ದುಬಾರಿ ಉಪ್ಪಿನ ಹಿಂದಿರುವ ಅಗ್ಗದ ಸುಳ್ಳುಗಳು!

200 ರೂಪಾಯಿಯ ಹಿಮಾಲಯನ್ ಪಿಂಕ್ ಸಾಲ್ಟ್ ಬಿಪಿ ಕಡಿಮೆ ಮಾಡುತ್ತದೆಯೇ? ಸೋಡಿಯಂ ಸತ್ಯ, 84 ಖನಿಜಗಳ ಮಿಥ್ಯೆ ಮತ್ತು ಅಯೋಡಿನ್ ಕೊರತೆಯ ಅಪಾಯ, ಇಂಗ್ಲಿಷ್ ಅನುವಾದದೊಂದಿಗೆ.

ದುಬಾರಿ ಉಪ್ಪಿನ ಹಿಂದಿರುವ ಅಗ್ಗದ ಸುಳ್ಳುಗಳು!

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಮೇ 31ರಂದು ಪ್ರಕಟವಾಗಿದೆ. Read this article in English

ಇತ್ತೀಚೆಗೆ ಅನೇಕರು 20 ರೂಪಾಯಿಯ ಅಯೋಡಿನ್-ಯುಕ್ತ ಬಿಳಿ ಉಪ್ಪನ್ನು ಬದಿಗಿಟ್ಟು, 200 ರೂಪಾಯಿ ಕೊಟ್ಟು “ಹಿಮಾಲಯನ್ ಪಿಂಕ್ ಸಾಲ್ಟ್” ತಂದು ಅಡುಗೆಗೆ ಬಳಸುತ್ತಿದ್ದಾರೆ. ವಾಟ್ಸಾಪ್ ಫಾರ್ವರ್ಡ್‌ಗಳಲ್ಲಿ “ಇದು ಬಿಪಿ ಕಡಿಮೆ ಮಾಡುತ್ತದೆ, ಅನೇಕ ಕಾಯಿಲೆ ಗುಣಪಡಿಸುತ್ತದೆ” ಎಂದು ಓದಿ, ಇದನ್ನೇ ಸಂಜೀವಿನಿ ಎಂದು ನಂಬಿದ್ದಾರೆ.

ಆದರೆ ವೈದ್ಯಕೀಯ ವಿಜ್ಞಾನದ ಪ್ರಕಾರ, ಇದು ಎಷ್ಟರಮಟ್ಟಿಗೆ ಸತ್ಯ? ಬನ್ನಿ ನೋಡೋಣ.

ಸೋಡಿಯಂ ಸತ್ಯ

ಉಪ್ಪು ಬೆಳ್ಳಗಿರಲಿ, ಗುಲಾಬಿ ಬಣ್ಣವಿರಲಿ, ಅಥವಾ ಕಪ್ಪಗಿರಲಿ.. ಅದರ ಮೂಲ ರಾಸಾಯನಿಕ ಹೆಸರು ‘ಸೋಡಿಯಂ ಕ್ಲೋರೈಡ್’. ನಮ್ಮ ಬಿಳಿ ಉಪ್ಪಿನಲ್ಲಿ ಶೇ. 99ರಷ್ಟು ಸೋಡಿಯಂ ಕ್ಲೋರೈಡ್ ಇದ್ದರೆ, ಈ ಪಿಂಕ್ ಸಾಲ್ಟ್‌ನಲ್ಲಿ ಅದು ಶೇ. 98ರಷ್ಟಿರುತ್ತದೆ. ಅಂದರೆ, ನೀವು ಪಿಂಕ್ ಸಾಲ್ಟ್ ಅನ್ನು ಅತಿಯಾಗಿ ತಿಂದರೂ ರಕ್ತದೊತ್ತಡ ಏರುವುದು ಅಷ್ಟೇ ಖಚಿತ. ಗುಲಾಬಿ ಬಣ್ಣದ ಉಪ್ಪು ಬಿಪಿ ಕಡಿಮೆ ಮಾಡುತ್ತದೆ ಎನ್ನುವುದು ಶುದ್ಧ ಸುಳ್ಳು.

