ಕುಡಿಯುವ ಅಭ್ಯಾಸವಿಲ್ಲದಿದ್ದರೂ ‘ಫ್ಯಾಟಿ ಲಿವರ್’ ಕಾಡುವುದು ಏಕೆ?

ಮದ್ಯಪಾನ ಮಾಡದಿದ್ದರೂ ಲಿವರ್‌ನಲ್ಲಿ ಕೊಬ್ಬು ಏಕೆ ಸೇರುತ್ತದೆ? ಅತಿಯಾದ ಆಹಾರ, ಪಾಲಿಶ್ ಮಾಡಿದ ಅನ್ನ, ವ್ಯಾಯಾಮದ ಕೊರತೆಯ ಪಾತ್ರ ಮತ್ತು ಫ್ಯಾಟಿ ಲಿವರ್ ರಿವರ್ಸ್ ಮಾಡುವ ಸರಳ ಅಭ್ಯಾಸಗಳು, ಇಂಗ್ಲಿಷ್ ಅನುವಾದದೊಂದಿಗೆ.

ಕುಡಿಯುವ ಅಭ್ಯಾಸವಿಲ್ಲದಿದ್ದರೂ ‘ಫ್ಯಾಟಿ ಲಿವರ್’ ಕಾಡುವುದು ಏಕೆ?

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಆಗಸ್ಟ್ 16ರಂದು ಪ್ರಕಟವಾಗಿದೆ. Read this article in English

ಇತ್ತೀಚೆಗೆ ಆಸ್ಪತ್ರೆಗೆ ಬರುವವರ ಕೈಯಲ್ಲಿ ವಾರ್ಷಿಕ ಹೆಲ್ತ್ ಚೆಕ್ ರಿಪೋರ್ಟುಗಳು ಇರುವುದು ಸಾಮಾನ್ಯ. ಆ ಅಲ್ಟ್ರಾಸೌಂಡ್ ಸ್ಕ್ಯಾನ್ ರಿಪೋರ್ಟಿನಲ್ಲಿ “ಗ್ರೇಡ್ 1 ಫ್ಯಾಟಿ ಲಿವರ್” ಅಥವಾ “ಗ್ರೇಡ್ 2 ಫ್ಯಾಟಿ ಲಿವರ್” ಎಂಬ ಸಾಲು ಕಂಡ ತಕ್ಷಣ ಅವರ ಮುಖದಲ್ಲಿ ಒಂಥರಾ ಆತಂಕ ಮನೆಮಾಡಿರುತ್ತದೆ.

ಅವರ ಮೊದಲ ಪ್ರಶ್ನೆ, “ಡಾಕ್ಟರ್, ನಾನೆಂದೂ ಡ್ರಿಂಕ್ಸ್ ಮಾಡಲಿಲ್ಲ. ಆದರೂ ನನಗೇಕೆ ಲಿವರ್ ಸಮಸ್ಯೆ ಬಂತು?”

ಇಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಮುಖ್ಯ ವಿಷಯವೆಂದರೆ, ಲಿವರ್‌ಗೆ ಹಾನಿಯಾಗುವುದು ಕೇವಲ ಮದ್ಯಪಾನದಿಂದ ಮಾತ್ರವಲ್ಲ. ನಾವು ಪ್ರತಿದಿನ ತಿನ್ನುವ ಅತಿಯಾದ ಆಹಾರ, ಅದರಲ್ಲೂ ಮುಖ್ಯವಾಗಿ ಸಿಹಿ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ಕೂಡ ಇದಕ್ಕೆ ಅಷ್ಟೇ ದೊಡ್ಡ ಕಾರಣವಾಗುತ್ತವೆ.

ನಮ್ಮ ದೇಹದ ಉಗ್ರಾಣವಿದು!

