ಹೊಟ್ಟೆಯ ಹಸಿವು ಮತ್ತು ಮನಸ್ಸಿನ ಚಪಲ: ನೀವು ತಿನ್ನುತ್ತಿರುವುದು ಹಸಿವಿನಿಂದಲೋ ಅಥವಾ ಚಪಲದಿಂದಲೋ?

ಊಟ ಕಡಿಮೆ ಮಾಡಿದರೂ ತೂಕ ಏಕೆ ಇಳಿಯುವುದಿಲ್ಲ? ನಿಜವಾದ ಹಸಿವು ಮತ್ತು ಚಪಲದ ನಡುವಿನ ನಾಲ್ಕು ವ್ಯತ್ಯಾಸಗಳು, 'ಹ-ಸಿ-ಬೇ-ಸು' ಸೂತ್ರ ಮತ್ತು ಐದು ಸರಳ ಸಲಹೆಗಳು, ಇಂಗ್ಲಿಷ್ ಅನುವಾದದೊಂದಿಗೆ.

ಹೊಟ್ಟೆಯ ಹಸಿವು ಮತ್ತು ಮನಸ್ಸಿನ ಚಪಲ: ನೀವು ತಿನ್ನುತ್ತಿರುವುದು ಹಸಿವಿನಿಂದಲೋ ಅಥವಾ ಚಪಲದಿಂದಲೋ?

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಅಕ್ಟೋಬರ್ 25ರಂದು ಪ್ರಕಟವಾಗಿದೆ. Read this article in English

ಹಲವರ ಸಾಮಾನ್ಯ ದೂರು ಇದು: “ಡಾಕ್ಟ್ರೇ, ನಾನು ಊಟ ಮಾಡೋದು ತುಂಬಾನೇ ಕಡಿಮೆ. ಆದರೂ ತೂಕ ಮಾತ್ರ ಕಡಿಮೆ ಆಗ್ತಾನೇ ಇಲ್ಲ, ಶುಗರ್ ಕೂಡ ಕಂಟ್ರೋಲ್ಗೆ ಬರ್ತಿಲ್ಲ!”

ಆಗ ನಾನು ಅವರ ದಿನಚರಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅಸಲಿ ಸತ್ಯ ಹೊರಬೀಳುತ್ತದೆ. ಅವರು 3 ಹೊತ್ತು ನಿಯಮಿತವಾಗಿ ಊಟ ಮಾಡುವುದು ಕಡಿಮೆಯೇ ಇರಬಹುದು, ಆದರೆ ಊಟದ ನಡುವೆ “ಸುಮ್ಮನೆ ಬಾಯಾಡಿಸಲು” ತಿನ್ನುವ ಅಭ್ಯಾಸ ಅವರ ಅರಿವಿಗೆ ಬಾರದೆ ನಡೆದುಹೋಗುತ್ತಿರುತ್ತದೆ.

ನೀವು ಎಂದಾದರೂ ಟಿವಿಯ ಮುಂದೆ ಸುಮ್ಮನೆ ಕೂತಾಗ, ಯಾವುದೇ ಕಾರಣವಿಲ್ಲದೆ ಎದ್ದುಹೋಗಿ ಫ್ರಿಡ್ಜ್ ಬಾಗಿಲು ತೆಗೆದು ನೋಡಿದ್ದೀರಾ? ಹೊಟ್ಟೆ ತುಂಬಿದ್ದರೂ, ಊಟದ ನಂತರ ಯಾವುದಾದರೂ ಸಿಹಿ ತಿಂಡಿ ಅಥವಾ ಕುರುಕುಲು ತಿಂಡಿ ತಿನ್ನಬೇಕು ಎನಿಸಿದೆಯಾ?

ಹಾಗಾದರೆ ನೆನಪಿರಲಿ, ಇದೆಲ್ಲವೂ ನಿಜವಾದ ಹಸಿವಲ್ಲ. ಅನೇಕ ಬಾರಿ ನಾವು ಹಸಿವಿಲ್ಲದಿದ್ದರೂ ತಿನ್ನುತ್ತೇವೆ. ಬೇಸರವಾದಾಗ, ಕೋಪಬಂದಾಗ, ಒಂಟಿತನ ಕಾಡಿದಾಗ, ಸುಸ್ತಾದಾಗ, ಆತಂಕದಲ್ಲಿದ್ದಾಗ ಅಥವಾ ಸುಮ್ಮನೆ ನಮ್ಮ ಕಣ್ಣೆದುರಿಗೆ ಯಾವುದೋ ತಿಂಡಿ ಇಟ್ಟಿದ್ದಾರೆ ಎಂಬ ಒಂದೇ ಕಾರಣಕ್ಕೆ ನಾವು ತಿನ್ನಲು ಶುರುಮಾಡುತ್ತೇವೆ. ವೈದ್ಯಕೀಯ ಭಾಷೆಯಲ್ಲಿ ಹಾಗೂ ಮನೋವಿಜ್ಞಾನದಲ್ಲಿ ಇದನ್ನು ‘ಚಪಲ’ ಅಥವಾ ‘ಬಯಕೆ’ ಎನ್ನುತ್ತಾರೆ. ಇದು ಖಂಡಿತವಾಗಿಯೂ ದೇಹದ ಹಸಿವಲ್ಲ, ಬದಲಾಗಿ ನಮ್ಮ ಮನಸ್ಸಿನ ಆಟ!

