ಕೀಲುಗಳಿಗೆ ಕನ್ನ ಹಾಕುವ ಕಳ್ಳ

ಬೆಳಗ್ಗೆ ಎದ್ದಾಗ ಬೆರಳುಗಳು ಬಿಗಿದುಕೊಳ್ಳುತ್ತವೆಯೇ? ರುಮಟಾಯ್ಡ್ ಆರ್ಥೈಟಿಸ್ ಗುರುತಿಸುವುದು ಹೇಗೆ, ಗೋಲ್ಡನ್ ಟೈಮ್ ಎಂದರೇನು, ಇಂಗ್ಲಿಷ್ ಅನುವಾದದೊಂದಿಗೆ.

ಕೀಲುಗಳಿಗೆ ಕನ್ನ ಹಾಕುವ ಕಳ್ಳ

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ನವೆಂಬರ್ 8ರಂದು ಪ್ರಕಟವಾಗಿದೆ. Read this article in English

ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಮೈ-ಕೈ ಎಲ್ಲಾ ಹಿಡಿದುಕೊಂಡ ಹಾಗೆ ಆಗುತ್ತಾ? ಹಳೆಯ ಮರದ ಬಾಗಿಲ ಕೀಲುಗಳು ತುಕ್ಕು ಹಿಡಿದು ‘ಕೀಚ್… ಕೀಚ್…’ ಎಂದು ಶಬ್ದ ಮಾಡುವ ಹಾಗೆ, ನಿಮ್ಮ ಕೈ-ಕಾಲುಗಳ ಜಾಯಿಂಟ್‌ಗಳು ಸರಾಗವಾಗಿ ಚಲಿಸಲು ಕಷ್ಟವಾಗುತ್ತಾ? ಹಾಗಾದರೆ ಇದು ಬರೀ ಚಳಿಗಾಲದ ‘ಮೈಕೈ ನೋವು’ ಅಥವಾ ‘ಗ್ಯಾಸ್ಟ್ರಿಕ್’ ಅಂತ ನಿರ್ಲಕ್ಷ್ಯ ಮಾಡಬೇಡಿ. ಇದು ಕೀಲುಗಳನ್ನೇ ಕಾಡುವ ‘ರುಮಟಾಯ್ಡ್ ಆರ್ಥೈಟಿಸ್’ (ಸಂಧಿವಾತ) ಆಗಿರಬಹುದು!

ಹಿಂದಿನ ಲೇಖನದಲ್ಲಿ ನಾವು ನಮ್ಮದೇ ರಕ್ಷಣಾ ವ್ಯವಸ್ಥೆ ಹುಚ್ಚುನಾಯಿಯಂತೆ ನಮ್ಮನ್ನೇ ಕಚ್ಚುವ ‘ಆಟೋ-ಇಮ್ಯೂನ್’ ಕಾಯಿಲೆಗಳ ಬಗ್ಗೆ ಮಾತನಾಡಿದ್ದೆವು. ಆ ಕಾವಲು ನಾಯಿ ನಮ್ಮ ಕೀಲುಗಳನ್ನು ಟಾರ್ಗೆಟ್ ಮಾಡಿದರೆ ಬರುವುದೇ ಈ ‘ರುಮಟಾಯ್ಡ್ ಆರ್ಥೈಟಿಸ್’.

ಕೆಲವರನ್ನು ಕಾಡುವ ಆಟೋ ಇಮ್ಯೂನ್ ಕಾಯಿಲೆಯಲ್ಲಿ, ದೇಹದ ರಕ್ಷಣಾ ವ್ಯವಸ್ಥೆಯು ಸ್ವಂತ ದೇಹದ ಮೇಲೆ ದಾಳಿ ಮಾಡುತ್ತದೆ; ಅಂತಹ ಒಂದು ಸಮಸ್ಯೆಯೇ ರುಮಟಾಯ್ಡ್ ಆರ್ಥೈಟಿಸ್.

ಒಳಗಡೆ ಬೆಂಕಿ, ಹೊರಗಡೆ ಹೊಗೆ!