ನಮ್ಮ ಲಿವರ್ ದೇಹದ ಅತ್ಯಂತ ಶ್ರಮಜೀವಿ ಅಂಗ. ನಾವು ತಿಂದ ಆಹಾರವನ್ನು ಒಳಗೆಳೆದುಕೊಂಡು, ಜೀರ್ಣಿಸಿ, ಶಕ್ತಿಯನ್ನಾಗಿ ಪರಿವರ್ತಿಸಿ, ಹೆಚ್ಚಾದದ್ದನ್ನು ಮುಂದಿನ ಎಮರ್ಜೆನ್ಸಿಗೆ ಎಂದು ತನ್ನಲ್ಲೇ ಸ್ಟೋರ್ ರೂಮ್ ತರಹ ತನ್ನಲ್ಲೇ ಕೂಡಿಡುತ್ತದೆ.

ಒಮ್ಮೆ ಊಹಿಸಿಕೊಳ್ಳಿ…

  • ನಿಮ್ಮ ಮನೆಗೆ ನೀವು ಪ್ರತಿದಿನ 10 ಕೆಜಿ ಅಕ್ಕಿ ತಂದು ಸುರಿಯುತ್ತಿದ್ದೀರಿ ಎಂದು. ಆದರೆ ದಿನಕ್ಕೆ ಬಳಸುವುದು ಕೇವಲ ಒಂದು ಕೆಜಿ ಮಾತ್ರ.
  • ಉಳಿದ 9 ಕೆಜಿಯನ್ನು ಅಡುಗೆಮನೆಯ ಡಬ್ಬಗಳಲ್ಲಿ, ಅಟ್ಟದ ಮೇಲೆಲ್ಲಾ ತುಂಬಿಡುತ್ತೀರಿ. ಆದರೂ ಪ್ರತಿದಿನ ತರುವುದನ್ನು ನಿಲ್ಲಿಸಲಿಲ್ಲ.
  • ಒಂದು ದಿನ ಇಡೀ ಮನೆಯೇ ಅಕ್ಕಿ ಚೀಲಗಳಿಂದ ತುಂಬಿಹೋಗುತ್ತದೆ, ಹೌದೋ ಇಲ್ಲವೋ?

ನಮ್ಮ ದೇಹದಲ್ಲೂ ಆಗುವುದು ಇದೇ. ದಿನವಿಡೀ ಕುಳಿತೇ ಕೆಲಸ ಮಾಡುವ ನಾವು, ಅವಶ್ಯಕತೆಗಿಂತ ಹೆಚ್ಚು ಕ್ಯಾಲೊರಿ ಇರುವ ಸ್ನ್ಯಾಕ್ಸ್ ಹಾಗೂ ಆಹಾರಗಳನ್ನು ತಿನ್ನುತ್ತಲೇ ಇರುತ್ತೇವೆ. ಆದರೆ ತಿಂದದ್ದನ್ನು ಕರಗಿಸಲು ದೇಹಕ್ಕೆ ಶ್ರಮವೇ ಇರುವುದಿಲ್ಲ. ಆಗ ಈ ಲಿವರ್, ತಾನು ಕೂಡಿಟ್ಟ ಜಾಗದಲ್ಲೇ ಮತ್ತಷ್ಟು ಕೊಬ್ಬನ್ನು ಅನಿವಾರ್ಯವಾಗಿ ತುರುಕಿಕೊಳ್ಳುತ್ತಾ ಹೋಗುತ್ತದೆ. ಇದನ್ನೇ ನಾವು ‘ಫ್ಯಾಟಿ ಲಿವರ್’ ಎನ್ನುವುದು.

ಪಾಲಿಶ್ ಮಾಡಿದಷ್ಟು ಪ್ರಾಬ್ಲಮ್ ಹೆಚ್ಚು!

ಈ ರಿಪೋರ್ಟ್ ನೋಡಿದ ತಕ್ಷಣ ಹಲವರು ಮಾಡುವ ಮೊದಲ ತಪ್ಪು ಎಂದರೆ, ಅನ್ನ, ರಾಗಿ, ಗೋಧಿ ತಿನ್ನುವುದನ್ನೇ ಸಂಪೂರ್ಣವಾಗಿ ಬಿಟ್ಟುಬಿಡುವುದು. ಧಾನ್ಯಗಳು ನಮ್ಮ ಶತ್ರುಗಳಲ್ಲ, ಅವು ದೇಹಕ್ಕೆ ಬೇಕಾದ ಇಂಧನ. ಸಮಸ್ಯೆ ಇರುವುದು ಧಾನ್ಯಗಳಲ್ಲಿ ಅಲ್ಲ, ಬದಲಾಗಿ ನಾವು ಅದರ ಮೇಲಿನ ನಾರಿನಂಶವನ್ನು ತೆಗೆದು ಅತಿಯಾಗಿ ಪಾಲಿಶ್ ಮಾಡುವ ರೀತಿಯಲ್ಲಿ.

