ಲಿವರ್ ಡೈಲಾಗ್: ಹಾನಿಗೊಂಡ ಲಿವರ್ ಜೊತೆಗಿನ ಕೊನೆಯ ಸಂದರ್ಶನ

ವಿಶ್ವ ಲಿವರ್ ದಿನದ ಅಂಗವಾಗಿ, ನಾನು ಒಂದು ವಿಶಿಷ್ಟವಾದ ಸಂದರ್ಶನವನ್ನು ಮಾಡಿದೆ. ಇತ್ತೀಚೆಗಷ್ಟೇ ಆಲ್ಕೋಹಾಲ್‌ನಿಂದ ಲಿವರ್ ಕಾಯಿಲೆಗೆ ತುತ್ತಾಗಿ ಸಾವನ್ನಪ್ಪಿದ ರೋಗಿಯೊಬ್ಬರ ಯಕೃತ್ (ಲಿವರ್) ಜೊತೆ ನಾನು ಮಾತನಾಡಿದೆ. ಅದು ಗಂಟುಗಂಟಾಗಿ, ಮುದುರಿಹೋಗಿ ಮತ್ತು ಕಲ್ಲಿನ ಹಾಗೆ ಮಾರ್ಪಟ್ಟಿತ್ತು… ನಯವಾದ, ಕೆಂಪು-ಕಂದು ಬಣ್ಣದ, ಮತ್ತು ಆರೋಗ್ಯಕರವಾದ ಲಿವರ್‌ಗೆ ಇದು ತದ್ವಿರುದ್ಧವಾಗಿತ್ತು.
ನಾನು: ಇದು ಹೀಗೆ ಅಂತ್ಯವಾಗಿದ್ದಕ್ಕೆ ನನಗೆ ತುಂಬಾ ಬೇಸರವಾಗಿದೆ. ಇದು ನಿಮಗೆ ಬಹಳ ಕಷ್ಟವಾಗಿರಬೇಕು…
ಲಿವರ್: ಧನ್ಯವಾದಗಳು ಡಾಕ್ಟರ್. ನಾನು… ತುಂಬಾ ಸುಸ್ತಾಗಿದ್ದೇನೆ. ಆದರೆ ನೀವು ಇದನ್ನು ಕೇಳಿದ್ದೇ ನನಗೆ ಖುಷಿ ನೀಡಿತು. ನನ್ನ ಕಥೆಯಿಂದ ಒಂದೇ ಒಂದು ಲಿವರ್ ಆದರೂ ಈ ರೀತಿಯ ಕಷ್ಟದಿಂದ ಪಾರಾದರೆ, ನನ್ನ ಈ ಪ್ರಯತ್ನ ಸಾರ್ಥಕವಾಗುತ್ತದೆ.
ನಾನು: ನಿಮ್ಮನ್ನು ದೇಹದ ‘ಪವರ್ ಹೌಸ್’ (ಶಕ್ತಿ ಕೇಂದ್ರ) ಎಂದು ಕರೆಯುತ್ತಾರೆ. ಅನಾರೋಗ್ಯದ ಕೊನೆಯ ದಿನಗಳ ಮೊದಲು ನಿಮ್ಮ ದಿನಚರಿ ಹೇಗಿರುತ್ತಿತ್ತು?
ಲಿವರ್: ಹೃದಯ ದೇಹದ ಎಂಜಿನ್ ಆಗಿದ್ದರೆ, ನಾನು ಕಾರ್ಖಾನೆ ಮತ್ತು ಶುದ್ಧೀಕರಣ ಘಟಕ (ರಿಫೈನರಿ) ಆಗಿದ್ದೆ. ಹೃದಯದ ಕೆಲಸ ಸದ್ದು ಮಾಡುತ್ತಾ ಲಯಬದ್ಧವಾಗಿರುತ್ತದೆ, ಆದರೆ ನನ್ನ ಕೆಲಸ ಮೌನವಾಗಿಯೇ ನಡೆಯುವುದು. ನಾನು ದೇಹದ ಮುಖ್ಯ ಪ್ರೊಸೆಸಿಂಗ್ ಪ್ಲಾಂಟ್ ಆಗಿದ್ದೆ… ಪ್ರತಿದಿನ 500 ಕ್ಕೂ ಹೆಚ್ಚು ಬಗೆಯ ಕೆಲಸಗಳನ್ನು ಮಾಡುತ್ತಿದ್ದೆ.
