ದಿನಕ್ಕೆ 4 ಲೀಟರ್ ನೀರು ಕುಡಿಯಲೇಬೇಕೆ?

ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡಿದರೆ ಚರ್ಮ ಹೊಳೆಯುತ್ತದೆಯೇ? ಬಾಯಾರಿಕೆ ಇಲ್ಲದೆ ಬಲವಂತವಾಗಿ ನೀರು ಕುಡಿದರೆ ರಕ್ತದ ಸೋಡಿಯಂ ಕುಸಿಯಬಹುದು. ನಮಗೆ ನಿಜವಾಗಿ ಎಷ್ಟು ನೀರು ಬೇಕು?

ದಿನಕ್ಕೆ 4 ಲೀಟರ್ ನೀರು ಕುಡಿಯಲೇಬೇಕೆ?

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ ಪ್ರಕಟವಾಗಿದೆ. Read this article in English

ಇತ್ತೀಚೆಗೆ ಎಲ್ಲಾ ಕಡೆ ಹುಡುಗ-ಹುಡುಗಿಯರ ಕೈಯಲ್ಲಿ ಒಂದೋ ಎರಡೋ ಲೀಟರಿನ ದಪ್ಪ ವಾಟರ್‌ ಬಾಟಲ್‌ಗಳು ಕಾಯಂ ಆಗಿ ಕಾಣುತ್ತವೆ. ಅದರ ಮೈಮೇಲೆ ಮಾರ್ಕರ್‌ನಲ್ಲಿ ಗೀಚಿದ ಗೆರೆಗಳು ಬೇರೆ… “ಬೆಳಗ್ಗೆ 9ಕ್ಕೆ ಇಷ್ಟು, ಮಧ್ಯಾಹ್ನ 1ಕ್ಕೆ ಅಷ್ಟು, ಸಂಜೆ 4ಕ್ಕೆ ಮುಗಿಸಲೇಬೇಕು!”

ನಾನು ತಮಾಷೆಗೆ, “ಏನಪ್ಪಾ ಇದು, ಕಾಲೇಜಿಗೆ ಹೋಗ್ತಿದ್ದೀಯಾ ಅಥವಾ ಮರುಭೂಮಿ ದಾಟೋ ಪಯಣಕ್ಕೆ ಹೊರಟಿದ್ದೀಯಾ?” ಅಂತ ಕೇಳಿದರೆ, ಆ ಹುಡುಗ ಗಂಭೀರವಾಗಿ ಹೇಳುತ್ತಾನೆ, “ಅಯ್ಯೋ ಡಾಕ್ಟ್ರೇ, ನಿಮಗೆ ಗೊತ್ತಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಒಬ್ಬರು ಇನ್‌ಫ್ಲುಯೆನ್ಸರ್ ಹೇಳಿದ್ರು… ದಿನಕ್ಕೆ ನಾಲ್ಕೈದು ಲೀಟರ್ ನೀರು ಕುಡಿದರೆ ರಕ್ತದಲ್ಲಿನ ಕಲ್ಮಷವೆಲ್ಲ ತೊಳೆದುಹೋಗುತ್ತಂತೆ, ಮುಖದ ಚರ್ಮ ಪಳಪಳ ಅಂತ ಹೊಳೆಯುತ್ತಂತೆ! ಅದಕ್ಕೇ ಬಾಯಾರಿಕೆ ಇಲ್ಲದಿದ್ದರೂ ಕಷ್ಟ ಪಟ್ಟು ಬಲವಂತವಾಗಿ ನೀರು ಕುಡಿತಾ ಇದ್ದೀನಿ!”

ಇವರ ಮಾತು ಕೇಳಿದಾಗ ನನಗೆ ನಮ್ಮ ಮನೆಯಂಗಳದ ಹೂವಿನ ಗಿಡಗಳ ನೆನಪಾಗುತ್ತದೆ.

