ಯುವಜನರಲ್ಲಿ ಹಠಾತ್ ಸಾವುಗಳು: ನಿಜವಾದ ಕಾರಣವೇನು?

ಯುವಜನರ ಹಠಾತ್ ಸಾವುಗಳಿಗೆ ಕೋವಿಡ್ ಲಸಿಕೆ ಕಾರಣವೇ? ಐಸಿಎಂಆರ್ ಮತ್ತು ಇಂಗ್ಲೆಂಡಿನ ಅಧ್ಯಯನಗಳು ಏನು ಹೇಳುತ್ತವೆ, ಮತ್ತು ಈ ಸಾವುಗಳ ಹಿಂದಿನ ನಿಜವಾದ ಕಾರಣಗಳು.

ಯುವಜನರಲ್ಲಿ ಹಠಾತ್ ಸಾವುಗಳು: ನಿಜವಾದ ಕಾರಣವೇನು?

ಈ ಲೇಖನ ವಿಶ್ವವಾಣಿ ದಿನಪತ್ರಿಕೆಯಲ್ಲಿ 2025ರ ಜುಲೈ 6ರಂದು ಪ್ರಕಟವಾಗಿದೆ. Read this article in English

ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಹಠಾತ್ ಸಾವುಗಳು, ಅದರಲ್ಲೂ ಹೃದಯ ಸಂಬಂಧಿತ ಸಾವುಗಳು, ಹೆಚ್ಚಾಗುತ್ತಿವೆ ಎಂಬ ಭಾವನೆ ವ್ಯಾಪಕವಾಗಿದೆ. ಹಲವರು ಕೋವಿಡ್-19 ಲಸಿಕೆಯೇ ಇದಕ್ಕೆ ಕಾರಣ ಎಂದು ನಂಬುತ್ತಾರೆ. ಈ ಹಠಾತ್ ಸಾವುಗಳ ಹಿಂದಿನ ನಿರ್ದಿಷ್ಟವಾದ ಕಾರಣಗಳನ್ನು ಕೂಲಂಕುಷವಾಗಿ ವಿಮರ್ಶೆ ಹಾಗೂ ವಿಶ್ಲೇಷಣೆ ಮಾಡುವುದೇ ಈ ಲೇಖನದ ಉದ್ದೇಶ.

ಯುವಜನರಲ್ಲಿ ಕಾಣುತ್ತಿರುವ ಈ ಏಕಾಏಕಿ ಸಾವುಗಳು ಹೊಸದಾಗಿ ಶುರುವಾಗಿವೆಯೇ? ಇವು ಹಿಂದೆ ಸಹ ಆಗುತ್ತಿದ್ದು ಈಗ ಹೆಚ್ಚಾಗಿದೆಯೇ? ಅಥವಾ ನಾವು ಈಗ ಅವುಗಳನ್ನು ಹೆಚ್ಚು ಗಮನಿಸುತ್ತಿರುವುದರಿಂದ ಅವು ಹೆಚ್ಚಾಗಿ ಕಾಣಿಸುತ್ತಿವೆಯೇ? ನಿಜವಾಗಲೂ ಹೆಚ್ಚಾಗಿದರೆ, ಕಾರಣಗಳೇನು? ನಾವೇ ಹೆಚ್ಚು ಗಮನಿಸುತ್ತಿದ್ದೇವೆಂದರೆ ಅದಕ್ಕೆ ಕಾರಣಗಳೇನು? ನಿಜವಾದ ಸತ್ಯವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಲು ಪ್ರಯತ್ನ ಮಾಡೋಣ.

ಆದರೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಡುವುದಕ್ಕೆ ಮೊದಲು ಎಲ್ಲರ ಮನಸ್ಸಿನಲ್ಲಿರುವ ಅತೀ ದೊಡ್ಡ ಪ್ರಶ್ನೆಯಾದ ಕೋವಿಡ್-19 ಲಸಿಕೆಯ ವಿಚಾರವನ್ನು ತೆಗೆದುಕೊಂಡು ವಿಮರ್ಶೆ ಮಾಡೋಣ. ಸಾಮಾಜಿಕ ಮಾಧ್ಯಮಗಳಲ್ಲಿ ಹಲವಾರು ಪ್ರಭಾವಿ ವ್ಯಕ್ತಿಗಳು (influencers) ಯುವಜನರ ಹಠಾತ್ ಸಾವುಗಳಿಗೆ ಕೋವಿಡ್ -19 ಲಸಿಕೆಯೇ ಕಾರಣ ಎಂದು ಹಂಚಿಕೊಳ್ಳುತ್ತಿದ್ದಾರೆ. ಅನೇಕ ಜನರು ವೈಜ್ಞಾನಿಕ ಸಾಕ್ಷ್ಯಾಧಾರಗಳನ್ನು ಪರೀಕ್ಷಿಸದೇ ಇದನ್ನು ನಂಬುತ್ತಲೂ ಇದ್ದಾರೆ. ಸತ್ಯವೇನು?