ಕೆಲವನ್ನು ಮಾತ್ರ ಹೇಳುವುದಾದರೆ… ನನ್ನ ಮನುಷ್ಯನ ಮೆದುಳು ಸರಿಯಾಗಿ ಕೆಲಸ ಮಾಡುವಂತೆ ಮಾಡಲು ನಾನು ರಕ್ತವನ್ನು ಶುದ್ಧೀಕರಿಸುತ್ತಿದ್ದೆ (ಫಿಲ್ಟರ್ ಮಾಡುತ್ತಿದ್ದೆ). ರಕ್ತದಲ್ಲಿ ನೀರಿನ ಅಂಶವನ್ನು ಕಾಪಾಡಲು ‘ಆಲ್ಬುಮಿನ್’ ಎಂಬ ಪ್ರೊಟೀನ್ ತಯಾರಿಸುತ್ತಿದ್ದೆ ಮತ್ತು ರಕ್ತಸ್ರಾವವನ್ನು ನಿಲ್ಲಿಸಲು ಕ್ಲಾಟಿಂಗ್ ಫ್ಯಾಕ್ಟರ್ಸ್ (ರಕ್ತ ಹೆಪ್ಪುಗಟ್ಟುವ ಅಂಶ) ಗಳನ್ನು ಸಿದ್ಧಪಡಿಸುತ್ತಿದ್ದೆ. ಅವನು ಊಟ ಮಾಡಲು ಮರೆತ ದಿನಗಳಂದು ಅವನಿಗೆ ಕಷ್ಟ ಆಗಬಾರದೆಂದು ಅವನಿಗಾಗಿ ನಾನು ಶಕ್ತಿಯನ್ನೂ ಕೂಡಿಡುತ್ತಿದ್ದೆ. ನಾನು ನಿಜಕ್ಕೂ ‘ಮಲ್ಟಿ-ಟಾಸ್ಕರ್’ (ಬಹುಮುಖಿ ಕೆಲಸಗಾರ) ಆಗಿದ್ದೆ.
ನಾನು: ನಿಮಗೆ ಹಾನಿಯಾಗಲು ಶುರುವಾದ ಮೇಲೂ ನೀವು ಹೇಗೆ ಕೆಲಸ ಮುಂದುವರಿಸಿದಿರಿ?
ಲಿವರ್: ಅವನು ನನ್ನ ಮನುಷ್ಯ. ನಾನು ಕೆಲಸ ನಿಲ್ಲಿಸಿದರೆ, ಅವನ ಜೀವವೂ ನಿಲ್ಲುತ್ತದೆ ಎಂದು ನನಗೆ ತಿಳಿದಿತ್ತು. ಕೊನೆಯ ಕೆಲವು ವರ್ಷಗಳಲ್ಲಿ, ದಿನನಿತ್ಯ ನನ್ನ ಲಕ್ಷಾಂತರ ಜೀವಕೋಶಗಳು ಸಾಯುತ್ತಿದ್ದಾಗಲೂ ನಾನು ಅದನ್ನು ಸರಿದೂಗಿಸಲು ಪ್ರಯತ್ನಿಸಿದೆ. ದೇಹದ ಕಲ್ಮಶಗಳನ್ನು (toxins) ಹೊರಹಾಕಲು ನಾನು ಬಹಳ ಕಷ್ಟಪಟ್ಟು ಕೆಲಸ ಮಾಡಿದೆ. ಇದೆಲ್ಲಾ ಅವನನ್ನು ಬದುಕಿಸಲು ನಾನು ಮಾಡಿದ ಹತಾಶ ಪ್ರಯತ್ನಗಳು.
ನಾನು: ಆಮೇಲೆ ಏನಾಯಿತು?