ನಮ್ಮ ಎರಡು ಮೂಳೆಗಳು ಸೇರುವ ಜಾಗದಲ್ಲಿ, ಅಂದರೆ ಕೀಲುಗಳಲ್ಲಿ, ಅವು ಸರಾಗವಾಗಿ ಉಜ್ಜಾಡಲು ಒಳಗೊಂದು ಮೃದುವಾದ ಪೊರೆ ಮತ್ತು ಎಣ್ಣೆಯಂಥ ದ್ರವ ಇರುತ್ತದೆ. ಕೆಲವೊಮ್ಮೆ ನಮ್ಮ ಇಮ್ಯೂನ್ ಸಿಸ್ಟಮ್ (ರಕ್ಷಣಾ ಪಡೆ) ಕನ್ಫ್ಯೂಸ್ ಆಗಿ ಈ ಮೃದುವಾದ ಪೊರೆಯ ಮೇಲೆಯೇ ದಾಳಿ ಮಾಡಿಬಿಡುತ್ತದೆ. ಆಗ ಅಲ್ಲಿ ಭಾರಿ ಯುದ್ಧ ಶುರುವಾಗುತ್ತದೆ! ಒಳಗಡೆ ಯುದ್ಧ ನಡೆದರೆ, ಹೊರಗಡೆ ಊತ, ಕೆಂಪು ಬಣ್ಣ, ಮತ್ತು ವಿಪರೀತ ನೋವು ಕಾಣಿಸಿಕೊಳ್ಳುತ್ತದೆ.

ಇದನ್ನು ಗುರುತಿಸುವುದು ಹೇಗೆ?

ವಯಸ್ಸಾದಂತೆ ಮೂಳೆ ಸವೆದು ಬರುವ ಆಸ್ಟಿಯೋಆರ್ಥೈಟಿಸ್‌ನ ಕೀಲುನೋವಿಗೂ ಇದಕ್ಕೂ ಬಹಳ ವ್ಯತ್ಯಾಸವಿದೆ.

  1. ರುಮಟಾಯ್ಡ್ ಆರ್ಥೈಟಿಸ್ ಎರಡೂ ಕಡೆ ಬ್ಯಾಲೆನ್ಸ್ ಮಾಡಿ ಅಟ್ಯಾಕ್ ಮಾಡುತ್ತದೆ! ಬಲಗೈ ಮಣಿಕಟ್ಟು ಊದಿಕೊಂಡರೆ, ಸಾಮಾನ್ಯವಾಗಿ ಎಡಗೈ ಮಣಿಕಟ್ಟಿಗೂ ನೋವು ಬರುತ್ತದೆ.
  2. ಬೆಳಗ್ಗೆ ಎದ್ದಾಗ ಕನಿಷ್ಠ ಅರ್ಧ ಗಂಟೆಯಾದರೂ ಕೈ ಬೆರಳುಗಳನ್ನು ಮಡಚಲು ಆಗದಷ್ಟು ಬಿಗಿತ ಇರುತ್ತದೆ. ಬಿಸಿ ನೀರಿನಲ್ಲಿ ಕೈ ಇಟ್ಟರೆ, ಅಥವಾ ಸ್ವಲ್ಪ ಹೊತ್ತು ಓಡಾಡಿದರೆ ನೋವು ಕಮ್ಮಿಯಾಗುತ್ತದೆ.

ಹಲವು ಬಾರಿ ಡೆಂಗ್ಯೂ, ಚಿಕುನ್‌ಗುನ್ಯಾ ಅಥವಾ ಸಾಮಾನ್ಯ ವೈರಲ್ ಜ್ವರ ಬಂದು ಹೋದ ಮೇಲೂ ಕೀಲುಗಳಲ್ಲಿ ವಿಪರೀತ ನೋವು ಶುರುವಾಗುತ್ತದೆ. ಇದು ಮದುವೆ ಕಾರ್ಯಕ್ರಮ ಮುಗಿದ ಮೇಲೆ ಅತಿಥಿಗಳು ಹೋದರೂ, ಅವರು ಮಾಡಿದ ಗದ್ದಲದ ಗುಂಗು ಮನೆಯಲ್ಲಿ ಉಳಿದಿರುತ್ತಲ್ಲ, ಹಾಗೆ! ಇಂತಹ ವೈರಲ್ ಕೀಲುನೋವುಗಳು ಹೆಚ್ಚೆಂದರೆ ಒಂದೆರಡು ತಿಂಗಳು ಕಾಡಿ ತಾವಾಗಿಯೇ ಹೊರಟುಹೋಗುತ್ತವೆ.

ಹೀಗಾಗಿಯೇ, ಕೀಲು ನೋವು ಶುರುವಾದ ತಕ್ಷಣ ವೈದ್ಯರು ‘ಇದು ರುಮಟಾಯ್ಡ್ ಆರ್ಥೈಟಿಸ್’ ಎಂದು ಹೇಳಿಬಿಡುವುದಿಲ್ಲ. ಕನಿಷ್ಠ ಆರು ವಾರಗಳ ಕಾಲ ಕಾದು ನೋಡುತ್ತಾರೆ. ಆರು ವಾರ ಕಳೆದರೂ ನೋವು, ಊತ ಕಡಿಮೆಯಾಗದಿದ್ದರೆ ಮಾತ್ರ, ಓಹೋ! ಇದು ತಾತ್ಕಾಲಿಕ ಅತಿಥಿಯಲ್ಲ, ಕಾಯಂ ಆಗಿ ಠಿಕಾಣಿ ಹೂಡಲು ಬಂದಿರುವ ‘ಸಂಧಿವಾತ’ದಂತಹ ಕಳ್ಳನೇ ಇರಬಹುದು ಎಂದು ಮುಂದಿನ ತಪಾಸಣೆ ಮಾಡುತ್ತಾರೆ.

