ತೂಕ ಇಳಿಯುತ್ತಿಲ್ಲವೇ? ತಪ್ಪು ನಿಮ್ಮ ಊಟದ್ದಲ್ಲ, ‘ಟೈಮಿಂಗ್’ನದ್ದು!

Why is it difficult to lose weight?

“ಡಾಕ್ಟರೇ, ನಾನು ಗುಬ್ಬಚ್ಚಿಯಷ್ಟು ತಿಂತೀನಿ, ಗಾಳಿ ಕುಡಿದ್ರೂ ದಪ್ಪ ಆಗ್ತೀನಿ…”

ನನ್ನ ಓಪಿಡಿಯಲ್ಲಿ ದಿನಾಲೂ ಈ ಗೋಳು ಕೇಳಿ ಕೇಳಿ ನನಗೆ ಬೇಸರವಾಗಿದೆ. ನಿಜ ಹೇಳಲಾ? ನನಗೆ ಇದು ನೋವು ತರುತ್ತದೆ. ಯಾಕೆಂದರೆ, ಇಷ್ಟು ದಿನ ನಾವು ವೈದ್ಯರು ಕೂಡ ನಿಮಗೆ ತಪ್ಪು ಪಾಠ ಹೇಳಿಕೊಟ್ಟಿದ್ದೆವು – “ಕಡಿಮೆ ತಿನ್ನಿ, ವ್ಯಾಯಾಮ ಮಾಡಿ, ಸಣ್ಣಗಾಗ್ತೀರಿ” ಅಂತ.

ಆದರೆ, ಯೋಚಿಸಿ ನೋಡಿ… ಹೊಟ್ಟೆ ತುಂಬಾ ಬಿರಿಯಾನಿ ತಿನ್ನೋ ನಿಮ್ಮ ಫ್ರೆಂಡ್ ಸಣ್ಣಗೇ ಇರ್ತಾನೆ, ಡಯಟ್ ಮಾಡೋ ನೀವು ನೀರು ಕುಡಿದರೂ ದಪ್ಪಗಾಗ್ತೀರಿ. ಇದು ಹೇಗೆ? ಹೌದಲ್ಲವೇ?

ಗಮನಿಸಿ, ನಮ್ಮ ದೇಹ ಒಂದು ‘ಬ್ಯಾಂಕ್ ಅಕೌಂಟ್’ ಅಲ್ಲ; ಅದೊಂದು ಜೀವಂತ ಯಂತ್ರ. ತೂಕ ಇಳಿಸೋದು ಕೇವಲ ಲೆಕ್ಕಾಚಾರದ ಆಟ ಅಲ್ಲ, ಅದು ಹಾರ್ಮೋನ್ಗಳ ಆಟ. ಅದರಲ್ಲೂ ಮುಖ್ಯವಾಗಿ ‘ಇನ್ಸುಲಿನ್’ (insulin) ಎಂಬ ಹಾರ್ಮೋನ್.

English Version Why Is It Hard to Lose Weight? The Truth About Insulin

ಹಳೆಯ ತಪ್ಪು ಕಲ್ಪನೆ – ಹೊಸ ಸತ್ಯ

ನಾವು ಇಷ್ಟು ದಿನ ಅಂದುಕೊಂಡಿದ್ದೇ ಬೇರೆ, ಈಗ ವಿಜ್ಞಾನ ಹೇಳುತ್ತಿರುವುದೇ ಬೇರೆ.