ಲಿವರ್: ನನ್ನ ಮೇಲಿನ ನಿರಂತರವಾದ ದಾಳಿ ಮುಂದುವರೆಯಿತು… ನೋಡಿ, ನನ್ನ ಬಳಿ ಒಂದು ವಿಶೇಷ ಶಕ್ತಿಯಿದೆ… ಮರುಹುಟ್ಟು (regeneration). ನಾನು ಎಷ್ಟೇ ಹಾನಿಯಾದರೂ ನನ್ನನ್ನು ನಾನು ಮರಳಿ ಬೆಳೆಸಿಕೊಳ್ಳಬಲ್ಲೆ. ಆದರೆ ಅದಕ್ಕೆ ಸಮಯ ಮತ್ತು ಶಕ್ತಿ ಬೇಕಾಗುತ್ತದೆ.
ಪ್ರತಿ ಬಾರಿ ಆಲ್ಕೋಹಾಲ್ ನಿಂದ ನನಗೆ ಹೊಡೆತ ಬಿದ್ದಾಗ, ನನಗೆ ಉರಿಯೂತ (inflammation) ಉಂಟಾಗುತ್ತಿತ್ತು. ನಾನು ಗುಣಮುಖನಾಗಲು ಪ್ರಯತ್ನಿಸುತ್ತಿದ್ದೆ, ಆದರೆ ಅದು ಮುಗಿಯುವ ಮುನ್ನವೇ ಮತ್ತೊಂದು ಬಾರಿ ಆಲ್ಕೋಹಾಲ್ ಬಂದು ಅಪ್ಪಳಿಸುತ್ತಿತ್ತು. ಕೊನೆಗೆ, ನನ್ನಲ್ಲಿ ಆರೋಗ್ಯಕರ ಜೀವಕೋಶಗಳೇ ಉಳಿಯಲಿಲ್ಲ. ಗಾಯದ ಕಲೆಗಳು… ನೀವು ‘ಸಿರೋಸಿಸ್’ (cirrhosis) ಎಂದು ಕರೆಯುತ್ತೀರಲ್ಲ… ಅದು ನನ್ನ ಆರೋಗ್ಯವನ್ನು ಮರಳಿ ಪಡೆಯಲು ನಾನು ಮಾಡಿದ ಕೊನೆಯ ಹೋರಾಟವಷ್ಟೇ. ಆದರೆ ಗಾಯದ ಕಲೆಗಳಿಂದ ರಕ್ತವನ್ನು ಶುದ್ಧ ಮಾಡಲು ಅಥವಾ ಬೇರೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಕೊನೆಗೆ, ನನ್ನ ಇಡೀ ವ್ಯವಸ್ಥೆಯೇ ಕುಸಿದುಬಿತ್ತು.
ನಾನು: ನೀವು ಮುಂಚಿತವಾಗಿಯೇ ಸಹಾಯಕ್ಕಾಗಿ ಏಕೆ ಸೂಚನೆ ಕೊಡಲಿಲ್ಲ?
ಲಿವರ್: ನನ್ನಂತಹ ಅಂಗಗಳ ದುರಂತವೇ ಅದು. ನಾವು ಮೌನವಾಗಿ ಕಷ್ಟಪಡುವವರು. ಗಮನ ಸೆಳೆಯಲು ಹೃದಯ ಬಡಿದುಕೊಳ್ಳುತ್ತದೆ, ಖಾಲಿಯಾದಾಗ ಹೊಟ್ಟೆ ಶಬ್ದ ಮಾಡುತ್ತದೆ, ಚರ್ಮದ ಮೇಲೆ ಸಣ್ಣ ಗೀರು ಅಥವಾ ಕಲೆ ಕೂಡ ಎದ್ದು ಕಾಣುತ್ತದೆ. ಆದರೆ ಲಿವರ್‌ಗಳಾದ ನಾವು? ನಾವು ಮೌನವಾಗಿಯೇ ನರಳುತ್ತೇವೆ.
