ಮಕ್ಕಳ ಪಾಲನೆಗೆ ನಮ್ಮ ಹಿರಿಯರ 4 ಅದ್ಭುತ ಸೂತ್ರಗಳು

ಬೆಕ್ಕಿನ ಮಮತೆಯಿಂದ ಆಮೆಯ ವೈರಾಗ್ಯದವರೆಗೆ!
ಪಾಲನೆ ಎಂಬ ಪಯಣ: ಅಪ್ಪಿಕೊಳ್ತೀರೋ, ಕೈ ಬಿಡ್ತೀರೋ?
ಮಕ್ಕಳನ್ನು ಬೆಳೆಸುವುದು ಅಂದರೆ ಅದೊಂದು ನಿರಂತರ ಬದಲಾವಣೆಯ ಪ್ರಕ್ರಿಯೆ. ಮಗು ಬೆಳೆದಂತೆ ತಂದೆ-ತಾಯಿಯಾದ ನಾವೂ ‘ಅಪ್‌ಗ್ರೇಡ್’ (upgrade) ಆಗುತ್ತಿರಬೇಕು! ಆದರೆ ಅನೇಕ ಪೋಷಕರು ಮಗುವಿಗೆ 20 ವರ್ಷವಾದರೂ 5 ವರ್ಷದ ಮಗುವಿನಂತೆ ನಡೆಸಿಕೊಳ್ಳುತ್ತಾರೆ, ಅಥವಾ 5 ವರ್ಷದ ಮಗುವನ್ನು ದೊಡ್ಡವರಂತೆ ಬಿಟ್ಟುಬಿಡುತ್ತಾರೆ. ಈ ಗೊಂದಲವೇ ಇಂದಿನ ಅನೇಕ ಮಾನಸಿಕ ಒತ್ತಡಗಳಿಗೆ ಕಾರಣ.
ನಮ್ಮ ಹಿರಿಯರು ಮತ್ತು ಶಾಸ್ತ್ರಕಾರರು ‘ಕಿಶೋರ ನ್ಯಾಯ’ ಎಂಬ ಹೆಸರಿನಲ್ಲಿ ಪ್ರಾಣಿಗಳ ವರ್ತನೆಯನ್ನು ಉದಾಹರಣೆಯಾಗಿಟ್ಟುಕೊಂಡು ಪಾಲನೆಯ ನಾಲ್ಕು ಹಂತಗಳನ್ನು ಅದ್ಭುತವಾಗಿ ವಿವರಿಸಿದ್ದಾರೆ. ಆ ಪ್ರಾಣಿಗಳ ಗಾಂಭೀರ್ಯ ಮತ್ತು ನಮ್ಮ ದಿನನಿತ್ಯದ ಬದುಕಿನ ವಾಸ್ತವ ಸಂಗತಿಗಳ ಮಿಶ್ರಣ ಇಲ್ಲಿದೆ.
Prefer to read this in English?
ಇದನ್ನು ಇಂಗ್ಲಿಷಿನಲ್ಲಿ ಓದಬೇಕೇ?
೧. ಮಾರ್ಜಾಲ ಕಿಶೋರ ನ್ಯಾಯ (ಬೆಕ್ಕಿನ ಮರಿಯ ಹಂತ)
ವಯಸ್ಸು: ಹುಟ್ಟಿನಿಂದ 4 ವರ್ಷ (ಶಿಶು ಮತ್ತು ಪುಟ್ಟ ಮಕ್ಕಳು)
ನೀತಿ: ಸಂಪೂರ್ಣ ಶರಣಾಗತಿ ಮತ್ತು ರಕ್ಷಣೆ
ಪ್ರಾಣಿ ಪಾಠ: ತಾಯಿ ಬೆಕ್ಕು ತನ್ನ ಮರಿಯ ಕತ್ತಿನ ಭಾಗವನ್ನು ಮೃದುವಾಗಿ ಕಚ್ಚಿ ಹಿಡಿದು ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುತ್ತದೆ. ಮರಿ ಬೆಕ್ಕು ತಾಯಿಗೆ ಸಂಪೂರ್ಣವಾಗಿ ಶರಣಾಗಿರುತ್ತದೆ; ಅದು ಕೈಕಾಲು ಆಡಿಸುವುದಿಲ್ಲ, ಸುಮ್ಮನೆ ತಾಯಿಯ ಭರವಸೆಯ ಮೇಲೆ ಜೋತು ಬಿದ್ದುಬಿಡುತ್ತದೆ.
