ಮಧುಮೇಹ: ಹೆದರಬೇಕಾದ ಕಾಯಿಲೆಯಲ್ಲ, ಅಪ್ಪಿಕೊಳ್ಳಬೇಕಾದ ಶಿಸ್ತು!

ಮಧುಮೇಹ ಹೆದರಬೇಕಾದ ಭೂತವಲ್ಲ. ಕಾರಿನ ಎಂಜಿನ್ ಉದಾಹರಣೆಯಿಂದ ಟೈಪ್ 2 ಡಯಾಬಿಟಿಸ್ ಅರ್ಥ ಮಾಡಿಕೊಳ್ಳೋಣ, ಮತ್ತು ಅದನ್ನು ಗೆಲ್ಲುವ ಐದು ಸರಳ ಶಿಸ್ತುಗಳನ್ನು ತಿಳಿಯೋಣ.

ಮಧುಮೇಹ: ಹೆದರಬೇಕಾದ ಕಾಯಿಲೆಯಲ್ಲ, ಅಪ್ಪಿಕೊಳ್ಳಬೇಕಾದ ಶಿಸ್ತು!

ಈ ಲೇಖನ ಉದಯವಾಣಿ ದಿನಪತ್ರಿಕೆಯ ‘ಆರೋಗ್ಯವಾಣಿ’ ಪುರವಣಿಯಲ್ಲಿ 2026ರ ನವೆಂಬರ್ 15ರಂದು ಪ್ರಕಟವಾಗಿದೆ. Read this article in English

ನಿಮಗೆ ಡಯಾಬಿಟಿಸ್ ಇದೆ ಎಂದು ಯಾರಿಗಾದರೂ ಹೇಳಿದ ತಕ್ಷಣ, ಬಹಳಷ್ಟು ಜನರಿಗೆ ಅದನ್ನು ನಂಬಲೂ ಸಾಧ್ಯವಿರುವುದಿಲ್ಲ, ಇನ್ನು ಕೆಲವರು ಚಡಪಡಿಸಿಕೊಂಡು ಅವರ ಕೈಯಲ್ಲೇ ಇರುವ ರಿಪೋರ್ಟನ್ನು ಮೂರ್ನಾಲ್ಕು ಬಾರಿ ಮಡಚಿ ಬಿಚ್ಚುತ್ತಾರೆ. ಕುರ್ಚಿಯ ತುದಿಗೆ ಸರಿದು ಕೂರುತ್ತಾರೆ. ‘ಅಯ್ಯೋ, ನನ್ನ ಜೀವನ ಮುಗೀತು. ಇನ್ಮುಂದೆ ಯಾವ ಖುಷಿಯೂ ಇಲ್ಲ, ನನ್ನಿಷ್ಟದ ಊಟವೂ ಇಲ್ಲ’ ಎಂದು ಮನಸ್ಸಿನಲ್ಲೇ ಒಂದು ದೊಡ್ಡ ಮಹಾಭಾರತವನ್ನೇ ಸೃಷ್ಟಿಸಿಕೊಳ್ಳುತ್ತಾರೆ.

ಆದರೆ, ನಿಜಕ್ಕೂ ಮಧುಮೇಹ ಎಂದರೆ ಹೆದರಬೇಕಾದ ಭೂತವಲ್ಲ, ಅದೊಂದು ಪಾಪದ ಫಲವೂ ಅಲ್ಲ.

ದೇಹದ ಎಂಜಿನ್ ಮತ್ತು ಪೆಟ್ರೋಲ್ ಕಥೆ!

ಮಧುಮೇಹವನ್ನು ನಾವು ಕೇವಲ ಒಂದು ಕಾಯಿಲೆ ಎಂದುಕೊಂಡಿದ್ದೇವೆ. ಆದರೆ ವಾಸ್ತವದಲ್ಲಿ ಇದು ನಮ್ಮ ದೇಹದ ಎಂಜಿನ್ ಕೆಲಸ ಮಾಡುವ ರೀತಿಯಲ್ಲಿ ಆಗಿರುವ ಒಂದು ಸಣ್ಣ ತಾಂತ್ರಿಕ ದೋಷ. ಕಾರಿನ ಎಂಜಿನ್ ಉದಾಹರಣೆಯಿಂದ ಮಧುಮೇಹವನ್ನು ಅರ್ಥ ಮಾಡಿಕೊಳ್ಳೋಣ.

