ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಆಗಸ್ಟ್ 23ರಂದು ಪ್ರಕಟವಾಗಿದೆ. Read this article in English
ಹಲವರು ಹೇಳೋ ಸಾಮಾನ್ಯ ಕಂಪ್ಲೇಂಟ್ ಅಂದ್ರೆ- “ಡಾಕ್ಟ್ರೇ, ಸಿಕ್ಕಾಪಟ್ಟೆ ಸುಸ್ತು, ಮೈಕೈ ನೋವು, ಕೆಲಸದಲ್ಲಿ ಆಸಕ್ತಿ ಇಲ್ಲ, ಏನೋ ಒಂಥರಾ ಕಿರಿಕಿರಿ…”
ಅವರ ರಿಪೋರ್ಟ್ಸ್ ಎಲ್ಲಾ ಚೆಕ್ ಮಾಡಿ, “ಎಲ್ಲಾ ನಾರ್ಮಲ್ ಇದೆಯಲ್ಲಪ್ಪ, ರಾತ್ರಿ ಎಷ್ಟು ಹೊತ್ತು ನಿದ್ದೆ ಮಾಡ್ತೀರಾ?” ಅಂತ ಕೇಳಿದ್ರೆ, ಕೆಲವರು ಬಲು ಹೆಮ್ಮೆಯಿಂದ ಹೇಳ್ತಾರೆ: “ಅದೇನ್ ಕೇಳ್ತೀರಾ ಬಿಡಿ ಡಾಕ್ಟ್ರೇ, ಬ್ಯುಸಿ ಲೈಫ್. ರಾತ್ರಿ 1 ಗಂಟೆ ತನಕ ಲ್ಯಾಪ್ಟಾಪ್, ಮೊಬೈಲ್ ಅಂತ ಕೆಲಸ ಮಾಡ್ತಾ ಇರ್ತೀನಿ, ಬೆಳಗ್ಗೆ 5 ಗಂಟೆಗೆ ಎದ್ದುಬಿಡ್ತೀನಿ. ನಮಗೆ ಮೂರ್ನಾಲ್ಕು ಗಂಟೆ ನಿದ್ದೆ ಸಕಾಗುತ್ತೆ!” ಇತ್ತೀಚಿನ ದಿನಗಳಲ್ಲಿ ಕಡಿಮೆ ನಿದ್ದೆ ಮಾಡುವುದು ಒಂದು ದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಳ್ಳುವ ಟ್ರೆಂಡ್ ಶುರುವಾಗಿದೆ.
ಇದನ್ನ ಕೇಳಿದಾಗ ನನಗೆ ನಿಜಕ್ಕೂ ಅಚ್ಚರಿಯಾಗುತ್ತೆ. ನಮ್ಮ ಕೈಯಲ್ಲಿರೋ ಮೊಬೈಲ್ ಬ್ಯಾಟರಿ 15% ಗೆ ಬಂದ್ರೆ ಸಾಕು, ನಮ್ಮ ಜೀವ ಬಾಯಿಗೆ ಬರುತ್ತೆ. “ಅಯ್ಯೋ ಬ್ಯಾಟರಿ ಲೋ ಆಯ್ತು” ಅಂತ ಎಲ್ಲಿದೆಯಪ್ಪಾ ಚಾರ್ಜರ್ ಅಂತ ಹುಡುಕಾಡ್ತೀವಿ. ಅದನ್ನ 100% ಚಾರ್ಜ್ ಆಗೋಕೆ ಪ್ಲಗ್ಗೆ ಹಾಕ್ತೀವಿ. ಆದರೆ, ಈ ‘ದೇಹ’ ಅನ್ನೋ ಅದ್ಭುತ ಯಂತ್ರದ ಬ್ಯಾಟರಿ ಡೌನ್ ಆದರೂ, ಅದಕ್ಕೆ ಮಾತ್ರ ಸರಿಯಾಗಿ ‘ಚಾರ್ಜಿಂಗ್’ (ನಿದ್ದೆ) ಕೊಡೋದನ್ನೇ ನಾವೆಲ್ಲ ಮರೆತುಬಿಟ್ಟಿದ್ದೀವಿ!
ನಿದ್ದೆ ಅಂದ್ರೆ ಟಿವಿ ಸ್ವಿಚ್ ಆಫ್ ಮಾಡಿದ ಹಾಗಲ್ಲ!