ನಾನು ಜೋರಾಗಿ ಕಿರುಚುವವರೆಗೂ ನನಗೆ ಧ್ವನಿಯೇ ಇರುವುದಿಲ್ಲ. ಅವನ ಕಣ್ಣುಗಳನ್ನು ಕಾಮಾಲೆ (jaundice) ಯಿಂದ ಹಳದಿಯಾಗಿಸಿ, ಅವನ ಹೊಟ್ಟೆಯಲ್ಲಿ ನೀರು ತುಂಬುವಂತೆ ಮಾಡುವ ಹೊತ್ತಿಗೆ, ನಾನು ಸಂಪೂರ್ಣವಾಗಿ ಹಾಳಾಗಿದ್ದೆ ಮತ್ತು ಮೌನವಾಗಿ ವಿಫಲವಾಗುತ್ತಿದ್ದೆ. ನಾನು ಇನ್ನೂ ಮೊದಲೇ ಕೂಗಿ ಹೇಳುವಂತಹ ಅವಕಾಶ ನನಗೂ ಸಹಾ ಇರಬೇಕಿತ್ತು ಅನ್ನಿಸುತ್ತದೆ.
ನಾನು: ನಿಮಗೆ ಮುಜುಗರವೆನಿಸಿದಂತಹ ಯಾವುದಾದರೂ ಸಂದರ್ಭ ಇತ್ತೇ?
ಲಿವರ್: ಹೌದು, ಹಲವು ವರ್ಷಗಳ ಹಿಂದೆ, ಒಮ್ಮೆ ಅಲ್ಟ್ರಾಸೌಂಡ್ ಪರೀಕ್ಷೆಯ ಸಮಯದಲ್ಲಿ. ರೇಡಿಯಾಲಜಿಸ್ಟ್ ನನ್ನನ್ನು “ಫ್ಯಾಟಿ ಲಿವರ್” (fatty liver) ಎಂದು ಗುರುತಿಸಿದರು. ನನ್ನ ಜೀವಕೋಶಗಳಲ್ಲಿ ತುಂಬಿದ್ದ ಕೊಬ್ಬಿನಿಂದ ನನಗೆ ಉಸಿರುಗಟ್ಟಿದಂತೆ, ಭಾರವಾದಂತೆ ಅನಿಸಿತು. ಅದಕ್ಕೆ ಕೇವಲ ಆಲ್ಕೋಹಾಲ್ ಮಾತ್ರ ಕಾರಣವಾಗಿರಲಿಲ್ಲ… ಅವನ ಆಹಾರ ಮತ್ತು ಜೀವನಶೈಲಿ ಕೂಡ ಕಾರಣವಾಗಿತ್ತು. ನಾನು ತುಂಬಾ ನಿಧಾನಗತಿಯಿಂದ ಕೆಲಸ ಮಾಡುತ್ತಿದ್ದೆ. ಅದು ನನ್ನ ಬಗ್ಗೆಯ ಮೊದಲ ಎಚ್ಚರಿಕೆಯಾಗಿತ್ತು, ಸಹಾಯಕ್ಕಾಗಿ ನಾನು ಕೇಳಿಕೊಂಡ ಮೊದಲ ಮೌನ ಕೂಗಾಗಿತ್ತು. ಆದರೆ, ನಾನು ಯಾವುದೇ ನೋವನ್ನು ಉಂಟುಮಾಡದ ಕಾರಣ, ಎಲ್ಲರೂ ನನ್ನನ್ನು ನಿರ್ಲಕ್ಷಿಸಿದರು.
ನಾನು: ಮನುಷ್ಯರ ಪ್ರಸ್ತುತ ಜೀವನಶೈಲಿಯನ್ನು ನೋಡಿದಾಗ, ನಿಮಗೆ ಅತಿ ಹೆಚ್ಚು ಚಿಂತೆ ತರುವ ವಿಷಯ ಯಾವುದು?
