ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ನವೆಂಬರ್ 1ರಂದು ಪ್ರಕಟವಾಗಿದೆ. Read this article in English
ದೇಹದ ರಕ್ಷಣಾ ವ್ಯವಸ್ಥೆ (ಇಮ್ಯೂನಿಟಿ) ಅಂದರೆ ಹೇಗಿರಬೇಕು? ನಮ್ಮ ಮನೆಯನ್ನು ಕಾಯುವ ಒಂದು ನಿಷ್ಠಾವಂತ ನಾಯಿಯ ಹಾಗೆ ಇರಬೇಕು! ಹೊರಗಿನಿಂದ ಯಾರಾದರೂ ಕಳ್ಳರು, ಅಪರಿಚಿತರು (ಬ್ಯಾಕ್ಟೀರಿಯಾ, ವೈರಸ್) ಬಂದರೆ ಬೊಗಳಿ, ಕಚ್ಚಿ ಓಡಿಸಬೇಕು. ಆದರೆ ಮನೆಯವರನ್ನು ಕಂಡರೆ ಬಾಲ ಅಲ್ಲಾಡಿಸುತ್ತಾ ವಿಧೇಯತೆಯಿಂದ ಇರಬೇಕು. ಆದರೆ, ಆ ನಿಷ್ಠಾವಂತ ಕಾವಲು ನಾಯಿಗೆ ಇದ್ದಕ್ಕಿದ್ದಂತೆ ಬುದ್ಧಿಭ್ರಮಣೆಯಾಗಿ, ತನ್ನ ಮನೆಯವರನ್ನೇ ಕಳ್ಳರು ಅಂತ ತಿಳಿದು, ಅವರನ್ನೇ ಕಚ್ಚೋಕೆ ಶುರು ಮಾಡಿದರೆ ಹೇಗಿರುತ್ತೆ?
ನಮ್ಮ ದೇಹದ ರಕ್ಷಣಾ ಪಡೆಗೆ ಹೊರಗಿನ ವೈರಿಗಳನ್ನು ಕೊಲ್ಲುವ ಕೆಲಸ ಕೊಟ್ಟರೆ, ಅದು ಒಮ್ಮೊಮ್ಮೆ ದೊಡ್ಡ ಕನ್ಫ್ಯೂಷನ್ ಮಾಡಿಕೊಳ್ಳುತ್ತದೆ. ನಮ್ಮದೇ ದೇಹದ ಆರೋಗ್ಯವಂತ ಅಂಗಗಳನ್ನು ಇವು ನಮಗೆ ಸೇರಿದವರಲ್ಲ, ಹೊರಗಿನ ಶತ್ರುಗಳು ಅಂತ ಭಾವಿಸಿ ಅವುಗಳ ಮೇಲೆಯೇ ದಾಳಿ ಮಾಡಲು ಶುರುಮಾಡುತ್ತದೆ! ಇದನ್ನೇ ವೈದ್ಯಕೀಯ ಭಾಷೆಯಲ್ಲಿ ‘ಆಟೋ-ಇಮ್ಯೂನ್ ಡಿಸೀಸ್’ ಅಥವಾ ‘ಸ್ವಯಂ ನಿರೋಧಕ ಕಾಯಿಲೆ’ ಅಂತ ಕರೆಯುತ್ತಾರೆ. ನಮ್ಮನ್ನು ರಕ್ಷಿಸಬೇಕಾದ ಗುರಾಣಿಯೇ, ನಮ್ಮನ್ನು ಕೊಯ್ಯುವ ಕತ್ತಿಯಾಗಿ ಬದಲಾದ ಕಥೆ ಇದು!
ಆಟೊ ಇಮ್ಯೂನ್ ಕಾಯಿಲೆಗಳು ಇಂದು ಹೆಚ್ಚು ಕಾಣಿಸಿಕೊಳ್ಳುತ್ತಿವೆ. ಮನಸ್ಸಿನ ಒತ್ತಡ ಸಹ, ಇಂತಹ ಕಾಯಿಲೆಗಳು ಉಲ್ಬಣಗೊಳ್ಳಲು ಒಂದು ಮುಖ್ಯ ಕಾರಣ!