ನಮ್ಮ ಆಹಾರ ಪದ್ಧತಿಯನ್ನು ಸುಧಾರಿಸಿಕೊಳ್ಳಬೇಕಾದರೆ, ಮೊದಲು ಈ ‘ನಿಜವಾದ ಹಸಿವು’ ಮತ್ತು ‘ಹುಸಿ ಹಸಿವಿನ (ಚಪಲದ)’ ನಡುವಿನ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಲೇಬೇಕು.

ಹಸಿವು ಮತ್ತು ಚಪಲ: ವ್ಯತ್ಯಾಸವೇನು?

ಈ ಎರಡರ ನಡುವೆ ಇರುವ 4 ಪ್ರಮುಖ ವ್ಯತ್ಯಾಸಗಳನ್ನು ನೀವು ಅರಿತುಕೊಂಡರೆ, ನಿಮ್ಮ ಆರೋಗ್ಯದ ಅರ್ಧ ಸಮಸ್ಯೆ ಅಲ್ಲಿಗೇ ಬಗೆಹರಿದಂತೆ:

1. ನಿಧಾನಗತಿ ಮತ್ತು ದಿಢೀರ್ ದಾಳಿ

ನಿಜವಾದ ಹಸಿವು ನಿಧಾನವಾಗಿ ಶುರುವಾಗುತ್ತದೆ. ಹೊಟ್ಟೆ ಖಾಲಿಯಾದಂತೆ ಮೆದುಳಿಗೆ ಸಂದೇಶ ಹೋಗಿ, ಹಸಿವಿನ ಅರಿವು ಹಂತಹಂತವಾಗಿ ಹೆಚ್ಚಾಗುತ್ತದೆ. ಆದರೆ ಚಪಲ ಹಾಗಲ್ಲ. ಅದು ದಿಢೀರ್ ಅಂತ ಅಪ್ಪಳಿಸುತ್ತದೆ. ಒಂದು ನಿಮಿಷದ ಹಿಂದೆ ಏನೂ ಅನ್ನಿಸದಿದ್ದರೂ, ಯಾವುದೋ ಬೇಕರಿಯ ಬೋರ್ಡ್ ನೋಡಿದ ತಕ್ಷಣ ಅಥವಾ ಟಿವಿಯಲ್ಲಿ ಜಾಹೀರಾತು ನೋಡಿದ ತಕ್ಷಣ ತೀವ್ರವಾದ ಹಸಿವಿನ ಭ್ರಮೆ ಹುಟ್ಟಿಕೊಳ್ಳುತ್ತದೆ.

2. ‘ಯಾವುದಾದರೂ ಸರಿ’ ಹಾಗೂ ‘ಅದೇ ಬೇಕು’ ಎನ್ನುವ ಹಠ

ನಿಮಗೆ ನಿಜವಾಗಿಯೂ ಹಸಿವಾಗಿದ್ದರೆ, ನಿಮ್ಮ ಮುಂದಿಟ್ಟ ಯಾವುದೇ ಸಾಮಾನ್ಯ ಊಟವೂ ಅಮೃತದಂತೆ ಕಾಣುತ್ತದೆ. ಕೇವಲ ಅನ್ನ ರಸಂ, ರೊಟ್ಟಿ ಪಲ್ಯ ಸಿಕ್ಕರೂ ತೃಪ್ತಿಯಿಂದ ತಿನ್ನುತ್ತೀರಿ. ಆದರೆ ಚಪಲಕ್ಕೆ ಈ ಸರಳ ಆಹಾರ ಬೇಡ. ಅದು ಒಂದು ನಿರ್ದಿಷ್ಟ ತಿನಿಸಿಗಾಗಿಯೇ ಹಠ ಹಿಡಿಯುತ್ತದೆ. “ನನಗೆ ಈಗಲೇ ಪಿಜ್ಜಾ ಬೇಕು”, “ಚಾಕಲೇಟ್ ಐಸ್‌ಕ್ರೀಮ್ ತಿಂದರೇನೆ ಸಮಾಧಾನ” ಎಂದು ಮನಸ್ಸು ಪಟ್ಟು ಹಿಡಿಯುವುದು ಈ ಚಪಲದ ಲಕ್ಷಣ.