ಗಿಡ ಹಚ್ಚಹಸಿರಾಗಿ ಸೊಂಪಾಗಿ ಬೆಳೆಯಲಿ ಎಂದು ಪ್ರೀತಿಯ ಅತಿಯಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ನಾಲ್ಕು ಬಿಂದಿಗೆ ನೀರು ತಂದು ಸುರಿದರೆ ಏನಾಗಬೇಡ? ಗಿಡ ಸಮೃದ್ಧವಾಗಿ ಬೆಳೆಯುವ ಬದಲು, ಬೇರು ಕೊಳೆತು ಹಳದಿಯಾಗಿ ಸತ್ತುಹೋಗುತ್ತದೆ!

ನಮ್ಮ ಶರೀರವೂ ಅಷ್ಟೇ. ನೀರು ಜೀವಜಲ ನಿಜ… ಆದರೆ ‘ಅತಿಯಾದರೆ ಅಮೃತವೂ ವಿಷ’ ಎಂಬ ಹಿರಿಯರ ಗಾದೆ ಮಾತಿಗೆ ನೀರೂ ಹೊರತಲ್ಲ. ದೇಹಕ್ಕೆ ಅಗತ್ಯವಿಲ್ಲದಿದ್ದರೂ ಬಲವಂತವಾಗಿ ಲೀಟರ್‌ಗಟ್ಟಲೆ ನೀರು ಸುರಿಯುವುದರಿಂದ ವೈದ್ಯಕೀಯ ಲೋಕದಲ್ಲಿ ಹೇಳುವ ಹಾಗೆ ‘ವಾಟರ್ ಇಂಟಾಕ್ಸಿಕೇಶನ್’ ಅಥವಾ ನೀರಿನ ವಿಷಮತೆ ಉಂಟಾಗುತ್ತದೆ.

ಕಿಡ್ನಿಯ ಕಥೆ: ನೀರಿನ ಪಂಪ್ ಮತ್ತು ಕಾರ್ ಇಂಜಿನ್!

ನಮ್ಮ ಶರೀರದಲ್ಲಿರುವ ಎರಡು ಮೂತ್ರಪಿಂಡಗಳು, ಅಂದರೆ ಕಿಡ್ನಿಗಳು, ಮನೆಯಲ್ಲಿರುವ ಪುಟ್ಟ ನೀರೆತ್ತುವ ಮೋಟಾರ್ ಪಂಪ್ ಇದ್ದಂತೆ. ಆರೋಗ್ಯವಂತ ವಯಸ್ಕರಲ್ಲಿ ಈ ಪಂಪ್ ಒಂದು ಗಂಟೆಗೆ ಗರಿಷ್ಠವೆಂದರೆ ಸುಮಾರು 800ರಿಂದ 1000 ಮಿಲಿಲೀಟರ್ (ಸುಮಾರು ಒಂದು ಲೀಟರ್) ನೀರನ್ನು ಹೊರಹಾಕುವ ಶಕ್ತಿ ಹೊಂದಿರುತ್ತದೆ.

ಇಲ್ಲಿ ಕೆಲವರು ತಕ್ಷಣ ಗಣಿತದ ಲೆಕ್ಕ ಹಾಕಿಬಿಡುತ್ತಾರೆ: “ಓಹೋ! ಗಂಟೆಗೆ ಒಂದು ಲೀಟರ್ ಅಂದರೆ ದಿನದ 24 ಗಂಟೆಗೆ 24 ಲೀಟರ್ ನೀರು ಕುಡಿಯಬಹುದಲ್ಲವೇ ಡಾಕ್ಟ್ರೇ?” ಎಂದು!