ನಮ್ಮ ಜೀವನದಲ್ಲಿ: ಇದು ನಮ್ಮ ಪುಟ್ಟ ಮಕ್ಕಳ ಹಂತ. ಇಲ್ಲಿ ಮಗು ಮನೆಯ ಯಜಮಾನ, ಪೋಷಕರೇ ಸೇವಕರು! ಸ್ನಾನ ಮಾಡಿಸುವಾಗ ಸೋಪು ಹಾಕಿಸಿಕೊಳ್ಳಲು ಒದ್ದಾಡುವ ಮಗುವನ್ನು ಹಿಡಿಯುವುದು, “ಅಲ್ನೋಡು ಕಾಗೆ, ಇಲ್ನೋಡು ವಿಮಾನ” ಎಂದು ಹೇಳಿ ಊಟದ ತುತ್ತು ತಿನ್ನಿಸುವುದು ಪೂರ್ತಿ ನಮ್ಮದೇ ಜವಾಬ್ದಾರಿ. ಇಲ್ಲಿ ಮಗುವಿಗೆ ತನ್ನ ರಕ್ಷಣೆ ಮಾಡಿಕೊಳ್ಳಲು ಬರುವುದಿಲ್ಲ. ಅಕ್ಕಿ ಮೂಟೆಯಷ್ಟು ಭಾರವಾದರೂ ಎತ್ತಿಕೊಂಡು ಸಾಕಬೇಕು. ಮಗುವಿನ ಸುರಕ್ಷತೆಯ 100 ಕ್ಕೆ 100 ರಷ್ಟು ಭಾರ ಪೋಷಕರದ್ದೇ.
೨. ಮರ್ಕಟ ಕಿಶೋರ ನ್ಯಾಯ (ಕೋತಿ ಮರಿಯ ಹಂತ)
ವಯಸ್ಸು: 5 ರಿಂದ 12 ವರ್ಷ (ಶಾಲಾ ಹಂತ)
ನೀತಿ: ಸಹಭಾಗಿತ್ವ ಮತ್ತು ಹಿಡಿದಿಟ್ಟುಕೊಳ್ಳುವ ಕಲೆ
ಪ್ರಾಣಿ ಪಾಠ: ತಾಯಿ ಕೋತಿ ಮರದಿಂದ ಮರಕ್ಕೆ ಜಿಗಿಯುತ್ತದೆ, ಆದರೆ ಮರಿಯನ್ನು ಬೆಕ್ಕಿನಂತೆ ಬಾಯಲ್ಲಿ ಕಚ್ಚಿ ಹಿಡಿಯುವುದಿಲ್ಲ. ಮರಿಯೇ ತನ್ನ ಪುಟ್ಟ ಕೈಗಳಿಂದ ತಾಯಿಯ ಹೊಟ್ಟೆಯನ್ನು ಗಟ್ಟಿಯಾಗಿ ಹಿಡಿದುಕೊಳ್ಳಬೇಕು. ತಾಯಿ ವೇಗ ತೋರಿಸುತ್ತಾಳೆ, ಮರಿ ಹಿಡಿತ ಸಾಧಿಸಬೇಕು. ಹಿಡಿದುಕೊಳ್ಳದಿದ್ದರೆ ಬೀಳುವ ಭಯ ಮರಿಗೆ ಇರಲೇಬೇಕು.
ನಮ್ಮ ಜೀವನದಲ್ಲಿ: ಮಕ್ಕಳು ಸ್ಕೂಲಿಗೆ ಹೋಗುವ ವಯಸ್ಸಿಗೆ ಬಂದಾಗ ಈ ನ್ಯಾಯ ಶುರುವಾಗುತ್ತೆ. ಬೆಳಿಗ್ಗೆ ಸ್ಕೂಲ್ ವ್ಯಾನ್ ಹಾರ್ನ್ ಮಾಡುತ್ತಿದ್ದಾಗ, ಲಂಚ್ ಬಾಕ್ಸ್ ರೆಡಿ ಮಾಡಿ, “ಬೇಗ ಸ್ನಾನ ಮಾಡೋ” ಎಂದು ನಾವು ಎಷ್ಟೇ ಕೂಗಿದರೂ, ಕೊನೆಗೆ ಬ್ಯಾಗ್ ಹಾಕಿಕೊಂಡು ಓಡಬೇಕಾದ್ದು ಅವರೇ! ನಾವು ಫೀಸ್ ಕಟ್ಟಬಹುದು, ಆದರೆ ಓದಬೇಕಾದ್ದು ಅವರೇ. ನಾವು ದಾರಿ ತೋರಿಸ್ತೀವಿ, ಅವರು ನಮ್ಮ ಕೈ ಹಿಡಿದು ಜೊತೆಗೆ ಓಡಬೇಕು. ಇಲ್ಲಿ ಜವಾಬ್ದಾರಿ 50-50! ಇಲ್ಲಿ ಶಿಸ್ತು ಮತ್ತು ಅಭ್ಯಾಸ ಮುಖ್ಯವಾಗುತ್ತದೆ.