ಕೋವಿಡ್ -19 ಲಸಿಕೆಗಳಿಗೂ ಹಠಾತ್ ಸಾವುಗಳಿಗೂ ಸಂಬಂಧವೇನು?

ಈ ವಿಚಾರದ ಬಗ್ಗೆ ಭಾರತದಲ್ಲಿ ಹಾಗೂ ಹೊರದೇಶಗಳಲ್ಲಿ ಹಲವಾರು ಸಂಶೋಧನೆಗಳು ನಡೆದಿವೆ. ಈ ಸಂಶೋಧನೆಗಳು ವೈದ್ಯಕೀಯ ಸಂಶೋಧನಾ ಪತ್ರಿಕೆಗಳಲ್ಲಿ ಪ್ರಕಟವಾದರೂ ಸಹಾ ಕಾರಣಾಂತರಗಳಿಂದ ಸಾಧಾರಣ ಜನರಿಗೆ ತಲುಪುವ ಪ್ರಚಲಿತ ಮಾಧ್ಯಮಗಳಲ್ಲಿ ಪ್ರಮುಖವಾಗಿ ಪ್ರಕಟವಾಗಿಲ್ಲ. ಅಂತಹಾ ನೂರಾರು ಅಧ್ಯಯನಗಳಲ್ಲಿ, ಎರಡು ಮಹತ್ವದ ಅಧ್ಯಯನಗಳನ್ನು ಇಲ್ಲಿ ಪರಿಗಣಿಸಿ ನೋಡೋಣ.

ಭಾರತದಲ್ಲಿ ಇಂತಹ ಅತಿ ದೊಡ್ಡ ಅಧ್ಯಯನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (Indian Council of Medical Research – ICMR) ನೆರವಿನಿಂದ ಅಕ್ಟೋಬರ್ 2021 ರಿಂದ ಮಾರ್ಚ್ 2023ರ ವರೆಗೆ ನಡೆಸಿ, 2023ರಲ್ಲಿಯೇ Indian Journal of Medical Research (IJMR) ನಲ್ಲಿ ಪ್ರಕಟಣೆ ಮಾಡಲಾಗಿತ್ತು. ಈ ಅಧ್ಯಯನವು, 18 ರಿಂದ 45 ವರ್ಷದೊಳಗಿನ ಯುವಜನರಲ್ಲಿ ಹಠಾತ್ ಸಂಭವಿಸುವ ಹೃದಯ ಸಂಬಂಧಿತ ಸಾವುಗಳಿಗೆ ಕೋವಿಡ್-19 ಲಸಿಕೆಯ ಸಂಬಂಧವಿದೆಯೇ ಎಂಬುದನ್ನು ಪರೀಕ್ಷಿಸಿತು.

ಇದು ಭಾರತದ 47 ಪ್ರಮುಖ ಆಸ್ಪತ್ರೆಗಳ ಸಹಭಾಗಿತ್ವದಲ್ಲಿ 68 ಸಂಶೋಧಕರು ನಡೆಸಿದ ಕೇಸ್-ಕಂಟ್ರೋಲ್ ಅಧ್ಯಯನ. ಅನಿರ್ದಿಷ್ಟ ಕಾರಣಗಳಿಂದ ಹಠಾತ ಸಾವು ಸಂಭವಿಸಿದ 729 ಯುವಜನರ ಪ್ರಕರಣಗಳನ್ನು ಅಧ್ಯಯನದಲ್ಲಿ ಸೇರಿಸಿಕೊಂಡದ್ದಲ್ಲದೇ, ಪ್ರಕರಣಗಳಿಗೆ ಹೋಲಿಕೆಯಾಗುವಂತಹ ಗುಣಲಕ್ಷಣಗಳಿದ್ದ, ಆದರೆ ಮರಣ ಹೊಂದಿಲ್ಲದ 2,916 ಕಂಟ್ರೋಲ್ (ನಿಯಂತ್ರಣ ಗುಂಪು) ವ್ಯಕ್ತಿಗಳನ್ನೂ ಒಳಗೊಂಡಿತ್ತು.

ಸಮಗ್ರ ಸಂದರ್ಶನಗಳು ಹಾಗೂ ಮಾಹಿತಿ ಸಂಗ್ರಹ ಮಾಡಿದ ನಂತರ ಈ ಅಧ್ಯಯನದಲ್ಲಿ ಕಂಡುಬಂದ ಮಹತ್ವದ ಮಾಹಿತಿಯೆಂದರೆ – ಲಸಿಕೆ ಪಡೆದವರಲ್ಲಿ ಹಠಾತ್ ಮರಣ ಆಗುವ ಸಾಧ್ಯತೆ ಕಡಿಮೆಯಿತ್ತು.

