ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ನವೆಂಬರ್ 15ರಂದು ಪ್ರಕಟವಾಗಿದೆ. Read this article in English
ಹಿಂದಿನ ಲೇಖನಗಳಲ್ಲಿ ‘ಆಟೋ-ಇಮ್ಯೂನ್’ ಕಾಯಿಲೆಗಳ ಬಗ್ಗೆ, ಅಂದರೆ ನಮ್ಮ ದೇಹದ ರಕ್ಷಣಾ ವ್ಯವಸ್ಥೆಗೇ ಕನ್ಫ್ಯೂಸ್ ಆಗಿ ನಮ್ಮದೇ ಅಂಗಗಳ ಮೇಲೆ ದಾಳಿ ಮಾಡುವ ಬಗ್ಗೆ ತಿಳಿದುಕೊಂಡೆವು. ಈ ಬಾರಿ ಆ ಕಾವಲು ನಾಯಿ ನಮ್ಮ ಕುತ್ತಿಗೆಯ ಭಾಗದಲ್ಲಿರುವ ಚಿಟ್ಟೆಯಾಕಾರದ ‘ಥೈರಾಯ್ಡ್’ ಗ್ರಂಥಿಯ ಮೇಲೆ ಮುಗಿಬಿದ್ದರೆ ಏನಾಗುತ್ತದೆ ಅಂತ ನೋಡೋಣ.
ದೇಹದ ಆಕ್ಸಿಲರೇಟರ್
ನಮ್ಮ ದೇಹವನ್ನು ಒಂದು ಕಾರ್ ಅಂದುಕೊಂಡರೆ, ಕುತ್ತಿಗೆಯ ಭಾಗದಲ್ಲಿರುವ ಥೈರಾಯ್ಡ್ ಗ್ರಂಥಿ ಆ ಕಾರಿನ ಆಕ್ಸಿಲರೇಟರ್ ಇದ್ದ ಹಾಗೆ! ನಮ್ಮ ದೇಹದ ಒಳಗೆ ಶಕ್ತಿ ಉತ್ಪಾದನೆ ಹೇಗಿರಬೇಕು, ನಾವು ಎಷ್ಟು ಚುರುಕಾಗಿರಬೇಕು ಅಂತ ನಿರ್ಧರಿಸೋದೇ ಇದು. ಈ ಆಕ್ಸಿಲರೇಟರ್ ಬಿಡುಗಡೆ ಮಾಡುವ ಥೈರಾಕ್ಸಿನ್ ಎಂಬ ಹಾರ್ಮೋನ್, ನಮ್ಮ ದೇಹದ ಆಂತರಿಕ ವೇಗವನ್ನು (ಮೆಟಬಾಲಿಸಮ್) ಕಂಟ್ರೋಲ್ ಮಾಡುತ್ತದೆ.
ಮೊದಲು ಓವರ್-ಸ್ಪೀಡ್, ಆಮೇಲೆ ಬ್ರೇಕ್ ಡೌನ್!
ನಮ್ಮ ಇಮ್ಯೂನ್ ಸಿಸ್ಟಮ್ (ಕಾವಲುಗಾರ) ಇದ್ದಕ್ಕಿದ್ದಂತೆ ಈ ಆಕ್ಸಿಲರೇಟರ್ ಅನ್ನು ಶತ್ರು ಅಂತ ಭಾವಿಸಿ ಅದರ ಮೇಲೆ ದಾಳಿ ಮಾಡಿದಾಗ ಒಳಗೊಂದು ವಿಚಿತ್ರ ನಡೆಯುತ್ತದೆ. ದಾಳಿಯ ರಭಸಕ್ಕೆ, ಮೊದಲು ಆಕ್ಸಿಲರೇಟರ್ ಅತಿಯಾಗಿ ಒತ್ತಲ್ಪಟ್ಟ ಹಾಗೆ ಆಗಿ ಗ್ರಂಥಿಯಲ್ಲಿ ಶೇಖರಣೆ ಆಗಿದ್ದ ಹಾರ್ಮೋನ್ ಒಮ್ಮೆಲೇ ರಕ್ತಕ್ಕೆ ಸೇರಿ, ದೇಹದ ಗಾಡಿ ವಿಪರೀತ ವೇಗವಾಗಿ ಓಡಲು ಶುರುಮಾಡುತ್ತದೆ! (ಈ ತೊಂದರೆಯಲ್ಲಿ ಇದು ತಾತ್ಕಾಲಿಕ ‘ಹೈಪರ್-ಥೈರಾಯ್ಡಿಸಮ್’).
