ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಅಕ್ಟೋಬರ್ 11ರಂದು ಪ್ರಕಟವಾಗಿದೆ. Read this article in English
ಆಸ್ಪತ್ರೆಯ ಐಸಿಯು ಹೊರಗೆ ನಿಂತಾಗ ಎಷ್ಟೋ ಜನರ ಎದೆಯಲ್ಲಿ ಭಯ ಮೂಡಿರುತ್ತದೆ. ಒಳಗಿನಿಂದ ಬರುವ ವೈದ್ಯರು, “ಅವರಿಗೆ ಉಸಿರಾಟ ತೀರಾ ಕಷ್ಟ ಆಗ್ತಿದೆ, ವೆಂಟಿಲೇಟರ್‌ಗೆ ಹಾಕಬೇಕಾಗಬಹುದು” ಅಂದ ತಕ್ಷಣ, ಕುಟುಂಬದವರ ತಲೆಯಲ್ಲಿ ಓಡುವ ಮೊದಲ ಯೋಚನೆ:
“ವೆಂಟಿಲೇಟರ್ ಅಂದ್ರೆ ಕಥೆ ಮುಗೀತು! ಸುಮ್ನೆ ಬಾಡಿ ಇಟ್ಕೊಂಡು ಬಿಲ್ ಮಾಡೋಕೆ ಆಸ್ಪತ್ರೆಯವರು ಮಾಡೋ ಪ್ಲಾನ್ ಇದು.”
ಜನಸಾಮಾನ್ಯರ ಈ ಭಯ ಮತ್ತು ಅನುಮಾನ ಅರ್ಥವಾಗುವಂಥದ್ದೇ. ಏಕೆಂದರೆ, ನಾವು ಆಸ್ಪತ್ರೆಗಳ ಬಗ್ಗೆ ಕೇಳಿರುವ ಕೆಲವು ಕಥೆಗಳು ಹಾಗೆ ಯೋಚಿಸುವಂತೆ ಮಾಡಿವೆ. ಆದರೆ, ಈ ಯಂತ್ರದ ಬಗ್ಗೆ ನಾವು ಅಂದುಕೊಂಡಿರುವುದೆಲ್ಲ ಸತ್ಯವಲ್ಲ.
ಇದು ಟೇಬಲ್ ಫ್ಯಾನ್ ಅಲ್ಲ!
ಮೊದಲನೆಯದಾಗಿ, ವೆಂಟಿಲೇಟರ್ ಅಂದರೆ ಸೆಖೆಯಾದಾಗ ಮನೆಯಲ್ಲಿ ಸ್ವಿಚ್ ಹಾಕಿಕೊಳ್ಳುವ ಟೇಬಲ್ ಫ್ಯಾನ್ ಅಲ್ಲ! ನಮ್ಮ ಶ್ವಾಸಕೋಶಗಳು ಸಂಪೂರ್ಣವಾಗಿ ಸುಸ್ತಾದಾಗ, ಅವುಗಳ ಕೆಲಸವನ್ನು ತಾನು ವಹಿಸಿಕೊಂಡು, ಆಮ್ಲಜನಕವನ್ನು ಒಳಗೆ ತಳ್ಳಿ, ವಿಷಕಾರಿ ಕಾರ್ಬನ್ ಡೈಆಕ್ಸೈಡ್ ಅನ್ನು ಹೊರಹಾಕುವ ಅತ್ಯಂತ ಸಂಕೀರ್ಣವಾದ ಯಂತ್ರ ಇದು. ಇದರಲ್ಲಿ ಗಾಳಿಯ ಒತ್ತಡ, ಆಮ್ಲಜನಕದ ಪ್ರಮಾಣ, ಉಚ್ಛ್ವಾಸ-ನಿಶ್ವಾಸದ ಅನುಪಾತ, ಹೀಗೆ ಹತ್ತಾರು ಲೆಕ್ಕಾಚಾರಗಳನ್ನು ವೈದ್ಯರು ಆಗಾಗ ರೋಗಿಯ ಸ್ಥಿತಿಗೆ ತಕ್ಕಂತೆ ಬದಲಾಯಿಸುತ್ತಲೇ ಇರಬೇಕಾಗುತ್ತದೆ.
ಮನೆಯ ಯುಪಿಎಸ್ ಮತ್ತು ವೆಂಟಿಲೇಟರ್
ವೆಂಟಿಲೇಟರ್‌ನ ಅಸಲಿ ಕೆಲಸವನ್ನು ಅರ್ಥಮಾಡಿಕೊಳ್ಳಲು, ನಮ್ಮ ಮನೆಯ ‘ಯುಪಿಎಸ್’ ಅಥವಾ ಇನ್ವರ್ಟರ್‌ನ ಉದಾಹರಣೆ ತೆಗೆದುಕೊಳ್ಳೋಣ. ಇದು ಎಲ್ಲರಿಗೂ ಸುಲಭವಾಗಿ ಅರ್ಥವಾಗುವ ವಿಚಾರ.