ಬ್ಯಾಂಕ್ ಅಕೌಂಟ್ ಲೆಕ್ಕ ಅಲ್ಲ, ಹಾರ್ಮೋನ್ ಆಟ
ಹಳೆಯ ತಪ್ಪು ಕಲ್ಪನೆ (ಕ್ಯಾಲೋರಿ ಲೆಕ್ಕಾಚಾರ)ಹೊಸ ಸತ್ಯ (ಹಾರ್ಮೋನ್ ಲೆಕ್ಕಾಚಾರ)
“ಎಲ್ಲಾ ಕ್ಯಾಲೋರಿಗಳು ಒಂದೇ”“ಎಲ್ಲಾ ಕ್ಯಾಲೋರಿಗಳು ಒಂದೇ ಅಲ್ಲ”
100 ಕ್ಯಾಲೋರಿ ಜಂಕ್ ಆಹಾರ ತಿಂದರೆ ಕೊಬ್ಬು ಬೆಳೆಯುತ್ತದೆ. ಅದೇ 100 ಕ್ಯಾಲೋರಿ ಆರೋಗ್ಯಕರ ಆಹಾರ ತಿಂದರೆ ದೇಹಕ್ಕೆ ಶಕ್ತಿ ಸಿಗುತ್ತದೆ.
“ಆಗಾಗ ಸ್ವಲ್ಪ ಸ್ವಲ್ಪ ತಿನ್ನುತ್ತಲೇ ಇರಿ”“ಆಗಾಗ ತಿನ್ನುತ್ತಾ ಇರಬೇಡಿ”
ಪದೇ ಪದೇ ತಿಂದರೆ ಇನ್ಸುಲಿನ್ ಏರುತ್ತಲೇ ಇರುತ್ತದೆ. ಊಟದ ಮಧ್ಯೆ ಗ್ಯಾಪ್ ಇದ್ದರೆ ಮಾತ್ರ ಕೊಬ್ಬು ಕರಗುತ್ತದೆ.
“ವ್ಯಾಯಾಮ ಮಾಡಿದರೆ ಸಣ್ಣಗಾಗ್ತೀವಿ”“ಊಟದ ಪದ್ಧತಿಯೇ ಮುಖ್ಯ”
ನೀವು ತಪ್ಪು ಊಟ ಮಾಡಿ, ಎಷ್ಟೇ ಓಡಿದರೂ ಪ್ರಯೋಜನವಿಲ್ಲ. ಆರೋಗ್ಯಕ್ಕೆ ವ್ಯಾಯಾಮ ಬೇಕು, ಆದರೆ ತೂಕ ಇಳಿಸಲು ಪಥ್ಯವೇ ಬೇಕು.

ಹತ್ತು ಇಡ್ಲಿಗಳ ಲೆಕ್ಕಾಚಾರ: ಎಷ್ಟು ತಿಂತೀರಿ ಅನ್ನೋದಲ್ಲ, ಯಾವಾಗ ತಿಂತೀರಿ ಅನ್ನೋದು ಮುಖ್ಯ!

ಒಂದು ಸರಳ ಉದಾಹರಣೆ ಕೊಡ್ತೀನಿ. ನೀವು ದಿನಕ್ಕೆ 10 ಇಡ್ಲಿ ತಿನ್ನಬೇಕು ಅಂತ ಇಟ್ಟುಕೊಳ್ಳಿ.

  • ಸನ್ನಿವೇಶ 1: ಬೆಳಗ್ಗೆ 9 ಗಂಟೆಗೆ 5 ಇಡ್ಲಿ, ರಾತ್ರಿ 8 ಗಂಟೆಗೆ 5 ಇಡ್ಲಿ ತಿಂತೀರಿ.
  • ಸನ್ನಿವೇಶ 2: ಅದೇ 10 ಇಡ್ಲಿಯನ್ನು, ದಿನಕ್ಕೆ 5 ಬಾರಿ, ಎರಡೆರಡು ಇಡ್ಲಿಯಂತೆ (ಬೆಳಗ್ಗೆ 9, 11, ಮಧ್ಯಾಹ್ನ 2, ಸಂಜೆ 5, ರಾತ್ರಿ 8) ತಿಂತೀರಿ.

ಎರಡರಲ್ಲೂ ನೀವು ತಿಂದಿದ್ದು 10 ಇಡ್ಲಿಯೇ. ಆದರೆ, ಸನ್ನಿವೇಶ 2 ರಲ್ಲಿ ನಿಮ್ಮ ತೂಕ ಹೆಚ್ಚಾಗುವ ಸಾಧ್ಯತೆ ಹೆಚ್ಚು!

ಯಾಕೆ ಗೊತ್ತಾ? ನೀವು ಯಾವಾಗ ಬಾಯಿಗೆ ಆಹಾರ ಹಾಕುತ್ತೀರೋ, ಆಗ ರಕ್ತದಲ್ಲಿ ‘ಇನ್ಸುಲಿನ್’ ಏರುತ್ತದೆ. ಇನ್ಸುಲಿನ್ ಏರಿದಾಗ ದೇಹ ‘ಕೊಬ್ಬು ಕರಗಿಸುವುದನ್ನು’ (fat burning) ನಿಲ್ಲಿಸಿ ‘ಕೊಬ್ಬು ಶೇಖರಿಸಲು’ (fat storage) ಶುರು ಮಾಡುತ್ತದೆ. ನಾವು ದಿನವಿಡೀ ಬಾಯಿ ಆಡಿಸುತ್ತಲೇ ಇದ್ದರೆ, ಇನ್ಸುಲಿನ್ ಕೆಳಗೆ ಇಳಿಯುವುದೇ ಇಲ್ಲ. ಇದೇ ನಮ್ಮೆಲ್ಲರ ಸಮಸ್ಯೆಯ ಮೂಲ!