ನಮ್ಮಲ್ಲಿ ಅನೇಕರ ತಪ್ಪು ಕಲ್ಪನೆ ಎಂದರೆ, ನಿದ್ದೆ ಮಾಡುವುದು ಎಂದರೆ ಟಿವಿ ಸ್ವಿಚ್ ಆಫ್ ಮಾಡಿದಂತೆ ದೇಹವನ್ನು ನಿಷ್ಕ್ರಿಯಗೊಳಿಸುವುದು ಎಂದು. ಖಂಡಿತ ಅಲ್ಲ. ನಮ್ಮ ಕಣ್ಣು ಮುಚ್ಚಿದಾಗ, ನಮ್ಮ ದೇಹದ ಒಳಗೆ ಒಂದು ದೊಡ್ಡ ‘ಮೇಂಟೆನೆನ್ಸ್ ಫ್ಯಾಕ್ಟರಿ’ ಕೆಲಸ ಶುರುವಾಗುತ್ತದೆ. ಇಡೀ ದಿನ ನಾವು ನೋಡಿದ, ಕೇಳಿದ, ಕಲಿತ ವಿಚಾರಗಳೆಲ್ಲಾ ಮೆದುಳಿನಲ್ಲಿ ಸರಿಯಾದ ಫೈಲ್ಗಳಿಗೆ ಸೇರೋದು ನಿದ್ದೆಯಲ್ಲೇ. ದೇಹದ ಸವೆದ ಜೀವಕೋಶಗಳು ರಿಪೇರಿ ಆಗೋದು, ರೋಗನಿರೋಧಕ ಶಕ್ತಿ ಹೆಚ್ಚಾಗೋದು ನಾವೆಲ್ಲಾ ನಿದ್ದೆ ಮಾಡುವಾಗಲೇ.
ಸರಿಯಾದ ನಿದ್ದೆ ಇಲ್ಲ ಅಂದ್ರೆ, ಮಾರನೇ ದಿನ ಮೊಬೈಲ್ ಹ್ಯಾಂಗ್ ಆದ ಹಾಗೆ ನಮ್ಮ ಮೆದುಳು ಹ್ಯಾಂಗ್ ಆಗುತ್ತೆ. ದೀರ್ಘಕಾಲದ ನಿದ್ದೆಯ ಕೊರತೆ ಕೇವಲ ಸುಸ್ತಿಗೆ ಮಾತ್ರ ಸೀಮಿತವಾಗುವುದಿಲ್ಲ; ಅದು ರಕ್ತದೊತ್ತಡ, ಮಧುಮೇಹ, ಮತ್ತು ಹೃದಯದ ಕಾಯಿಲೆಗಳಿಗೆ ರಾಜಮಾರ್ಗವನ್ನು ಮಾಡಿಕೊಡುತ್ತದೆ.
ಕತ್ತಲೆಗೂ ನಿದ್ದೆಗೂ ಇರುವ ನಂಟು
ಹಿಂದಿನ ಕಾಲದಲ್ಲಿ ಕರೆಂಟ್ ಇರಲಿಲ್ಲ. ಸೂರ್ಯ ಮುಳುಗಿ ಕತ್ತಲಾದಾಗ ನಮ್ಮ ದೇಹದ ಮೆದುಳಿನಲ್ಲಿ ‘ಮೆಲಟೋನಿನ್’ ಅನ್ನೋ ಹಾರ್ಮೋನ್ ಉತ್ಪತ್ತಿಯಾಗಿ, ಕಣ್ಣಿಗೆ ತಾನಾಗಿಯೇ ನಿದ್ದೆ ಆವರಿಸುತ್ತಿತ್ತು. ಈಗೇನಾಗಿದೆ? ಮಲಗೋ ಕೋಣೆಯಲ್ಲಿ ಹಗಲಿಗಿಂತ ಹೆಚ್ಚು ಬೆಳಕು! ಟಿವಿ, ಲ್ಯಾಪ್ಟಾಪ್, ಮೊಬೈಲ್ ಸ್ಕ್ರೀನ್ಗಳಿಂದ ಬರುವ ‘ನೀಲಿ ಬೆಳಕು’ ನಮ್ಮ ಮೆದುಳಿಗೆ “ಇನ್ನೂ ಹಗಲೇ ಇದೆ, ಮಲಗೋದು ಬೇಡ” ಅಂತ ತಪ್ಪು ಸಂದೇಶ ಕಳಿಸುತ್ತೆ.