ಇದಕ್ಕೊಂದು ಸರಳ ಉದಾಹರಣೆ ಗಮನಿಸಿ.

  • ಒಲೆಯ ಉರಿಗೆ ದಪ್ಪನೆಯ ಸೌದೆ ಹಾಕಿದರೆ ಏನಾಗುತ್ತದೆ? ಅದು ನಿಧಾನವಾಗಿ, ಗಂಟೆಗಟ್ಟಲೆ ಉರಿಯುತ್ತಾ ಒಂದೇ ಸಮನೆ ಹಿತವಾದ ಶಾಖ ಕೊಡುತ್ತದೆ.
  • ಅದೇ ನೀವು ಒಲೆಗೆ ಸೀಮೆಎಣ್ಣೆ ಸುರಿದರೆ? ಭಗ್ಗನೆ ಉರಿದು, ಕ್ಷಣಾರ್ಧದಲ್ಲಿ ಆರಿಹೋಗುತ್ತದೆ.

ನಮ್ಮ ದೇಹದ ಜೀರ್ಣಕ್ರಿಯೆ ಕೂಡ ಹೀಗೆಯೇ. ಹೊಟ್ಟು ತೆಗೆಯದ ಕುಚ್ಚಲಕ್ಕಿ, ಸಿರಿಧಾನ್ಯಗಳು, ರಾಗಿ ಅಥವಾ ಜೋಳ ಆ ದಪ್ಪ ಸೌದೆಯ ಹಾಗೆ. ಇವುಗಳಲ್ಲಿ ನಾರಿನಂಶ ಇರುವುದರಿಂದ, ಹೊಟ್ಟೆಯಲ್ಲಿ ನಿಧಾನವಾಗಿ ಜೀರ್ಣವಾಗುತ್ತಾ ಹಲವಾರು ಗಂಟೆಗಳ ಕಾಲ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತವೆ. ಆದರೆ, ನಾವು ಅಕ್ಕಿಯನ್ನು ಯಂತ್ರಕ್ಕೆ ಹಾಕಿ ಉಜ್ಜಿ, ಬೆಳ್ಳಗೆ ಮಲ್ಲಿಗೆ ಹೂವಿನಂತಿರುವ ಪಾಲಿಶ್ ಮಾಡಿದ ಅನ್ನ ತಿನ್ನುತ್ತೇವೆ. ಇದು ಒಲೆಗೆ ಸುರಿದ ಸೀಮೆಎಣ್ಣೆಯ ಹಾಗೆ. ತಿಂದ ತಕ್ಷಣ ರಕ್ತದಲ್ಲಿ ಸಕ್ಕರೆಯ ಪ್ರಮಾಣ ದಿಢೀರನೆ ಏರುತ್ತದೆ. ದೇಹಕ್ಕೆ ಶ್ರಮವಿಲ್ಲದಿದ್ದಾಗ, ಈ ಹೆಚ್ಚುವರಿ ಅಂಶ ಕೊಬ್ಬಾಗಿ ಪರಿವರ್ತನೆಯಾಗಿ ನೇರವಾಗಿ ಲಿವರ್ ಒಳಗೆ ಶೇಖರಣೆ ಆಗುತ್ತದೆ.

ಲಿವರ್‌ನ ಅತಿದೊಡ್ಡ ಗುಣ ಎಂದರೆ, ಅದು ಬೇಗ ದೂರುವುದಿಲ್ಲ. ಶೇಕಡಾ 70 ರಿಂದ 80 ರಷ್ಟು ಹಾನಿಯಾಗುವವರೆಗೂ ಅದು ಯಾವುದೇ ಲಕ್ಷಣಗಳನ್ನಾಗಲೀ, ನೋವನ್ನಾಗಲೀ ತೋರಿಸಿಕೊಳ್ಳುವುದಿಲ್ಲ. ಇದು ಒಂದು ರೀತಿಯಲ್ಲಿ ಅಪಾಯಕಾರಿ ಕೂಡ.