ಕಾರು ಓಡಲು ಪೆಟ್ರೋಲ್ ಹೇಗೆ ಬೇಕೋ ಹಾಗೆಯೇ ನಮ್ಮ ದೇಹ ಕೆಲಸ ಮಾಡಲು ಗ್ಲೂಕೋಸ್ ಕೂಡ ಬೇಕು. ನಾವು ತಿಂದ ಆಹಾರ ಹೊಟ್ಟೆಯಲ್ಲಿ ಜೀರ್ಣವಾಗಿ ಗ್ಲೂಕೋಸ್ ಎಂಬ ಪೆಟ್ರೋಲ್ ಆಗಿ ನಮ್ಮ ರಕ್ತನಾಳ ಸೇರುತ್ತದೆ. ಇಲ್ಲಿಯ ವರೆಗೆ ಇದು ಎಲ್ಲರಿಗೂ ಸಾಮಾನ್ಯವಾಗಿ ಗೊತ್ತು. ಚಿಕ್ಕಂದಿನಿಂದ ಗ್ಲೂಕೋಸ್ ಪೌಡರ್ ಜಾಹೀರಾತು ನೋಡಿದ್ದೇವಲ್ಲವೇ?!

ಆದರೆ ಕೇವಲ ರಕ್ತದಲ್ಲಿ ಗ್ಲೂಕೋಸ್ ಇದ್ದ ತಕ್ಷಣ ನಮಗೆ ಶಕ್ತಿ ಬರುವುದಿಲ್ಲ! ಆ ಪೆಟ್ರೋಲ್ ದೇಹದ ಎಂಜಿನ್ ಒಳಗೆ, ಅಂದರೆ ನಮ್ಮ ಕೋಟ್ಯಂತರ ಜೀವಕೋಶಗಳ ಒಳಗೆ ಹೋಗಿ ಉಪಯೋಗವಾಗಬೇಕು. ಒಳಗೆ ಹೋಗುವ ಮೊದಲು ಈ ಜೀವಕೋಶಗಳ ಬಾಗಿಲಿಗೆ ಹಾಕಿರುವ ಒಂದು ಭದ್ರವಾದ ಬೀಗವನ್ನು ತೆಗೆಯಬೇಕು. ಆ ಬೀಗ ತೆಗೆಯುವ ಕೀಲಿ ‘ಇನ್ಸುಲಿನ್’. ಇನ್ಸುಲಿನ್ ಇಲ್ಲದೆ ನಮ್ಮ ಜೀವಕೋಶಗಳಿಗೆ ಗ್ಲೂಕೋಸ್ ಉಪಯೋಗಿಸಿಕೊಳ್ಳಲು ಸಾಧ್ಯವಿಲ್ಲ.