ತದನಂತರ, ಈ ನಿರಂತರ ದಾಳಿಯಿಂದ ಆದ ಡ್ಯಾಮೇಜ್‌ಗೆ ಸಿಲುಕಿ ಆಕ್ಸಿಲರೇಟರ್ ಸಂಪೂರ್ಣವಾಗಿ ಕೆಟ್ಟುಹೋಗಿ, ಹೊಸ ಹಾರ್ಮೋನ್ ಉತ್ಪಾದಿಸುವುದನ್ನೇ ನಿಲ್ಲಿಸಿಬಿಡುತ್ತದೆ! ಆಗ ಕಾರಿನ ಪಿಕ್-ಅಪ್ ಒಮ್ಮೆಲೇ ಡ್ರಾಪ್ ಆಗಿ, ಗಾಡಿ ತೀರಾ ನಿಧಾನವಾಗುತ್ತದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ‘ಹೈಪೋ-ಥೈರಾಯ್ಡಿಸಮ್’ ಮತ್ತು ‘ಹಶಿಮೊಟೊಸ್ ಥೈರಾಯ್ಡೈಟಿಸ್’ ಅಂತ ಕರೆಯುತ್ತಾರೆ. ಇದನ್ನು ಮೊದಲು ಕಂಡುಹಿಡಿದ ಜಪಾನ್ ವೈದ್ಯನ ಹೆಸರು ‘ಹಶಿಮೊಟೊ’.
ಕಾವಲುಗಾರನಿಗೆ ಈ ಕನ್ಫ್ಯೂಷನ್ ಯಾಕೆ?
ನಮ್ಮದೇ ರಕ್ಷಣಾ ಪಡೆಗೆ ಈ ರೀತಿ ತಲೆ ಕೆಡಲು ಕಾರಣವೇನು? ಇದಕ್ಕೆ ಶೇಕಡಾ ನೂರರಷ್ಟು ನಿಖರವಾದ ಕಾರಣವಿಲ್ಲದಿದ್ದರೂ, ನಮ್ಮ ವಂಶವಾಹಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಇದರ ಜೊತೆಗೆ ಇಂದಿನ ಜೀವನಶೈಲಿಯ ಅತಿಯಾದ ಮಾನಸಿಕ ಒತ್ತಡ ಮತ್ತು ಕೆಲವೊಮ್ಮೆ ಬಂದು ಹೋಗುವ ವೈರಲ್ ಸೋಂಕುಗಳು ಈ ಕಾವಲುಗಾರನಿಗೆ ಹುಚ್ಚು ಹಿಡಿಸುವ ಟ್ರಿಗರ್‌ಗಳಾಗಿ ಕೆಲಸ ಮಾಡುತ್ತವೆ. ನಾವು ವಿಪರೀತ ಟೆನ್ಷನ್ ಮಾಡಿಕೊಂಡಷ್ಟೂ ಆ ಕಾವಲುಗಾರನ ಕನ್ಫ್ಯೂಷನ್ ಹೆಚ್ಚಾಗುತ್ತದೆ.
ಒಮ್ಮೆ ಆಕ್ಸಿಲರೇಟರ್ ಕೆಟ್ಟು ದೇಹದ ಆಂತರಿಕ ವೇಗ ಡ್ರಾಪ್ ಆದಾಗ, ದೇಹದ ಪ್ರತಿಯೊಂದು ವ್ಯವಸ್ಥೆಯೂ ನಿಧಾನವಾಗತೊಡಗುತ್ತದೆ. ಮೆದುಳಿನ ವೇಗ ಕಡಿಮೆಯಾಗಿ ಮರೆವು, ಗೊಂದಲ, ಮತ್ತು ಮನಸ್ಸಿಗೆ ಏನೋ ಒಂಥರಾ ಬೇಸರ, ಖಿನ್ನತೆ ಶುರುವಾಗುತ್ತದೆ. ಜೀರ್ಣಾಂಗ ವ್ಯವಸ್ಥೆ ನಿಧಾನವಾಗಿ ಮಲಬದ್ಧತೆ ಕಾಡುತ್ತದೆ. ತಿಂದ ಆಹಾರ ಕರಗದೆ, ಊಟ ಕಡಿಮೆ ಮಾಡಿದರೂ ತೂಕ ಹೆಚ್ಚಾಗುತ್ತದೆ. ಇದರ ಜೊತೆಗೆ ಎಷ್ಟೇ ನಿದ್ದೆ ಮಾಡಿದರೂ ತೀರದ ಆಯಾಸ, ವಿಪರೀತ ಕೂದಲು ಉದುರುವುದು, ಚಳಿ ತಡೆಯೋಕೆ ಆಗದಿರುವುದು, ಚರ್ಮ ಒಣಗುವುದು ಕಾಣಿಸಿಕೊಳ್ಳುತ್ತವೆ. ಬಹುತೇಕರು ಈ ಲಕ್ಷಣಗಳನ್ನು ‘ನನಗೆ ಸೋಮಾರಿತನ ಬಂದಿದೆ’ ಅಥವಾ ‘ವಯಸ್ಸಾಗುತ್ತಿದೆ’ ಎಂದು ನಿರ್ಲಕ್ಷ್ಯ ಮಾಡುತ್ತಾರೆ.