ಆದರೆ, ನೆಮ್ಮದಿಯ ವಿಚಾರವೆಂದರೆ ಆರಂಭಿಕ ಹಂತದಲ್ಲಿರುವ ಫ್ಯಾಟಿ ಲಿವರ್ ಅನ್ನು ಸಂಪೂರ್ಣವಾಗಿ ರಿವರ್ಸ್ ಮಾಡಬಹುದು.

ಉತ್ತಮ ಅಭ್ಯಾಸಗಳು

ಇದಕ್ಕೆ ದುಬಾರಿ ಮಾತ್ರೆಗಳಾಗಲೀ, ಆಪರೇಷನ್ ಆಗಲೀ ಬೇಕಿಲ್ಲ. ನಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಸಣ್ಣ ಬದಲಾವಣೆ ತಂದರೆ ಸಾಕು:

  • ಊಟದ ತಟ್ಟೆಯಲ್ಲಿ ಅನ್ನ ಅಥವಾ ಚಪಾತಿಯ ಪ್ರಮಾಣವನ್ನು ಕಡಿಮೆ ಮಾಡಿ. ತಟ್ಟೆಯ ಅರ್ಧ ಭಾಗ ತರಕಾರಿ, ಸೊಪ್ಪು, ಮೊಳಕೆ ಕಾಳುಗಳಿಂದ ಕೂಡಿರಲಿ. ಉಳಿದ ಭಾಗದಲ್ಲಿ ಮಾತ್ರ ಅನ್ನ ಅಥವಾ ಬೇರೆ ಧಾನ್ಯದ ಆಹಾರ ಇರಲಿ. ಪಾಲಿಶ್ ಆಗದ ಅಕ್ಕಿಯಾದರೆ ಇನ್ನೂ ಒಳ್ಳೆಯದು.
  • ಕೂತಲ್ಲೇ ಕೂರುವ ಬದಲು, ದಿನಕ್ಕೆ ಕನಿಷ್ಠ 45 ನಿಮಿಷಗಳ ಕಾಲ ಬಿರುಸಿನ ನಡಿಗೆ ಅಥವಾ ವ್ಯಾಯಾಮ ಮಾಡಿ. ಮೈ ಬೆವರಿ ದುಡಿದರೆ ಲಿವರ್‌ನಲ್ಲಿ ಶೇಖರವಾದ ಕೊಬ್ಬು ಕರಗಲು ಶುರುವಾಗುತ್ತದೆ.

ಸಮಸ್ಯೆ ಇರುವುದು ನಮಗೆ ಗೊತ್ತಿಲ್ಲದಿರುವುದಲ್ಲ… ಬದಲಾಗಿ ನಮ್ಮ ನಾಲಿಗೆಯ ಚಪಲವನ್ನು ನಿಯಂತ್ರಿಸಲಾಗದಿರುವುದು.

ಸ್ವಲ್ಪ ಶಿಸ್ತು ರೂಢಿಸಿಕೊಂಡು, ದೇಹಕ್ಕೆ ಸಾಕಷ್ಟು ಕೆಲಸ ಕೊಟ್ಟರೆ, ನಮ್ಮ ಒಳಗಿರುವ ಮೂಕ ಸೇವಕನಾದ ಲಿವರ್ ನೂರ್ಕಾಲ ನಮ್ಮ ಆರೋಗ್ಯವನ್ನು ನೋಡಿಕೊಳ್ಳುತ್ತಾನೆ.


ವಿಶ್ವವಾಣಿಯಲ್ಲಿ ಪ್ರಕಟವಾದ ‘ಕುಡಿಯುವ ಅಭ್ಯಾಸವಿಲ್ಲದಿದ್ದರೂ ‘ಫ್ಯಾಟಿ ಲಿವರ್’ ಕಾಡುವುದು ಏಕೆ?’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

125 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top