ಓಡಿಸದ ಕಾರಿನ ಎಂಜಿನ್ ತುಕ್ಕು ಹಿಡಿದು ಜಾಮ್ ಆಗುವ ಹಾಗೆ, ದೈಹಿಕ ಶ್ರಮವಿಲ್ಲದ ಜೀವನಶೈಲಿ ಹಾಗೂ ಹೊಟ್ಟೆಯ ಬೊಜ್ಜಿನಿಂದಾಗಿ ನಮ್ಮ ಜೀವಕೋಶಗಳ ಬೀಗವೂ ಜಾಮ್ ಆಗಿಬಿಡುತ್ತದೆ. ಇನ್ಸುಲಿನ್ ಎನ್ನುವ ಕೀಲಿ ಇದ್ದರೂ ಅದು ಕೆಲಸ ಮಾಡಲು ಆಗುವುದಿಲ್ಲ. ಬೀಗ ಜಾಮ್ ಆದಾಗ ನಮಗೆ ಶಕ್ತಿ ಕೊಡಬೇಕಾದ ಗ್ಲೂಕೋಸ್ ಜೀವಕೋಶಗಳ ಒಳಗೆ ಹೋಗಲಾಗದೆ ರಕ್ತದಲ್ಲೇ ಉಳಿದು ಸಕ್ಕರೆಯ ಟ್ರಾಫಿಕ್ ಜಾಮ್ ಆಗುತ್ತದೆ. ರಕ್ತದಲ್ಲಿರುವ ಗ್ಲೂಕೋಸ್ ನಮಗೆ ಉಪಯೋಗವಿಲ್ಲ, ಒಳಗೆ ಹೋದರೆ ಮಾತ್ರ ಅದರಿಂದ ಶಕ್ತಿ. ಸಮಯ ಕಳೆದಂತೆ ಆ ಗ್ಲೂಕೋಸಿನ ಟ್ರಾಫಿಕ್ ಜಾಮ್ ನಮ್ಮ ರಕ್ತನಾಳಗಳಿಗೇ ತೊಂದರೆ ಕೊಡಲು ಆರಂಭಿಸುತ್ತದೆ. ಇದೇ ಟೈಪ್ 2 ಡಯಾಬಿಟಿಸ್! ಸುಮಾರು ಶೇ. 90–95 ಮಧುಮೇಹಿಗಳಿಗೆ ಇರುವುದೇ ಈ ಟೈಪ್ 2 ಡಯಾಬಿಟಿಸ್.

ಮಧುಮೇಹದ ನಿರ್ವಹಣೆಯೂ ಹಲ್ಲುಜ್ಜುವಷ್ಟೇ ಸಹಜವಾದ ಶಿಸ್ತು ಆಗಬೇಕು.

ಮಧುಮೇಹವನ್ನು ಗೆಲ್ಲುವ ಸೂತ್ರ ಎಲ್ಲಿದೆ?

ಇದನ್ನು ಗೆಲ್ಲುವುದು ಕಷ್ಟವೇನಲ್ಲ, ಅದಕ್ಕೆ ಬೇಕಾಗಿರುವುದು ನಮ್ಮ ದೈನಂದಿನ ಬದುಕಿನ ಐದು ಸರಳ ಶಿಸ್ತುಗಳು:

1. ಊಟದ ‘ಸ್ಮಾರ್ಟ್ ಪ್ಲೇಟ್’ ಗುಟ್ಟು

ಡಯಾಬಿಟಿಸ್ ಬಂದ ತಕ್ಷಣ ಜನ, ‘ಏನು ತಿನ್ನಬಾರದು’ ಎಂದು ದೊಡ್ಡ ಪಟ್ಟಿ ಮಾಡಿ ಗೊಂದಲಗೊಳ್ಳುತ್ತಾರೆ. ಗೊಂದಲ ಬೇಡ. ನಮಗೆ ಬೇಕಾಗಿರುವುದು ‘ಸ್ಮಾರ್ಟ್ ಪ್ಲೇಟ್’. ಒಮ್ಮೆ ನಿಮ್ಮ ತಿಂಡಿ-ಊಟದ ತಟ್ಟೆಯನ್ನು ಕಲ್ಪನೆ ಮಾಡಿಕೊಳ್ಳಿ:

