ಬಳಸುವ ಪ್ರಮೇಯ ಬರಲಿಲ್ಲವೆಂದರೆ ನಮಗೆ ಹೇಗೆ ಸಮಾಧಾನವಾಗುತ್ತದೆಯೋ, ನಿಮ್ಮ ಕುಟುಂಬ ಆರೋಗ್ಯವಾಗಿರುವುದಕ್ಕೂ ನೀವು ಹಾಗೆಯೇ ಸಂತೋಷಪಡಬೇಕು. ಕ್ಲೇಮ್ ಮಾಡದ ವರ್ಷಗಳಿಗೆ ಅನೇಕ ಕಂಪನಿಗಳು ‘ನೋ-ಕ್ಲೇಮ್ ಬೋನಸ್’ ನೀಡುತ್ತವೆ; ಇದರಿಂದ ನಿಮ್ಮ ಕವರೇಜ್ ಮೊತ್ತ ಹೆಚ್ಚಾಗುತ್ತಾ ಹೋಗುತ್ತದೆ.
ಒಪಿಡಿಯಲ್ಲಿ ನಡೆದ ಒಂದು ಪ್ರಸಂಗ
ಇತ್ತೀಚೆಗೆ ನನಗೊಂದು ಕುತೂಹಲಕಾರಿ ಅನುಭವವಾಯಿತು. ರೋಗಿಯೊಬ್ಬರು ನನ್ನ ಒಪಿಡಿಗೆ ಬಂದು ಆಸ್ಪತ್ರೆಗೆ ಅಡ್ಮಿಟ್ ಮಾಡಿಕೊಳ್ಳುವಂತೆ ಕೇಳಿದರು. ಕಾರಣ ಕೇಳಿದಾಗ, “ಡಾಕ್ಟರೇ, ನಾನು ಐದು ವರ್ಷಗಳಿಂದ ಇನ್ಶುರೆನ್ಸ್ ಪ್ರೀಮಿಯಂ ಕಟ್ಟುತ್ತಿದ್ದೇನೆ, ಆದರೆ ಒಮ್ಮೆಯೂ ಬಳಸಿಲ್ಲ. ಅದು ಕೇವಲ ಆಸ್ಪತ್ರೆಗೆ ದಾಖಲಾದರೆ ಮಾತ್ರ ಸಿಗುತ್ತದೆ. ನನ್ನ ದುಡ್ಡೆಲ್ಲಾ ದಂಡವಾಯಿತು ಎನಿಸುತ್ತಿದೆ” ಎಂದರು.
ವಿಮೆ ಎಂಬುದು ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳಿಂದ ನಿಮ್ಮನ್ನು ರಕ್ಷಿಸಿ ನೆಮ್ಮದಿ ನೀಡುವುದಕ್ಕಾಗಿದೆಯೇ ಹೊರತು, ಕಟ್ಟಿದ ಹಣವನ್ನು ಉದ್ದೇಶಪೂರ್ವಕವಾಗಿ ‘ವಸೂಲಿ’ ಮಾಡುವುದಕ್ಕಲ್ಲ ಎಂದು ಅವರಿಗೆ ವಿವರಿಸಬೇಕಾಯಿತು.
ಕೇವಲ ಟೆಸ್ಟ್ ಅಥವಾ ಚೆಕ್-ಅಪ್ಗಳಿಗಾಗಿ ಆಸ್ಪತ್ರೆಗೆ ದಾಖಲಾದರೆ, ಗಂಭೀರ ಕಾಯಿಲೆಯ ಹಿನ್ನೆಲೆಯಿಲ್ಲದ ಕಾರಣ ವಿಮಾ ಕಂಪನಿಗಳು ಅಂತಹ ಕ್ಲೇಮ್ಗಳನ್ನು ತಿರಸ್ಕರಿಸುತ್ತವೆ. ವೈದ್ಯರು ಅಡ್ಮಿಟ್ ಆಗಲು ಹೇಳುವುದು ಅನಿವಾರ್ಯ ಸನ್ನಿವೇಶಗಳಲ್ಲಿ ಮಾತ್ರ.
