ಮೂಗಿನಲ್ಲಿ ನಳಿಕೆ: ನೋಡಲು ಭಯಂಕರ, ಅರ್ಥ ಮಾಡಿಕೊಂಡರೆ ಸರಳ!

ರೋಗಿಯ ಮೂಗಿನಲ್ಲಿ ನಳಿಕೆ ಕಂಡರೆ ಗಾಬರಿ ಏಕೆ? ರೈಲ್ಸ್ ಟ್ಯೂಬ್ ಏನು ಮಾಡುತ್ತದೆ, ಹೇಗೆ ಅಳವಡಿಸುತ್ತಾರೆ, ನೋವಾಗುತ್ತದೆಯೇ, ಅದರ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಇಂಗ್ಲಿಷ್ ಅನುವಾದದೊಂದಿಗೆ.

ಮೂಗಿನಲ್ಲಿ ನಳಿಕೆ: ನೋಡಲು ಭಯಂಕರ, ಅರ್ಥ ಮಾಡಿಕೊಂಡರೆ ಸರಳ!

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಅಕ್ಟೋಬರ್ 11ರಂದು ಪ್ರಕಟವಾಗಿದೆ. Read this article in English

“ಡಾಕ್ಟ್ರೇ, ನಮ್ಮಮ್ಮನಿಗೆ ಏನಾಗಿದೆ? ಮೂಗಿನಿಂದ ಆ ದೊಡ್ಡ ಪೈಪ್ ಹಾಕಿಬಿಟ್ಟಿದ್ದೀರಲ್ಲಾ!”

ಐಸಿಯು ಅಥವಾ ವಾರ್ಡ್‌ನ ಹೊರಗೆ ನಿಂತಿರುವ ರೋಗಿಯ ಸಂಬಂಧಿಕರು ಆತಂಕದಿಂದ ಕೇಳುವ ಅತ್ಯಂತ ಸಾಮಾನ್ಯ ಪ್ರಶ್ನೆ ಇದು. ರೋಗಿಯ ಮೂಗಿನಲ್ಲಿ ಆ ಉದ್ದನೆಯ ಪ್ಲಾಸ್ಟಿಕ್ ನಳಿಕೆಯನ್ನು ನೋಡಿದ ತಕ್ಷಣ, ಅವರ ಎದೆಯಲ್ಲಿ ಢವಢವ ಶುರುವಾಗುತ್ತದೆ. “ಇನ್ನು ಇವರು ಬದುಕೋದು ಕಷ್ಟಾನಾ?”, “ಜೀವಮಾನವಿಡೀ ಹೀಗೆಯೇ ಪೈಪ್‌ನಲ್ಲೇ ಊಟ ಮಾಡಬೇಕಾ?” ಎಂಬ ನೂರಾರು ಆತಂಕಗಳು ಸಂಬಂಧಿಕರ ಮನಸ್ಸಿನಲ್ಲಿ ಸುಳಿಯುತ್ತವೆ.

ಆದರೆ, ಒಬ್ಬ ವೈದ್ಯನಾಗಿ ನಾನು ನಿಮಗೆ ಹೇಳುವ ಸತ್ಯವೇನೆಂದರೆ: ಈ ನಳಿಕೆ ನೋಡಲು ಮಾತ್ರ ಭಯಂಕರ. ಇದರ ಹಿಂದಿನ ವಿಜ್ಞಾನ ಮತ್ತು ಉದ್ದೇಶವನ್ನು ಅರ್ಥ ಮಾಡಿಕೊಂಡರೆ ಇದು ಅತ್ಯಂತ ಸರಳ ಹಾಗೂ ಅಕ್ಷರಶಃ ಜೀವ ರಕ್ಷಕ! ಬನ್ನಿ, ಇವತ್ತು ಈ ‘ಮೂಗಿನ ಪೈಪ್’ನ ಹಿಂದಿನ ಅಸಲಿ ಕಥೆಯನ್ನು ತಿಳಿದುಕೊಳ್ಳೋಣ.

ಏನಿದು ಫೀಡಿಂಗ್ ಟ್ಯೂಬ್?