ಐಸಿಎಂಆರ್ ಅಧ್ಯಯನದ ಫಲಿತಾಂಶ

ಈ IJMR ಅಧ್ಯಯನದ ಪ್ರಕಾರ, ಲಸಿಕೆ ಪಡೆಯದವರನ್ನು ಹೋಲಿಸಿದರೆ, ಒಂದು ಡೋಸ್ ಲಸಿಕೆ ಪಡೆದವರಲ್ಲಿ ಸಾವಿನ ಅಪಾಯದ ಗಮನಾರ್ಹ ವ್ಯತ್ಯಾಸ ಕಂಡುಬರದಿದ್ದರೂ (ಅಪಾಯದ ಹೋಲಿಕೆ ಪ್ರಮಾಣ aOR ≈ 1), ಎರಡು ಡೋಸ್ ಪಡೆದವರಲ್ಲಿ ಈ ಅಪಾಯ ಶೇ. 49 ಕಡಿಮೆಯಾಗಿತ್ತು (ಅಪಾಯದ ಹೋಲಿಕೆ ಪ್ರಮಾಣ aOR = 0.51).

ಮೂರು ಡೋಸ್ ಪಡೆದವರ ಸಂಖ್ಯೆಯೇ ಕಡಿಮೆಯಿದ್ದುದರಿಂದ, ಸಾಂಖ್ಯಿಕ ಮಹತ್ವವಿಲ್ಲದೇ ಅದರ ಬಗ್ಗೆ ಪ್ರತ್ಯೇಕವಾಗಿ ಅಂಕಿ-ಅಂಶ ನೀಡಲಾಗಲಿಲ್ಲ.

ಹಾಗಾದರೆ ಯಾರಲ್ಲಿ ಈ ಸಾಧ್ಯತೆ ಹೆಚ್ಚಾಗಿತ್ತು?

ಆಸ್ಪತ್ರೆಯಲ್ಲಿ ದಾಖಲಾಗುವಷ್ಟು ಕೋವಿಡ್ ಸೋಂಕು ಇತ್ತೀಚೆಗೆ ಆಗಿದ್ದವರಲ್ಲಿ, ಧೂಮಪಾನ ಚಟವಿರುವವರಲ್ಲಿ, ಮರಣಕ್ಕೆ ಮೊದಲು 48 ಗಂಟೆಗಳ ಒಳಗೆ ಅತಿಯಾಗಿ ಮದ್ಯಪಾನ ಮಾಡಿದ್ದವರಲ್ಲಿ, ಮರಣಕ್ಕೆ ಮೊದಲು 48 ಗಂಟೆಗಳ ಒಳಗೆ ಭಾರೀ ದೈಹಿಕ ವ್ಯಾಯಾಮ ಮಾಡಿದ್ದವರಲ್ಲಿ, ಹಾಗೂ ಕುಟುಂಬದ ಇತರರಲ್ಲಿ ಹೃದಯ ರೋಗದ ಇತಿಹಾಸವಿದ್ದವರಲ್ಲಿ ಈ ಸಾಧ್ಯತೆ ಹೆಚ್ಚು ಕಂಡಿತ್ತು.

ಈ ಅಧ್ಯಯನದ ಅಂತಿಮ ನಿರ್ಣಯ

ಕೋವಿಡ್ ಲಸಿಕೆ ಹಠಾತ್ ಸಾವುಗಳಿಗೆ ಕಾರಣವಲ್ಲ; ವಾಸ್ತವವಾಗಿ, ಕೋವಿಡ್ ಲಸಿಕೆ ಪಡೆದವರು ಹಠಾತ್ ಸಾವಿಗೆ ಗುರಿಯಾಗುವ ಸಾಧ್ಯತೆ ಕಡಿಮೆಯೇ ಕಂಡಿದ್ದು, ಎರಡು ಡೋಸ್‌ಗಳು ಒಂದಕ್ಕಿಂತ ಹೆಚ್ಚಿನ ರಕ್ಷಣೆ ನೀಡಿದ್ದವು ಎನ್ನುವುದು ಗಮನಾರ್ಹ.

ಅಂತರರಾಷ್ಟ್ರೀಯ ಮಟ್ಟದಲ್ಲಿ ನೋಡುವುದಾದರೆ, ಇಂಗ್ಲೆಂಡಿನಲ್ಲಿ ಸುಮಾರು 4.6 ಕೋಟಿ ಜನರ ಆರೋಗ್ಯ ದಾಖಲೆಗಳನ್ನು ಆಧರಿಸಿ ಒಂದು ಮಹತ್ವದ ಅಧ್ಯಯನ ನಡೆಸಲಾಯಿತು. ಈ ಅಧ್ಯಯನದಲ್ಲಿ ಡಿಸೆಂಬರ್ 2020 ರಿಂದ ಜನವರಿ 2022ರ ನಡುವಿನ ಅವಧಿಯಲ್ಲಿ ಲಸಿಕೆ ಪಡೆದ ನಂತರ ಹೃದಯಾಘಾತ, ಸ್ಟ್ರೋಕ್ ಮತ್ತು ರಕ್ತಗಟ್ಟಿಕೆಯಾಗುವ ಘಟನೆಗಳು ಹೆಚ್ಚಾಗಿದ್ದವೇ ಎಂಬುದನ್ನು ಪರಿಶೀಲಿಸಲಾಯಿತು. ಇವರೆಲ್ಲರ ಆಸ್ಪತ್ರೆ ದಾಖಲೆಗಳನ್ನು ಬಳಸಿ ಲಸಿಕೆ ನೀಡುವ ಮೊದಲು ಮತ್ತು ನಂತರ ಉಂಟಾದ ಹೃದಯ ಸಂಬಂಧಿ ಸಮಸ್ಯೆಗಳ ಪ್ರಮಾಣವನ್ನು ಹೋಲಿಸಲಾಯಿತು.

