ದಿನಪೂರ್ತಿ ಮನೆ ಕೆಲಸ ಮಾಡ್ತೀನಿ, ಅದೇ ನಂಗೆ ದೊಡ್ಡ ವಾಕಿಂಗ್! ಇದು ನಿಜಾನಾ?

ದಿನವಿಡೀ ಮನೆಯೊಳಗೆ ಓಡಾಡುತ್ತಾ ಕೆಲಸ ಮಾಡಿದರೆ ಅದೇ ವ್ಯಾಯಾಮವೇ? ಸುಸ್ತು, ಬೆವರು ಇದ್ದರೂ ಮಧುಮೇಹ ನಿಯಂತ್ರಣಕ್ಕೆ ಬೇಕಾದ ಬಿರುಸಾದ ನಡಿಗೆಗೆ ಅದು ಏಕೆ ಸಮವಲ್ಲ, ಇಂಗ್ಲಿಷ್ ಅನುವಾದದೊಂದಿಗೆ.

ದಿನಪೂರ್ತಿ ಮನೆ ಕೆಲಸ ಮಾಡ್ತೀನಿ, ಅದೇ ನಂಗೆ ದೊಡ್ಡ ವಾಕಿಂಗ್! ಇದು ನಿಜಾನಾ?

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಆಗಸ್ಟ್ 2ರಂದು ಪ್ರಕಟವಾಗಿದೆ. Read this article in English

ನಮ್ಮ ಆಸ್ಪತ್ರೆಗೆ ಬರುವವರಲ್ಲಿ, ವಿಶೇಷವಾಗಿ ಮಹಿಳೆಯರು ಹೇಳುವ ಒಂದು ಫೇಮಸ್ ಡೈಲಾಗ್ ಇದು.

“ಡಾಕ್ಟ್ರೇ, ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗೋವರೆಗೂ ಮನೇಲಿ ಕಸ, ಮುಸುರೆ, ಅಡಿಗೆ, ಮಕ್ಕಳನ್ನ ಶಾಲೆಗೆ ಕಳಿಸೋದು ಅಂತ ಒಂದು ನಿಮಿಷ ಕೂರೋಕೆ ಟೈಮ್ ಇರಲ್ಲ. ಇಡೀ ಮನೆ ಹತ್ತು ಸಾರಿ ಸುತ್ತಿರ್ತೀನಿ. ಇದೆಲ್ಲಾ ಮಾಡಿದ್ಮೇಲೆ ಮತ್ತೆ ಪ್ರತ್ಯೇಕವಾಗಿ ವಾಕಿಂಗ್ ಯಾಕೆ ಮಾಡ್ಬೇಕು? ದಿನದ ಕೊನೆಗೆ ನನ್ನ ಮೈ ಬೆವರಿರುತ್ತೆ, ಸಿಕ್ಕಾಪಟ್ಟೆ ಸುಸ್ತಾಗಿರುತ್ತೆ, ಅದೇ ನಂಗೆ ದೊಡ್ಡ ವಾಕಿಂಗ್ ಅಲ್ವಾ?”

ಮೇಲ್ನೋಟಕ್ಕೆ ಇದು ಹೌದು ಅನ್ನಿಸಿದರೂ, ವೈಜ್ಞಾನಿಕವಾಗಿ ಇದು ಅತಿ ದೊಡ್ಡ ಭ್ರಮೆ. ಮನೆ ಕೆಲಸ ಮಾಡುವುದು ಬೇರೆ, ಡಯಾಬಿಟಿಸ್ ಕಂಟ್ರೋಲ್ ಮಾಡಲು ಮಾಡುವ ವ್ಯಾಯಾಮ ಬೇರೆ.

ಟ್ರಾಫಿಕ್ ಕಾರು ಮತ್ತು ಹೈವೇ ಮೈಲೇಜ್!

ಇದನ್ನ ಅರ್ಥ ಮಾಡಿಕೊಳ್ಳೋಕೆ ಒಂದು ಕಾರಿನ ಉದಾಹರಣೆ ತಗೊಳೋಣ.