ವೈದ್ಯಕೀಯ ಪದಗಳಲ್ಲಿ ಇದನ್ನು ‘ರೈಲ್ಸ್ ಟ್ಯೂಬ್’ ಅಥವಾ ‘ನೇಸೋಗ್ಯಾಸ್ಟ್ರಿಕ್ ಟ್ಯೂಬ್’ ಎಂದು ಕರೆಯುತ್ತಾರೆ. ಇದೊಂದು ಮೃದುವಾದ, ತೆಳುವಾದ ಪ್ಲಾಸ್ಟಿಕ್ ನಳಿಕೆ. ಇದನ್ನು ಮೂಗಿನ ಹೊಳ್ಳೆಯ ಮೂಲಕ ಸೇರಿಸಿ, ಗಂಟಲಿನ ಹಾದಿಯಾಗಿ, ಅನ್ನನಾಳದ ಮುಖಾಂತರ ನೇರವಾಗಿ ಹೊಟ್ಟೆಯೊಳಗೆ (ಜಠರಕ್ಕೆ) ತಲುಪಿಸಲಾಗುತ್ತದೆ.

ರೋಗಿಗೆ ಬಾಯಿಯ ಮೂಲಕ ಸುರಕ್ಷಿತವಾಗಿ ಆಹಾರ ಅಥವಾ ನೀರನ್ನು ನುಂಗಲು ಸಾಧ್ಯವಾಗದಿದ್ದಾಗ, ಪೋಷಕಾಂಶಗಳ ಕೊರತೆಯಾಗದಿರಲಿ ಎಂದು ಇದನ್ನು ಪ್ರಮುಖವಾಗಿ ಬಳಸಲಾಗುತ್ತದೆ. ಹಾಗೆಯೇ, ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರತೆಗೆಯಲೂ ಸಹ ಇದು ಬಳಕೆಯಾಗುತ್ತದೆ.

ಇದು ಏನು ಕೆಲಸ ಮಾಡುತ್ತದೆ?

ಈ ನಳಿಕೆ ಕೇವಲ ಊಟ ಕೊಡಲು ಮಾತ್ರ ಸೀಮಿತವಲ್ಲ; ಇದೊಂದು ರೀತಿಯಲ್ಲಿ ‘ಟೂ ವೇ’ ರಸ್ತೆ ಇದ್ದ ಹಾಗೆ! ಇದು ಮುಖ್ಯವಾಗಿ ಮೂರು ಕೆಲಸಗಳನ್ನು ಮಾಡುತ್ತದೆ:

1. ಆಹಾರ ನೀಡಲು

ರೋಗಿಗೆ ಊಟ ಮಾಡುವುದು ಕಷ್ಟವಾದಾಗ, ದ್ರವರೂಪದ ಆಹಾರ, ನೀರು ಮತ್ತು ಔಷಧಿಗಳನ್ನು ನೇರವಾಗಿ ಹೊಟ್ಟೆಗೆ ತಲುಪಿಸಲು ಇದು ಸಹಾಯ ಮಾಡುತ್ತದೆ.

  • ರೋಗಿ ಪ್ರಜ್ಞೆ ತಪ್ಪಿದ್ದಾಗ ಅಥವಾ ಅರೆಪ್ರಜ್ಞಾವಸ್ಥೆಯಲ್ಲಿದ್ದಾಗ (ಉದಾಹರಣೆಗೆ: ಪಾರ್ಶ್ವವಾಯು/ಸ್ಟ್ರೋಕ್ ಆದಾಗ).
  • ನುಂಗುವ ಪ್ರಕ್ರಿಯೆ ಕಷ್ಟವಾದಾಗ.
  • ದೊಡ್ಡ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವಾಗ.

2. ಹೊಟ್ಟೆ ಖಾಲಿ ಮಾಡಲು

ಕೆಲವೊಮ್ಮೆ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರತೆಗೆಯಲು ಇದನ್ನು ಬಳಸಲಾಗುತ್ತದೆ. ಈ ನಳಿಕೆಯಿಂದ ಹೊಟ್ಟೆಯಲ್ಲಿರುವ ಗಾಳಿ, ರಕ್ತ ಅಥವಾ ಬೇಡವಾದ ವಸ್ತುಗಳನ್ನು ಎಳೆದು ಹೊರತೆಗೆಯಲಾಗುತ್ತದೆ.