ಸ್ಮಾರ್ಟ್ ಪ್ಲೇಟ್

  • ಆ ತಟ್ಟೆಯ ಅರ್ಧ ಭಾಗ ಪೂರ್ತಿ ತರಕಾರಿ ಪಲ್ಯ ಮತ್ತು ಸಲಾಡ್‌ಗಳಿಂದಲೇ ತುಂಬಿರಬೇಕು.
  • ಉಳಿದ ಅರ್ಧವನ್ನು ಮತ್ತೆ ಎರಡು ಕಾಲು ಭಾಗ ಮಾಡಿ. ಒಂದು ಕಾಲು ಭಾಗದಲ್ಲಿ ಬೇಳೆಕಾಳು, ಮೊಳಕೆ ಕಾಳು, ಪನೀರ್ ಅಥವಾ ಹಾಲಿನ ಪದಾರ್ಥಗಳಂತಹ ಪ್ರೊಟೀನ್ ಇರಬೇಕು.
  • ಉಳಿದ ಕೊನೆಯ ಕಾಲು ಭಾಗದಲ್ಲಿ ಮಾತ್ರ ಧಾನ್ಯಗಳು, ಅಂದರೆ ನಿಮ್ಮ ನೆಚ್ಚಿನ ಅನ್ನ, ಚಪಾತಿ, ರೊಟ್ಟಿ, ಮುದ್ದೆ ಅಥವಾ ಸಿರಿಧಾನ್ಯ ಇರಬೇಕು.

ನಮ್ಮ ಜನರು ಸಾಮಾನ್ಯವಾಗಿ ಮಾಡುವುದು ಉಲ್ಟಾ ಕೆಲಸ. ಮುಕ್ಕಾಲು ಭಾಗ ಅನ್ನ ಹಾಕಿ, ಮೂಲೆಯಲ್ಲಿ ಸ್ವಲ್ಪ ಉಪ್ಪಿನಕಾಯಿ ಹಾಕಿಕೊಂಡ ಹಾಗೆ ಪಲ್ಯ ಇಟ್ಟುಕೊಳ್ಳುತ್ತಾರೆ. ತಿನ್ನುವ ತಟ್ಟೆ ಸ್ಮಾರ್ಟ್ ಆದರೆ ಮಧುಮೇಹ ಹತೋಟಿಗೆ ಬರಲು ಆರಂಭವಾಗುತ್ತದೆ.

2. ‘ಎರಡು ಬಾಡಿ’ಗಳ ಭ್ರಮೆ!

‘ನಾನು ಮನೆಯಲ್ಲಿ ಸಿಹಿ ಮುಟ್ಟುವುದೇ ಇಲ್ಲ ಡಾಕ್ಟ್ರೇ, ಕೇವಲ ಫಂಕ್ಷನ್‌ಗೆ ಹೋದಾಗ ಮಾತ್ರ ಒಂದೆರಡು ಸ್ವೀಟ್ ತಿನ್ನುತ್ತೇನೆ’ ಎನ್ನುವ ಮುಗ್ಧರಿದ್ದಾರೆ. ಆದರೆ ಲೆಕ್ಕ ಹಾಕಿದರೆ ವಾರಕ್ಕೆ ಮೂರು ಫಂಕ್ಷನ್, ತಿಂಗಳಿಗೆ ಆರು ದಿನ ಮದುವೆ-ಪಾರ್ಟಿಗಳಿರುತ್ತವೆ! ನೀವು ಫಂಕ್ಷನ್‌ಗಳಲ್ಲಿ ಸಿಹಿ ತಿನ್ನಲು ನಿಮ್ಮ ಬಳಿ ಎರಡು ದೇಹಗಳಿವೆಯೇ? ಒಂದು ದೇಹ ಮದುವೆ ಮನೆಗೆ ಹೋಗಿ ಸಿಹಿ ತಿಂದು ರಕ್ತನಾಳ ಹಾನಿ ಮಾಡಿಕೊಳ್ಳಲು, ಇನ್ನೊಂದು ಮನೆಯಲ್ಲಿ ಸುರಕ್ಷಿತವಾಗಿ ಇಡಲು? ಇಲ್ಲ ತಾನೇ? ನಾವು ತಿನ್ನುವ ಜಿಲೇಬಿಗೆ ಇದು ಮನೆಯ ಊಟವೋ ಮದುವೆ ಮನೆಯ ಊಟವೋ ಎಂದು ಗುರುತಿಸುವ ಜಿಪಿಎಸ್ ಇರುವುದಿಲ್ಲ, ಅದು ಎಲ್ಲೇ ತಿಂದರೂ ನಮ್ಮ ಅದೇ ಒಂದು ದೇಹದ ರಕ್ತನಾಳಗಳಿಗೇ ತೊಂದರೆ ಕೊಡುತ್ತದೆ. ಆದ್ದರಿಂದ ಚಪಲಕ್ಕಾಗಲೀ ಅಥವಾ ಮರ್ಯಾದೆಯ ನೆಪದಲ್ಲಿಯಾಗಲೀ ಸಿಹಿ ತಿನ್ನುವುದನ್ನು ಬಿಟ್ಟರೆ ಒಳ್ಳೆಯದು.

