ಬ್ರೇಕ್ ಹಾಕದ ಗಾಡಿ!

ಆಕ್ಸಿಲರೇಟರ್ ಜಾಮ್ ಆದ ಕಾರಿನಂತೆ ಓಡುವ ದೇಹ: ಗ್ರೇವ್ಸ್ ಕಾಯಿಲೆ, ಹೊರಬರುವ ಕಣ್ಣುಗಳು ಮತ್ತು ಅದಕ್ಕೆ ಬ್ರೇಕ್ ಹಾಕುವ ಚಿಕಿತ್ಸೆ, ಇಂಗ್ಲಿಷ್ ಅನುವಾದದೊಂದಿಗೆ.

ಬ್ರೇಕ್ ಹಾಕದ ಗಾಡಿ!

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ನವೆಂಬರ್ 22ರಂದು ಪ್ರಕಟವಾಗಿದೆ. Read this article in English

ಹಿಂದಿನ ವಾರ ನಾವು ಆಟೋ-ಇಮ್ಯೂನ್ ಕಾಯಿಲೆಯ ಕಾವಲುಗಾರ (ಇಮ್ಯೂನ್ ಸಿಸ್ಟಮ್), ಥೈರಾಯ್ಡ್ ಎಂಬ ಆಕ್ಸಿಲರೇಟರ್ ಅನ್ನು ಒಡೆದುಹಾಕಿ ದೇಹದ ಗಾಡಿ ಸ್ಲೋ ಆದ (ಹಶಿಮೋಟೋಸ್ ಕಾಯಿಲೆ) ಕಥೆ ಓದಿದ್ದೆವು. ಆದರೆ ಅದೇ ಕಾವಲುಗಾರ ಆಕ್ಸಿಲರೇಟರ್ ಅನ್ನು ಹಾಳು ಮಾಡುವ ಬದಲು, ಅದರ ಮೇಲೆಯೇ ತಡೆಬಿಡದೆ ಕಾಲಿಟ್ಟು ನಿಂತುಬಿಟ್ಟರೆ ಏನಾಗಬಹುದು?

ಊಹಿಸಿಕೊಳ್ಳಿ, ನೀವು ಕಾರು ಓಡಿಸುತ್ತಿದ್ದೀರಿ, ಇದ್ದಕ್ಕಿದ್ದಂತೆ ಆಕ್ಸಿಲರೇಟರ್ ಕೆಳಗೆ ಒತ್ತಿಕೊಂಡ ಹಾಗೆ ಜಾಮ್ ಆಗಿಬಿಡುತ್ತದೆ! ನೀವು ಏನೇ ಮಾಡಿದರೂ ಗಾಡಿ ನಿಲ್ಲುವುದಿಲ್ಲ, ಸ್ಪೀಡ್ ಹೆಚ್ಚಾಗುತ್ತಲೇ ಹೋಗುತ್ತದೆ. ‘ಗ್ರೇವ್ಸ್ ಕಾಯಿಲೆ’ ಎಂದರೆ ಇದೇ ರೀತಿ! ಇಲ್ಲಿ ನಮ್ಮ ಇಮ್ಯೂನ್ ಸಿಸ್ಟಮ್ ಉತ್ಪಾದಿಸುವ ಕೆಲವು ಪ್ರತಿಕಾಯಗಳು (ಆಂಟಿಬಾಡಿಗಳು) ಥೈರಾಯ್ಡ್ ಗ್ರಂಥಿಯನ್ನು ಹಾಳು ಮಾಡುವ ಬದಲು, ಅದನ್ನು ವಿಪರೀತವಾಗಿ ಪ್ರಚೋದಿಸುತ್ತವೆ. ಪರಿಣಾಮವಾಗಿ, ಥೈರಾಯ್ಡ್ ಗ್ರಂಥಿ ತನ್ನ ಮಿತಿಯನ್ನು ಮೀರಿ ಬೇಕಾಬಿಟ್ಟಿ ಹಾರ್ಮೋನ್ ಉತ್ಪಾದಿಸಲು ಶುರು ಮಾಡುತ್ತದೆ. ಆಕ್ಸಿಲರೇಟರ್ ಜಾಮ್ ಆಗಿ ಎಂಜಿನ್ ಓವರ್-ಸ್ಪೀಡ್ ಆದಾಗ ಗಾಡಿ ವಿಪರೀತ ಬಿಸಿಯಾಗುತ್ತದೆ ಮತ್ತು ಇಂಧನ ಬೇಗ ಬೇಗ ಖಾಲಿಯಾಗುತ್ತದೆ ಅಲ್ಲವೇ? ನಮ್ಮ ದೇಹದಲ್ಲೂ ಅದೇ ಆಗುತ್ತದೆ! ರಕ್ತದಲ್ಲಿ ಹಾರ್ಮೋನ್ ವಿಪರೀತ ಹೆಚ್ಚಾದಾಗ (ಹೈಪರ್ ಥೈರಾಯ್ಡಿಸಮ್), ಎಂಜಿನ್ ಬಿಸಿಯಾದಂತೆ ಮೈಯೆಲ್ಲಾ ಬೆವರು, ಫ್ಯಾನ್ ಹಾಕಿಕೊಂಡರೂ ವಿಪರೀತ ಸೆಕೆ ಎನಿಸುತ್ತದೆ. ಎಷ್ಟೇ ಹೊಟ್ಟೆ ತುಂಬಾ ಊಟ ಮಾಡಿದರೂ ದೇಹದ ತೂಕ ಕಡಿಮೆಯಾಗುತ್ತಾ ಹೋಗುತ್ತದೆ.