ಬಣ್ಣದ ಹಿಂದಿನ ರಹಸ್ಯ

ಹಿಮಾಲಯದ ಉಪ್ಪಿಗೆ ಆ ಗುಲಾಬಿ ಬಣ್ಣ ಬರಲು ಕಾರಣ, ಅದರಲ್ಲಿರುವ ಕಬ್ಬಿಣದ ಆಕ್ಸೈಡ್ ಮತ್ತು ಇತರ ಅತೀ ಸ್ವಲ್ಪ ಪ್ರಮಾಣದ ಖನಿಜಗಳು. ಈ ಖನಿಜಗಳು ಸಹಾಯಕಾರಿಯಾದರೂ ಸಹಾ, ಅವು ಅತ್ಯಲ್ಪವಾಗಿರುವುದರಿಂದ ನಿಮ್ಮ ದೇಹದ ದೈನಂದಿನ ಅಗತ್ಯವನ್ನು ಪೂರೈಸುವಷ್ಟು ಸಿಗಬೇಕೆಂದರೆ, ನೀವು ಅಪಾಯಕಾರಿ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಬೇಕಾಗುತ್ತದೆ.

ವೈದ್ಯರ ಆತಂಕ: ಅಯೋಡಿನ್ ಕೊರತೆ

ದಶಕಗಳ ಹಿಂದೆ ನಮ್ಮ ದೇಶದಲ್ಲಿ ‘ಗಾಯಿಟರ್’ (ಥೈರಾಯ್ಡ್ ಊದಿಕೊಳ್ಳುವ ಕಾಯಿಲೆ) ಮತ್ತು ಥೈರಾಯ್ಡ್ ರೋಗಗಳು ವಿಪರೀತವಾಗಿದ್ದವು. ಮಕ್ಕಳ ಮೆದುಳಿನ ಬೆಳವಣಿಗೆಯ ಮೇಲೂ ಥೈರಾಯ್ಡ್ ಸಮಸ್ಯೆಗಳು ಪರಿಣಾಮ ಬೀರುತ್ತಿದ್ದವು. ಇದನ್ನು ತಡೆಯಲೆಂದೇ ಸರ್ಕಾರ ಬಿಳಿ ಉಪ್ಪಿಗೆ ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ‘ಅಯೋಡಿನ್’ ಸೇರಿಸಿ ಮಾರಾಟ ಮಾಡಲು ಕಡ್ಡಾಯಗೊಳಿಸಿತು. ಇದರಿಂದಾಗಿ ನಮ್ಮ ದೇಶ ಆ ಕಾಯಿಲೆಗಳಿಂದ ಬಹುಪಾಲು ಮುಕ್ತವಾಯಿತು.

ಆದರೆ, ಈ ದುಬಾರಿ “ಪಿಂಕ್ ಸಾಲ್ಟ್”ನಲ್ಲಿ ನೈಸರ್ಗಿಕವಾಗಿ ಅಯೋಡಿನ್ ಇರುವುದಿಲ್ಲ, ಮತ್ತು ಬಹುತೇಕ ಬ್ರ್ಯಾಂಡ್‌ಗಳು ಅದನ್ನು ಸೇರಿಸುವುದೂ ಇಲ್ಲ. ನಿಮ್ಮ ಮನೆಯ ದಿನನಿತ್ಯದ ಅಡುಗೆಗೆ ಬಿಳಿ ಉಪ್ಪನ್ನು ಸಂಪೂರ್ಣವಾಗಿ ನಿಲ್ಲಿಸಿ ಕೇವಲ ಪಿಂಕ್ ಸಾಲ್ಟ್ ಬಳಸಿದರೆ, ಗರ್ಭಿಣಿಯರು ಮತ್ತು ಬೆಳೆಯುವ ಮಕ್ಕಳಿಗೆ ಅಯೋಡಿನ್ ಕೊರತೆಯಾಗಿ ಥೈರಾಯ್ಡ್ ಸಮಸ್ಯೆಗಳು ಮರುಕಳಿಸುವ ಅಪಾಯವಿದೆ.

ತಪ್ಪು ಕಲ್ಪನೆಗಳು ಮತ್ತು ವಾಸ್ತವ

ತಪ್ಪು ಕಲ್ಪನೆ: “ಪಿಂಕ್ ಸಾಲ್ಟ್ ತಿಂದರೆ ಬಿಪಿ (ರಕ್ತದೊತ್ತಡ) ಹೆಚ್ಚಾಗುವುದಿಲ್ಲ.”