ಊಟ ತನ್ನಿಚ್ಛೆ, ನಿದ್ದೆ ಕಣ್ಣಿಚ್ಛೆ
ನಮ್ಮ ಹಿರಿಯರು ಒಂದು ಅದ್ಭುತವಾದ ಮಾತು ಹೇಳ್ತಾರೆ- “ಊಟ ತನ್ನಿಚ್ಛೆ, ನಿದ್ದೆ ಕಣ್ಣಿಚ್ಛೆ” ಅಂತ. ಊಟ ಬೇಕೆನಿಸಿದಾಗ ನಮ್ಮ ಇಷ್ಟದಂತೆ ಬಲವಂತವಾಗಿ ಎರಡು ತುತ್ತು ಹೆಚ್ಚು ತಿನ್ನಬಹುದು, ಆದರೆ ನಿದ್ದೆಯನ್ನು ಹಾಗೆ ಕಣ್ಣಿಗೆ ಬಲವಂತವಾಗಿ ತರಿಸಿಕೊಳ್ಳೋಕೆ ಸಾಧ್ಯವೇ ಇಲ್ಲ. ಹಾಸಿಗೆ ಮೇಲೆ ಬಿದ್ದು, ‘ಛೇ, ಇನ್ನು ನಿದ್ದೆ ಬರ್ತಿಲ್ವಲ್ಲ, ಟೈಮ್ ಹನ್ನೆರಡಾಯ್ತಲ್ಲ, ನಾಳೆ ಬೆಳಿಗ್ಗೆ ಬೇರೆ ಬೇಗ ಏಳಬೇಕು’ ಅಂತ ಗಡಿಯಾರ ನೋಡ್ತಾ ಒದ್ದಾಡಿದಷ್ಟೂ ನಿದ್ದೆ ನಮಗಿಂತ ಹತ್ತು ಹೆಜ್ಜೆ ದೂರ ಓಡುತ್ತೆ! ನಿದ್ದೆ ಅನ್ನೋದು ಒಂಥರಾ ಬೆದರಿದ ಹಕ್ಕಿ ಇದ್ದ ಹಾಗೆ. ನೀವು ಅದನ್ನು ಹಿಡಿಯಬೇಕು ಅಂತ ಅದರ ಹಿಂದೆ ಬಲವಂತವಾಗಿ ಓಡಿದರೆ, ಅದು ಇನ್ನಷ್ಟು ದೂರಾ ಹಾರಿ ಹೋಗುತ್ತದೆ. ಅದೇ ನೀವು ಸುಮ್ಮನೆ, ಶಾಂತವಾಗಿ ಕೂತರೆ, ಅದೇ ತಾನಾಗಿಯೇ ಬಂದು ನಿಮ್ಮ ಹೆಗಲ ಮೇಲೆ ಕೂರುತ್ತದೆ. ಹಾಗಾಗಿ, ನಿದ್ದೆ ಬರಲಿಲ್ಲ ಅಂತ ಟೆನ್ಷನ್ ಮಾಡಿಕೊಳ್ಳೋದನ್ನ ಬಿಟ್ಟು, ಮನಸ್ಸನ್ನು ರಿಲ್ಯಾಕ್ಸ್ ಮಾಡಿ. ಕಣ್ಣು ಮುಚ್ಚಿ, ನಿಧಾನವಾಗಿ ದೀರ್ಘವಾಗಿ ಉಸಿರಾಡುತ್ತಾ ಯಾವುದಾದರೂ ಹಿತವಾದ ನೆನಪುಗಳಲ್ಲಿ ತೇಲಿ. ಆಗ ‘ನಿದ್ದೆ’ ಅನ್ನೋ ಹಕ್ಕಿ ಮೆಲ್ಲಗೆ ಬಂದು ನಿಮ್ಮ ಕಣ್ಣಿನ ರೆಪ್ಪೆಯ ಮೇಲೆ ಮನೆ ಮಾಡುತ್ತದೆ!
ಉತ್ತಮ ನಿದ್ದೆ ಅನ್ನೋದು ಒಂದು ಕಲೆ. ಅದನ್ನೇ ವೈದ್ಯಕೀಯ ಭಾಷೆಯಲ್ಲಿ ‘ಸ್ಲೀಪ್ ಹೈಜೀನ್’ ಅಂತ ಕರೆಯುತ್ತಾರೆ. ಉತ್ತಮ ಆರೋಗ್ಯಕ್ಕಾಗಿ ನಾವೆಲ್ಲರೂ ಪಾಲಿಸಲೇಬೇಕಾದ ಸ್ಲೀಪ್ ಹೈಜೀನ್ ಸೂತ್ರಗಳು ಇಲ್ಲಿವೆ:
- ಸಮಯ ಪಾಲನೆ ಇರಲಿ: ಪ್ರತಿದಿನ, ರಜೆಯ ದಿನವೂ ಸೇರಿ, ಒಂದೇ ಸಮಯಕ್ಕೆ ಮಲಗುವ ಮತ್ತು ಏಳುವ ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹದ ಒಳಗಿನ ಗಡಿಯಾರವನ್ನು ಸೆಟ್ ಮಾಡುತ್ತದೆ.