  • ಯಾರಾದರೂ ವಿಷ ಅಥವಾ ಅಪಾಯಕಾರಿ ವಸ್ತುಗಳನ್ನು ಸೇವಿಸಿದಾಗ.
  • ನಿಲ್ಲದಂತೆ ವಿಪರೀತ ವಾಂತಿಯಾಗುತ್ತಿರುವಾಗ.
  • ಕರುಳಿನಲ್ಲಿ ಬ್ಲಾಕೇಜ್ ಉಂಟಾದಾಗ.
  • ಹೊಟ್ಟೆಯೊಳಗೆ ರಕ್ತಸ್ರಾವವಾದಾಗ.

3. ಶ್ವಾಸಕೋಶದ ಆರೋಗ್ಯ ಕಾಪಾಡಲು

ನುಂಗುವ ಪ್ರಕ್ರಿಯೆ ಸರಿಯಿಲ್ಲದಿದ್ದಾಗ ನಾವು ತಿಂದ ಆಹಾರವು ಅನ್ನನಾಳದ ಬದಲು ಶ್ವಾಸಕೋಶಕ್ಕೆ ಹೋದರೆ (ಇದನ್ನು ‘ಆಸ್ಪಿರೇಶನ್’ ಎನ್ನುತ್ತೇವೆ), ನ್ಯುಮೋನಿಯಾ ಉಂಟಾಗಿ ಪ್ರಾಣಾಪಾಯವಾಗುವ ಸಾಧ್ಯತೆ ಇರುತ್ತದೆ. ಈ ನಳಿಕೆಯಿಂದ ಆಹಾರ ನೀಡುವುದರಿಂದ ಆ ದೊಡ್ಡ ಅಪಾಯವನ್ನು ಸಂಪೂರ್ಣವಾಗಿ ತಡೆಯಬಹುದು.

ಇದನ್ನು ಯಾವಾಗ ಬಳಸುತ್ತಾರೆ?

ಮೇಲೆ ಹೇಳಿದಂತೆ, ವೈದ್ಯರು ಈ ಕೆಳಗಿನ ಸಂದರ್ಭಗಳಲ್ಲಿ ರೋಗಿಗೆ ಈ ನಳಿಕೆಯನ್ನು ಅಳವಡಿಸಲು ನಿರ್ಧರಿಸುತ್ತಾರೆ:

  • ಶ್ವಾಸಕೋಶಕ್ಕೆ ಆಹಾರ ಸೇರುವ ಅಪಾಯವಿದ್ದಾಗ.
  • ರೋಗಿ ವೆಂಟಿಲೇಟರ್‌ನಲ್ಲಿದ್ದಾಗ.
  • ಹೊಟ್ಟೆ ಅಥವಾ ಕರುಳಿನ ಶಸ್ತ್ರಚಿಕಿತ್ಸೆಯ ಮೊದಲು ಮತ್ತು ನಂತರದ ದಿನಗಳಲ್ಲಿ.
  • ಅತಿಯಾದ ವಾಂತಿ ಅಥವಾ ಜಠರದಲ್ಲಿ ರಕ್ತಸ್ರಾವವಾದಾಗ.

ಇದನ್ನು ಅಳವಡಿಸುವುದು ಹೇಗೆ? ನೋವಾಗುತ್ತದಾ?

ಇದಕ್ಕೆ ಯಾವುದೇ ದೊಡ್ಡ ಆಪರೇಷನ್ ಥಿಯೇಟರ್ ಅಥವಾ ಅರಿವಳಿಕೆ ಬೇಕಿಲ್ಲ. ರೋಗಿಯ ಹಾಸಿಗೆಯ ಬಳಿಯೇ, ಕೇವಲ ಒಂದೆರಡು ನಿಮಿಷಗಳಲ್ಲಿ ಮುಗಿಯುವ ಸರಳ ಪ್ರಕ್ರಿಯೆ ಇದು. ಕೆಲವೊಮ್ಮೆ ಅವಶ್ಯಕತೆಯಿದ್ದರೆ ಇದನ್ನು ಮನೆಯಲ್ಲೇ ಮಾಡಬಹುದು.