೩. ಮತ್ಸ್ಯ ಕಿಶೋರ ನ್ಯಾಯ (ಮೀನು ಮರಿಯ ಹಂತ)
ವಯಸ್ಸು: 13 ರಿಂದ 19 ವರ್ಷ (ಹದಿಹರೆಯ)
ನೀತಿ: ಕಣ್ಗಾವಲು ಮತ್ತು ಮಾರ್ಗದರ್ಶನ
ಪ್ರಾಣಿ ಪಾಠ: ತಾಯಿ ಮೀನು ತನ್ನ ಮರಿಗಳಿಗೆ ಹಾಲು ಕುಡಿಸಲ್ಲ, ಹೊತ್ತುಕೊಂಡು ತಿರುಗಲ್ಲ. ಅದು ತನ್ನ ‘ದೃಷ್ಟಿ’ ಅಥವಾ ಕಣ್ಣೋಟದ ಮೂಲಕವೇ ಮರಿಗಳನ್ನು ಪೋಷಿಸುತ್ತದೆ ಎಂದು ಹೇಳುತ್ತಾರೆ. ತಾಯಿ ಮುಂದೆ ಈಜುತ್ತಾಳೆ, ಮರಿಗಳು ಆಕೆಯನ್ನು ನೋಡಿ ಕಲಿಯುತ್ತಾ ಹಿಂಬಾಲಿಸುತ್ತವೆ. ಇಲ್ಲಿ ಸ್ಪರ್ಶವಿಲ್ಲ, ಕೇವಲ ದರ್ಶನ.
ನಮ್ಮ ಜೀವನದಲ್ಲಿ: ಇದು ಪೋಷಕರಿಗೆ ಅತ್ಯಂತ ಕಷ್ಟದ ಹಂತ. ಈ ವಯಸ್ಸಲ್ಲಿ ಮಕ್ಕಳನ್ನು ಬೆಕ್ಕಿನಂತೆ ಮುಟ್ಟೋಕೆ ಹೋದರೆ, “Don’t touch me” ಅನ್ನೋ ರಿಯಾಕ್ಷನ್ ಬರುತ್ತೆ! ಅವರು ರೂಮ್ ಬಾಗಿಲು ಹಾಕಿಕೊಂಡು ಒಳಗಿರುತ್ತಾರೆ. ನಾವು ಹಾಲಿನಲ್ಲಿ ಕೂತು ಕಾಯಬೇಕು. ಈ ಹಂತದಲ್ಲಿ ಬುದ್ಧಿವಾದ ಹೇಳಿದರೆ ಕಿವಿಗೆ ಬೀಳಲ್ಲ, ಬದಲಿಗೆ ನಾವು ಬದುಕಿ ತೋರಿಸಬೇಕು. ನಾವು ಟಿವಿ/ಮೊಬೈಲ್ ನೋಡುತ್ತಾ, ಅವರಿಗೆ “ಓದು” ಎಂದರೆ ನಡೆಯಲ್ಲ. ಅವರು ನಮ್ಮನ್ನು ನೋಡಿ ಕಲಿಯುವ ಹಾಗೆ ನಾವು ನಡೆದುಕೊಳ್ಳಬೇಕು. ದೂರದಿಂದಲೇ ಕಾವಲು ಕಾಯಬೇಕು, ಹತ್ತಿರ ಹೋದರೆ ಕಾಳಗವೇ!