3. ಊಟದ ನಂತರದ ತೃಪ್ತಿ ಮತ್ತು ಅತೃಪ್ತಿ

ಹೊಟ್ಟೆ ಹಸಿವಿಗೆ ಊಟ ಮಾಡಿದಾಗ, ಹೊಟ್ಟೆ ತುಂಬಿದ ತಕ್ಷಣ ಮೆದುಳು “ಸಾಕು ನಿಲ್ಲಿಸು” ಎಂದು ಹೇಳುತ್ತದೆ. ನೀವು ಊಟ ನಿಲ್ಲಿಸುತ್ತೀರಿ. ಆದರೆ ಚಪಲ ಹಾಗಲ್ಲ. ಗಂಟಲು ತನಕ ತಿಂದಿದ್ದರೂ, “ಸ್ವೀಟ್ ತಿನ್ನೋಕೆ ಹೊಟ್ಟೇಲಿ ಬೇರೆನೇ ಜಾಗ ಇರುತ್ತೆ” ಎಂದು ಹೇಳಿಕೊಂಡು ಮತ್ತೆ ತಿನ್ನುವಂತೆ ಪ್ರಚೋದಿಸುತ್ತದೆ.

4. ದೈಹಿಕ ಅಗತ್ಯ ಹಾಗೂ ಮಾನಸಿಕ ಬೇಡಿಕೆ

ಹಸಿವು ಎನ್ನುವುದು ನಿಮ್ಮ ದೇಹದ ಶಕ್ತಿಯ ಅವಶ್ಯಕತೆ. ಅದು ದೈಹಿಕವಾದದ್ದು. ಆದರೆ ಚಪಲ ಎನ್ನುವುದು ನಿಮ್ಮ ಭಾವನೆಗಳಿಗೆ ಸಂಬಂಧಿಸಿದ್ದು. ಅದು ಮಾನಸಿಕವಾದದ್ದು.

ನೀವು ಹಸಿವಾಗಿದೆ ಎಂದುಕೊಳ್ಳುವುದು ಈ ಕೆಳಗಿನ ಕಾರಣಗಳಿಗಾಗಿ ಇರಬಹುದು!

ಹೆಚ್ಚಿನ ಬಾರಿ ನಿಮ್ಮ ದೇಹಕ್ಕೆ ಕ್ಯಾಲೋರಿಗಳ ಅಗತ್ಯವಿರುವುದಿಲ್ಲ, ಬದಲಾಗಿ ಬೇರೇನೋ ಸಮಸ್ಯೆಯಿರುತ್ತದೆ.

  • ವಿಪರೀತ ಕೆಲಸದ ಒತ್ತಡ
  • ನಿದ್ದೆ ಸರಿಯಾಗಿ ಆಗದೇ ಇರುವುದು
  • ಬಾಯಾರಿಕೆ ಅಥವಾ ದೇಹದಲ್ಲಿ ನೀರಿನಂಶ ಕಡಿಮೆಯಾಗಿರುವುದು
  • ಒಂಟಿತನ ಅಥವಾ ಬೇಸರ

ನಮ್ಮ ಮೆದುಳಿನಲ್ಲಿ ಹಸಿವು ಮತ್ತು ಬಾಯಾರಿಕೆಯನ್ನು ನಿಯಂತ್ರಿಸುವ ಕೇಂದ್ರಗಳು ಅಕ್ಕಪಕ್ಕದಲ್ಲೇ ಇವೆ. ಹೀಗಾಗಿ ದೇಹಕ್ಕೆ ನೀರು ಬೇಕು ಎನಿಸಿದಾಗಲೂ, ಮೆದುಳು ನಮಗೆ ಹಸಿವಾಗಿದೆ ಎಂಬ ತಪ್ಪು ಸಂದೇಶವನ್ನು ಕಳುಹಿಸುವ ಸಾಧ್ಯತೆಗಳಿರುತ್ತವೆ.

ಇದಕ್ಕೇನು ಪರಿಹಾರ? ಕಲಿಯಿರಿ ‘ಹ-ಸಿ-ಬೇ-ಸು’ ಸೂತ್ರ!