ಇಂಗ್ಲೆಂಡಿನ ಅಧ್ಯಯನದ ಫಲಿತಾಂಶ

ಇದರ ಫಲಿತಾಂಶದ ಪ್ರಕಾರ, ಲಸಿಕೆ ಪಡೆದ ನಂತರ ಹೃದಯಾಘಾತ ಮತ್ತು ಮಿದುಳಿನ ಆಘಾತ (stroke) ಸಂಭವಿಸುವ ಅಪಾಯ ಕಡಿಮೆಯೇ ಕಂಡಿತು.

  • ಮೊದಲ ಡೋಸ್ ನಂತರ 13–24 ವಾರಗಳಲ್ಲಿ ಹೃದಯಾಘಾತ-ಸ್ತ್ರೋಕ್ ಅಪಾಯ ಸುಮಾರು ಶೇ. 10 ಕಡಿಮೆಯಾಗಿ ಕಂಡುಬಂದಿತು
  • ಎರಡನೇ ಡೋಸ್ ನಂತರ ಅಸ್ಸ್ಟ್ರೋಜೆನೇಕಾ ಲಸಿಕೆ ತೆಗೆದುಕೊಂಡವರಲ್ಲಿ ಶೇ. 27, ಫೈಸರ್ ಲಸಿಕೆ ತೆಗೆದುಕೊಂಡವರಲ್ಲಿ ಶೇ. 20 ಕಡಿಮೆ ಕಂಡುಬಂದಿತು.

ಫೈಸರ್/ಮೋಡರ್ನಾ ಲಸಿಕೆ ಪಡೆದ ಕೆಲವರಲ್ಲಿ ಅಪರೂಪವಾಗಿ ಹೃದಯದ ಉರಿಯೂತ (myocarditis) ಅಥವಾ ರಕ್ತದ ಗಟ್ಟಿಯಾಗುವಿಕೆ ಸಮಸ್ಯೆ ಕಂಡುಬಂದರೂ, ಅವು ತುಂಬಾ ಕಡಿಮೆ ಪ್ರಮಾಣದಲ್ಲಿದ್ದು, ಲಸಿಕೆಯಿಂದ ಉಂಟಾಗುವ ಒಟ್ಟು ಲಾಭಗಳನ್ನು ಈ ಅಪಾಯಗಳು ಮೀರಲಿಲ್ಲ.

ಸಂಶೋಧಕರ ಅಂತಿಮ ತೀರ್ಮಾನ: ಕೋವಿಡ್ ಲಸಿಕೆಗಳು ಹೃದಯದ ಅಪಾಯವನ್ನು ಹೆಚ್ಚಿಸಲಿಲ್ಲ; ಬಹುತೇಕ ಜನರಲ್ಲಿ ಅವು ಹೃದಯದ ಅಪಾಯವನ್ನು ಕಡಿಮೆ ಮಾಡಿವೆ.

ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯುತ್ತಲೇ ಇವೆ. ವಿಜ್ಞಾನವು ನಿರಂತರವಾದ ಪ್ರಕ್ರಿಯೆ. ಸಮಯ ಮತ್ತು ಹೆಚ್ಚಿನ ಅಂಕಿ-ಅಂಶಗಳೊಂದಿಗೆ ನಮ್ಮ ತಿಳುವಳಿಕೆ ಸಹಾ ಬೆಳೆಯುತ್ತದೆ.

ಹಾಗಾದರೆ ಜನರು ಲಸಿಕೆಯ ಬಗ್ಗೆ ಶಂಕೆ ಪಡುತ್ತಿರುವುದು ಯಾಕೆ?