ಕಾರಿನ ಸ್ಪೀಡೋಮೀಟರ್‌ನಲ್ಲಿ ಗರಿಷ್ಠ ವೇಗ ಗಂಟೆಗೆ 200 ಕಿಲೋಮೀಟರ್ ಎಂದು ಬರೆದಿರುತ್ತಾರೆ. ಹಾಗಂತ ದಿನದ ಇಪ್ಪತ್ನಾಲ್ಕು ಗಂಟೆಯೂ ಕಾರನ್ನು ಅದೇ ಟಾಪ್ ಸ್ಪೀಡ್‌ನಲ್ಲಿ ಓಡಿಸಿದರೆ ಇಂಜಿನ್ ಏನಾಗಬೇಡ? ಹೊಗೆಯಾಡಿ ಸ್ಫೋಟಗೊಳ್ಳದೇ ಇದ್ದೀತೇ? ಕಿಡ್ನಿಯ ಕಥೆಯೂ ಅಷ್ಟೇ. ಈ ಗಂಟೆಯ ಲೆಕ್ಕ ತುರ್ತು ಪರಿಸ್ಥಿತಿಯಲ್ಲಿ ಅತಿ ಅವಶ್ಯಕವಿದ್ದಾಗಿನ ಗರಿಷ್ಠ ಮಿತಿಯೇ ಹೊರತು, ದಿನವಿಡೀ ದುಡಿಸಿಕೊಳ್ಳಲಿಕ್ಕಲ್ಲ. ಕೆಲವು ಸಂದರ್ಭಗಳಲ್ಲಿ, ಹಾಗೂ ವಯಸ್ಸಾದಂತೆ ನಿರಂತರವಾಗಿ ಅಷ್ಟು ದೊಡ್ಡ ಪ್ರಮಾಣದ ನೀರನ್ನು ಮೂತ್ರದ ರೂಪದಲ್ಲಿ ಹೊರಹಾಕಲು ಕಿಡ್ನಿಗೆ ಸಾಧ್ಯವಾಗದೇ, ಆ ಹೆಚ್ಚುವರಿ ನೀರು ರಕ್ತದಲ್ಲೇ ಉಳಿದುಕೊಂಡು ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಾಗುತ್ತದೆ.

‘ಹೈಪೋನ್ಯಾಟ್ರಿಮಿಯಾ’ ಮತ್ತು ಸಾಂಬಾರಿನ ಗುಟ್ಟು!

ಹೀಗೆ ಅತಿಯಾಗಿ ನೀರು ಕುಡಿದಾಗ ಒಳಗಡೆ ಏನಾಗುತ್ತದೆ?

ಇದನ್ನು ಅರ್ಥಮಾಡಿಕೊಳ್ಳಲು ನಮ್ಮ ಮನೆಯ ಬೇಳೆ ಸಾರಿನ ಉದಾಹರಣೆ ನೋಡಿ. ಬೇಳೆ, ಉಪ್ಪು, ಹುಳಿ ಹಾಕಿ ಹದವಾಗಿ ಕುದಿಸಿದ ಒಂದು ಸಣ್ಣ ಪಾತ್ರೆ ಸಾಂಬಾರಿಗೆ, ಯಾರಾದರೂ ಬಲವಂತವಾಗಿ ಎರಡು ದೊಡ್ಡ ಲೋಟ ನೀರು ಸುರಿದುಬಿಟ್ಟರೆ ಏನಾಗುತ್ತದೆ? ಅದರಲ್ಲಿದ್ದ ಉಪ್ಪಿನ ರುಚಿಯೆಲ್ಲ ಅತಿ ಕಡಿಮೆಯಾಗಿ ಬರೀ ಚಪ್ಪೆ ನೀರಾಗುತ್ತದೆ ಅಲ್ಲವೇ? ಬೇಕಾದರೆ ನಿಮ್ಮ ಮನೆಯಲ್ಲಿ ಇವತ್ತೇ ಮಾಡಿ ನೋಡಿ.

ನಮ್ಮ ರಕ್ತವೂ ಅಷ್ಟೇ. ಶರೀರಕ್ಕೆ ಬೇಕಾಬಿಟ್ಟಿ ನೀರು ಹೊಕ್ಕಾಗ ರಕ್ತದಲ್ಲಿರುವ ಅತ್ಯಂತ ಪ್ರಮುಖ ಖನಿಜವಾದ ಸೋಡಿಯಂ ಅಂಶ ಸಂಪೂರ್ಣವಾಗಿ ತಿಳಿಯಾಗಿ, ಅದರ ಸಾಂದ್ರತೆ ತೀವ್ರವಾಗಿ ಕುಸಿಯುತ್ತದೆ. ಇದನ್ನು ನಾವು ವೈದ್ಯಕೀಯವಾಗಿ ‘ಹೈಪೋನ್ಯಾಟ್ರಿಮಿಯಾ’ ಎನ್ನುತ್ತೇವೆ.