ನಿಮಗೆ ಊಟದ ಸಮಯವಲ್ಲದಿದ್ದರೂ ದಿಢೀರ್ ಎಂದು ಏನಾದರೂ ತಿನ್ನಬೇಕು ಅನ್ನಿಸಿದಾಗ, ನೇರವಾಗಿ ತಿಂಡಿಯ ಡಬ್ಬಿಗೆ ಕೈಹಾಕಬೇಡಿ. ಆ ಕ್ಷಣದಲ್ಲಿ ನಿಮ್ಮನ್ನು ನೀವು ಈ 4 ಪ್ರಶ್ನೆಗಳನ್ನು ಕೇಳಿಕೊಳ್ಳಿ. ನೆನಪಿಟ್ಟುಕೊಳ್ಳಲು ಈ ‘ಹ-ಸಿ-ಬೇ-ಸು’ ಸೂತ್ರ ಬಳಸಿ:

  • ಹ (ಹಸಿವು): ನನಗೆ ನಿಜವಾಗಿಯೂ ಹೊಟ್ಟೆ ಹಸಿವಾಗಿದೆಯೇ?
  • ಸಿ (ಸಿಟ್ಟು): ನನಗೆ ಯಾರದೋ ಮೇಲೋ ಕೋಪ ಇದೆಯೇ?
  • ಬೇ (ಬೇಸರ): ನನಗೆ ಬೇಸರ ಅಥವಾ ಒಂಟಿತನ ಕಾಡುತ್ತಿದೆಯೇ?
  • ಸು (ಸುಸ್ತು): ನಾನು ವಿಪರೀತ ಸುಸ್ತಾಗಿದ್ದೇನಾ ಅಥವಾ ನಿದ್ದೆ ಬರುತ್ತಿದೆಯಾ?

ಈಗ ನೀವು ಮಾಡಬೇಕಾದ್ದು ಇಷ್ಟೇ

ಈ ಪ್ರಶ್ನೆಗಳನ್ನು ಕೇಳಿಕೊಂಡ ನಂತರ, ಒಂದು ಲೋಟ ನೀರು ಕುಡಿಯಿರಿ. ಕೇವಲ ಒಂದು 10 ನಿಮಿಷ ಸುಮ್ಮನಿರಿ. ಈ 10 ನಿಮಿಷಗಳು ನಿಮ್ಮ ಚಪಲ ಮತ್ತು ವಿವೇಚನೆಯ ನಡುವಿನ ತಡೆಗೋಡೆಯಾಗಿ ಕೆಲಸ ಮಾಡುತ್ತವೆ. 10 ನಿಮಿಷದ ನಂತರವೂ ನಿಮಗೆ ಅದೇ ರೀತಿ ಹಸಿವಿನ ಅನುಭವವಾಗುತ್ತಿದ್ದರೆ, ಆಗ ಧಾರಾಳವಾಗಿ ಊಟ ಮಾಡಿ. ಆದರೆ ಶೇಕಡಾ 90 ರಷ್ಟು ಬಾರಿ ಆ 10 ನಿಮಿಷದ ನಂತರ ನಿಮ್ಮ ಆ ಚಪಲ ಮಾಯವಾಗಿಬಿಡುತ್ತದೆ!