ಸಾಮಾನ್ಯವಾಗಿ ಕವರ್ ಆಗದವು
ಇದರ ಜೊತೆಗೆ, ಪಾಲಿಸಿ ನಿಯಮಗಳ ಪ್ರಕಾರ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ ಕ್ಲೇಮ್ಗಳನ್ನು ತಿರಸ್ಕರಿಸಲಾಗುತ್ತದೆ. ಮದ್ಯಪಾನ ಅಥವಾ ಮಾದಕವ್ಯಸನದಿಂದ ಬರುವ ಕಾಯಿಲೆಗಳು, ಆತ್ಮಹತ್ಯೆ ಯತ್ನ, ಅಪಾಯಕಾರಿ ಕ್ರೀಡೆ ಅಥವಾ ಸಾಹಸಗಳಲ್ಲಿ ಆದ ಗಾಯಗಳು ಮತ್ತು ವೈದ್ಯಕೀಯ ಅನಿವಾರ್ಯತೆಯಿಲ್ಲದ ಸೌಂದರ್ಯವರ್ಧಕ ಚಿಕಿತ್ಸೆಗಳು (ಸುಟ್ಟ ಗಾಯಗಳ ನಂತರದ ಪ್ಲಾಸ್ಟಿಕ್ ಸರ್ಜರಿ ಹೊರತುಪಡಿಸಿ) ಇದರಲ್ಲಿ ಸೇರಿವೆ.
ಹಾಗೆಯೇ, ಕಾಯಿಲೆಯಿಲ್ಲದ ಸಾಮಾನ್ಯ ಹೆಲ್ತ್ ಚೆಕ್-ಅಪ್, ಹಲ್ಲಿನ ಚಿಕಿತ್ಸೆ (ಅಪಘಾತದಿಂದ ಆಗಿದ್ದರೆ ಮಾತ್ರ ಕವರ್ ಆಗುತ್ತದೆ) ಮತ್ತು ಜನ್ಮಜಾತ ಕಾಯಿಲೆಗಳನ್ನು ಸಾಮಾನ್ಯವಾಗಿ ಹೊರಗಿಡಲಾಗುತ್ತದೆ.
ನಿಮ್ಮ ಮತ್ತು ನಿಮ್ಮ ಕುಟುಂಬದ ಸುರಕ್ಷತೆಗಾಗಿ
ಆರೋಗ್ಯ ವಿಮೆ ನಿಮ್ಮ ಕುಟುಂಬಕ್ಕೊಂದು ಆರ್ಥಿಕ ಪ್ರಥಮ ಚಿಕಿತ್ಸಾ ಪೆಟ್ಟಿಗೆಯಿದ್ದಂತೆ.
ಅದು ಎಂದಿಗೂ ಬೇಕಾಗದಿರಲಿ ಎಂದೇ ನೀವು ಆಶಿಸುತ್ತೀರಿ, ಆದರೆ ಅನಿವಾರ್ಯತೆ ಎದುರಾದಾಗ ಅದಿರುವುದೇ ಒಂದು ದೊಡ್ಡ ಸಮಾಧಾನ. ಬದುಕಿನ ಅನಿಶ್ಚಿತತೆಗಳನ್ನು ಘನತೆಯಿಂದ ಎದುರಿಸಲು ಮತ್ತು ನಿಮ್ಮ ಉಳಿತಾಯವನ್ನು ರಕ್ಷಿಸಲು ಇದು ನೆರವಾಗುತ್ತದೆ.
ಆರೋಗ್ಯ ವಿಮೆಯನ್ನು ಖರೀದಿಸುವುದು, ನಿಮ್ಮ ಮತ್ತು ನಿಮ್ಮ ಕುಟುಂಬದ ಮೇಲಿನ ಕಾಳಜಿ ಮತ್ತು ಜವಾಬ್ದಾರಿಯ ಸಂಕೇತ.