ಸಾಂಕ್ರಾಮಿಕದ ಸಮಯದಲ್ಲಿ ಸಾರ್ವಜನಿಕವಾಗಿ ನೀಡಲಾಗುತ್ತಿದ್ದ ಮಾಹಿತಿಯಲ್ಲಿ ವಿಶ್ವ ಮಟ್ಟದಲ್ಲಿ ಗೊಂದಲವಿತ್ತು. ಸಾಂಕ್ರಾಮಿಕ ಮುಂದುವರಿದು ಬದಲಾದಂತೆ ನಿಯಮಗಳು ಸಹಾ ಬದಲಾಗುತ್ತಾ ಹೋದವು. ಜನರ ಪ್ರಶ್ನೆಗಳಿಗೆ ಉತ್ತರ ಸಿಗದೇ ಇದ್ದಾಗ ಸರಕಾರಗಳ ನಿಲುವು ಶಂಕೆ ಹುಟ್ಟಿಸಿತು. ಅಪರೂಪದ ಲಸಿಕೆ ಸಂಬಂಧಿತ ಪರಿಣಾಮಗಳ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳದೇ ಇದ್ದುದರಿಂದ ಜನ “ಏನೋ ಮರೆಮಾಚಲಾಗುತ್ತಿದೆ” ಎಂಬ ಭಾವನೆಯನ್ನು ಹೊಂದಿದರು. ಜನರು ವಿಜ್ಞಾನವನ್ನು ದ್ವೇಷಿಸದಿದ್ದರೂ, ಸ್ಪಷ್ಟತೆ ಕೊಡದಿರುವ ಸರಕಾರಗಳನ್ನು ಅಥವಾ ಸಂಸ್ಥೆಗಳನ್ನು ನಂಬಲಿಲ್ಲ.

ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ, ಪ್ರಪಂಚದಾದ್ಯಂತ ನಿರಂತರವಾಗಿ ಬದಲಾಗುತ್ತಿದ್ದ ಪರಿಸ್ಥಿತಿಗೆ ಅನುಗುಣವಾಗಿ ನಿಯಮಗಳು ಬದಲಾಗುತ್ತಿದ್ದವು. ಜನರು ಅದನ್ನು ‘ಇವರಿಗೆ ಏನು ಮಾಡಬೇಕೆಂದು ಗೊತ್ತೇ ಇಲ್ಲ’ ಎಂದು ಅರ್ಥೈಸಿದರು. ಜನರ ಪ್ರಶ್ನೆಗಳಿಗೆ ಸೂಕ್ತ ಉತ್ತರ ಸಿಗದೇ ಇದ್ದಾಗ ಸರಕಾರಗಳ ಹಾಗೂ ಸಂಸ್ಥೆಗಳ ನಿಲುವು ಶಂಕೆ ಹುಟ್ಟಿಸಿತು. ಸಾಂಕ್ರಾಮಿಕ ಶುರುವಾಗಿ ಒಂದು ವರ್ಷದ ಒಳಗೇ ಲಸಿಕೆಗಳನ್ನು ದಾಖಲೆಯ ವೇಗದಲ್ಲಿ ಬಿಡುಗಡೆ ಮಾಡಲಾಯಿತು. ಅದೊಂದು ವಿಜ್ಞಾನದ ಅದ್ಭುತವಾಗಿದ್ದರೂ ಸಹಾ, ಅದನ್ನು ಪ್ರಶಂಸಿಸುವ ಬದಲಾಗಿ ಕೆಲವರು ಇದನ್ನು ವ್ಯವಹಾರಕ್ಕಾಗಿ ಮಾಡಿದ ಆತುರದ ಅನುಮೋದನೆ ಎಂದು ಟೀಕಿಸಿದರು. ಲಸಿಕೆಯ ಅಡ್ಡಪರಿಣಾಮಗಳು ಅಪರೂಪವಾಗಿದ್ದರೂ ಸಹಾ, ಅವುಗಳ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿ ಹಂಚಿಕೊಳ್ಳದೇ ಇದ್ದುದರಿಂದ ಜನ “ಏನೋ ಮರೆಮಾಚಲಾಗುತ್ತಿದೆ” ಎಂಬ ಭಾವನೆಯನ್ನು ಹೊಂದಿದರು. ವಿಜ್ಞಾನವನ್ನು ದ್ವೇಷಿಸದಿದ್ದರೂ ಸಹಾ, ಜನರು ಹಲವಾರು ಸರಕಾರಗಳನ್ನು ಅಥವಾ ಸಂಸ್ಥೆಗಳನ್ನು ನಂಬಲಿಲ್ಲ.

ಸಾಮಾಜಿಕ ಮಾಧ್ಯಮಗಳಲ್ಲಿ ಬರುವ ಒಬ್ಬ ವ್ಯಕ್ತಿಯ ಸಾವಿನ ಕಥೆ ಹಾಗೂ ವೈಯಕ್ತಿಕ ಅನಿಸಿಕೆಯ ಆಧಾರದಲ್ಲಿ ಹಂಚಿಕೊಂಡ ಅನುಭವಗಳು, ವೈದ್ಯಕೀಯ ಸಂಶೋಧನಾ ಪತ್ರಿಕೆಗಳಲ್ಲಿ ಬರುವ ವಿಶ್ವಾಸಾರ್ಹ ಅಂಕಿ–ಅಂಶಗಳಿಗಿಂತ ಹೆಚ್ಚು ಪ್ರಭಾವ ಬೀರಿದವು.