ಆರೋಗ್ಯಕರ ಬದಲಾವಣೆಗೆ 5 ಸರಳ ಸೂತ್ರಗಳು

  1. ತಕ್ಷಣ ತಿನ್ನಬೇಡಿ, ಸ್ವಲ್ಪ ಕಾಯಿರಿ: ಮೇಲೆ ಹೇಳಿದಂತೆ 10 ನಿಮಿಷ ಕಾಯುವ ಅಭ್ಯಾಸ ಮಾಡಿಕೊಳ್ಳಿ. ಈ ಚಿಕ್ಕ ವಿರಾಮ ನಿಮ್ಮ ನಿರ್ಧಾರವನ್ನು ಸಂಪೂರ್ಣವಾಗಿ ಬದಲಾಯಿಸಬಹುದು.
  2. ಪ್ಯಾಕೆಟ್‌ನಿಂದ ನೇರವಾಗಿ ತಿನ್ನಬೇಡಿ: ಚಿಪ್ಸ್, ಬಿಸ್ಕೆಟ್ ಮುಂತಾದವುಗಳನ್ನು ನೇರವಾಗಿ ಪ್ಯಾಕೆಟ್‌ನಿಂದ ತಿಂದರೆ, ಎಷ್ಟು ತಿಂದೆವು ಎಂಬ ಲೆಕ್ಕವೇ ಸಿಗುವುದಿಲ್ಲ. ಅದನ್ನು ಒಂದು ಸಣ್ಣ ಪ್ಲೇಟ್‌ಗೆ ಹಾಕಿಕೊಂಡು ತಿನ್ನಿ.
  3. ಕಣ್ಣಿಂದ ದೂರ, ಮನಸ್ಸಿನಿಂದ ದೂರ: ಮನೆಯಲ್ಲಿ ಜಂಕ್ ಫುಡ್‌ಗಳನ್ನು ಕಣ್ಣಿಗೆ ಕಾಣುವಂತೆ ಡೈನಿಂಗ್ ಟೇಬಲ್ ಮೇಲೆ ಇಡಬೇಡಿ. ಕಣ್ಣಿಗೆ ಕಂಡರೆ ತಿನ್ನಬೇಕು ಅನ್ನಿಸುವುದು ಸಹಜ. ಅವುಗಳನ್ನು ಡಬ್ಬಿಯೊಳಗಿಡಿ, ಸಾಧ್ಯವಾದರೆ ಅಂಥ ವಸ್ತುಗಳನ್ನು ಮನೆಗೆ ತರುವುದನ್ನೇ ನಿಲ್ಲಿಸಿ.
  4. ಸಮಯಕ್ಕೆ ಸರಿಯಾಗಿ ಊಟ ಮಾಡಿ: ಊಟದ ಸಮಯವನ್ನು ತಪ್ಪಿಸಬೇಡಿ. ಬಹಳ ಹೊತ್ತು ಹೊಟ್ಟೆ ಖಾಲಿ ಬಿಟ್ಟರೆ, ಆಮೇಲೆ ಸಿಕ್ಕಾಪಟ್ಟೆ ಹಸಿವಾಗಿ ಸಿಹಿಯಾದ ಮತ್ತು ಕೊಬ್ಬಿನಂಶ ಹೆಚ್ಚಿರುವ ಆಹಾರವನ್ನೇ ತಿನ್ನಲು ಮನಸ್ಸು ಹಾತೊರೆಯುತ್ತದೆ.
  5. ಭಾವನೆಗಳನ್ನು ಅರ್ಥಮಾಡಿಕೊಳ್ಳಿ: ನೀವು ಬೇಸರದಲ್ಲಿದ್ದಾಗ, ಒತ್ತಡದಲ್ಲಿದ್ದಾಗ ಅಥವಾ ದುಃಖದಲ್ಲಿದ್ದಾಗ ಆಹಾರವು ಅದಕ್ಕೆ ಮದ್ದಲ್ಲ ಎಂಬುದನ್ನು ಮನವರಿಕೆ ಮಾಡಿಕೊಳ್ಳಿ. ಬೇಸರವಾದಾಗ ವಾಕಿಂಗ್ ಹೋಗಿ, ಹಾಡು ಕೇಳಿ ಅಥವಾ ಆಪ್ತರೊಂದಿಗೆ ಮಾತನಾಡಿ.

ಕೊನೆಯ ಮಾತು

ನೆನಪಿರಲಿ: ‘ಹಸಿವು’ ಎಂಬುದು ನಮ್ಮ ದೇಹದ ಭಾಷೆ. ‘ಚಪಲ’ ಎಂಬುದು ನಮ್ಮ ಮನಸ್ಸಿನ ನಾಟಕ.

ಈ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳಲು ನಿಮ್ಮ ಮನಸ್ಸಿಗೆ ತರಬೇತಿ ನೀಡಿ. ನಿಮ್ಮ ದೇಹದ ನಿಜವಾದ ಹಸಿವಿಗೆ ಮಾತ್ರ ಆಹಾರ ನೀಡಿ. ಚಪಲವನ್ನು ಉಪವಾಸ ಕೆಡವಿ, ಅದನ್ನು ಹಸಿವಿನಿಂದಲೇ ಸಾಯಲು ಬಿಡಿ! ಆಗ ಆರೋಗ್ಯ ನಿಮ್ಮ ಕೈಮುಷ್ಟಿಯಲ್ಲಿರುತ್ತದೆ.


ವಿಶ್ವವಾಣಿಯಲ್ಲಿ ಪ್ರಕಟವಾದ ‘ಹೊಟ್ಟೆಯ ಹಸಿವು ಮತ್ತು ಮನಸ್ಸಿನ ಚಪಲ: ನೀವು ತಿನ್ನುತ್ತಿರುವುದು ಹಸಿವಿನಿಂದಲೋ ಅಥವಾ ಚಪಲದಿಂದಲೋ?’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

143 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top