ಲಿವರ್: ಇದು ಕೇವಲ ಆಲ್ಕೋಹಾಲ್‌ಗೆ ಸಂಬಂಧಿಸಿದ್ದು ಎಂದು ಜನರು ಭಾವಿಸುತ್ತಾರೆ, ಇದೇ ನನಗೆ ದೊಡ್ಡ ಚಿಂತೆಯ ವಿಷಯ! ಆಲ್ಕೋಹಾಲ್ ಒಂದು ದೊಡ್ಡ ಸಮಸ್ಯೆ ನಿಜ. ಆದರೆ ಅದು ‘ಮಾತ್ರ’ ಸಮಸ್ಯೆಯಲ್ಲ… ಬೊಜ್ಜು, ಅತಿಯಾದ ಸಕ್ಕರೆ ಮತ್ತು ಪ್ಯಾಕ್ ಮಾಡಿದ ಪ್ರೋಸೆಸ್ಡ್ ಆಹಾರಗಳ ಸೇವನೆಯಿಂದ ಉಂಟಾಗುವ “ಫ್ಯಾಟಿ ಲಿವರ್” ಎಂಬ ಹೊಸ ಸಾಂಕ್ರಾಮಿಕ ರೋಗವನ್ನು ನಾನು ನನ್ನ ಹಲವು ಲಿವರ್ ಬಂಧುಗಳಲ್ಲಿ ನೋಡುತ್ತಿದ್ದೇನೆ. ಆಲ್ಕೋಹಾಲ್‌ನ ಒಂದು ಹನಿಯನ್ನೂ ಮುಟ್ಟದ ಜನರಲ್ಲೂ, ಎಣ್ಣೆಯಲ್ಲಿ ಅದ್ದಿಟ್ಟ ದೊಡ್ಡ ಸ್ಪಂಜಿನಂತೆ ಕಾಣುವ ಲಿವರ್‌ಗಳನ್ನು ನಾನು ನೋಡುತ್ತಿದ್ದೇನೆ. ಜನರು ಇದನ್ನು ಆದಷ್ಟು ಬೇಗ ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ.
ಜನರು ತಮ್ಮ ಹೃದಯಕ್ಕೆ ನೀಡುವಷ್ಟೇ ಗೌರವವನ್ನು ಲಿವರುಗಳಿಗೂ ನೀಡುವ ಭವಿಷ್ಯವನ್ನು ನಾನು ನೋಡಲು ಕಾಯುತ್ತಿದ್ದೆ. ಲಿವರ್‌ಗಳಾದ ನಾವೂ ಕೂಡ ಆರೋಗ್ಯಕ್ಕೆ ಹೃದಯದಷ್ಟೇ ಪ್ರಮುಖ ಮತ್ತು ಸೂಕ್ಷ್ಮ.
ನಾನು: ಇನ್ನೂ ಸರಿಯಾಗಿ ಕೆಲಸ ಮಾಡುತ್ತಿರುವ ಲಿವರ್‌ಗಳ ಮಾಲೀಕರಿಗೆ (ಮನುಷ್ಯರಿಗೆ) ನೀವು ನೀಡುವ ಸಲಹೆ ಏನು?
ಲಿವರ್: ದಯವಿಟ್ಟು, ನಮ್ಮನ್ನು ಕೇವಲ ಫಿಲ್ಟರ್‌ನಂತೆ ನೋಡದೆ, ನಿಮ್ಮ ಸಂಗಾತಿಯಂತೆ ನೋಡಿಕೊಳ್ಳಿ.
- ಆಲ್ಕೋಹಾಲ್ ಒಂದು ವಿಷ. ಅದನ್ನು ಬಿಡಿ. ನಾನು ಒಮ್ಮೊಮ್ಮೆ ಸ್ವಲ್ಪ ಪ್ರಮಾಣದ ಆಲ್ಕೋಹಾಲ್ ಅನ್ನು ತಡೆದುಕೊಳ್ಳಬಲ್ಲೆ, ಆದರೆ ನನ್ನನ್ನು ದುರುಪಯೋಗಪಡಿಸಿಕೊಳ್ಳಬೇಡಿ.
- ಹೊಟ್ಟೆಯ ಬೊಜ್ಜು ನಮ್ಮ ಉಸಿರುಗಟ್ಟಿಸುತ್ತದೆ.