3. ನನಗೆ ಮನೆಯಲ್ಲೇ ತುಂಬಾ ಕೆಲಸ!

‘ನಾನು ದಿನಪೂರ್ತಿ ಮನೆಯಲ್ಲಿ ಕಸ, ಮುಸುರೆ, ಅಡುಗೆ ಅಂತ ಓಡಾಡ್ತೀನಿ, ಅದೇ ನನಗೆ ವಾಕಿಂಗ್’ ಎನ್ನುವುದು ಬಹಳ ಜನರ ನಂಬಿಕೆ. ಆದರೆ ಮನೆ ಕೆಲಸ ಮಾಡುವುದು ಅವಶ್ಯವಿದ್ದರೂ ಈ ವಿಷಯಕ್ಕೆ ಅದು ಅಷ್ಟು ಪರಿಣಾಮಕಾರಿಯಲ್ಲ. ಮನೆ ಕೆಲಸ ಸಿಟಿ ಟ್ರಾಫಿಕ್‌ನಲ್ಲಿ ಕಾರು ಓಡಿಸಿದ ಹಾಗೆ. ಪದೇ ಪದೇ ಬ್ರೇಕ್ ಹಾಕಿ, ಕ್ಲಚ್ ಒತ್ತಿ ಕಾರು ಓಡಿಸಿದರೆ ಡ್ರೈವರ್‌ಗೆ ಸುಸ್ತಾಗುತ್ತದೆಯೇ ವಿನಾ ಮೈಲೇಜ್ ಸಿಗುವುದಿಲ್ಲ. ಹೈವೇ ಮೇಲೆ ಕಾರು ಓಡಿಸಿದ ಹಾಗೆ ವಾಕಿಂಗ್ ಮಾಡಬೇಕು! ದಿನಕ್ಕೆ 40 ನಿಮಿಷ ಬಿರುಸಾಗಿ ಒಂದೇ ಸಮನೆ ವಾಕಿಂಗ್ ಮಾಡಿದರೆ, ಹೃದಯದ ಪಂಪ್ ಚುರುಕಾಗಿ, ಜಾಮ್ ಆಗಿದ್ದ ಜೀವಕೋಶಗಳ ಬೀಗ ಸುಲಭವಾಗಿ ತೆರೆದುಕೊಳ್ಳುತ್ತದೆ.

4. ಕ್ಲಾಸ್ ಟೆಸ್ಟ್ ಮತ್ತು ರಿಪೋರ್ಟ್ ಕಾರ್ಡ್!