ಇದರ ಜೊತೆಗೆ, ಕುಳಿತಲ್ಲೇ ಎದೆ ಡವ-ಡವ ಎಂದು ಬಡಿದುಕೊಳ್ಳುವುದು, ಕೈಬೆರಳುಗಳಲ್ಲಿ ಸಣ್ಣ ನಡುಕ, ನಿದ್ದೆ ಬಾರದಿರುವುದು ಮತ್ತು ವಿಪರೀತ ಕೋಪ, ಸಿಡುಕು ಶುರುವಾಗುತ್ತದೆ. ರೋಗಿಯ ಮನಸ್ಸು ಸದಾ ಕಾಲ ‘ಫಾಸ್ಟ್ ಫಾರ್ವರ್ಡ್’ ಮೋಡ್‌ನಲ್ಲಿರುತ್ತದೆ.

ಗಾಬರಿಯಾದಂತೆ ಹೊರಬರುವ ಕಣ್ಣುಗಳು!

ಗ್ರೇವ್ಸ್ ಕಾಯಿಲೆಯ ಮತ್ತೊಂದು ವಿಚಿತ್ರ ಮತ್ತು ಪ್ರಮುಖ ಲಕ್ಷಣವೆಂದರೆ ಕಣ್ಣುಗಳು! ಯಾರೋ ಭಯ ಪಡಿಸಿದಾಗ ಕಣ್ಣುಗಳು ಅರಳುತ್ತವಲ್ಲ, ಹಾಗೆ ರೋಗಿಯ ಕಣ್ಣುಗುಡ್ಡೆಗಳು ದಪ್ಪಗಾಗಿ ಸ್ವಲ್ಪ ಹೊರಗೆ ಬಂದಂತೆ ಕಾಣಿಸುತ್ತವೆ. ನಮ್ಮ ಕಾವಲುಗಾರ ಕೇವಲ ಥೈರಾಯ್ಡ್ ಗ್ರಂಥಿಯ ಜೊತೆಗೆ, ಕಣ್ಣಿನ ಹಿಂದಿರುವ ಸ್ನಾಯುಗಳು ಮತ್ತು ಕೊಬ್ಬಿನ ಕೋಶಗಳ ಮೇಲೂ ದಾಳಿ ಮಾಡುವುದೇ ಕಣ್ಣುಗಳು ಹೀಗೆ ಉಬ್ಬಿಕೊಳ್ಳಲು ಕಾರಣ.