ಇದಕ್ಕೆ ಪೂರಕವಾಗಿ, ಲಸಿಕೆ ವಿರುದ್ಧ ಧೋರಣೆ ಹೊಂದಿರುವ ಕೆಲವು ಲಸಿಕೆ-ವಿರೋಧಿ (anti-vaxxers) ಸಂಘಟನೆಗಳು ಹಾಗೂ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ತಪ್ಪು ಮಾಹಿತಿಯಿರುವ ವೀಡಿಯೋಗಳನ್ನು ಹಾಗೂ ಷಡ್ಯಂತ್ರ ಸಿದ್ಧಾಂತಗಳ ಕಟ್ಟುಕತೆಗಳನ್ನು ನಿರಂತರವಾಗಿ ಹರಡುತ್ತಿದ್ದರಿಂದ ಶಂಕೆ ಇನ್ನಷ್ಟು ಗಂಭೀರವಾಯಿತು. ಇವರು ಬೇಕೆಂದೇ ಭಯ ಹುಟ್ಟಿಸುವ ಮಾಹಿತಿಯನ್ನು ಹರಡಿ, ಲಸಿಕೆಗಳನ್ನು ಅನುಮೋದಿಸಿದ ವೈದ್ಯರು, ವಿಜ್ಞಾನಿಗಳು ಮತ್ತು ಸಂಸ್ಥೆಗಳ ಮೇಲೆ ಜನರಲ್ಲಿ ಅನುಮಾನ ಉಂಟುಮಾಡಿದರು. ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಲ್ಪಟ್ಟ ಇಂತಹ ಮಾಹಿತಿಗಳನ್ನು ನೋಡಿ ಕೆಲವರು ಲಸಿಕೆಯನ್ನು ದೂಷಿಸಲು ಆರಂಭಿಸಿದರು.

ಅದಲ್ಲದೇ, ಮರಣ ಹೊಂದಿದ ವ್ಯಕ್ತಿಗಳ ಆರೋಗ್ಯದ ಬಗ್ಗೆ ಸಂಪೂರ್ಣ ಚಿತ್ರ ಬಹಿರಂಗವಾಗಿ ಗೊತ್ತಾಗುತ್ತಿರಲಿಲ್ಲ. ಅಂತಹ ವ್ಯಕ್ತಿಗಳ ವೈಯಕ್ತಿಕ ವಿವರಗಳು, ಕುಟುಂಬದ ಹೃದಯ ಕಾಯಿಲೆಗಳ ಇತಿಹಾಸ, ಅಭ್ಯಾಸಗಳು (ಧೂಮಪಾನ, ಮದ್ಯಪಾನ ಮತ್ತು ಮಾದಕ ದ್ರವ್ಯ ಸೇವನೆಯಂತಹವು) ಮತ್ತು ಜೀವನಶೈಲಿಯನ್ನು ಸಾರ್ವಜನಿಕವಾಗಿ ಚರ್ಚಿಸಲಾಗಲಿಲ್ಲ. ಅಂತಹ ಚರ್ಚೆ ಸಾವಿನ ಸಮಯದಲ್ಲಿ ಅಗೌರವವೆಂದು ಪರಿಗಣಿಸಬಹುದಾಗಿದ್ದರಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಇಂತಹ ಸಂದರ್ಭದಲ್ಲಿ ವೈದ್ಯರು ಮತ್ತು ವಿಜ್ಞಾನಿಗಳು ತಮ್ಮ ಹಾಗೂ ಲಸಿಕೆಗಳ ಪ್ರತಿಷ್ಠೆಯನ್ನು ರಕ್ಷಿಸಲು ಅದನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದು ಕೆಲವರು ಭಾವಿಸಬಹುದು. ಆದರೆ, ಸಾಂಕ್ರಾಮಿಕದ ಸಮಯದಲ್ಲಿ ಲಸಿಕೆಗಳು ಜೀವ ಉಳಿಸುವವು ಎಂದು ಸಾಬೀತಾಗಿದ್ದರಿಂದ ಮಾತ್ರ, ಹಾಗೂ ಸಾಂಕ್ರಾಮಿಕವನ್ನು ನೇರವಾಗಿ ಎದುರಿಸಲೇಬೇಕಿದ್ದರಿಂದ ವೈದ್ಯರು ಲಸಿಕೆಗಳನ್ನು ತೆಗೆದುಕೊಳ್ಳಲು ಸಲಹೆ ಮಾಡಿದ್ದಷ್ಟೇ ಅಲ್ಲದೇ, ಅವರೆಲ್ಲರೂ ಸಹಾ ತೆಗೆದುಕೊಂಡರು.

ವೈದ್ಯರು ಮತ್ತು ವಿಜ್ಞಾನಿಗಳು ಸಾರ್ವಜನಿಕ ಹಾಗೂ ವೃತ್ತಿಪರ ಪ್ರಾಮಾಣಿಕತೆಗೆ ಬದ್ದರಾಗಿದ್ದಾರೆ. ಆದ್ದರಿಂದ, ಮುಂದೆ ಲಸಿಕೆಗಳಿಂದ ಹೊಸ ಅಪಾಯಗಳು ಇರುವವೆಂದು ಕಂಡುಬಂದರೆ, ವೈದ್ಯರು ಎಚ್ಚರಿಕೆಯನ್ನೇ ನೀಡುತ್ತಾರೆ.