ಆಗಾಗ ಮಾಡುವ ಖಾಲಿ ಹೊಟ್ಟೆಯ ಗ್ಲೂಕೋಸ್ ಪರೀಕ್ಷೆ ಕೇವಲ ಒಂದು ಸಣ್ಣ ‘ಕ್ಲಾಸ್ ಟೆಸ್ಟ್’ ಇದ್ದ ಹಾಗೆ. ಹಿಂದಿನ ದಿನ ಸ್ವಲ್ಪ ಪಥ್ಯ ಮಾಡಿ ಸುಲಭವಾಗಿ ಪಾಸ್ ಆಗಿಬಿಡಬಹುದು. ಆದರೆ HbA1c (ಗ್ಲೈಕೋಸೈಲೇಟೆಡ್ ಹಿಮೋಗ್ಲೋಬಿನ್) ಪರೀಕ್ಷೆ ಇದೆಯಲ್ಲ, ಅದು ನಿಮ್ಮ ಇಡೀ ಮೂರು ತಿಂಗಳ ಅಸಲಿ ‘ರಿಪೋರ್ಟ್ ಕಾರ್ಡ್’! ರಕ್ತದ ಕಣಗಳಿಗೆ ನೀವು ತಿಂದ ಸಿಹಿ ಎಷ್ಟು ಅಂಟಿಕೊಂಡಿದೆ ಎಂದು ಇದು ಲೆಕ್ಕ ಇಡುತ್ತದೆ. ಪರೀಕ್ಷೆಯ ಹಿಂದಿನ ದಿನದ ನಾಟಕಕ್ಕೆ ಈ ರಿಪೋರ್ಟ್ ಕಾರ್ಡ್ ಎಂದಿಗೂ ಮರುಳಾಗುವುದಿಲ್ಲ.

HbA1c ಪರೀಕ್ಷೆ ಯಾವಾಗ?

  • ಮಧುಮೇಹ ನಿಯಂತ್ರಣಕ್ಕೆ ಬರುವವರೆಗೆ ಮೂರು ತಿಂಗಳಿಗೊಮ್ಮೆ ಇದನ್ನು ಮಾಡಿಸಲೇಬೇಕು.
  • ಅನಂತರ ಕೂಡ ನಿಯಂತ್ರಣದಲ್ಲಿಯೇ ಇದೆ ಎಂದು ಖಚಿತಪಡಿಸಿಕೊಳ್ಳಲು ಆರು ತಿಂಗಳಿಗೊಮ್ಮೆಯಾದರೂ ಮಾಡಿಸಿಕೊಳ್ಳಬೇಕು.

5. ಮಳೆಯ ಕೊಡೆಯನ್ನೇ ಮಡಚಿಡಬೇಡಿ!

ಗ್ಲೂಕೋಸ್ ಮಟ್ಟ ಸಹಜ ಸ್ಥಿತಿಗೆ ಬಂದ ತಕ್ಷಣ, ‘ನನಗೆ ಮಧುಮೇಹ ವಾಸಿಯಾಯಿತು’ ಅಂತ ಹಲವರು ಔಷಧಗಳನ್ನೂ ನಿಲ್ಲಿಸಿಬಿಡುತ್ತಾರೆ. ಇದು ಹೇಗಿದೆ ಅಂದರೆ, ಮಳೆಯಲ್ಲಿ ಕೊಡೆ ಹಿಡಿದುಕೊಂಡು ಹೋಗುತ್ತ ಇರುವಾಗ ಕೊಡೆಯ ಸಹಾಯದಿಂದಾಗಿ ಮೈಗೆ ಮಳೆ ನೀರು ತಾಗುತ್ತಿಲ್ಲ ಎನ್ನುವ ಕಾರಣಕ್ಕೆ ಮಳೆ ಬರುತ್ತಿರುವಾಗಲೇ ಕೊಡೆಯನ್ನು ಮಡಚಿಟ್ಟ ಹಾಗೆ! ಮಳೆಯಲ್ಲಿ ನೀವು ಒದ್ದೆಯಾಗದಿರುವುದಕ್ಕೆ ಆ ಕೊಡೆಯೇ ಕಾರಣ. ವೈದ್ಯರ ಸಲಹೆ ಇಲ್ಲದೆ ಔಷಧಗಳನ್ನು ಎಂದಿಗೂ ನಿಲ್ಲಿಸಲು ಹೋಗಬೇಡಿ.

ಕೊನೆಯ ಮಾತು: ಇದು ಕಾಯಿಲೆಯಲ್ಲ, ಜೀವನದ ಶಿಸ್ತು!

