ಸಕ್ಕರೆಯೋ ಬೆಲ್ಲವೋ?

ಸಕ್ಕರೆ ಬದಲು ಬೆಲ್ಲ ತಿಂದರೆ ಮಧುಮೇಹ ಬರುವುದಿಲ್ಲವೇ? ಸುಕ್ರೋಸ್ ಸತ್ಯ, ಖನಿಜಗಳ ಭ್ರಮೆ ಮತ್ತು ಬೆಲ್ಲದ ಬಗ್ಗೆ ಇರುವ ತಪ್ಪು ಕಲ್ಪನೆಗಳು, ಇಂಗ್ಲಿಷ್ ಅನುವಾದದೊಂದಿಗೆ.

ಸಕ್ಕರೆಯೋ ಬೆಲ್ಲವೋ?

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಮೇ 24ರಂದು ಪ್ರಕಟವಾಗಿದೆ. Read this article in English

ಇತ್ತೀಚೆಗೆ ಹಲವರು ತಮ್ಮ ಮನೆಗಳಲ್ಲಿ ಬಿಳಿ ಸಕ್ಕರೆಯನ್ನು ತರುವುದನ್ನು ನಿಲ್ಲಿಸಿ, ಅದರ ಬದಲು ಬೆಲ್ಲವನ್ನು ತಂದಿಟ್ಟುಕೊಂಡಿದ್ದಾರೆ. ಟೀ, ಕಾಫಿ, ಪಾಯಸ ಎಲ್ಲದಕ್ಕೂ ಬೆಲ್ಲ. “ನಾವು ಬೆಲ್ಲ ಬಳಸುತ್ತೇವೆ, ನಮಗೆ ಡಯಾಬಿಟಿಸ್ ಬರೋಲ್ಲ, ಇದು 100% ಆರೋಗ್ಯಕರ” ಎಂದು ಅನೇಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಆದರೆ ಇದು ವಾಸ್ತವವೇ ಅಥವಾ ಕೇವಲ ಒಂದು ಸಿಹಿ ಭ್ರಮೆಯೇ? ವಿಜ್ಞಾನ ಇದರ ಬಗ್ಗೆ ಏನು ಹೇಳುತ್ತದೆ ನೋಡೋಣವೇ?

‘ಸಕ್ಕರೆ ಕಾಯಿಲೆ’ ಎಂಬ ಹೆಸರಿನ ಗೊಂದಲ

ಮಧುಮೇಹವನ್ನು ನಾವು ಆಡುಭಾಷೆಯಲ್ಲಿ ‘ಸಕ್ಕರೆ ಕಾಯಿಲೆ’ ಎಂದು ಕರೆಯುತ್ತೇವೆ. ಈ ಹೆಸರಿನಿಂದಾಗಿಯೇ ಜನರಲ್ಲಿ “ಇದು ಕೇವಲ ‘ಸಕ್ಕರೆ’ ತಿಂದರೆ ಬರುವ ಕಾಯಿಲೆ, ಹಾಗಾಗಿ ‘ಬೆಲ್ಲ’ ತಿಂದರೆ ಸುರಕ್ಷಿತ” ಎಂಬ ತಪ್ಪು ಕಲ್ಪನೆ ಮೂಡಿದೆ. ಇದಕ್ಕೆ ‘ಮಧುಮೇಹ’ ಎಂದೂ ಸಹಾ ಹೇಳುತ್ತಾರೆ (‘ಮಧು’ ಎಂದರೆ ಜೇನು), ಎಂದ ಮಾತ್ರಕ್ಕೆ ಇದು ಜೇನು ತಿಂದು ಬರುವುದು ಎಂಬ ಅರ್ಥ ಕಾಲ್ಪನಿಕವಲ್ಲವೇ? ಕಾಯಿಲೆಯ ಹೆಸರು ‘ಸಕ್ಕರೆ ಕಾಯಿಲೆ’ ಎಂದ ಮಾತ್ರಕ್ಕೆ ಬೆಲ್ಲ ನಮಗೆ ವಿನಾಯಿತಿ ನೀಡುವುದಿಲ್ಲ.