೪. ಕೂರ್ಮ ಕಿಶೋರ ನ್ಯಾಯ (ಆಮೆ ಮರಿಯ ಹಂತ)
ವಯಸ್ಸು: 20+ ವರ್ಷ (ಯುವಕರು/ವಯಸ್ಕರು)
ನೀತಿ: ನಂಬಿಕೆ ಮತ್ತು ಬಿಡುಗಡೆ (Letting Go)
ಪ್ರಾಣಿ ಪಾಠ: ಹೆಣ್ಣು ಆಮೆ ಸಮುದ್ರದಿಂದ ಬಂದು ಮರಳಿನಲ್ಲಿ ಮೊಟ್ಟೆ ಇಟ್ಟು ಮರಳಿ ಆಳ ಸಮುದ್ರಕ್ಕೆ ಹೊರಟು ಹೋಗುತ್ತದೆ. ಅದು ತಾನು ಇಟ್ಟ ಮೊಟ್ಟೆಗಳ ಬಗ್ಗೆ ಧ್ಯಾನ ಮಾಡುತ್ತಾ, ಅವು ತಾವಾಗಿಯೇ ಒಡೆದು, ಮರಿಗಳು ಹೊರಬಂದು ಸಮುದ್ರ ಸೇರಲಿ ಎಂದು ಹಾರೈಸುತ್ತದೆ. ಇಲ್ಲಿ ದೈಹಿಕ ಸಂಪರ್ಕವಿಲ್ಲ, ಕೇವಲ ಮಾನಸಿಕ ಮತ್ತು ಆಧ್ಯಾತ್ಮಿಕ ಬೆಂಬಲ.
ನಮ್ಮ ಜೀವನದಲ್ಲಿ: ಮಕ್ಕಳು ದೊಡ್ಡವರಾಗಿ, ಮದುವೆಯಾಗಿ ಅಥವಾ ಕೆಲಸಕ್ಕೆ ಸೇರಿದ ಮೇಲೆ ನಾವು ಆಮೆಯಾಗಬೇಕು. ಅವರ ಮನೆಗೆ ನಾವು ಹೋದಾಗ ‘ಗೆಸ್ಟ್’ ತರಹ ಇರಬೇಕು. ಮಾಡಿದ ಅಡುಗೆಯಲ್ಲಿ ಉಪ್ಪು ಕಮ್ಮಿ ಇದ್ದರೂ “ಬಹಳ ರುಚಿಯಾಗಿದೆ” ಎಂದು ಹೇಳಿ ಸುಮ್ಮನಿರಬೇಕು! ಅವರ ಸಂಸಾರದಲ್ಲಿ, ಕೆರಿಯರ್ ವಿಷಯದಲ್ಲಿ ತಲೆ ಹಾಕಬಾರದು. ನಾವು ಕಲಿಸಿದ ಸಂಸ್ಕಾರದ ಮೇಲೆ ನಂಬಿಕೆ ಇಟ್ಟು, ದೂರದಿಂದಲೇ “ಚೆನ್ನಾಗಿರಲಿ” ಎಂದು ಹಾರೈಸಬೇಕು. ಅಂಟಿಕೊಂಡರೆ ನೆಮ್ಮದಿ ಇರಲ್ಲ, ಬಿಟ್ಟುಕೊಟ್ಟರೆ ಸಂಬಂಧ ಚೆನ್ನಾಗಿರುತ್ತೆ.
ಎಚ್ಚರಿಕೆ!
ಈ ಹಂತಗಳನ್ನು ಸರಿಯಾದ ಸಮಯದಲ್ಲಿ ಪಾಲಿಸದಿದ್ದರೆ ಏನಾಗುತ್ತದೆ? ನಾವು ಕಾಲಕ್ಕೆ ತಕ್ಕಂತೆ ಗೇರ್ ಬದಲಾಯಿಸದಿದ್ದರೆ ಗಾಡಿ ಕೆಟ್ಟು ನಿಲ್ಲುವುದು ಖಂಡಿತ.
1. ‘ಓವರ್ ಡ್ಯೂಟಿ’ ಮಾಡುವುದು (Over-Parenting): ಟೀನೇಜರ್ ಅಥವಾ ವಯಸ್ಕ ಮಕ್ಕಳನ್ನು ಇನ್ನೂ ‘ಬೆಕ್ಕಿನ ಮರಿ’ಯಂತೆ ನೋಡಿಕೊಂಡರೆ:
- ಮಕ್ಕಳ ಗತಿ: ಅವರಿಗೆ ಸ್ವಂತವಾಗಿ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಬರುವುದಿಲ್ಲ. ಜೀವನ ಪೂರ್ತಿ ಪೋಷಕರ ಮೇಲೆ ಅವಲಂಬಿತರಾಗುತ್ತಾರೆ (Dependency) ಅಥವಾ ಅತಿಯಾದ ನಿಯಂತ್ರಣ ಸಹಿಸದೆ ದಂಗೆ ಏಳುತ್ತಾರೆ (Rebellion).