ರಕ್ತದಲ್ಲಿ ಉಪ್ಪಿನಂಶ ಕಡಿಮೆಯಾದ ತಕ್ಷಣ, ಪ್ರಕೃತಿಯ ನಿಯಮದಂತೆ ನೀರಿನ ಅಂಶ ಅತಿ ಸೂಕ್ಷ್ಮ ರಕ್ತನಾಳಗಳಿಂದ ಹೊರಬಂದು ಅಕ್ಕಪಕ್ಕದ ಜೀವಕೋಶಗಳ ಒಳಗೆ ನುಗ್ಗುತ್ತದೆ. ಒಣಗಿದ ಒಣದ್ರಾಕ್ಷಿಯನ್ನು ನೀರಿನ ಬಟ್ಟಲಿನಲ್ಲಿ ರಾತ್ರಿ ನೆನೆಸಿಟ್ಟರೆ ಬೆಳಗ್ಗೆ ಉಬ್ಬಿ ದಪ್ಪಗಾಗುತ್ತದಲ್ಲ, ಹಾಗೆ ನಮ್ಮ ಜೀವಕೋಶಗಳು ಊದಿಕೊಳ್ಳಲು ಶುರುಮಾಡುತ್ತವೆ.

ಕೈ-ಕಾಲುಗಳ ಕೋಶಗಳು ಕೊಂಚ ಊದಿಕೊಂಡರೆ ಚರ್ಮ ಹಿಗ್ಗುತ್ತದೆ, ಅಪಾಯ ತಕ್ಷಣಕ್ಕೆ ಕಾಣಿಸದು. ಆದರೆ ಗಟ್ಟಿಯಾದ ತೆಂಗಿನಚಿಪ್ಪಿನಂತಿರುವ ತಲೆಬುರುಡೆಯೊಳಗೆ ಕೂತಿರುವ ಮೆದುಳಿನ ಕೋಶಗಳು ಹೀಗೆ ಉಬ್ಬಿಕೊಂಡರೆ?

ಮೆದುಳಿಗೆ ಹಿಗ್ಗಲು ತಲೆಬುರುಡೆಯೊಳಗೆ ಬಹಳ ಜಾಗವಿರುವುದಿಲ್ಲ! ತಲೆನೋವು, ವಾಂತಿ, ತೂಕಡಿಕೆಯಿಂದ ಶುರುವಾಗಿ, ಸ್ಥಿತಿ ವಿಕೋಪಕ್ಕೆ ಹೋದರೆ ತೀವ್ರವಾದ ಫಿಟ್ಸ್ ಬಂದು, ಪ್ರಜ್ಞೆ ತಪ್ಪಿ ಕೋಮಾಗೆ ಹೋಗುವ ಅಪಾಯವಿರುತ್ತದೆ. ಚರ್ಮ ಹೊಳೆಯಲಿ ಎಂದು ಕುಡಿದ ನೀರು, ಕೆಲವರಿಗೆ ನೇರವಾಗಿ ಮೆದುಳಿಗೆ ತೊಂದರೆ ತರಬಹುದು!

ದೇಹದಲ್ಲೇ ಇದೆ ಡಿಜಿಟಲ್ ಸೆನ್ಸರ್!

ದೇಹಕ್ಕೆ ಎಷ್ಟು ನೀರು ಬೇಕು ಎಂದು ಅಳೆಯಲು ನಮಗೆ ಮೊಬೈಲ್ ಆ್ಯಪ್‌ಗಳಾಗಲಿ ಅಥವಾ ಬಾಟಲಿಯ ಮೇಲಿನ ಗೆರೆಗಳಾಗಲಿ ಕಿಂಚಿತ್ತೂ ಬೇಕಿಲ್ಲ. ಪ್ರಕೃತಿ ನಮ್ಮ ಮೆದುಳಿನೊಳಗೆ ‘ಬಾಯಾರಿಕೆ’ ಎಂಬ ಜಗತ್ತಿನ ಅತ್ಯಂತ ನಿಖರವಾದ ಸೆನ್ಸರ್ ಇಟ್ಟಿದೆ.