ಲಸಿಕೆಗಳಿಂದ ಸಾಂಕ್ರಾಮಿಕದ ಸಮಯದಲ್ಲಿ ಪ್ರಾಣಗಳು ಉಳಿದದ್ದು, ಹಾಗೂ ನಂತರ ಅವುಗಳಿಂದ ಹೃದಯ ಸಂಬಂಧಿ ತೊಂದರೆಗಳು ಕಡಿಮೆ ಆಗಿರುವುದು ವಿಶ್ವಾಸಾರ್ಹ ಹಾಗೂ ಸಾಬೀತಾದ ವಿಚಾರ.

ನಿಜವಾದ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ವಿಜ್ಞಾನದ ಆಧಾರದಲ್ಲಿ ಸಲಹೆ ನೀಡುವುದು ವೈದ್ಯರು ಹಾಗೂ ವಿಜ್ಞಾನಿಗಳ ಕರ್ತವ್ಯ.

ಹಾಗಾದರೆ ಇತ್ತೀಚೆಗೆ ನಾವೆಲ್ಲರೂ ಹೆಚ್ಚಾಗಿ ಗಮನಿಸುತ್ತಿರುವ ಈ ಹಠಾತ್ ಮರಣಗಳಿಗೆ ಕಾರಣಗಳೇನು?

ಇದಕ್ಕೆ ಬಹುತೇಕ ಕಾರಣಗಳಿವೆ. ಕೆಲವು ಅನಾದಿ ಕಾಲದಿಂದ ಇರುವ ಹಳೆಯ ಕಾರಣಗಳು, ಸ್ವಲ್ಪ ಹೊಸ ಅಂಶಗಳು ಮತ್ತು ಹಲವು ನಮ್ಮ ನಡವಳಿಕೆಗೆ ಸಂಬಂಧಿಸಿದವುಗಳು. ಅಂತಹಾ ಕಾರಣಗಳ ಬಗ್ಗೆ ವಿಶ್ಲೇಷಣೆ ಮಾಡೋಣ.

1. ಪ್ರಪಂಚದಲ್ಲಿ ಎಲ್ಲಿ ಏನಾದರೂ ಎಲ್ಲರಿಗೂ ಸುಲಭವಾಗಿ ಗೊತ್ತಾಗುತ್ತದೆ

ಯುವಜನರಲ್ಲಿ ಹಠಾತ್ ಸಾವುಗಳು ಹೊಸದಲ್ಲ. ಕೆಲವು ಯುವಜನರಲ್ಲಿ ಜನ್ಮಜಾತ ಹೃದಯದ ಸಮಸ್ಯೆಗಳಿಂದ ಅಥವಾ ಹೃದಯವನ್ನು ಇದ್ದಕ್ಕಿದ್ದಂತೆ ನಿಲ್ಲುವಂತೆ ಮಾಡುವ ರೋಗಸ್ಥಿತಿಗಳಿಂದ ಇಂತಹ ಘಟನೆಗಳು ಮೊದಲೂ ಸಂಭವಿಸುತ್ತಿದ್ದವು. ಆದರೆ ಇಂತಹ ಘಟನೆಗಳು ವ್ಯಾಪಕ ಸುದ್ದಿಯಾಗುತ್ತಿರಲಿಲ್ಲ.

ಈಗಿನ ಕಾಲದಲ್ಲಿ, ಅದರಲ್ಲೂ ಕೋವಿಡ್ ಸಾಂಕ್ರಾಮಿಕದ ನಂತರ, ಮೊಬೈಲ್ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಇಂತಹ ಘಟನೆಗಳು ದೃಶ್ಯರೂಪದಲ್ಲಿ ರೆಕಾರ್ಡ್ ಆಗಿ ನಿಮಿಷಗಳಲ್ಲಿ ನಾಡಿನಾದ್ಯಂತ ಹಾಗೂ ಪ್ರಪಂಚದಾದ್ಯಂತ ಹರಡುತ್ತವೆ. ಇಂಥಾ ಘಟನೆಗಳು ಅತಿಯಾದ ಭಯ ಹುಟ್ಟಿಸುತ್ತವೆ. ಕೆಲವು ಟಿವಿ ಚಾನೆಲ್‌ಗಳು ಮತ್ತು ಪತ್ರಿಕೆಗಳು ಕೂಡ ಈಗ ಸಮಾಚಾರಗಳನ್ನು ಸಾಮಾಜಿಕ ಮಾಧ್ಯಮಗಳಿಂದಲೇ ತೆಗೆದುಕೊಳ್ಳುತ್ತವೆ. ಕೆಲವೊಮ್ಮೆ ಯಾವುದೇ ವೈದ್ಯಕೀಯ ನಿಖರತೆ ಇಲ್ಲದಿದ್ದರೂ ಸಹಾ ಲಸಿಕೆಯಿಂದಲೇ ಹೀಗೆ ಆಗಿದೆ ಎಂದು ಭಾವೋದ್ರೇಕಗೊಳಿಸುವುದರಿಂದ ಅಂತಹ ಸುದ್ದಿಗಳೂ ಸಹಾ ವೈರಲ್ ಆಗುತ್ತವೆ.