ನಮ್ಮ ದೇಹದ ರಕ್ಷಣಾ ಪಡೆ ಯಾಕೆ ಹೀಗೆ ದಿಢೀರನೆ ಆಕ್ಸಿಲರೇಟರ್ ಮೇಲೆ ಕಾಲಿಡುತ್ತದೆ? ಇದಕ್ಕೆ ನಮ್ಮ ವಂಶವಾಹಿಗಳ ಜೊತೆಗೆ ಪ್ರಮುಖ ಕಾರಣ ನಮ್ಮ ಅತಿಯಾದ ಮಾನಸಿಕ ಒತ್ತಡ ಮತ್ತು ಹಲವರಲ್ಲಿ ಧೂಮಪಾನ. ನಾವು ಸದಾ ಟೆನ್ಷನ್‌ನಲ್ಲಿದ್ದಾಗ ನಮ್ಮ ಇಮ್ಯೂನ್ ಸಿಸ್ಟಮ್ ಕೂಡ ವಿಪರೀತ ಹೈಪರ್ ಆಗುತ್ತದೆ. ಧೂಮಪಾನ ಮಾಡುವವರಲ್ಲಿ ಈ ಕಾಯಿಲೆ ಬಂದರೆ, ಕಣ್ಣುಗಳು ಹೊರಬರುವ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುತ್ತದೆ.

ಹಶಿಮೋಟೋಸ್ ಕಾಯಿಲೆಯಲ್ಲಿ ಕೊರತೆಯಿದ್ದ ಇಂಧನವನ್ನು ಮಾತ್ರೆ ರೂಪದಲ್ಲಿ ಹೊರಗಿನಿಂದ ಕೊಡುತ್ತಿದ್ದೆವು. ಆದರೆ ಇಲ್ಲಿ ಇಂಧನವೇ ವಿಪರೀತ ಉತ್ಪತ್ತಿ ಆಗುತ್ತಿರುವುದರಿಂದ, ನಾವು ಎಂಜಿನ್‌ಗೆ ಬ್ರೇಕ್ ಹಾಕಬೇಕಾಗುತ್ತದೆ! ಥೈರಾಯ್ಡ್ ಗ್ರಂಥಿಯ ಅತಿಯಾದ ಕೆಲಸವನ್ನು ತಡೆಯಲು ವೈದ್ಯರು ಆಂಟಿ-ಥೈರಾಯ್ಡ್ ಮಾತ್ರೆಗಳನ್ನು ನೀಡುತ್ತಾರೆ. ಇದರಿಂದ ಓವರ್-ಸ್ಪೀಡ್ ಆಗುತ್ತಿರುವ ಗಾಡಿ ಮತ್ತೆ ಕಂಟ್ರೋಲ್‌ಗೆ ಬರುತ್ತದೆ. ಮಾತ್ರೆಗಳಿಂದಲೂ ಜಗ್ಗದಿದ್ದರೆ, ರೇಡಿಯೋ-ಅಯೋಡಿನ್ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಆಕ್ಸಿಲರೇಟರ್‌ನ ವೇಗಕ್ಕೆ ಬ್ರೇಕ್ ಹಾಕಬೇಕಾಗುತ್ತದೆ.

ಜ್ಞಾಪಕ ಇರಲಿ

ವಿನಾಕಾರಣ ತೂಕ ಇಳಿಯುತ್ತಿದ್ದರೆ ಅಥವಾ ಎದೆ ಬಡಿತ ಹೆಚ್ಚಾದಂತೆ ಅನಿಸಿದರೆ ಗಾಬರಿ ಯಾಗುವ ಅಗತ್ಯವಿಲ್ಲ. ಅದು ಜಾಮ್ ಆಗಿರುವ ನಿಮ್ಮ ದೇಹದ ಆಕ್ಸಿಲರೇಟರ್ ಅನ್ನು ಸರಿಪಡಿಸಲು ದೇಹ ನೀಡುತ್ತಿರುವ ಒಂದು ಪುಟ್ಟ ಸೂಚನೆ ಅಷ್ಟೇ! ಒಂದು ಸರಳ ರಕ್ತಪರೀಕ್ಷೆ ಮತ್ತು ಸೂಕ್ತ ಚಿಕಿತ್ಸೆಯ ಮೂಲಕ, ಓವರ್-ಸ್ಪೀಡ್ ಆಗುತ್ತಿರುವ ಗಾಡಿಯನ್ನು ಸುಲಭವಾಗಿ ಹತೋಟಿಗೆ ತರಬಹುದು.


ವಿಶ್ವವಾಣಿಯಲ್ಲಿ ಪ್ರಕಟವಾದ ‘ಬ್ರೇಕ್ ಹಾಕದ ಗಾಡಿ!’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

235 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top