ಎಂಭತ್ತಕ್ಕೂ ಹೆಚ್ಚು ರೂಪಗಳು!
ಈ ಆಟೋ-ಇಮ್ಯೂನ್ ಕಾಯಿಲೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ವಿಧಗಳಿವೆ. ಯಾವ ಅಂಗದ ಮೇಲೆ ದಾಳಿ ನಡೆಯುತ್ತದೆಯೋ, ಅದಕ್ಕೆ ತಕ್ಕಂತೆ ರೋಗದ ಹೆಸರು ಬದಲಾಗುತ್ತದೆ.
- ಈ ರಕ್ಷಣಾ ಪಡೆ ನಮ್ಮ ಕೀಲುಗಳ ಮೇಲೆ ದಾಳಿ ಮಾಡಿದರೆ ಅದು ‘ರುಮಟಾಯ್ಡ್ ಆರ್ಥೈಟಿಸ್’ (ಸಂಧಿವಾತ).
- ನಮ್ಮ ಚರ್ಮದ ಬಣ್ಣ ಕೊಡುವ ಕಣಗಳ ಮೇಲೆ ದಾಳಿ ಮಾಡಿದರೆ ಅದು ಬಿಳಿ ಮಚ್ಚೆ (ವಿಟಿಲಿಗೊ) ಅಥವಾ ಸೋರಿಯಾಸಿಸ್.
- ನಮ್ಮ ಮೇದೋಜೀರಕ ಗ್ರಂಥಿಯ ಇನ್ಸುಲಿನ್ ಉತ್ಪಾದಿಸುವ ಜೀವಕೋಶಗಳನ್ನೇ ನಾಶ ಮಾಡಿದರೆ ಅದು ‘ಟೈಪ್-1 ಡಯಾಬಿಟಿಸ್’.
- ಥೈರಾಯ್ಡ್ ಗ್ರಂಥಿಗೆ ತೊಂದರೆ ಕೊಟ್ಟರೆ ಅದು ‘ಹಶಿಮೊಟೊ ಥೈರಾಯ್ಡೈಟಿಸ್’.
ಒಂದೇ, ಎರಡೇ… ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ!
ಹೀಗೇಕೆ ಆಗುತ್ತದೆ? ಕಾವಲುಗಾರನಿಗೆ ಕನ್ಫ್ಯೂಸ್ ಆಗಿದ್ದೇಕೆ? ಇದಕ್ಕೆ ನಿಖರವಾದ ಕಾರಣ ಯಾರಿಗೂ ಗೊತ್ತಿಲ್ಲ. ವಂಶವಾಹಿಗಳು, ಪರಿಸರದ ಕೆಲವು ವೈರಸ್ ಸೋಂಕುಗಳು, ಮತ್ತು ಇಂದಿನ ನಮ್ಮ ಜೀವನಶೈಲಿಯ ಅತಿಯಾದ ಮಾನಸಿಕ ಒತ್ತಡ ಇವೆಲ್ಲವೂ ಸೇರಿಕೊಂಡು ಈ ರಕ್ಷಣಾ ವ್ಯವಸ್ಥೆಯ ತಲೆ ಕೆಡಿಸುತ್ತವೆ.
ಪರಿಹಾರ ಏನು?