- ಪೋಷಕರ ಗತಿ: ಜೀವನ ಪೂರ್ತಿ ಮಕ್ಕಳ ಭಾರ ಹೊರಬೇಕಾಗುತ್ತದೆ. ಗೌರವ ಉಳಿಯುವುದಿಲ್ಲ ಮತ್ತು ನೆಮ್ಮದಿ ಹಾಳಾಗುತ್ತದೆ.
2. ಜವಾಬ್ದಾರಿಯಿಂದ ನುಣಚಿಕೊಳ್ಳುವುದು (Under-Parenting): ಪುಟ್ಟ ಮಕ್ಕಳಿರುವಾಗಲೇ ‘ಆಮೆ’ಯಂತೆ ಅವರನ್ನು ಬಿಟ್ಟುಬಿಟ್ಟರೆ:
- ಮಕ್ಕಳ ಗತಿ: ಮಗುವಿಗೆ ಭದ್ರತೆ ಸಿಗದೆ ಕೀಳರಿಮೆ (Insecurity) ಬೆಳೆಯುತ್ತದೆ. ಸರಿಯಾದ ಸಮಯದಲ್ಲಿ ಕೈ ಹಿಡಿಯದಿದ್ದರೆ ದಾರಿ ತಪ್ಪುವ ಸಾಧ್ಯತೆ ಹೆಚ್ಚು.
ಕೊನೆಯ ಮಾತು
ನಾವು ರೈತರ ಹಾಗಿರಬೇಕು. ಗಿಡ ಸಣ್ಣದಿರುವಾಗ ಬೇಲಿ ಹಾಕಬೇಕು, ನೀರು ಹಾಕಬೇಕು (ರಕ್ಷಣೆ). ಆದರೆ ಮರ ದೊಡ್ಡದಾಗಿ ಹೆಮ್ಮರವಾದ ಮೇಲೆ, “ನಾನು ಇನ್ನೂ ಬೇಲಿ ಹಾಕಿಕೊಂಡೇ ಕೂರ್ತೀನಿ” ಅಂದ್ರೆ ಆಗಲ್ಲ. ಮರ ಬೆಳೆದ ಮೇಲೆ ಕೆಲವೊಮ್ಮೆ ರೈತ ಅದರ ನೆರಳಿನಲ್ಲಿ ವಿಶ್ರಾಂತಿ ಪಡೆಯಬಹುದು.
ಆದ್ದರಿಂದ ನೆನಪಿಡಿ: ಕೂಸಿದ್ದಾಗ ಬೆಕ್ಕಿನಂತೆ ಎತ್ತಿಕೊಳ್ಳಿ, ಬಾಲಕರಿದ್ದಾಗ ಕೋತಿಯಂತೆ ಶಿಸ್ತು ಕಲಿಸಿ, ಯುವಕರಾದಾಗ ಮೀನಿನಂತೆ ದಾರಿ ತೋರಿಸಿ, ದೊಡ್ಡವರಾದ ಮೇಲೆ ಆಮೆಯಂತೆ ಹಾರೈಸುತ್ತಾ ಸುಮ್ಮನಿರಿ.
ಇದೇ ನೆಮ್ಮದಿಯ ಜೀವನದ ಸೂತ್ರ!
ಮಕ್ಕಳ ಪಾಲನೆಯ 4 ಹಂತಗಳು
ನಮ್ಮ ಹಿರಿಯರ ‘ಕಿಶೋರ ನ್ಯಾಯ’ದ ಆಧಾರದ ಮೇಲೆ
Dr. Shashikiran Umakanth (MBBS, MD, FRCP Edin.) is the Professor & Head of Internal Medicine at Dr. TMA Pai Hospital, Udupi, under the Manipal Academy of Higher Education (MAHE). While he has contributed to nearly 100 scientific publications in the academic world, he writes on MEDiscuss out of a passion to simplify complex medical science for public awareness.