ಮನೆಯಲ್ಲಿ ಕರೆಂಟ್ ಹೋದ ತಕ್ಷಣ ಕತ್ತಲಾಗಬಾರದು ಅಂತ ನಾವು ಯುಪಿಎಸ್ ಬಳಸುತ್ತೇವೆ. ಮುಖ್ಯ ವಿದ್ಯುತ್ ಸಂಪರ್ಕ ಕಡಿತಗೊಂಡಾಗ, ಕರೆಂಟ್ ವಾಪಸ್ ಬರುವವರೆಗೆ ಮನೆಯ ದೀಪ ಉರಿಯುವಂತೆ ನೋಡಿಕೊಳ್ಳುವುದೇ ಈ ಯುಪಿಎಸ್ ಕೆಲಸ.
ನಮ್ಮ ದೇಹವೇ ಒಂದು ಮನೆ, ಶ್ವಾಸಕೋಶಗಳೇ ಆ ಮನೆಯ ಮುಖ್ಯ ವಿದ್ಯುತ್ ಸಂಪರ್ಕ. ತೀವ್ರವಾದ ನ್ಯುಮೋನಿಯಾ, ಡೆಂಗ್ಯೂ, ಅಥವಾ ಇಡೀ ದೇಹಕ್ಕೆ ಇನ್ಫೆಕ್ಷನ್ (ಸೆಪ್ಸಿಸ್) ಆದಂತಹ ಸಮಯದಲ್ಲಿ, ಶ್ವಾಸಕೋಶಗಳು ಕೆಲಸ ನಿಲ್ಲಿಸುತ್ತವೆ ಅಥವಾ ಪರದಾಡುತ್ತವೆ. ಆ ಸಮಯದಲ್ಲಿ ವೈದ್ಯರು ಬಳಸುವ ‘ಯುಪಿಎಸ್’ ಹೆಸರೇ ವೆಂಟಿಲೇಟರ್! ಕಾಯಿಲೆಗೆ ಕೊಟ್ಟ ಔಷಧಗಳು ಕೆಲಸ ಮಾಡಲು ಶುರುಮಾಡಿ, ಶ್ವಾಸಕೋಶಗಳು ಮತ್ತೆ ಹುಷಾರಾಗುವವರೆಗೆ (ಅಂದರೆ ಕರೆಂಟ್ ವಾಪಸ್ ಬರುವವರೆಗೆ) ಈ ಯಂತ್ರ ರೋಗಿಯ ಉಸಿರನ್ನು ಹಾಗೂ ಜೀವವನ್ನು ಹಿಡಿದಿಡುತ್ತದೆ.
ಸಾವನ್ನು ಮುಂದೂಡುವುದು ಯಾವಾಗ?
ಹಾಗಾದರೆ, “ವೆಂಟಿಲೇಟರ್ ಸಾವನ್ನು ಮುಂದೂಡುತ್ತದೆಯಷ್ಟೇ” ಎನ್ನುವ ಮಾತು ಏಕೆ ಬಂತು?
ಮತ್ತೆ ಅದೇ ಯುಪಿಎಸ್ ಉದಾಹರಣೆಗೆ ಬರೋಣ. ಮನೆಯ ಮೇನ್ ಸ್ವಿಚ್ ಬೋರ್ಡ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರೆ, ಅಥವಾ ಮನೆಯೇ ಕುಸಿದು ಬೀಳುವ ಹಂತದಲ್ಲಿದ್ದರೆ, ಆ ಯುಪಿಎಸ್ ಎಷ್ಟು ಹೊತ್ತು ಅಂತ ದೀಪ ಉರಿಸಬಲ್ಲದು? ತನ್ನಲ್ಲಿ ಬ್ಯಾಟರಿ ಇರುವವರೆಗೆ ಮಾತ್ರ ತಾನೇ? ಅಂದರೆ, ಅಲ್ಲಿ ಯುಪಿಎಸ್ ಕೇವಲ ಕತ್ತಲು ಆವರಿಸುವುದನ್ನು ಸ್ವಲ್ಪ ಹೊತ್ತು ‘ಮುಂದೂಡುತ್ತದೆಯೇ’ ಹೊರತು, ಶಾಶ್ವತವಾಗಿ ಬೆಳಕು ನೀಡಲಾರದು.
ಗುಣಪಡಿಸಲಾಗದ ಕಾಯಿಲೆ ಇದ್ದಾಗ
ವೈದ್ಯಕೀಯ ಭಾಷೆಯಲ್ಲಿ ಹೇಳುವುದಾದರೆ, ರೋಗಿಗೆ ‘ಗುಣಪಡಿಸಲಾಗದ’ ಕಾಯಿಲೆ ಇದ್ದರೆ (ಉದಾಹರಣೆಗೆ: ಕೊನೆಯ ಹಂತದ ಕ್ಯಾನ್ಸರ್, ತಲೆಗೆ ತೀವ್ರ ಪೆಟ್ಟಾಗಿ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡಾಗ, ಅಥವಾ ದೇಹದ ಎಲ್ಲಾ ಅಂಗಾಂಗಗಳು ವಿಫಲವಾದಾಗ), ವೆಂಟಿಲೇಟರ್ ಹಾಕಿದರೂ ಪ್ರಯೋಜನವಿಲ್ಲ. ಅದು ಕೇವಲ ಸಾವನ್ನು ಸ್ವಲ್ಪ ಸಮಯ ಮುಂದೂಡುತ್ತದೆಯೇ ಹೊರತು, ರೋಗಿಯನ್ನು ಬದುಕಿಸಿ ಮನೆಗೆ ಕಳುಹಿಸುವುದಿಲ್ಲ. ಇಂತಹ ಸಮಯದಲ್ಲಿ ವೆಂಟಿಲೇಟರ್ ಬಳಸುವುದು ಕೇವಲ ನರಳಾಟವನ್ನು ಹೆಚ್ಚಿಸುತ್ತದೆ.
