Skip to the contentಪುಟದ ಒಳಕ್ಕೆ ನೇರವಾಗಿ ಹೋಗಿ

Reader resourceಓದುಗರ ಪರಿಕರ

A page for the family ಮನೆಯವರಿಗೊಂದು ಪುಟ

Printed in the book as A page for the family. This is the same text, kept up to date. ಪುಸ್ತಕದಲ್ಲಿ ಮನೆಯವರಿಗೊಂದು ಪುಟ ಆಗಿ ಮುದ್ರಿತವಾಗಿದೆ. ಇದು ಅದೇ ಬರಹ, ಪರಿಷ್ಕರಿಸಿ ಇಡಲಾಗಿದೆ.

ನಿಮ್ಮ ಮನೆಯಲ್ಲಿ ಒಬ್ಬರಿಗೆ ಮಧುಮೇಹವಿದೆ. ಈ ಒಂದು ಪುಟ ನಿಮಗಾಗಿ. ಬೇಕಿದ್ದರೆ ಇದನ್ನು ಮುದ್ರಿಸಿ ಫ್ರಿಜ್ಜಿನ ಮೇಲೆ ಅಂಟಿಸಿಡಿ.

  1. ಇದು ಅವರ ತಪ್ಪಲ್ಲ.

    “ಸಿಹಿ ಜಾಸ್ತಿ ತಿಂದೆ, ಅದಕ್ಕೇ ಬಂತು” ಎಂದು ಹಂಗಿಸಬೇಡಿ. ಮಧುಮೇಹ ಬರುವುದರಲ್ಲಿ ವಂಶವಾಹಿನಿ, ವಯಸ್ಸು ಮತ್ತು ಜೀವನಶೈಲಿ: ಮೂರರ ಪಾತ್ರವೂ ಇದೆ. ಹಂಗಿಸುವಿಕೆ ಅವರನ್ನು ಬದಲಾಯಿಸುವುದಿಲ್ಲ, ಚಿಕಿತ್ಸೆಯನ್ನು ಮುಚ್ಚಿಡುವಂತೆ ಮಾಡುತ್ತದೆ ಅಷ್ಟೇ.

  2. ಅವರಿಗಾಗಿ ಬೇರೆ ಅಡುಗೆ ಬೇಡ.

    ಮಧುಮೇಹಿಗೆ ಒಳ್ಳೆಯದೆನಿಸಿದ ಊಟ (ಹೆಚ್ಚು ತರಕಾರಿ, ಸಾಕಷ್ಟು ಬೇಳೆಕಾಳು, ಕಡಿಮೆ ಎಣ್ಣೆ, ಕಡಿಮೆ ಬಿಳಿ ಅಕ್ಕಿ) ಇಡೀ ಮನೆಗೇ ಒಳ್ಳೆಯದು. ಒಂದೇ ಅಡುಗೆ, ಬೇರೆ ಬೇರೆ ಪ್ರಮಾಣ.

  3. ಊಟದ ಟೇಬಲ್ ಪೊಲೀಸ್ ಠಾಣೆಯಾಗಬಾರದು.

    ಪ್ರತಿ ತುತ್ತನ್ನೂ ಎಣಿಸಿ ಹೇಳುವುದು ಸಹಾಯ ಮಾಡುವುದಿಲ್ಲ. ಮನೆಯಲ್ಲಿ ಏನಿರುತ್ತದೆ ಎಂಬುದನ್ನು ಬದಲಾಯಿಸಿ; ಅವರ ತಟ್ಟೆಯನ್ನಲ್ಲ.

  4. ಜೊತೆಗೆ ನಡೆಯಿರಿ.

    “ವಾಕಿಂಗ್ ಹೋಗು” ಎನ್ನುವುದಕ್ಕಿಂತ “ಬಾ, ಜೊತೆಗೆ ಹೋಗೋಣ” ಎನ್ನುವುದು ಎಷ್ಟೋ ಪಟ್ಟು ಕೆಲಸ ಮಾಡುತ್ತದೆ. ದಿನಕ್ಕೆ 30-45 ನಿಮಿಷ, ವಾರಕ್ಕೆ ಐದು ದಿನ.

  5. ಲೋ ಗ್ಲೂಕೋಸ್ ಗುರುತಿಸಲು ಕಲಿಯಿರಿ.