ನಮ್ಮ ಜನರಿಗೆ ಏನೇ ನೋವಾದರೂ ಅದಕ್ಕೊಂದು ಹಣೆಪಟ್ಟಿ ಕಟ್ಟಿಬಿಡುವ ಅಭ್ಯಾಸ… “ಏನಿಲ್ಲ ಬಿಡಿ, ರಾತ್ರಿ ತಿಂದ ಆಲೂಗಡ್ಡೆ ಗ್ಯಾಸ್ ಆಗಿ ಕೀಲು ಹಿಡಿದಿದೆ” ಅಂತ! ಅಥವಾ ಮಸಾಜ್ ಮಾಡಿಸ್ತೀನಿ ಅಂತ ಸಿಕ್ಕಾಪಟ್ಟೆ ಎಣ್ಣೆ ಹಚ್ಚಿ ತಿಕ್ಕುತ್ತಾರೆ. ಒಳಗಡೆ ಇಮ್ಯೂನ್ ಸಿಸ್ಟಮ್ ಬೆಂಕಿ ಹಚ್ಚಿರುವಾಗ, ಮೇಲೆ ಎಣ್ಣೆ ಸವರಿದರೆ ಪ್ರಯೋಜನ ಉಂಟೆ? ಇದನ್ನು ಹೀಗೆಯೇ ನಿರ್ಲಕ್ಷ್ಯ ಮಾಡಿದರೆ, ಕಾಲಕ್ರಮೇಣ ಆ ಕೀಲುಗಳು ಸಂಪೂರ್ಣವಾಗಿ ಕರಗಿ, ಬೆರಳುಗಳು ಸೊಟ್ಟಗಾಗಿ ಶಾಶ್ವತ ಊನವಾಗಬಹುದು.

ಗೋಲ್ಡನ್ ಟೈಮ್

ಇದಕ್ಕೆ ‘ಗೋಲ್ಡನ್ ಟೈಮ್’ ಇದೆ. ಕಾಯಿಲೆ ಶುರುವಾದ ಮೊದಲ ಕೆಲವು ತಿಂಗಳಲ್ಲಿಯೇ ಗುರುತಿಸಿ, ಸರಿಯಾದ ಔಷಧಗಳನ್ನು ಆರಂಭಿಸಿದರೆ ಕೀಲುಗಳು ಡ್ಯಾಮೇಜ್ ಆಗುವುದನ್ನು ತಡೆಯಬಹುದು. ಜೊತೆಗೆ, ನೋವು ಅಂತ ಮಲಗಿಕೊಂಡರೆ ಕೀಲುಗಳು ಮತ್ತಷ್ಟು ಬಿಗಿಯಾಗುತ್ತವೆ. ವೈದ್ಯರ ಸಲಹೆಯಂತೆ ಸಣ್ಣ ಪುಟ್ಟ ಸೂಕ್ತ ವ್ಯಾಯಾಮ ಮಾಡುವುದು ಅತಿ ಮುಖ್ಯ. ಅಕಸ್ಮಾತ್ ಕೀಲು ನೋವು ಶುರುವಾದಾಗ ಸ್ವಯಂ-ವೈದ್ಯ ಮಾಡಿಕೊಳ್ಳಬೇಡಿ.

ಸರಿಯಾದ ಸಮಯದಲ್ಲಿ ರೋಗನಿರೋಧಕ ಶಕ್ತಿಯ ಕೋಪವನ್ನು ತಣಿಸುವ ಚಿಕಿತ್ಸೆ ಪಡೆದರೆ, ನಿಮ್ಮ ಕೀಲುಗಳು ‘ತುಕ್ಕು’ ಹಿಡಿಯದಂತೆ ಜೀವನದ ಕೊನೆಯವರೆಗೂ ಸರಾಗವಾಗಿ ಓಡಬಹುದು!


ವಿಶ್ವವಾಣಿಯಲ್ಲಿ ಪ್ರಕಟವಾದ ‘ಕೀಲುಗಳಿಗೆ ಕನ್ನ ಹಾಕುವ ಕಳ್ಳ’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

229 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top