ಆ ಒಂದು ದೊಡ್ಡ ತಪ್ಪು ಕಲ್ಪನೆ!
“ಒಮ್ಮೆ ವೆಂಟಿಲೇಟರ್‌ಗೆ ಹಾಕಿದ್ರೆ ಮುಗೀತು… ಯಾರು ವಾಪಸ್ ಬರೋಲ್ಲ!” ಎನ್ನುವುದು ಶುದ್ಧ ಸುಳ್ಳು. ಪ್ರತಿದಿನ ನೂರಾರು ರೋಗಿಗಳು ವೆಂಟಿಲೇಟರ್ ಸಹಾಯದಿಂದ ಗಂಭೀರ ಕಾಯಿಲೆಗಳನ್ನು ಗೆದ್ದು, ಸಂಪೂರ್ಣ ಗುಣಮುಖರಾಗಿ ಮನೆಗೆ ಹೋಗುತ್ತಾರೆ.
ಕಾಯಿಲೆ ವಾಸಿಯಾಗುವಂಥದ್ದಾಗಿದ್ದರೆ, ವೆಂಟಿಲೇಟರ್ ಒಂದು ಸೇತುವೆಯಾಗಿ ರೋಗಿಯನ್ನು ದಡ ಸೇರಿಸುತ್ತದೆ.
ನೀವೇನು ಮಾಡಬೇಕು?
ಎಲ್ಲಾ ವೈದ್ಯರೂ ಸುಮ್ಮನೆ ಬಿಲ್ ಮಾಡಲು ಈ ಯಂತ್ರ ಬಳಸುತ್ತಾರೆ ಎನ್ನುವುದು ತಪ್ಪು. ಬಹುಪಾಲು ಆಸ್ಪತ್ರೆಗಳಲ್ಲಿ, ಐಸಿಯು ವೈದ್ಯರ ತಂಡ ರೋಗಿಯ ಸ್ಥಿತಿಯನ್ನು ವೈಜ್ಞಾನಿಕವಾಗಿ ಅಳೆದು-ತೂಗಿಯೇ ಈ ನಿರ್ಧಾರ ತೆಗೆದುಕೊಳ್ಳುತ್ತದೆ.
ವೈದ್ಯರನ್ನು ಕೇಳಬೇಕಾದ ಎರಡು ಪ್ರಶ್ನೆಗಳು
ಆದ್ದರಿಂದ, ಮುಂದೊಮ್ಮೆ ಇಂತಹ ಪರಿಸ್ಥಿತಿ ಎದುರಾದಾಗ ಗಾಬರಿಯಾಗಿ ಅನುಮಾನಿಸುವ ಬದಲು, ವೈದ್ಯರ ಬಳಿ ಈ ಎರಡು ಪ್ರಶ್ನೆಗಳನ್ನು ಕೇಳಿ:
1. “ಡಾಕ್ಟರ್, ಇವರಿಗಿರುವ ಕಾಯಿಲೆ ಗುಣಪಡಿಸಬಹುದಾದದ್ದೇ (ರಿವರ್ಸಿಬಲ್)?”
2. “ವೆಂಟಿಲೇಟರ್ ಸಹಾಯದಿಂದ ಅವರು ಚೇತರಿಸಿಕೊಳ್ಳುವ ವಾಸ್ತವಿಕ ಸಾಧ್ಯತೆ ಎಷ್ಟಿದೆ?”
ಸಾರ
ಕಾಯಿಲೆ ಗುಣವಾಗುವ ಭರವಸೆ ಇದ್ದರೆ, ವೆಂಟಿಲೇಟರ್ ಖಂಡಿತವಾಗಿಯೂ ಜೀವ ಉಳಿಸುವ ‘ಸಂಜೀವಿನಿ’. ಆದರೆ, ಕಾಯಿಲೆ ಗುಣಪಡಿಸಲು ಅಸಾಧ್ಯವಾದ ಹಂತದಲ್ಲಿದ್ದರೆ, ಅದು ಸಾವನ್ನು ಮುಂದೂಡುವ ಸಾಧನವಷ್ಟೇ.
ವಾಸ್ತವವನ್ನು ಅರಿತು, ವೈದ್ಯರೊಂದಿಗೆ ಮುಕ್ತವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದೇ ಜಾಣತನ.
ಭರವಸೆ ಇರಲಿ, ಆದರೆ ಅದು ತಪ್ಪು ಭರವಸೆಯಾಗದಿರಲಿ!










Leave a Reply