ವಿಮೆ ಮಾಡಿಸಲು ಸರಿಯಾದ ಸಮಯವೆಂದರೆ, ಅದರ ಅಗತ್ಯ ನಿಮಗೆ ಬೀಳುವ ಮುನ್ನವೇ.
ಆರೋಗ್ಯ ವಿಮೆಯಲ್ಲಿ ಮಾಡಬೇಕಾದ್ದು ಮತ್ತು ಮಾಡಬಾರದ್ದೇನು
ಮಾಡಬೇಕಾದ್ದು
- ಪಾಲಿಸಿ ಖರೀದಿಸುವಾಗ ಮೊದಲೇ ಇರುವ ಎಲ್ಲಾ ಕಾಯಿಲೆಗಳನ್ನು ಪ್ರಾಮಾಣಿಕವಾಗಿ ತಿಳಿಸಿ.
- ಸರ್ಕಾರದ ಮಾನ್ಯತೆ ಪಡೆದ ಅಥವಾ ತಟಸ್ಥ ಸಲಹಾ ವೇದಿಕೆಗಳಲ್ಲಿ ಪಾಲಿಸಿಗಳನ್ನು ಹೋಲಿಸಿ ನೋಡಿ.
- ನೀವು ಯುವಕರಾಗಿದ್ದಾಗ ಮತ್ತು ಆರೋಗ್ಯವಾಗಿದ್ದಾಗಲೇ ವಿಮೆ ಮಾಡಿಸಿ.
- ಮುಂದುವರಿಕೆಯ (continuity) ಪ್ರಯೋಜನಗಳನ್ನು ಪಡೆಯಲು ಪಾಲಿಸಿಯನ್ನು ತಪ್ಪದೆ ನವೀಕರಿಸುತ್ತಿರಿ.
- ಐಆರ್ಡಿಎಐ ವೆಬ್ಸೈಟ್ನಿಂದ ವಿಮಾ ಕಂಪನಿಯ ಕ್ಲೇಮ್ ಸೆಟಲ್ಮೆಂಟ್ ರೇಶಿಯೋ ಪರಿಶೀಲಿಸಿ.
- ನಿಯಮಗಳನ್ನು ಎಚ್ಚರಿಕೆಯಿಂದ ಓದಿ; ಯಾವುದು ಕವರ್ ಆಗುತ್ತದೆ ಮತ್ತು ಯಾವುದು ಆಗುವುದಿಲ್ಲ ಎಂಬುದನ್ನು ಅರಿಯಿರಿ.
- ನಿಮ್ಮ ಕುಟುಂಬದ ಅಗತ್ಯಕ್ಕೆ ತಕ್ಕಷ್ಟು ಮೊತ್ತದ ವಿಮೆಯನ್ನು ಆರಿಸಿಕೊಳ್ಳಿ.
- ಪಾಲಿಸಿಯಲ್ಲಿ ಅವಕಾಶವಿದ್ದರೆ ರೋಗನಿರೋಧಕ ತಪಾಸಣೆಗಳಿಗಾಗಿ (preventive care) ಅದನ್ನು ಬಳಸಿ.
- ಪ್ರತಿ ಕೆಲವು ವರ್ಷಗಳಿಗೊಮ್ಮೆ ನಿಮ್ಮ ಪಾಲಿಸಿಯನ್ನು ಪರಿಶೀಲಿಸಿ.
- ಟಾಪ್-ಅಪ್ ಪಾಲಿಸಿಗಳತ್ತ ಗಮನಹರಿಸಿ.
ಮಾಡಬಾರದ್ದೇನು
- ಪಾಲಿಸಿ ಖರೀದಿಸುವಾಗ ಯಾವುದೇ ಕಾಯಿಲೆ ಅಥವಾ ಹಿಂದಿನ ವೈದ್ಯಕೀಯ ಇತಿಹಾಸವನ್ನು ಮುಚ್ಚಿಡಬೇಡಿ. ಇದು ಅತ್ಯಂತ ಮುಖ್ಯ.