    ಇದ್ದಕ್ಕಿದ್ದಂತೆ ಬೆವರುವುದು, ಕೈ ನಡುಗುವುದು, ಎದೆ ಡವಡವ, ಗೊಂದಲ, ವಿಚಿತ್ರ ವರ್ತನೆ, ಸಿಟ್ಟು: ಇವು ಸಕ್ಕರೆ ಕಡಿಮೆಯಾದ ಲಕ್ಷಣಗಳಿರಬಹುದು. ಆಗ ತಕ್ಷಣ 3-4 ಚಮಚ ಸಕ್ಕರೆ ಅಥವಾ ಗ್ಲೂಕೋಸ್ ಪುಡಿಯನ್ನು ನೀರಿನಲ್ಲಿ ಕಲಸಿ ಕುಡಿಸಿ. ಚಾಕೊಲೇಟ್ ಅಥವಾ ಬಿಸ್ಕತ್ತು ಬೇಡ, ಅವು ನಿಧಾನ. ಪ್ರಜ್ಞೆ ತಪ್ಪಿದ್ದರೆ ಬಾಯಿಗೆ ಏನನ್ನೂ ಹಾಕಬೇಡಿ; ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಿರಿ. (ವಿವರ: ಅನುಬಂಧ 2)

  6. ವರ್ಷಕ್ಕೊಮ್ಮೆ ನೆನಪಿಸಿ.

    ಕಣ್ಣಿನ ಪರೀಕ್ಷೆ, ಕಿಡ್ನಿ ಪರೀಕ್ಷೆ, ಪಾದದ ತಪಾಸಣೆ: ಇವನ್ನು ಮರೆಯುವುದೇ ಹೆಚ್ಚು. ಅನುಬಂಧ 1ರ ಪಟ್ಟಿಯನ್ನು ಇಟ್ಟುಕೊಂಡು ವರ್ಷಕ್ಕೊಮ್ಮೆ ಒಟ್ಟಿಗೆ ಕುಳಿತು ನೋಡಿ.

  7. ಮನಸ್ಸೂ ದಣಿಯುತ್ತದೆ.

    ವರ್ಷಗಟ್ಟಲೆ ಮಾತ್ರೆ, ಪಥ್ಯ, ಪರೀಕ್ಷೆ: ಇದರಿಂದ ಆಯಾಸ ಬರುವುದು ಸಹಜ. ಸಿಟ್ಟು ಮಾಡುವ ಬದಲು ಒಂದು ಮಾತು ಕೇಳಿ: “ಈಗ ಹೇಗನಿಸುತ್ತಿದೆ?” (ಅಧ್ಯಾಯ 51)

  8. ನಿಮ್ಮದೂ ಒಂದು ತಪಾಸಣೆ ಆಗಲಿ.

    ಮನೆಯಲ್ಲಿ ಒಬ್ಬರಿಗೆ ಮಧುಮೇಹವಿದ್ದರೆ ಉಳಿದವರಿಗೂ ಅಪಾಯ ಹೆಚ್ಚು. ಅನುಬಂಧ 6ರ ಅಂಕಪಟ್ಟಿಯನ್ನು ನೀವೂ ಒಮ್ಮೆ ತುಂಬಿ ನೋಡಿ.

ಬದಲಾಯಿಸಬೇಕಾದ್ದು ಒಂದೇ ಒಂದು ಮಾತು: “ನೀನು ಇದನ್ನು ತಿನ್ನಬಾರದು” ಎನ್ನುವ ಬದಲು “ನಾವು ಜೊತೆಯಾಗಿ ಮಾಡೋಣ” ಎನ್ನಿ. ಮಧುಮೇಹ ಒಬ್ಬರ ಕಾಯಿಲೆ; ಆದರೆ ಅದನ್ನು ಗೆಲ್ಲುವುದು ಮನೆಯ ಕೆಲಸ.

Something wrong here?ಇಲ್ಲಿ ಏನಾದರೂ ತಪ್ಪಿದೆಯೇ?

These sheets are corrected the day a mistake is found, which is the reason they are pages and not a file you download once. Corrections already made are listed on the corrections page. ತಪ್ಪು ಕಂಡುಬಂದ ದಿನವೇ ಈ ಪುಟಗಳನ್ನು ತಿದ್ದಲಾಗುತ್ತದೆ. ಒಮ್ಮೆ ಇಳಿಸಿಕೊಳ್ಳುವ ಕಡತವಾಗಿರದೆ ಇವು ಪುಟಗಳಾಗಿರುವುದಕ್ಕೆ ಅದೇ ಕಾರಣ. ಈಗಾಗಲೇ ಮಾಡಿದ ತಿದ್ದುಪಡಿಗಳು ತಿದ್ದುಪಡಿ ಪುಟದಲ್ಲಿವೆ.