ನಳಿಕೆಯ ತುದಿಗೆ ಸ್ವಲ್ಪ ನೋವುಂಟುಮಾಡದಂತೆ ಅನುಲೇಪನ ಮಾಡಿ, ಮೂಗಿನ ಮೂಲಕ ನಿಧಾನವಾಗಿ ಸೇರಿಸಲಾಗುತ್ತದೆ. ರೋಗಿ ಎಚ್ಚರವಿದ್ದರೆ, ಗುಟುಕು ನೀರು ನುಂಗುವಂತೆ ಹೇಳಿ ನಳಿಕೆಯನ್ನು ಹೊಟ್ಟೆಗೆ ಇಳಿಸಲಾಗುತ್ತದೆ. ನಂತರ ಅದು ಸರಿಯಾದ ಜಾಗದಲ್ಲಿದೆಯೇ ಎಂದು ವೈದ್ಯರು ಸ್ಟೆತೋಸ್ಕೋಪ್ ಮೂಲಕ ಪರೀಕ್ಷಿಸಿ, ಅಥವಾ ಎಕ್ಸ್-ರೇ ಮೂಲಕ ಖಚಿತಪಡಿಸಿಕೊಳ್ಳುತ್ತಾರೆ.

ನೋವಿನ ವಿಚಾರಕ್ಕೆ ಬಂದರೆ: ನಳಿಕೆ ಸೇರಿಸುವಾಗ ಮೂಗಿನಲ್ಲಿ ಸ್ವಲ್ಪ ಕಿರಿಕಿರಿ, ಗಂಟಲಲ್ಲಿ ವಾಕರಿಕೆ ಬಂದಂತಾಗುವುದು ಅಥವಾ ಕಣ್ಣಲ್ಲಿ ನೀರು ಬರುವುದು ಸಹಜ. ಆದರೆ ಒಮ್ಮೆ ಅದು ಹೊಟ್ಟೆ ಸೇರಿದ ಮೇಲೆ, ಕೆಲವೇ ನಿಮಿಷಗಳಲ್ಲಿ ರೋಗಿಗೆ ಅದು ಆರಾಮದಾಯಕವಾಗುತ್ತದೆ.

ಸಾಮಾನ್ಯ ತಪ್ಪು ಕಲ್ಪನೆಗಳು ಮತ್ತು ಸತ್ಯ

ನಮ್ಮಲ್ಲಿ ಅರಿವಿಗಿಂತ ಭಯವೇ ಹೆಚ್ಚು. ಈ ನಳಿಕೆಯ ಬಗ್ಗೆ ಇರುವ ಕೆಲವು ಗೊಂದಲಗಳನ್ನು ಇಲ್ಲಿ ಬಗೆಹರಿಸೋಣ:

ಕಲ್ಪನೆ: “ಒಮ್ಮೆ ಈ ಪೈಪ್ ಹಾಕಿದರೆ, ಇನ್ನು ಜೀವನದಲ್ಲಿ ಅವರು ಬಾಯಲ್ಲಿ ಊಟ ಮಾಡೋದೇ ಇಲ್ವಾ?”

ಸತ್ಯ: ಇಲ್ಲ. ರೋಗಿಯ ಆರೋಗ್ಯ ಸುಧಾರಿಸಿ, ಅವರು ಸ್ವತಃ ನುಂಗಲು ಶಕ್ತರಾದ ತಕ್ಷಣ, ಕೆಲವೇ ದಿನಗಳಲ್ಲಿ ಈ ನಳಿಕೆಯನ್ನು ತೆಗೆಯಲಾಗುತ್ತದೆ.

ಕಲ್ಪನೆ: “ಇದರಿಂದ ಮೂಗು ಮತ್ತು ಗಂಟಲಿಗೆ ಶಾಶ್ವತ ಡ್ಯಾಮೇಜ್ ಆಗುತ್ತೆ.”

ಸತ್ಯ: ಸರಿಯಾದ ಆರೈಕೆ ಮಾಡಿದರೆ, ಇದರಿಂದ ಯಾವುದೇ ಹಾನಿಯಿಲ್ಲ. ಈ ನಳಿಕೆಗಳು ಮೃದುವಾಗಿರುತ್ತವೆ.

ಕಲ್ಪನೆ: “ಈ ನಳಿಕೆ ಇರುವಷ್ಟು ದಿನ ಪೂರ್ತಿ ಆಸ್ಪತ್ರೆಯಲ್ಲೇ ಇರಬೇಕು.”

ಸತ್ಯ: ತಪ್ಪು. ರೋಗಿ ಚೇತರಿಸಿಕೊಂಡರೆ, ನಳಿಕೆಯೊಂದಿಗೆಯೇ ಅವರನ್ನು ಮನೆಗೆ ಕಳುಹಿಸಬಹುದು. ಮನೆಯಲ್ಲಿ ಇದರ ಮೂಲಕ ಆಹಾರ ನೀಡುವುದು ಮತ್ತು ಆರೈಕೆ ಮಾಡುವುದು ಸುಲಭ.