- ಕೇವಲ ನಿಮ್ಮ ಉದ್ಯೋಗದಾತರು ನೀಡುವ ವಿಮೆ ಅಥವಾ ಸಣ್ಣ ಕವರೇಜ್ಗಳನ್ನು ಮಾತ್ರ ನಂಬಿಕೊಳ್ಳಬೇಡಿ.
- ವಯಸ್ಸಾಗುವವರೆಗೆ ಅಥವಾ ಕಾಯಿಲೆ ಬರುವವರೆಗೆ ಕಾಯಬೇಡಿ. ವಯಸ್ಸಾದಂತೆ ಪ್ರೀಮಿಯಂ ಹೆಚ್ಚಾಗುತ್ತದೆ ಮತ್ತು ಕವರೇಜ್ಗೆ ಮಿತಿಗಳಿರಬಹುದು.
- ಸಬ್-ಲಿಮಿಟ್ಗಳು ಅಥವಾ ರೂಮ್ ಬಾಡಿಗೆಯ ಮಿತಿಗಳನ್ನು ನಿರ್ಲಕ್ಷಿಸಬೇಡಿ. ಇವು ನಿಮ್ಮ ಕ್ಲೇಮ್ ಮೊತ್ತದ ಮೇಲೆ ಪರಿಣಾಮ ಬೀರಬಹುದು.
- ಕೇವಲ ಕಡಿಮೆ ಪ್ರೀಮಿಯಂ ಇದೆ ಎಂಬ ಕಾರಣಕ್ಕೆ ಪಾಲಿಸಿ ಖರೀದಿಸಬೇಡಿ. ಅಗ್ಗವಾಗಿರುವುದೆಲ್ಲ ಉತ್ತಮವಾಗಿರಬೇಕೆಂದಿಲ್ಲ.
- ಎಲ್ಲಾ ಪಾಲಿಸಿಗಳೂ ಒಪಿಡಿ ಅಥವಾ ಹೆರಿಗೆ ವೆಚ್ಚವನ್ನು ಭರಿಸುತ್ತವೆ ಎಂದು ಭಾವಿಸಬೇಡಿ. ಎಚ್ಚರಿಕೆಯಿಂದ ಪರಿಶೀಲಿಸಿ.
- ಏಜೆಂಟ್ಗಳು ನೀಡುವ ಅಸಾಧ್ಯ ಭರವಸೆಗಳಿಗೆ ಮರುಳಾಗಬೇಡಿ. ಯಾವಾಗಲೂ ಪರಿಶೀಲಿಸಿ.
- ನೀವು ಕ್ಲೇಮ್ ಮಾಡಲಿಲ್ಲವೆಂದು ಬೇಸರಪಡಬೇಡಿ! ಅದು ನಿಮ್ಮ ಉತ್ತಮ ಆರೋಗ್ಯದ ಸಂಕೇತ.
- ನಿಮ್ಮ ಆರೋಗ್ಯ ವಿಮೆಯಿಂದ ಹಣಕಾಸಿನ ಲಾಭ ಅಥವಾ ರಿಟರ್ನ್ಸ್ ನಿರೀಕ್ಷಿಸಬೇಡಿ! ಇದು ನೆಮ್ಮದಿಯ ಜೊತೆಗೆ ತುರ್ತು ಪರಿಸ್ಥಿತಿಯ ರಕ್ಷಣೆಗಾಗಿ ಮಾತ್ರ.
ವಿಮಾ ಒಂಬುಡ್ಸ್ಮನ್: ಪಾಲಿಸಿದಾರರಿಗೆ ಉಚಿತ ನೆರವು
ಎಲ್ಲಾ ಮುನ್ನೆಚ್ಚರಿಕೆಗಳ ನಡುವೆಯೂ ನಿಮ್ಮ ಕ್ಲೇಮ್ ಅನ್ಯಾಯವಾಗಿ ತಿರಸ್ಕೃತಗೊಂಡರೆ, ನಿಮಗಾಗಿ ನೆರವಿದೆ.