ಸಿಟಿಯ ಟ್ರಾಫಿಕ್‌ನಲ್ಲಿ ಕಾರು ಓಡಿಸಿದರೆ ಏನಾಗುತ್ತೆ? ಸ್ವಲ್ಪ ದೂರ ಹೋಗೋದು, ಬ್ರೇಕ್ ಹಾಕೋದು, ಮತ್ತೆ ಫಸ್ಟ್ ಗೇರ್, ಮತ್ತೆ ಕ್ಲಚ್. ಹೀಗೆ ಕಾರು ನಿಂತು ನಿಂತು ಹೋಗುತ್ತೆ. ಇದರಿಂದ ಪೆಟ್ರೋಲ್ ಜಾಸ್ತಿ ಖರ್ಚಾಗುತ್ತೆ, ಇಂಜಿನ್ ಬಿಸಿಯಾಗುತ್ತೆ, ಡ್ರೈವರ್‌ಗೂ ಸಿಕ್ಕಾಪಟ್ಟೆ ಸುಸ್ತಾಗುತ್ತೆ. ಆದರೆ ಕಾರಿನ ಮೈಲೇಜ್ ಮಾತ್ರ ಸೊನ್ನೆ! ಅದೇ ಕಾರನ್ನು ಹೈವೇ ಮೇಲೆ ನಾಲ್ಕನೇ ಅಥವಾ ಐದನೇ ಗೇರ್‌ನಲ್ಲಿ ಒಂದೇ ಸಮನೆ 40 ನಿಮಿಷ ಓಡಿಸಿದರೆ? ಇಂಜಿನ್ ಸ್ಮೂತ್ ಆಗಿ ಕೆಲಸ ಮಾಡುತ್ತೆ, ಭರ್ಜರಿ ಮೈಲೇಜ್ ಸಿಗುತ್ತೆ.

ನಮ್ಮ ಮನೆ ಕೆಲಸವೆಲ್ಲಾ ಸಿಟಿ ಟ್ರಾಫಿಕ್‌ನಲ್ಲಿ ಕಾರು ಓಡಿಸಿದ ಹಾಗೆ! ನೀವು ಅಡುಗೆ ಮನೆಯಿಂದ ಹಾಲಿಗೆ ಹೋಗ್ತೀರಾ (ಫಸ್ಟ್ ಗೇರ್), ಅಲ್ಲಿ ಏನೋ ನೆನಪಾಗಿ ನಿಂತು ಮತ್ತೆ ವಾಪಸ್ ಬರ್ತೀರಾ (ಬ್ರೇಕ್). ಒಂದೇ ಸಮನೆ ಹೆಜ್ಜೆ ಹಾಕಲು ಆಗುವುದಿಲ್ಲ, ನಿಮ್ಮ ಹೃದಯದ ಬಡಿತ ಏರುವುದೇ ಇಲ್ಲ. ಇದರಿಂದ ನಿಮ್ಮ ದೇಹಕ್ಕೆ ಸುಸ್ತಾಗುತ್ತದೆಯೇ ವಿನಃ, ಫಿಟ್‌ನೆಸ್ ಹೆಚ್ಚಾಗುವುದಿಲ್ಲ ಮತ್ತು ರಕ್ತದಲ್ಲಿರುವ ಗ್ಲೂಕೋಸ್ ಕಡಿಮೆಯಾಗುವುದಿಲ್ಲ, ಆಥವಾ ದೇಹದ ಬೊಜ್ಜು ಕರಗುವುದಿಲ್ಲ.

ಗಾಣದ ಎತ್ತು ಮತ್ತು ರೇಸ್ ಕುದುರೆ!

ಮನೆಯಲ್ಲೇ ಸುತ್ತು ಹೊಡೆಯೋದು ಗಾಣದ ಎತ್ತಿನ ಕಥೆ ಇದ್ದ ಹಾಗೆ. ಆ ಎತ್ತು ದಿನಪೂರ್ತಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗಾಣದ ಸುತ್ತ ತಿರುಗುತ್ತಲೇ ಇರುತ್ತದೆ. ಸಂಜೆ ನೋಡಿದರೆ ನೂರಾರು ಕಿಲೋಮೀಟರ್ ನಡೆದಷ್ಟು ಸುಸ್ತಾಗಿರುತ್ತದೆ, ಬೆವರಿರುತ್ತದೆ. ಆದರೆ ಅದು ಇದ್ದ ಜಾಗದಲ್ಲೇ ಇರುತ್ತದೆ!

ಮಧುಮೇಹವನ್ನು ಓಡಿಸಬೇಕು ಅಂದರೆ ನಾವು ಗಾಣದ ಎತ್ತಾಗಬಾರದು, ಮುಕ್ತವಾಗಿ ಓಡುವ ರೇಸ್ ಕುದುರೆಯಾಗಬೇಕು!