ಆರೈಕೆ ಮತ್ತು ನಿರ್ವಹಣೆ

  • ನಳಿಕೆಯ ಮೂಲಕ ಆಹಾರ ಅಥವಾ ಔಷಧಿ ನೀಡಿದ ನಂತರ, ಅದು ಕಟ್ಟಿಕೊಳ್ಳದಂತೆ ಸ್ವಲ್ಪ ಶುದ್ಧ ನೀರಿನಿಂದ ‘ಫ್ಲಶ್’ ಮಾಡಿ ಶುಚಿಗೊಳಿಸಬೇಕು.
  • ದೀರ್ಘಕಾಲದವರೆಗೆ ಬಳಸುವುದಾದರೆ, ಇನ್ಫೆಕ್ಷನ್ ಆಗದಿರಲು ಸಾಮಾನ್ಯವಾಗಿ ತಿಂಗಳಿಗೊಮ್ಮೆ ನಳಿಕೆಯನ್ನು ಬದಲಾಯಿಸಬೇಕಾಗುತ್ತದೆ.

ನೀವೇನು ಮಾಡಬಹುದು?

ನಿಮ್ಮ ಪ್ರೀತಿಪಾತ್ರರ ಮೂಗಿನಲ್ಲಿ ಈ ನಳಿಕೆ ಕಂಡರೆ ಗಾಬರಿಯಾಗಬೇಡಿ. ವೈದ್ಯರು ಅಥವಾ ನರ್ಸ್‌ಗಳನ್ನು ಕೇಳಿ ಅದು ಆಹಾರ ನೀಡಲಿಕ್ಕೋ ಅಥವಾ ಹೊಟ್ಟೆ ಖಾಲಿ ಮಾಡಲಿಕ್ಕೋ ಎಂದು ತಿಳಿದುಕೊಳ್ಳಿ. ರೋಗಿ ಮಂಪರಿನಲ್ಲಿ ಅಪ್ಪಿತಪ್ಪಿ ಕೈಯಿಂದ ಆ ನಳಿಕೆಯನ್ನು ಎಳೆದುಕೊಳ್ಳದಂತೆ ನಿಗಾವಹಿಸಿ.

ಕೊನೆಯ ಮಾತು

ಫೀಡಿಂಗ್ ಟ್ಯೂಬ್ ಎನ್ನುವುದು ಕಾಯಿಲೆಯಿಂದ ಕಷ್ಟಪಡುತ್ತಿರುವ ರೋಗಿಯ ಕೈಯಲ್ಲಿ ನೆರವಾಗುವ ಒಂದು ಊರುಗೋಲು ಇದ್ದ ಹಾಗೆ.

ಇದು ಸಾವಿನ ಮುನ್ಸೂಚನೆಯಲ್ಲ. ಇದೊಂದು ಶಿಕ್ಷೆಯೂ ಅಲ್ಲ. ಇದು ಶಾಶ್ವತವೂ ಅಲ್ಲ.

ರೋಗಿ ಸಾಮಾನ್ಯ ರೀತಿಯಲ್ಲಿ ಊಟ ಮಾಡಲು ಅಶಕ್ತನಾದಾಗ, ಅವರಿಗೆ ಅಗತ್ಯವಿರುವ ಆಹಾರ ಮತ್ತು ಔಷಧಿಗಳನ್ನು ಒದಗಿಸಿ, ಬೇಗ ಹುಷಾರಾಗಲು ಆಸರೆ ಕೊಡುವ ಸಹಾಯಕ ಇದು. ಹಾಗಾಗಿ, ಮುಂದಿನ ಬಾರಿ ಈ ನಳಿಕೆಯನ್ನು ನೋಡಿದಾಗ ಭಯಪಡುವ ಬದಲು, ಅದು ಮಾಡುತ್ತಿರುವ ಸಹಾಯವನ್ನು ನೆನೆದು ನಿರಾಳರಾಗಿ!


ವಿಶ್ವವಾಣಿಯಲ್ಲಿ ಪ್ರಕಟವಾದ ‘ಮೂಗಿನಲ್ಲಿ ನಳಿಕೆ: ನೋಡಲು ಭಯಂಕರ, ಅರ್ಥ ಮಾಡಿಕೊಂಡರೆ ಸರಳ!’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

141 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top