ಪಾಲಿಸಿದಾರರು ಮತ್ತು ವಿಮಾ ಕಂಪನಿಗಳ ನಡುವಿನ ವಿವಾದಗಳನ್ನು ಬಗೆಹರಿಸಲು ಭಾರತ ಸರ್ಕಾರವು ‘ವಿಮಾ ಒಂಬುಡ್ಸ್ಮನ್’ (Insurance Ombudsman) ಎಂಬ ಸ್ವತಂತ್ರ ಪ್ರಾಧಿಕಾರವನ್ನು ಸ್ಥಾಪಿಸಿದೆ. ನಿಮ್ಮ ವಿಮಾ ಕಂಪನಿಯು ಸರಿಯಾದ ಕಾರಣವಿಲ್ಲದೆ ಕ್ಲೇಮ್ ತಿರಸ್ಕರಿಸಿದರೆ ಅಥವಾ ಇತ್ಯರ್ಥಪಡಿಸಲು ವಿಳಂಬ ಮಾಡಿದರೆ, ನೀವು ಒಂಬುಡ್ಸ್ಮನ್ ಅನ್ನು ಸಂಪರ್ಕಿಸಬಹುದು. ಈ ಪ್ರಕ್ರಿಯೆಯು ಸಂಪೂರ್ಣ ಉಚಿತವಾಗಿದ್ದು, ವಕೀಲರ ಅಗತ್ಯವಿರುವುದಿಲ್ಲ.
ವಿಮಾ ಒಂಬುಡ್ಸ್ಮನ್ ಕಚೇರಿ – ಬೆಂಗಳೂರು (ಕರ್ನಾಟಕಕ್ಕೆ)
ವಿಳಾಸ: ಜೀವನ್ ಸೌಧ ಕಟ್ಟಡ, ಪಿಐಡಿ ನಂ. 5727N19, ನೆಲಮಹಡಿ, 19/19, 24ನೇ ಮುಖ್ಯ ರಸ್ತೆ, ಜೆ.ಪಿ. ನಗರ, 1ನೇ ಹಂತ, ಬೆಂಗಳೂರು – 560 078
ಫೋನ್: 08026652048, 08026652049
ಇಮೇಲ್: bimalokpal.bengaluru@cioins.co.in
ಸಂಪರ್ಕಿಸುವ ವಿಧಾನ
- ಮೊದಲಿಗೆ, ನಿಮ್ಮ ವಿಮಾ ಕಂಪನಿಗೆ ದೂರು ನೀಡಿ ಮತ್ತು ಪರಿಹಾರಕ್ಕಾಗಿ ಕನಿಷ್ಠ ಒಂದು ತಿಂಗಳು ಕಾಯಿರಿ.
- ಕಂಪನಿಯು ನಿಮ್ಮ ಕ್ಲೇಮ್ ಅನ್ನು ತಿರಸ್ಕರಿಸಿದರೆ ಅಥವಾ 30 ದಿನಗಳೊಳಗೆ ಪ್ರತಿಕ್ರಿಯಿಸದಿದ್ದರೆ, ವಿಮಾ ಕಂಪನಿಯ ಅಂತಿಮ ಉತ್ತರ ಬಂದ ಒಂದು ವರ್ಷದೊಳಗೆ ಅಥವಾ ಯಾವುದೇ ಉತ್ತರ ಬರದಿದ್ದರೆ ಒಂಬುಡ್ಸ್ಮನ್ಗೆ ದೂರು ಸಲ್ಲಿಸಬಹುದು.
- ಅರ್ಜಿ ನಮೂನೆಗಳು, ಮಾರ್ಗಸೂಚಿಗಳು ಮತ್ತು ವಿವರವಾದ ಮಾಹಿತಿಯು ಐಆರ್ಡಿಎಐ ವೆಬ್ಸೈಟ್ (irdai.gov.in) ಮತ್ತು ಕೌನ್ಸಿಲ್ ಫಾರ್ ಇನ್ಶುರೆನ್ಸ್ ಒಂಬುಡ್ಸ್ಮನ್ ಪೋರ್ಟಲ್ (cioins.co.in) ನಲ್ಲಿ ಲಭ್ಯವಿದೆ.