ರಕ್ತದಲ್ಲಿ ನೀರಿನಂಶ ಕಡಿಮೆಯಾದಾಗ, ಈ ಸೆನ್ಸರ್ ತಕ್ಷಣ ಎಚ್ಚರಗೊಂಡು ಗಂಟಲನ್ನು ಒಣಗಿಸಿ, “ನನಗೆ ನೀರು ಕೊಡು” ಎಂದು ನೆನಪಿಸುತ್ತದೆ.

ಇನ್ನೊಂದು ಸುಲಭವಾದ ಕಣ್ಣಿಗೆ ಕಾಣುವ ದಿಕ್ಸೂಚಿ ಎಂದರೆ ಮೂತ್ರದ ಬಣ್ಣ ನೋಡುವುದು:

  • ಗಾಢ ಹಳದಿ ಅಥವಾ ಜೇನುತುಪ್ಪದ ಬಣ್ಣ: ದೇಹಕ್ಕೆ ನೀರಿನ ಕೊರತೆಯಿದೆ, ನೀರು ಕುಡಿಯಿರಿ ಎಂದು ದೇಹ ನೀಡುವ ಎಚ್ಚರಿಕೆ.
  • ತಿಳಿ ಹಳದಿ (ಒಣಹುಲ್ಲಿನ ಬಣ್ಣ): ದೇಹದಲ್ಲಿ ನೀರು ಅಚ್ಚುಕಟ್ಟಾದ ಸಮತೋಲನದಲ್ಲಿದೆ ಎಂದರ್ಥ.
  • ಸಂಪೂರ್ಣ ತಿಳಿ (ನೀರಿನಂತೆಯೇ ಪಾರದರ್ಶಕ): ನೀವು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದು ಕಿಡ್ನಿಗೆ ಸುಮ್ಮನೆ ‘ಓವರ್‌ಟೈಮ್ ಡ್ಯೂಟಿ’ ಕೊಡ್ತಾ ಇದ್ದೀರಿ, ಬಾಟಲಿಯನ್ನು ಕೊಂಚ ಕೆಳಗಿಡಿ ಎಂದರ್ಥ!

ಮೂತ್ರಪಿಂಡದ ಕಲ್ಲು (ಕಿಡ್ನಿ ಸ್ಟೋನ್) ಇರುವವರ ಕಥೆ ಏನು?

‘ಬಾಯಾರಿಕೆಯಾದಾಗ ನೀರು ಕುಡಿಯಿರಿ’ ಎನ್ನುವ ಸಾಮಾನ್ಯ ನಿಯಮಕ್ಕೆ ಒಂದು ಪ್ರಮುಖ ವಿನಾಯಿತಿ ಎಂದರೆ ಮೂತ್ರಪಿಂಡದಲ್ಲಿ ಕಲ್ಲು ಇರುವವರು ಅಥವಾ ಆಗಾಗ ಕಲ್ಲು ಉಂಟಾಗುವ ಪ್ರವೃತ್ತಿ ಇರುವವರು. ಇಂಥವರು ಮೂತ್ರದಲ್ಲಿರುವ ಲವಣಗಳು ಮೂತ್ರನಾಳದಲ್ಲಿ ಗಟ್ಟಿಯಾಗಿ ಹರಳುಗಟ್ಟದಂತೆ ತಡೆಯಲು ಸ್ವಲ್ಪ ಹೆಚ್ಚು ದ್ರವಾಹಾರ ಸೇವಿಸಬೇಕು.

ಇವರಿಗೆ ದಿನಕ್ಕೆ ಕನಿಷ್ಠ 2ರಿಂದ 2.5 ಲೀಟರ್ ಮೂತ್ರ ವಿಸರ್ಜನೆ ಮಾಡುವ ಗುರಿ ಇರಬೇಕು. ನಾವು ಕುಡಿದ ನೀರಿನಲ್ಲಿ ಸಾಮಾನ್ಯವಾಗಿ ಒಂದರ್ಧ ಲೀಟರ್‌ನಷ್ಟು ಬೆವರಿನಲ್ಲಿ ಹೊರಗೆ ಹೋಗುತ್ತದೆ. ಆದ್ದರಿಂದ, ಪ್ರತಿಯೊಬ್ಬರ ದಿನನಿತ್ಯದ ಚಟುವಟಿಕೆ ಮತ್ತು ಬೆವರುವಿಕೆಗೆ ಅನುಗುಣವಾಗಿ ದಿನಕ್ಕೆ ಅಂದಾಜು 2.5ರಿಂದ 3 ಲೀಟರ್‌ನಷ್ಟು (ಅಥವಾ ತಮ್ಮ ವೈದ್ಯರು ಸೂಚಿಸಿದಷ್ಟು) ನೀರು ಕುಡಿಯುವುದು ಅವಶ್ಯಕ.