ನನ್ನ “ಶಾಲಾ ಪೀರಿಯಡ್” ಸೂತ್ರ

ಇದಕ್ಕೆ ಪರಿಹಾರ ಏನು? ನನ್ನ ಹತ್ತಿರ ಬರುವ ವ್ಯಕ್ತಿಗಳಿಗೆ ನಾನು ಹೇಳೋದು ಒಂದೇ ಮಾತು – “ನಿಮ್ಮ ಶಾಲಾ ದಿನಗಳನ್ನು ನೆನಪಿಸಿಕೊಳ್ಳಿ.”

ಶಾಲೆಗಳಲ್ಲಿ ಹೇಗೆ ಪಾಠಗಳಿಗೆ ಪೀರಿಯಡ್ (period) ಇರುತ್ತಿತ್ತೋ, ಹಾಗೇ ಈಗ ಊಟಕ್ಕೆ ಮೂರೇ ಪೀರಿಯಡ್ ಇಟ್ಟುಕೊಳ್ಳಿ:

  1. ತಿಂಡಿ ಪೀರಿಯಡ್
  2. ಮಧ್ಯಾಹ್ನದ ಊಟದ ಪೀರಿಯಡ್
  3. ರಾತ್ರಿ ಊಟದ ಪೀರಿಯಡ್

ಪ್ರತಿ ಪೀರಿಯಡ್ ಕೇವಲ 45 ನಿಮಿಷ. ಆ ಸಮಯದಲ್ಲಿ ಹೊಟ್ಟೆ ತುಂಬಾ ಊಟ ಮಾಡಿ. ಟೀ, ಕಾಫಿ, (ಸ್ವೀಟ್ಸ್) ಏನಿದ್ದರೂ ಆ ಊಟದ ಜೊತೆಗೇ ಮುಗಿಸಿಬಿಡಿ.

ಆದರೆ ಒಮ್ಮೆ 45 ನಿಮಿಷದ ಪೀರಿಯಡ್ ಆಯ್ತು ಅಂದರೆ, ‘ಅಡಿಗೆ ಮನೆ ಕ್ಲೋಸ್’!

ಎರಡು ಪೀರಿಯಡ್ ಊಟಗಳ ಮಧ್ಯೆ ಬಿಸ್ಕತ್ತು, ಟೀ, ಕಾಫಿ, ಗ್ರೀನ್ ಟೀ, ಮಿಕ್ಸ್ಚರ್… ಯಾವುದೂ ಬೇಡ. ನಮಗೆ ಎಷ್ಟೋ ಸಲ ಹಸಿವಾಗಿದೆ ಅಂತ ಅನ್ನಿಸಿದಾಗ, ನಿಜಕ್ಕೂ ಅದು ಬಾಯಾರಿಕೆ ಆಗಿರುತ್ತದೆ. ಆಗೆಲ್ಲಾ ಬರೀ ನೀರು ಮಾತ್ರ ಕುಡಿಯಿರಿ. ಹೀಗೆ ಗ್ಯಾಪ್ ಕೊಟ್ಟಾಗ ಮಾತ್ರ ನಿಮ್ಮ ಇನ್ಸುಲಿನ್ ಕೆಳಗೆ ಇಳಿದು, ದೇಹದಲ್ಲಿರುವ ಹಳೆಯ ಕೊಬ್ಬು ಕರಗಲು ಶುರುವಾಗುತ್ತದೆ. ಇದಲ್ಲದೇ ಬೇರೆ ರೀತಿಯಲ್ಲಿ ಸಾಧ್ಯವಿಲ್ಲ.

ಪರೀಕ್ಷೆ ಮಾಡಿಕೊಳ್ಳಿ: ನೀವು ಎಲ್ಲಿದ್ದೀರಿ?

ನಿಮ್ಮ ಆರೋಗ್ಯದ ಸ್ಥಿತಿ ಹೇಗಿದೆ ಎಂದು ತಿಳಿಯಲು ಈ ಕೆಳಗಿನ ಕೋಷ್ಟಕ ನೋಡಿ.