ಪರಿಹಾರ ಸುಲಭ!
ಬಹಳಷ್ಟು ಜನ ಅಯ್ಯೋ ಡಾಕ್ಟ್ರೆ, ನಂಗೆ ಥೈರಾಯ್ಡ್ ಬಂದ್ಬಿಡ್ತು, ಇನ್ನು ಜೀವಮಾನವಿಡೀ ಮಾತ್ರೆ ನುಂಗಬೇಕಲ್ಲ ಅಂತ ಭಯಪಡುತ್ತಾರೆ. ಆದರೆ ಆಟೋ-ಇಮ್ಯೂನ್ ಕಾಯಿಲೆಗಳ ಪೈಕಿ ಅತಿ ಸುಲಭವಾಗಿ ಕಂಟ್ರೋಲ್ ಮಾಡಬಹುದಾದ ಕಾಯಿಲೆ ಇದು!
ದೃಷ್ಟಿ ಮಂಜಾದಾಗ ನಾವು ಹೊರಗಿನಿಂದ ಕನ್ನಡಕ ಹಾಕಿಕೊಳ್ಳುವುದಿಲ್ಲವೇ? ಹಾಗೆಯೇ ಒಳಗಿನ ಆಕ್ಸಿಲರೇಟರ್ ಎಷ್ಟು ಹಾರ್ಮೋನ್ ಅನ್ನು ಉತ್ಪಾದನೆ ಮಾಡಲಾಗುತ್ತಿಲ್ಲವೋ, ಅಷ್ಟೇ ಪ್ರಮಾಣದ ಥೈರಾಕ್ಸಿನ್ ಹಾರ್ಮೋನ್ ಅನ್ನು ನಾವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಸಣ್ಣ ಗುಳಿಗೆಯ ರೂಪದಲ್ಲಿ ಹೊರಗಿನಿಂದ ಕೊಡುತ್ತೇವೆ. ಅಷ್ಟೇ! ಇದೇನೂ ಅಡ್ಡಪರಿಣಾಮ ಬೀರುವ ಪೇನ್-ಕಿಲ್ಲರ್ ಅಲ್ಲ; ಕೇವಲ ನಿಮ್ಮ ದೇಹಕ್ಕೆ ಬೇಕಾದ ‘ನ್ಯಾಚುರಲ್ ಸಪೋರ್ಟ್’. ಈ ಮಾತ್ರೆ ತಿಂದರೆ ನಿಮ್ಮ ಎಂಜಿನ್‌ಗೆ ಮತ್ತೆ ಸರಿಯಾದ ಆಕ್ಸಿಲರೇಶನ್ ಸಿಗುತ್ತದೆ.
ಜ್ಞಾಪಕ ಇರ್ಲಿ
ಸುಸ್ತು, ಆಯಾಸ, ತೂಕ ಹೆಚ್ಚಾಗುವುದು ಕೇವಲ ‘ವಯಸ್ಸಾದ’ ಲಕ್ಷಣವಲ್ಲ, ಅದು ನಿಮ್ಮ ದೇಹದ ಆಕ್ಸಿಲರೇಟರ್ ಸ್ಲೋ ಆಗಿರುವ ಸೂಚನೆಯೂ ಆಗಿರಬಹುದು. ಟಿಎಸ್‌ಹೆಚ್ ಎನ್ನುವ ಒಂದು ಸಣ್ಣ ರಕ್ತಪರೀಕ್ಷೆ ಮಾಡಿ, ಕೊರತೆಯಿರುವ ಹಾರ್ಮೋನ್ ಮಾತ್ರೆ ಕೊಟ್ಟರೆ ಸಾಕು, ನಿಮ್ಮ ಜೀವನದ ಗಾಡಿ ಮತ್ತೆ ಟಾಪ್ ಗೇರ್‌ನಲ್ಲಿ ಓಡುತ್ತದೆ!










Leave a Reply