ಕೊನೆಯ ಕಿವಿಮಾತು

ಸಾಮಾನ್ಯ ಆಫೀಸ್‌ಗಳಲ್ಲಿ ಕೆಲಸ ಮಾಡುವ ಆರೋಗ್ಯವಂತ ವ್ಯಕ್ತಿಗಳಿಗೆ ದಿನಕ್ಕೆ ಎರಡರಿಂದ ಎರಡೂವರೆ ಲೀಟರ್ ದ್ರವಾಹಾರ (ನಾವು ಊಟ ಮಾಡುವ ಅನ್ನ, ಸಾಂಬಾರು, ಮಜ್ಜಿಗೆ, ಹಣ್ಣುಗಳಲ್ಲೂ ಸಾಕಷ್ಟು ನೀರಿರುತ್ತದೆ, ಆದ್ದರಿಂದ ಅದನ್ನೂ ಸೇರಿಸಿ) ಧಾರಾಳವಾಗಿ ಸಾಕಾಗುತ್ತದೆ. ಬಿಸಿಲಿನಲ್ಲಿ ಬೆವರು ಸುರಿಸಿ ದುಡಿಯುವವರಿಗೆ ಹಾಗೂ ಕ್ರೀಡಾಪಟುಗಳಿಗೆ ಹೆಚ್ಚು ಬೇಕಾಗಬಹುದು. ಅಂತಹವರು ಕೂಡ ಬರೀ ನೀರಲ್ಲದೆ, ಲವಣಾಂಶಗಳು ಸಹಾ ಇರುವಂತಹ ದ್ರವಗಳನ್ನು ತೆಗೆದುಕೊಳ್ಳುವುದು ಉತ್ತಮ.

ಆದರೆ ಹೃದಯ, ಲಿವರ್ ಮತ್ತು ಕಿಡ್ನಿ ಕಾಯಿಲೆ ಇರುವವರಂತೂ ವೈದ್ಯರು ಹೇಳಿದಷ್ಟೇ ಅಳೆದು ಕುಡಿಯಬೇಕು. ಇಲ್ಲದಿದ್ದಲ್ಲಿ ಕಾಲು ದಪ್ಪವಾಗುವುದರಿಂದ ಹಿಡಿದು, ‘ಹೈಪೋನ್ಯಾಟ್ರಿಮಿಯಾ’ ಆಗಿ ಪ್ರಜ್ಞೆ ತಪ್ಪುವ ಪರಿಸ್ಥಿತಿಯವರೆಗೂ ಹೋಗುವ ಸಾಧ್ಯತೆ ಹೆಚ್ಚಾಗುತ್ತದೆ.

ಬಾಯಾರಿಕೆಯಾದಾಗ ತೃಪ್ತಿಯಾಗುವಷ್ಟು ನೀರು ಕುಡಿಯಿರಿ. ಬಾಯಾರಿಕೆ ಇಲ್ಲದಾಗ, ಸೋಷಿಯಲ್ ಮೀಡಿಯಾದ ಮಾತು ಕೇಳಿ, ಅಮೃತದಂತಹ ನೀರನ್ನು ಅನಾವಶ್ಯಕವಾಗಿ ಹೊಟ್ಟೆಗೆ ಸುರಿದು ಕಿಡ್ನಿಗಳ ಮೇಲೆ ದ್ರವದೌರ್ಜನ್ಯ ಎಸಗಬೇಡಿ!


ವಿಶ್ವವಾಣಿಯಲ್ಲಿ ಪ್ರಕಟವಾದ ‘ದಿನಕ್ಕೆ 4 ಲೀಟರ್ ನೀರು ಕುಡಿಯಲೇಬೇಕೆ?’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

125 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top