ರಾಸಾಯನಿಕ ಸತ್ಯ

ವೈಜ್ಞಾನಿಕವಾಗಿ ನೋಡಿದರೆ, ಸಕ್ಕರೆ ಮತ್ತು ಬೆಲ್ಲ ಎರಡರ ಒಳಗಿರುವುದೂ ‘ಸುಕ್ರೋಸ್’. ನೀವು ಸಕ್ಕರೆ ತಿಂದರೂ, ಬೆಲ್ಲ ತಿಂದರೂ ಅದು ಜೀರ್ಣವಾದ ನಂತರ ಅವುಗಳಲ್ಲಿರುವ ಸುಕ್ರೋಸ್ ಅಂಶ ಗ್ಲೂಕೋಸ್ ಆಗಿಯೇ ಪರಿವರ್ತನೆಯಾಗಿ ರಕ್ತಕ್ಕೆ ಸೇರುತ್ತದೆ. ಎರಡರ ‘ಗ್ಲೈಸೆಮಿಕ್ ಇಂಡೆಕ್ಸ್’ ಸಹಾ ಹೆಚ್ಚು-ಕಡಿಮೆ ಒಂದೇ ಆಗಿರುವುದರಿಂದ, ಇವೆರಡೂ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಒಂದೇ ವೇಗದಲ್ಲಿ ಏರಿಸುತ್ತವೆ. ಇದನ್ನು ನಿಯಂತ್ರಿಸಲು ನಿಮ್ಮ ದೇಹದ ಮೇದೋಜೀರಕ ಗ್ರಂಥಿ ಅಷ್ಟೇ ಪ್ರಮಾಣದ ಇನ್ಸುಲಿನ್ ಅನ್ನು ಉತ್ಪಾದಿಸಲೇಬೇಕು. ಆದ್ದರಿಂದ ನೀವು ಯಾವುದೇ ರೂಪದ ಸಿಹಿ ತಿಂದರೂ ರಕ್ತದಲ್ಲಿ ಗ್ಲೂಕೋಸ್ ಅಂಶ ಹೆಚ್ಚಾಗುತ್ತದೆ. ಮಧುಮೇಹ ಇರುವವರಿಗೆ ಬೆಲ್ಲವೂ ಕೂಡ ಸಕ್ಕರೆಯಷ್ಟೇ ಅಪಾಯಕಾರಿ.

ಪೋಷಕಾಂಶಗಳ ಭ್ರಮೆ

“ಬೆಲ್ಲದಲ್ಲಿ ಐರನ್ (ಕಬ್ಬಿಣಾಂಶ) ಮತ್ತು ಮೆಗ್ನೀಸಿಯಂ ಇದೆ, ಅದು ಆರೋಗ್ಯಕ್ಕೆ ಬಹಳ ಒಳ್ಳೆಯದು” ಎಂದು ಕೆಲವರು ಹೇಳುತ್ತಾರೆ. ಹೌದು, ಬೆಲ್ಲವನ್ನು ರಿಫೈನ್ ಮಾಡದಿರುವುದರಿಂದ ಅದರಲ್ಲಿ ಕಬ್ಬಿನ ಹಾಲಿನ ಒಂದಷ್ಟು ನೈಸರ್ಗಿಕ ಖನಿಜಗಳು ಉಳಿದುಕೊಂಡಿರುತ್ತವೆ. ಆದರೆ, ನಿಮ್ಮ ಒಂದು ಕಪ್ ಟೀಗೆ ಹಾಕುವ ಒಂದು ಚಮಚ ಬೆಲ್ಲದಲ್ಲಿ ಸಿಗುವ ಈ ಖನಿಜಗಳ ಪ್ರಮಾಣ ವೈದ್ಯಕೀಯವಾಗಿ ತೀರಾ ನಗಣ್ಯ.

ಬೆಲ್ಲದಲ್ಲಿರುವ ಖನಿಜಾಂಶಗಳಿಂದ ನಿಮ್ಮ ದೇಹದ ದೈನಂದಿನ ಅಗತ್ಯ ಪೂರೈಸಬೇಕೆಂದರೆ, ನೀವು ಪ್ರತಿದಿನ ಅಪಾರ ಪ್ರಮಾಣದ ಬೆಲ್ಲ ತಿನ್ನಬೇಕಾಗುತ್ತದೆ. ಆ ಪ್ರಮಾಣದ ಬೆಲ್ಲ ತಿಂದರೆ, ಅದರಲ್ಲಿರುವ ಅಗಾಧವಾದ ಕ್ಯಾಲೋರಿಗಳು ನಿಮ್ಮ ತೂಕವನ್ನು ಹೆಚ್ಚಿಸಿ, ಅನಾರೋಗ್ಯದ ಅಪಾಯವನ್ನು ತಂದೊಡ್ಡುತ್ತದೆಯೇ ಹೊರತು ಆರೋಗ್ಯವನ್ನಲ್ಲ.

ತಪ್ಪು ಕಲ್ಪನೆಗಳು ಮತ್ತು ವಾಸ್ತವ

ತಪ್ಪು ಕಲ್ಪನೆ: “ಮಧುಮೇಹ ಇದ್ದವರು ಸಕ್ಕರೆ ಬದಲು ಬೆಲ್ಲವನ್ನು ತಿನ್ನಬಹುದು.”

ವಾಸ್ತವ: ನಿಮ್ಮ ಪ್ಯಾಂಕ್ರಿಯಾಸ್ (ಮೇದೋಜೀರಕ ಗ್ರಂಥಿ) ಗೆ ನೀವು ತಿಂದ ಸಿಹಿ ಬಿಳಿ ಬಣ್ಣದ್ದೋ ಅಥವಾ ಕಂದು ಬಣ್ಣದ್ದೋ ಎಂದು ಗೊತ್ತಾಗುವುದಿಲ್ಲ. ಸಕ್ಕರೆಯಷ್ಟೇ ವೇಗವಾಗಿ ಬೆಲ್ಲವೂ ಗ್ಲೂಕೋಸ್ ಮಟ್ಟವನ್ನು ಏರಿಸುತ್ತದೆ. ಮಧುಮೇಹ ಇರುವವರಿಗೆ ಸಕ್ಕರೆಯಾಗಲೀ ಅಥವಾ ಬೆಲ್ಲವಾಗಲೀ, ಆರೋಗ್ಯಕ್ಕೆ ಎರಡೂ ಸೂಕ್ತವಲ್ಲ.