ಪ್ರಯತ್ನದಿಂದ ತೂಕ ಇಳಿಯುತ್ತಿದೆ: ಹಸಿರು ವಲಯ (ಸುರಕ್ಷಿತ)

  • ಸ್ವಲ್ಪ ಸಕ್ಕರೆ ಕಡಿಮೆ ಮಾಡಿ, ವಾಕಿಂಗ್ ಮಾಡಿದರೆ ನಿಮ್ಮ ತೂಕ ತಾನಾಗೇ ಇಳಿಯುತ್ತದೆ.
  • ನಿಮ್ಮ ಇನ್ಸುಲಿನ್ ಸರಿಯಾಗಿ ಕೆಲಸ ಮಾಡುತ್ತಿದೆ.
  • ನೀವು ಆರೋಗ್ಯವಾಗಿದ್ದೀರಿ. ಚಿಂತೆ ಬೇಡ, ಹೀಗೇ ಮುಂದುವರಿಸಿ.

ತೂಕ ಇಳಿಯುತ್ತಿಲ್ಲ: ಹಳದಿ ವಲಯ (ಎಚ್ಚರಿಕೆ ಬೇಕು)

  • ನೀವು ಎಷ್ಟೇ ಡಯಟ್ ಮಾಡಿದರೂ ತೂಕ ಕಡಿಮೆಯಾಗುತ್ತಿಲ್ಲ. ಸಂಜೆ 4 – 5 ಗಂಟೆಗೆ ವಿಪರೀತ ಸ್ವೀಟ್ಸ್ ತಿನ್ನಬೇಕು ಎನ್ನಿಸುತ್ತದೆ.
  • ಕಾರಣ: ಇನ್ಸುಲಿನ್ ಅಥವಾ ಥೈರಾಯ್ಡ್ ಸಮಸ್ಯೆ ಇರಬಹುದು.
  • ಒಮ್ಮೆ ಡಾಕ್ಟರನ್ನು ಭೇಟಿಯಾಗಿ ಪರೀಕ್ಷೆ ಮಾಡಿಸಿ.

ಕಾರಣವಿಲ್ಲ, ದಿಢೀರ್ ತೂಕ ಏರುತ್ತಿದೆ: ಕೆಂಪು ವಲಯ (ಅಪಾಯ)

  • ಇದು ಜೀವನಶೈಲಿಯ ಸಮಸ್ಯೆ ಅಲ್ಲ, ತುರ್ತಾಗಿ ಚಿಕಿತ್ಸೆ ಬೇಕು.
  • ಉಸಿರಾಟದ ತೊಂದರೆ ಅಥವಾ ಕಾಲು ಊತ: ಹೃದಯದ ಸಮಸ್ಯೆ ಇರಬಹುದು.
  • ಹೊಟ್ಟೆಯ ಮೇಲೆ ನೇರಳೆ ಬಣ್ಣದ ಗೆರೆಗಳು: ಹಾರ್ಮೋನ್ ಸಮಸ್ಯೆ ಇರಬಹುದು.
  • ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ನಿದ್ರೆಯ ಮಹತ್ವ

ಇನ್ನೊಂದು ಮುಖ್ಯ ವಿಷಯ – ನಿದ್ರೆ. ರಾತ್ರಿ ಸರಿಯಾಗಿ ಮಲಗಲಿಲ್ಲ ಅಥವಾ ಒಳ್ಳೆಯ ನಿದ್ರೆ ಬರದಿದ್ದರೆ, ಎಷ್ಟೇ ಡಯಟ್ ಮಾಡಿದ್ರೂ ಪ್ರಯೋಜನ ಇಲ್ಲ. ಅದರ ಬಗ್ಗೆ ಇನ್ನೊಮ್ಮೆ ವಿವರವಾಗಿ ಬರೀತೀನಿ.