ನಿಜವಾದ ವಾಕಿಂಗ್ ಅಂದರೆ, ಕೈಬೀಸುತ್ತಾ, ಸ್ವಲ್ಪ ಬಿರುಸಾಗಿ, ಒಂದೇ ಸಮನೆ ಕನಿಷ್ಠ 30 ರಿಂದ 40 ನಿಮಿಷ ನಡೆಯುವುದು. ಆಗ ಮಾತ್ರ ನಮ್ಮ ಹೃದಯದ ಪಂಪ್ ವೇಗವಾಗಿ ಕೆಲಸ ಮಾಡಿ, ರಕ್ತ ಸಂಚಾರ ಚುರುಕಾಗುತ್ತದೆ. ನಾವು ಹಿಂದಿನ ಲೇಖನದಲ್ಲಿ ಮಾತನಾಡಿದ್ದೆವಲ್ಲ, ಜೀವಕೋಶಗಳ ಬೀಗ ತುಕ್ಕು ಹಿಡಿಯುವುದು ಅಂತ? ಆ ತುಕ್ಕು ಬಿಡಬೇಕು ಅಂದರೆ, ಈ ರೀತಿ ಒಂದೇ ಸಮನೆ ಬೆವರು ಸುರಿಸುವ ವ್ಯಾಯಾಮ ಆಗಲೇಬೇಕು. 40 ನಿಮಿಷ ಒಂದೇ ಸಮನೆ ಆಗದಿದ್ದರೆ ಕನಿಷ್ಟ ಪಕ್ಷ 20 ನಿಮಿಷದ ಕಾಲ ದಿನದಲ್ಲಿ ಎರಡು ಬಾರಿ ನಡೆಯುವುದು ಒಳ್ಳೆಯದು.

ಏನು ಮಾಡೋದು?

“ನನಗೆ ಟೈಮ್ ಇಲ್ಲ, ಮನೆ ಕೆಲಸವೇ ಸಾಕಾಗುತ್ತೆ” ಅನ್ನೋ ನೆಪ ಬಿಡಿ. ದಿನದ 24 ಗಂಟೆಯಲ್ಲಿ, ಆಂದರೆ 1440 ನಿಮಿಷಗಳಲ್ಲಿ ಕೇವಲ 40 ನಿಮಿಷ ನಿಮ್ಮ ದೇಹಕ್ಕಾಗಿ ಮೀಸಲಿಡಿ. ಒಳ್ಳೇ ಶೂಸ್ ಅಥವಾ ಚಪ್ಪಲಿ ಹಾಕಿಕೊಂಡು, ಮನೆಯಿಂದ ಹೊರಗೆ ಪಾರ್ಕ್ ಅಥವಾ ಮೈದಾನದಲ್ಲಿ ವಾಕಿಂಗ್ ಮಾಡಿ. ಇದು ಬರೀ ದೇಹಕ್ಕಲ್ಲ, ಇಡೀ ದಿನದ ಮನೆ ಕೆಲಸದ ಟೆನ್ಷನ್‌ನಿಂದ ನಿಮ್ಮ ಮನಸ್ಸಿಗೂ ದೊಡ್ಡ ರಿಲೀಫ್ ಕೊಡುತ್ತದೆ. ಆ 40 ನಿಮಿಷ ಕೇವಲ ನಿಮ್ಮದು, ನಿಮ್ಮ ಆರೋಗ್ಯದ್ದು.

ಜ್ಞಾಪಕ ಇರಲಿ: ಮನೆ ಕೆಲಸದಿಂದ ಕೇವಲ ಮನೆ ಮಾತ್ರ ಕ್ಲೀನ್ ಆಗುತ್ತದೆ, ಆದರೆ ಬಿರುಸಾದ ವಾಕಿಂಗ್ ಮಾಡಿದರೆ ಮಾತ್ರ ನಿಮ್ಮ ರಕ್ತನಾಳಗಳು ಮತ್ತು ದೇಹ ಕ್ಲೀನ್ ಆಗುತ್ತದೆ. ಫಸ್ಟ್ ಗೇರ್ ನಲ್ಲಿ ಮನೆ ಕೆಲಸ ಮಾಡಿದರೂ ಸಹಾ ಟಾಪ್ ಗೇರಿನಲ್ಲಿ ಹೈವೇನಲ್ಲಿ ಹೋದ ಹಾಗೆ ನಡೆಯಿರಿ. ಗಾಣದ ಎತ್ತಿನ ಬದಲು, ಆರೋಗ್ಯದ ಟ್ರ್ಯಾಕ್‌ನಲ್ಲಿ ರೇಸ್ ಕುದುರೆಯಾಗಿರಿ!


ವಿಶ್ವವಾಣಿಯಲ್ಲಿ ಪ್ರಕಟವಾದ ‘ದಿನಪೂರ್ತಿ ಮನೆ ಕೆಲಸ ಮಾಡ್ತೀನಿ, ಅದೇ ನಂಗೆ ದೊಡ್ಡ ವಾಕಿಂಗ್! ಇದು ನಿಜಾನಾ?’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

125 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top