- ಕೊನೆಯ ಹಂತದವರೆಗೂ ನನಗೆ ನೋವಿನ ಅರಿವೇ ಇರುವುದಿಲ್ಲವಾದ್ದರಿಂದ, ದಯವಿಟ್ಟು ರಕ್ತ ಪರೀಕ್ಷೆ (LFT) ಮತ್ತು ಅಲ್ಟ್ರಾಸೌಂಡ್ ಮೂಲಕ ನನ್ನನ್ನು ಪರೀಕ್ಷಿಸುತ್ತಿರಿ. ನನ್ನ ಧ್ವನಿಯನ್ನು ಕೇಳಲು ಇರುವ ಒಂದೇ ದಾರಿ ಅದು.
ನಾನು: ಕೊನೆಯದಾಗಿ, ಕೆಲವು ರೋಗಿಗಳು ನನ್ನನ್ನು “ಲಿವರ್ ಡಿಟಾಕ್ಸ್” (liver detox) ಸಪ್ಲಿಮೆಂಟ್‌ಗಳ ಬಗ್ಗೆ ಕೇಳುತ್ತಾರೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲಿವರ್: (ದೀರ್ಘ ನಿಟ್ಟುಸಿರು ಬಿಡುತ್ತಾ) ದಯವಿಟ್ಟು, ಬೇಡ. ನಾನೇ ಒಂದು ಮೂಲ ಡಿಟಾಕ್ಸ್ (ವಿಷಕಾರಿ ಅಂಶಗಳನ್ನು ತೆಗೆಯುವ) ಅಂಗ. ಆ “ಡಿಟಾಕ್ಸ್” ಕೆಲಸಕ್ಕಾಗಿಯೇ ನಿಸರ್ಗ ಲಿವರುಗಳನ್ನು ಅತ್ಯದ್ಭುತವಾಗಿ ಸೃಷ್ಟಿಸಿದೆ. ನನಗೆ ದುಬಾರಿ ಗಿಡಮೂಲಿಕೆಗಳ ಟಾನಿಕ್ ಅಥವಾ ಕ್ಲೆನ್ಸರ್‌ಗಳ ಅಗತ್ಯವಿಲ್ಲ… ಅವು ಕೆಲವೊಮ್ಮೆ ನನ್ನ ರಾಸಾಯನಿಕ ಕೆಲಸದ ಭಾರವನ್ನು ಹೆಚ್ಚು ಮಾಡುತ್ತವೆ ಅಥವಾ ಔಷಧಿಗಳಿಂದಾಗುವ ಹಾನಿಗೂ (drug-induced liver injury – DILI) ಕಾರಣವಾಗಬಹುದು.
ನನಗೆ ಬೇಕಾದ ಏಕೈಕ “ಡಿಟಾಕ್ಸ್” ಎಂದರೆ, ನೀವು ನಿಮ್ಮ ದೇಹಕ್ಕೆ ಕಲ್ಮಶಗಳನ್ನು (ವಿಷಕಾರಿ ವಸ್ತುಗಳನ್ನು) ಹಾಕುವುದನ್ನು ನಿಲ್ಲಿಸುವುದು.
ನನಗೆ ಸ್ವಚ್ಛವಾದ ಇಂಧನವನ್ನು (ಒಳ್ಳೆಯ ಆಹಾರ) ನೀಡಿ, ನನ್ನನ್ನು ಫಿಟ್ ಆಗಿ ಇಟ್ಟುಕೊಳ್ಳಿ, ಉಳಿದದ್ದನ್ನು ನಾನು ನೋಡಿಕೊಳ್ಳುತ್ತೇನೆ.
ನಾನು: ಧನ್ಯವಾದಗಳು. ದಯವಿಟ್ಟು ಈಗ ವಿಶ್ರಾಂತಿ ಪಡೆಯಿರಿ.