ಡಾಕ್ಟರರ ಕಿವಿಮಾತು

  • ಖಾಲಿ ಹೊಟ್ಟೆಗೆ ಅನ್ನ ಅಥವಾ ಹಣ್ಣು ತಿನ್ನಬೇಡಿ.
  • ಹಸಿವಾದಾಗ ಮೊದಲು ಸಲಾಡ್ (ತರಕಾರಿ), ಬೇಳೆ ಪದಾರ್ಥ ಅಥವಾ ಮೊಟ್ಟೆ ತಿನ್ನಿ. ಆಮೇಲೆ ಅನ್ನ ಅಥವಾ ಚಪಾತಿ ಊಟ ಮಾಡಿ.
  • ಹೀಗೆ ಮಾಡುವುದರಿಂದ, ಊಟದ ನಂತರ ರಕ್ತದಲ್ಲಿ ಸಕ್ಕರೆ ಅಂಶ (sugar) ಒಮ್ಮೆಲೇ ಏರುವುದಿಲ್ಲ. ಸಕ್ಕರೆ ಏರದಿದ್ದರೆ, ಇನ್ಸುಲಿನ್ ಏರುವುದಿಲ್ಲ. ಇನ್ಸುಲಿನ್ ಏರದಿದ್ದರೆ, ತೂಕ ಹೆಚ್ಚಾಗುವುದಿಲ್ಲ. ಸಿಂಪಲ್ ಅಲ್ಲವೇ?

ಕೊನೇ ಮಾತು

ತೂಕ ಇಳಿಸುವುದು ನಿಮ್ಮ ವ್ಯಕ್ತಿತ್ವದ ಅಥವಾ ಛಲದ ಪರೀಕ್ಷೆಯಲ್ಲ… ಅದು ನಿಮ್ಮ ದೇಹದ ಒಳಗಿನ ರಾಸಾಯನಿಕ ಪ್ರಕ್ರಿಯೆಯ (chemistry) ನಿರ್ವಹಣೆ ಅಷ್ಟೇ.

ದಪ್ಪಗಿದ್ದೀನಿ ಎಂದು ನಿಮ್ಮ ದೇಹವನ್ನು ದ್ವೇಷಿಸಬೇಡಿ. ಪಾಪ, ಅದು ತನ್ನ ಕೆಲಸವನ್ನಷ್ಟೇ ಮಾಡುತ್ತಿದೆ… ಅದೇನು ಗೊತ್ತಾ? ನಿಮ್ಮನ್ನು ‘ಬದುಕಿಸುವುದು’! ಅದಕ್ಕೆ ಅರ್ಥವಾಗುವ ಒಂದೇ ಭಾಷೆಯಲ್ಲಿ ಮಾತನಾಡಿ… ಅಂದರೆ, ಪದೇ ಪದೇ ತಿನ್ನದೆ ‘ಇನ್ಸುಲಿನ್’ ಹಾರ್ಮೋನ್ ಅನ್ನು ನಿಯಂತ್ರಣದಲ್ಲಿಡುವುದು.

ಇಂದೇ ಆರಂಭಿಸಿ. ಹಸಿವಿನ ಹಾಗೆ ಅನ್ನಿಸಿದಾಗ ಮೊದಲು ಒಂದು ಲೋಟ ನೀರು ಕುಡಿಯಿರಿ. ಆ ಕ್ಷಣದ ಬಾಯಿ ಚಪಲವನ್ನು ಗೆಲ್ಲಿರಿ.

ನೆನಪಿಡಿ, ಒಮ್ಮೆ ಊಟದ ಪೀರಿಯಡ್ ಆಯ್ತು ಅಂದರೆ – ಅಡಿಗೆ ಮನೆ ಕ್ಲೋಸ್’!

ಒಂದು ವೇಳೆ ನೀವು ‘ಕೆಂಪು ವಲಯ’ದಲ್ಲಿದ್ದರೆ (Red Zone), ತಡ ಮಾಡಬೇಡಿ. ಕೂಡಲೇ ವೈದ್ಯರನ್ನು ಕಾಣಿ. ನಾವು-ನೀವು ಸೇರಿ ಇದಕ್ಕೆ ಖಂಡಿತ ಪರಿಹಾರ ಹುಡುಕೋಣ.

Enjoyed this article?

Join the mediscuss.org community. Get a weekly digest of clinical medicine and health philosophy.

No spam. Unsubscribe anytime.

Shashikiran Umakanth

Dr. Shashikiran Umakanth (MBBS, MD, FRCP Edin.) is the Professor & Head of Internal Medicine at Dr. TMA Pai Hospital, Udupi, under the Manipal Academy of Higher Education (MAHE). While he has contributed to nearly 100 scientific publications in the academic world, he writes on MEDiscuss out of a passion to simplify complex medical science for public awareness.

guest

This site uses Akismet to reduce spam. Learn how your comment data is processed.

2 Comments
Inline Feedbacks
View all comments