ತಪ್ಪು ಕಲ್ಪನೆ: “ಬೆಳಿಗ್ಗೆ ಎದ್ದು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಹೊಟ್ಟೆಯ ಬೊಜ್ಜು ಕರಗುತ್ತದೆ.”

ವಾಸ್ತವ: ಸಕ್ಕರೆಯಲ್ಲಿರುವಷ್ಟೇ ಕ್ಯಾಲೋರಿಗಳು ಬೆಲ್ಲದಲ್ಲೂ ಇವೆ (100 ಗ್ರಾಂಗೆ ಸುಮಾರು 380 ಕ್ಯಾಲೋರಿ). ತೂಕ ಇಳಿಸಲು ಕ್ಯಾಲೋರಿ ಕಡಿಮೆ ಮಾಡಿ ಪ್ರಯತ್ನ ಮಾಡಬೇಕೇ ಹೊರತು ಬೆಲ್ಲದ ನೀರನ್ನು ಕುಡಿದು ಕ್ಯಾಲೋರಿ ಇನ್ನೂ ಹೆಚ್ಚು ಮಾಡಿಕೊಳ್ಳುವುದಲ್ಲ.

ತಪ್ಪು ಕಲ್ಪನೆ: “ಬೆಲ್ಲ ನಮ್ಮ ದೇಹದ ಕಲ್ಮಶಗಳನ್ನು ಹೊರಹಾಕುತ್ತದೆ (ಡಿಟಾಕ್ಸ್).”

ವಾಸ್ತವ: ನಿಮ್ಮ ದೇಹವನ್ನು ಡಿಟಾಕ್ಸ್ ಮಾಡಲು ನಿಮ್ಮದೇ ಯಕೃತ್ತು (ಲಿವರ್) ಮತ್ತು ಕಿಡ್ನಿಗಳಿವೆ. ನಾವು ಸೇವಿಸುವಂತಹ ಯಾವುದೇ ಪದಾರ್ಥ ದೇಹವನ್ನು ಶುದ್ಧೀಕರಿಸುವುದಿಲ್ಲ.

ಹಾಗಾದರೆ ಸಕ್ಕರೆಗಿಂತ ಬೆಲ್ಲ ಶ್ರೇಷ್ಠವಲ್ಲವೇ?

ಕೇವಲ ಒಂದೇ ಒಂದು ಕಾರಣಕ್ಕೆ ಸಕ್ಕರೆಗಿಂತ ಬೆಲ್ಲ ಸ್ವಲ್ಪ ಉತ್ತಮ. ಬಿಳಿ ಸಕ್ಕರೆಯನ್ನು ಬೆಳ್ಳಗಾಗಿಸಲು ‘ಸಲ್ಫರ್ ಡೈಆಕ್ಸೈಡ್’ನಂತಹ ರಾಸಾಯನಿಕ ಬಳಸಿ ಬ್ಲೀಚ್ ಮಾಡುತ್ತಾರೆ. ಬೆಲ್ಲದಲ್ಲಿ ಆ ಕೆಮಿಕಲ್ ಪ್ರಕ್ರಿಯೆ ಇರುವುದಿಲ್ಲ. ಅಷ್ಟೇ ಹೊರತು, ಬೆಲ್ಲ ತಿಂದ ತಕ್ಷಣ ಆರೋಗ್ಯ ವೃದ್ಧಿಯಾಗುತ್ತದೆ ಎನ್ನುವುದು ವೈಜ್ಞಾನಿಕವಾಗಿ ಸರಿಯಲ್ಲ.

ಕೊನೆ ಮಾತು

ಬೆಲ್ಲವನ್ನು ಒಂದು ‘ಔಷಧಿ’ ಅಥವಾ ‘ಹೆಲ್ತ್ ಫುಡ್’ ಎಂದು ಭಾವಿಸಬೇಡಿ. ಅದೂ ಕೂಡ ಒಂದು ಸಿಹಿ ತಿನಿಸು ಅಷ್ಟೇ. ಹಬ್ಬ-ಹರಿದಿನಗಳಲ್ಲಿ ಮಿತವಾಗಿ ಬಳಸಿ, ಆನಂದಿಸಿ. “ಬೆಲ್ಲ ತಾನೇ” ಎಂದು ಅತಿಯಾಗಿ ತಿಂದರೆ, ಅದರ ಪರಿಣಾಮ ಸಕ್ಕರೆ ತಿಂದಂತೆಯೇ ಇರುತ್ತದೆ.


ವಿಶ್ವವಾಣಿಯಲ್ಲಿ ಪ್ರಕಟವಾದ ‘ಸಕ್ಕರೆಯೋ ಬೆಲ್ಲವೋ?’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

125 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top