…
ಪ್ರಮುಖ ಅಂಶಗಳು: ನಿಮ್ಮ ಲಿವರ್ ಮಾತನ್ನು ಆಲಿಸಿ
- ಮೌನವಾಗಿ ಕಷ್ಟಪಡುವ ಅಂಗ: ಲಿವರ್‌ಗೆ ನೋವಿನ ಅರಿವು ಇರುವುದಿಲ್ಲ. ಹಾನಿ ಗಂಭೀರ ಹಂತ ತಲುಪುವವರೆಗೂ ಅದು ನೋವು ನೀಡುವುದಿಲ್ಲ. ನೋವು ಬರುವವರೆಗೆ ಕಾಯಬೇಡಿ.
- ನಿಜವಾದ ಶತ್ರುಗಳು: ಆಲ್ಕೋಹಾಲ್ ನೇರವಾಗಿ ಲಿವರ್‌ಗೆ ವಿಷವಿದ್ದಂತೆ. ಆದರೆ ಬೊಜ್ಜು ಮತ್ತು ಅತಿಯಾದ ಸಕ್ಕರೆಯಿಂದ ಬರುವ ‘ಫ್ಯಾಟಿ ಲಿವರ್’ ಕೂಡ ಅಷ್ಟೇ ಅಪಾಯಕಾರಿ.
- ಆರಂಭಿಕ ಪತ್ತೆ ಬಹಳ ಮುಖ್ಯ: ದೈಹಿಕ ಲಕ್ಷಣಗಳು ಬಹಳ ತಡವಾಗಿ ಕಾಣಿಸಿಕೊಳ್ಳುವುದರಿಂದ, ನಿಯಮಿತ ರಕ್ತ ಪರೀಕ್ಷೆ (LFT) ಮತ್ತು ಅಲ್ಟ್ರಾಸೌಂಡ್ ಮಾಡಿಸುವುದೊಂದೇ ಲಿವರ್ ಕಾಯಿಲೆಯನ್ನು ಬೇಗ ಪತ್ತೆ ಹಚ್ಚುವ ದಾರಿ.
- “ಡಿಟಾಕ್ಸ್” ಔಷಧಿಗಳನ್ನು ನಂಬಬೇಡಿ: ನಿಮ್ಮ ಲಿವರ್ ದೈನಂದಿನ ಡಿಟಾಕ್ಸ್ ಕೆಲಸವನ್ನು ತಾನೇ ಮಾಡುತ್ತದೆ. ಅದಕ್ಕೆ ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸಪ್ಲಿಮೆಂಟ್‌ಗಳ ಅಗತ್ಯವಿಲ್ಲ; ಇವು ಕೆಲವೊಮ್ಮೆ ಹಾನಿ ಮಾಡಬಹುದು. ಉತ್ತಮ ಆಹಾರ ಮತ್ತು ಆಲ್ಕೋಹಾಲ್ ತ್ಯಜಿಸುವುದೇ ನಿಜವಾದ ಡಿಟಾಕ್ಸ್.
- ಪುನರುತ್ಪಾದನೆಗೂ ಮಿತಿಯಿದೆ: ಲಿವರ್ ಎಷ್ಟೇ ಬಲವಾಗಿದ್ದರೂ ಅದು ಅವಿನಾಶಿಯಲ್ಲ. ನಿರಂತರವಾದ ಹಾನಿಯಿಂದ ಶಾಶ್ವತ ಗಾಯದ ಕಲೆಗಳು (cirrhosis) ಮೂಡುತ್ತವೆ, ಇದನ್ನು ಆಮೇಲೆ ಸರಿಪಡಿಸಲು ಸಾಧ್ಯವಿಲ್ಲ.
…
Here is the English version of this interview: https://mediscuss.org/the-liver-dialogue-interview-damaged-liver/
Dr. Shashikiran Umakanth (MBBS, MD, FRCP Edin.) is the Professor & Head of Internal Medicine at Dr. TMA Pai Hospital, Udupi, under the Manipal Academy of Higher Education (MAHE). While he has contributed to nearly 100 scientific publications in the academic world, he writes on MEDiscuss out of a passion to simplify complex medical science for public awareness.