ರಸ್ತೆಯಲ್ಲಿ ಟ್ರಾಫಿಕ್ ನಿಯಮಗಳನ್ನು ಹಾಕಿರುವುದು ನಮಗೆ ಶಿಕ್ಷೆ ಕೊಡಲು ಅಲ್ಲ, ನಾವು ಅಪಘಾತ ಮಾಡಿಕೊಳ್ಳದೆ ಸುರಕ್ಷಿತವಾಗಿ ಮನೆ ಸೇರಲಿ ಎಂದಷ್ಟೇ. ನೀವು ಓವರ್ ಸ್ಪೀಡ್ ಮಾಡಿದರೆ ಮಾತ್ರ ಪೊಲೀಸರು ಹಿಡಿದು ದಂಡ ಹಾಕುತ್ತಾರೆ. ಮಧುಮೇಹದ ಕಥೆಯೂ ಅಷ್ಟೇ!

ಮಧುಮೇಹ ಎನ್ನುವುದು ಪ್ರಕೃತಿ ನಮಗೆ ಹಾಕುವ ಟ್ರಾಫಿಕ್ ನಿಯಮ. ಇನ್ನುಮುಂದೆ ಅಷ್ಟು ಸಿಹಿ ತಿನ್ನಬೇಡ, ವಾಕಿಂಗ್ ಮಾಡು, ಆರೋಗ್ಯ ನೋಡಿಕೋ ಎಂದು ಪ್ರಕೃತಿ ಪ್ರೀತಿಯಿಂದ ಹೇಳುವ ನಿಯಮವಿದು. ನಿಯಮ ಮೀರಿ ಮನಬಂದಂತೆ ತಿಂದರೆ ಮಾತ್ರ, ಕಣ್ಣು, ಕಿಡ್ನಿ ಅಥವಾ ಹೃದಯದ ಹಾನಿಯ ರೂಪದಲ್ಲಿ ದೊಡ್ಡ ದಂಡ ಕಟ್ಟಬೇಕಾಗುತ್ತದೆ.

ನಾವು ಪ್ರತಿದಿನ ಹಲ್ಲುಜ್ಜುತ್ತೇವೆ, ಸ್ನಾನ ಮಾಡುತ್ತೇವೆ. ಇದನ್ನೇನಾದರೂ ನಾವು ಶಿಕ್ಷೆ ಎಂದುಕೊಂಡಿದ್ದೇವಾ? ಅದೊಂದು ದಿನನಿತ್ಯದ ಸ್ವಚ್ಛತೆ. ಮಧುಮೇಹದ ನಿರ್ವಹಣೆಯೂ ಹಲ್ಲುಜ್ಜುವಷ್ಟೇ ಸಹಜವಾದ ಶಿಸ್ತು ಆಗಬೇಕು. ಮಧುಮೇಹವನ್ನು ಶತ್ರುವಿನಂತೆ ನೋಡದೆ, ಮನಸಾರೆ ಒಪ್ಪಿಕೊಂಡು ನಿರ್ವಹಿಸಿ. ಆಗ ಅದು ನಮ್ಮ ದೈನಂದಿನ ಜೀವನದಲ್ಲಿ ನಮಗೆ ತೊಂದರೆ ಕೊಡದಂತೆ ಇರುತ್ತದೆ.

ಈ ವಿಶ್ವ ಮಧುಮೇಹ ದಿನದಿಂದ ನಿಮ್ಮ ಹೆಜ್ಜೆಗಳಲ್ಲಿ ಚುರುಕು, ಊಟದಲ್ಲಿ ಶಿಸ್ತು ಮತ್ತು ಮನಸ್ಸಿನಲ್ಲಿ ನೆಮ್ಮದಿ ತುಂಬಿರಲಿ.


ಉದಯವಾಣಿಯಲ್ಲಿ ಪ್ರಕಟವಾದ ‘ಮಧುಮೇಹ: ಹೆದರಬೇಕಾದ ಕಾಯಿಲೆಯಲ್ಲ, ಅಪ್ಪಿಕೊಳ್ಳಬೇಕಾದ ಶಿಸ್ತು!’ ಲೇಖನದ ಪುಟ
ಉದಯವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

233 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top