- ಸ್ಕ್ರೀನ್ಗಳಿಗೆ ಗುಡ್ಬೈ: ಮಲಗುವ ಕನಿಷ್ಠ ಒಂದು ಅಥವಾ ಒಂದೂವರೆ ಗಂಟೆ ಮುಂಚೆ ಮೊಬೈಲ್, ಟಿವಿ, ಲ್ಯಾಪ್ಟಾಪ್ಗಳನ್ನು ದೂರ ಇಡಿ. ಬೇಕಿದ್ದರೆ, ಪುಸ್ತಕ ಓದುವ ಅಥವಾ ಹಿತವಾದ ಸಂಗೀತ ಕೇಳುವ ಅಭ್ಯಾಸ ರೂಢಿಸಿಕೊಳ್ಳಿ.
- ಕೋಣೆಯ ವಾತಾವರಣ: ಮಲಗುವ ಕೋಣೆ ಕತ್ತಲಾಗಿರಲಿ, ಸ್ವಲ್ಪ ತಂಪಾಗಿರಲಿ ಮತ್ತು ಶಾಂತವಾಗಿರಲಿ. ಬೆಳಕು ಮೆಲಟೋನಿನ್ ಉತ್ಪಾದನೆಗೆ ಅಡ್ಡಿಯಾಗುತ್ತದೆ ಎಂಬುದನ್ನು ಮರೆಯದಿರಿ.
- ಹಾಸಿಗೆ ಕೇವಲ ನಿದ್ದೆಗೆ ಮಾತ್ರ: ಹಾಸಿಗೆಯ ಮೇಲೆ ಕುಳಿತು ಲ್ಯಾಪ್ಟಾಪ್ನಲ್ಲಿ ಕೆಲಸ ಮಾಡುವುದು, ಊಟ ಮಾಡುವುದು ಬೇಡ. ಹಾಸಿಗೆ ಎಂದರೆ ಕೇವಲ ನಿದ್ದೆಗೆ ಮಾತ್ರ ಎಂಬುದು ಮೆದುಳಿಗೆ ರಿಜಿಸ್ಟರ್ ಆಗಬೇಕು.
- ಕೆಫೀನ್ ಮತ್ತು ಊಟದ ಮೇಲೆ ನಿಗಾ: ಮಧ್ಯಾಹ್ನದ ನಂತರ ಅತಿಯಾಗಿ ಕಾಫಿ, ಟೀ ಕುಡಿಯುವುದನ್ನು ನಿಲ್ಲಿಸಿ. ಮಲಗುವ ಮುನ್ನ ಹೊಟ್ಟೆ ಬಿರಿಯುವಂತೆ ಭಾರಿ ಊಟ ಮಾಡಬೇಡಿ, ಹಾಗೆಯೇ ತೀರಾ ಖಾಲಿ ಹೊಟ್ಟೆಯಲ್ಲೂ ಮಲಗಬೇಡಿ.
- ಹಗಲಿನಲ್ಲಿ ದೈಹಿಕ ಶ್ರಮ: ಹಗಲಿನಲ್ಲಿ ಸ್ವಲ್ಪ ವ್ಯಾಯಾಮ ಅಥವಾ ದೈಹಿಕ ಶ್ರಮ ಇರಲಿ. ದೇಹ ದೈಹಿಕವಾಗಿ ಸುಸ್ತಾದಾಗ ಸಹಜವಾಗಿಯೇ ಒಳ್ಳೆಯ ನಿದ್ದೆ ಬರುತ್ತದೆ.
ನೆನಪಿರಲಿ: ನಿದ್ದೆ ಅನ್ನೋದು ಸಮಯ ವ್ಯರ್ಥ ಮಾಡುವ ಪ್ರಕ್ರಿಯೆಯಲ್ಲ, ಅದು ನಮ್ಮ ನಾಳೆಯ ಆರೋಗ್ಯದ ಅತಿದೊಡ್ಡ ಬಂಡವಾಳ. ಸರಿಯಾಗಿ ನಿದ್ದೆ ಮಾಡಿ, ನಿಮ್ಮ ಆರೋಗ್ಯದ ಬ್ಯಾಟರಿಯನ್ನು ಪ್ರತಿದಿನ ನೂರು ಶೇಕಡಾ ಚಾರ್ಜ್ ಮಾಡಿಕೊಳ್ಳಿ!