ವಾಸ್ತವ: ಮನುಷ್ಯನ ಬಿಪಿ ಹೆಚ್ಚಿಸುವುದು ಉಪ್ಪಿನಲ್ಲಿರುವ ‘ಸೋಡಿಯಂ’. ಬಿಳಿ ಉಪ್ಪು ಮತ್ತು ಪಿಂಕ್ ಉಪ್ಪು ಎರಡರಲ್ಲೂ ಸೋಡಿಯಂ ಪ್ರಮಾಣ ಹೆಚ್ಚು-ಕಡಿಮೆ ಒಂದೇ ಇರುತ್ತದೆ.

ತಪ್ಪು ಕಲ್ಪನೆ: “ಪಿಂಕ್ ಸಾಲ್ಟ್‌ನಲ್ಲಿ ದೇಹಕ್ಕೆ ಬೇಕಾದ 84 ಬಗೆಯ ಖನಿಜಗಳಿವೆ.”

ವಾಸ್ತವ: ಪರೀಕ್ಷೆ ಮಾಡಿದರೆ ಖನಿಜಗಳು ಸಿಗಬಹುದು. ಆದರೆ ಅವುಗಳ ಪ್ರಮಾಣ ಅದೆಷ್ಟು ಕಡಿಮೆ ಎಂದರೆ, ಅದರಿಂದ ನಿಮ್ಮ ದೇಹಕ್ಕೆ ಯಾವುದೇ ಗಣನೀಯ ಲಾಭವಾಗುವುದಿಲ್ಲ. ಇದೊಂದು ಮಾರ್ಕೆಟಿಂಗ್ ತಂತ್ರವಷ್ಟೇ. ಆ ಖನಿಜಗಳಿಗಾಗಿ ಉಪ್ಪು ತಿನ್ನುವ ಬದಲು ಸೊಪ್ಪು, ತರಕಾರಿ, ಹಣ್ಣು ತಿಂದರೆ ವೈದ್ಯಕೀಯವಾಗಿ ಹೆಚ್ಚು ಲಾಭವಿದೆ.

ಈಗ ನಾವೇನು ಮಾಡಬಹುದು?

ನಿಮ್ಮ ಮನೆಯ ದೈನಂದಿನ ಅಡುಗೆಗೆ, ಸಾರು-ಸಾಂಬಾರ್‌ಗೆ ಕಡ್ಡಾಯವಾಗಿ ‘ಅಯೋಡಿನ್-ಯುಕ್ತ ಬಿಳಿ ಉಪ್ಪನ್ನೇ’ ಬಳಸಿ. ನಿಮಗೆ ಪಿಂಕ್ ಸಾಲ್ಟ್‌ನ ರುಚಿ, ಬಣ್ಣ ಇಷ್ಟವಾದರೆ ಅದನ್ನು ಸಲಾಡ್ ಅಥವಾ ಹಣ್ಣುಗಳ ಮೇಲೆ ಉದುರಿಸಿಕೊಂಡು ತಿನ್ನಲು ಮಾತ್ರ ಸೀಮಿತಗೊಳಿಸಿ.

ಕೊನೆ ಮಾತು

ಸೋಶಿಯಲ್ ಮೀಡಿಯಾ ವ್ಯಾಪಾರಿಗಳ ಮಾತು ಕೇಳಿ ನಿಮ್ಮ ಆರೋಗ್ಯವನ್ನು, ವಿಶೇಷವಾಗಿ ಮಕ್ಕಳ ಥೈರಾಯ್ಡ್ ಆರೋಗ್ಯವನ್ನು ಪಣಕ್ಕಿಡಬೇಡಿ. ಬಣ್ಣ ಮತ್ತು ಆಕರ್ಷಕ ಪ್ಯಾಕಿಂಗ್ ಹಿಂದಿರುವ ಮಾರ್ಕೆಟಿಂಗ್ ತಂತ್ರಕ್ಕೆ ಬಲಿಯಾಗದಿರಿ. ನಿಮ್ಮ ದೈನಂದಿನ ಅಯೋಡಿನ್ ಯುಕ್ತ ಉಪ್ಪೇ ನಿಮಗೆ ಶ್ರೀರಕ್ಷೆ.


ವಿಶ್ವವಾಣಿಯಲ್ಲಿ ಪ್ರಕಟವಾದ ‘ದುಬಾರಿ ಉಪ್ಪಿನ ಹಿಂದಿರುವ ಅಗ್ಗದ ಸುಳ್ಳುಗಳು!’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

125 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top