ಕಾವಲು ನಾಯಿ ಮನೆಯವರನ್ನೇ ಕಚ್ಚುತ್ತಿದೆ ಅಂತ ಆ ನಾಯಿಗೆ ಗುಂಡು ಹೊಡೆಯೋಕೆ ಆಗುತ್ತಾ? ಇಲ್ಲ! ನಾಯಿ ಸತ್ತರೆ, ನಿಜವಾದ ಕಳ್ಳರು ಮನೆಗೆ ಸುಲಭವಾಗಿ ನುಗ್ಗುತ್ತಾರೆ (ಅಂದರೆ ಬೇರೆ ಇನ್ಫೆಕ್ಷನ್ಗಳು ಬರುತ್ತವೆ). ಹಾಗಾಗಿ ನಮ್ಮ ರಕ್ಷಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ನಾಶ ಮಾಡುವಂತಿಲ್ಲ. ಬದಲಾಗಿ, ಆ ನಾಯಿಗೆ ಸ್ವಲ್ಪ ‘ಔಷಧ’ ಕೊಟ್ಟು, ಅದರ ಕೋಪವನ್ನು ತಗ್ಗಿಸಿ, ಶಮನ ಮಾಡಿ ಮಲಗಿಸಬೇಕು ಅಷ್ಟೇ. ವೈದ್ಯರು ಕೊಡುವ ಇಮ್ಯುನೊ-ಸಪ್ರೆಸೆಂಟ್ ಮತ್ತು ಸ್ಟೀರಾಯ್ಡ್ ಮಾತ್ರೆಗಳು ಮಾಡುವುದು ಇದೇ ಕೆಲಸವನ್ನು. ಅವು ರಕ್ಷಣಾ ಪಡೆಯ ಅತಿಯಾದ ಕೋಪವನ್ನು ಕಂಟ್ರೋಲ್ ಮಾಡುತ್ತವೆ.
ಮನಸ್ಸು ಮತ್ತು ಕಾಯಿಲೆ
ಈ ಕಾಯಿಲೆಗಳಿಗೂ ಮನಸ್ಸಿಗೂ ಬಿಡಿಸಲಾಗದ ನಂಟಿದೆ. ನಾವು ಎಷ್ಟೇ ದುಬಾರಿ ಮಾತ್ರೆಗಳನ್ನು ತಿಂದರೂ, ನಮ್ಮ ಮನಸ್ಸಿನಲ್ಲಿ ಸಿಕ್ಕಾಪಟ್ಟೆ ಟೆನ್ಷನ್ ಇದ್ದರೆ, ಆ ಕಾವಲು ನಾಯಿಗೆ ಮತ್ತೆ ಮತಿಭ್ರಮಣೆ ಆಗುತ್ತದೆ; ಆಗ ಕಾಯಿಲೆ ಮತ್ತೆ ಉಲ್ಬಣವಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಆಟೋ-ಇಮ್ಯೂನ್ ಕಾಯಿಲೆ ಇದ್ದವರು ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಪ್ರತಿದಿನ ಸ್ವಲ್ಪ ವ್ಯಾಯಾಮ, ಧ್ಯಾನ, ಒಳ್ಳೆಯ ನಿದ್ದೆ, ಮತ್ತು ಮುಖದಲ್ಲಿ ಸದಾ ಒಂದು ‘ಮಂದಹಾಸ’ ಇರಬೇಕು. ಟೆನ್ಷನ್ ಕಡಿಮೆ ಮಾಡಿದರೆ, ನಿಮ್ಮ ಒಳಗಿನ ಆ ‘ಕಾವಲುಗಾರ’ ಕೂಡ ಕೂಲ್ ಆಗಿರುತ್ತಾನೆ!
ಜ್ಞಾಪಕ ಇರ್ಲಿ: ಕಾಯಿಲೆ ಗುಣಪಡಿಸಲಾಗದ್ದು ಅಂತ ಹೆದರಬೇಡಿ. ಪ್ರೀತಿ, ತಾಳ್ಮೆ ಮತ್ತು ಸರಿಯಾದ ಚಿಕಿತ್ಸೆಯಿಂದ ಆಟೋ-ಇಮ್ಯೂನ್ ಎಂಬ ಮೊಂಡು ನಾಯಿಯನ್ನೂ ಪಳಗಿಸಿ ಸಂತೋಷದ ಜೀವನ ನಡೆಸಬಹುದು!