2. ಈಗ ಹೃದಯ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಸುಲಭವಾಗಿದೆ

ಈಗ ವೈದ್ಯರು ಹಲವಾರು ಪರೀಕ್ಷೆಗಳ ಮೂಲಕ ಹೃದಯದ ಸ್ಥಿತಿಯನ್ನು ಅರಿಯುತ್ತಾರೆ. ರಕ್ತಪರೀಕ್ಷೆ, ಇಸಿಜಿ, ಹೃದಯ ಸ್ಕ್ಯಾನ್‌ಗಳು ಇತ್ಯಾದಿಗಳು ಮೊದಲಿಗಿಂತಾ ಸುಲಭವಾಗಿ ಹಾಗೂ ವ್ಯಾಪಕವಾಗಿ ಲಭ್ಯವಾಗಿವೆ.

ಅದಲ್ಲದೇ ಶವಪರೀಕ್ಷೆಗಳು ಸಹಾ ಮೊದಲಿಗಿಂತ ಹೆಚ್ಚು ಅಂಶಗಳನ್ನು ಪತ್ತೆಮಾಡಲು ಶಕ್ತವಾಗಿವೆ. ಹಿಂದೆ ಏಕಾಏಕಿ ಸಾವನ್ನಪ್ಪಿದರೆ ಯಾವ ಕಾರಣದಿಂದ ಎಂದು ಹೇಳಲಾಗದಿದ್ದರೂ ಈಗ ಹೃದಯಾಘಾತದಿಂದ ಆಗಿದೆಯೇ ಅಥವಾ ಇತರ ಸಮಸ್ಯೆಯಿಂದ ಉಂಟಾಗಿದೆಯೇ ಎಂಬುದನ್ನು ಶವಪರೀಕ್ಷೆಯಿಂದ ನಿಖರವಾಗಿ ತಿಳಿಯಬಹುದು. ಈ ರೀತಿಯ ಆಧುನಿಕ ಬೆಳವಣಿಗೆಗಳಿಂದ ಬದುಕಿದ್ದಾಗಲೂ ಹಾಗೂ ಮರಣದ ನಂತರವೂ ರೋಗನಿದಾನ (diagnosis) ಮಾಡುವ ಸಾಮರ್ಥ್ಯ ಹೆಚ್ಚಾಗಿ, ಹೃದ್ರೋಗಗಳಿಂದ ಮರಣವಾದಾಗ ಅದನ್ನು ಕರಾರುವಾಕ್ಕಾಗಿ ಕಂಡುಹಿಡಿಯಲಾಗುತ್ತಿದೆ.

3. ಕೋವಿಡ್ ಸೋಂಕು ಸ್ವತಃ ಹೃದಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ

ಬಹುತೇಕ ಜನರು ಇದನ್ನು ಮರೆತೇ ಬಿಟ್ಟಿದ್ದಾರೆ. ಕೋವಿಡ್ ಲಸಿಕೆಗಳನ್ನು ನೀಡುವ ಮೊದಲೇ, ಸೆಪ್ಟೆಂಬರ್ 2020ರ ಮೊದಲ ಅಲೆಯಲ್ಲಿ, ಕೋವಿಡ್ ಸೋಂಕಿನ ಸಮಯದಲ್ಲಿ ಹೃದಯ ಸಂಬಂಧಿತ ತೊಂದರೆಗಳಿಂದ, ಈ ಲೇಖಕನ ತಂದೆಯೂ ಸೇರಿದಂತೆ, ಸಾವಿರಾರು ಜನರು ಸಾವನ್ನಪ್ಪಿದರು.

ಕೋವಿಡ್ ವೈರಾಣು ಸ್ವತಃ ರೋಗಿಯ ಹೃದಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ವೈರಾಣುವಿನ ಸೋಂಕಿನಿಂದಾಗಿ ಹೃದಯದಲ್ಲಿ ಉರಿಯೂತ, ರಕ್ತನಾಳಗಳಿಗೆ ಹಾನಿ, ರಕ್ತ ಗಟ್ಟಿಯಾಗುವುದು ಹಾಗೂ ಇತರ ತೊಡಕುಗಳು ಉಂಟಾಗಬಹುದು.

ಕೋವಿಡ್ ಸೋಂಕಿನ ನಂತರ ಸಹಾ ಬಹಳ ಸಮಯದವರೆಗೆ ಹೃದಯಾಘಾತ ಅಥವಾ ಮಿದುಳಿನ ಆಘಾತ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಲಕ್ಷಣರಹಿತ ಅಥವಾ ಸ್ವಲ್ಪ ಮಟ್ಟಿನ ಸೋಂಕು ಹೊಂದಿದ್ದ ಯುವಜನರಲ್ಲಿ ಸಹಾ ಹೃದಯದಲ್ಲಿ ಆದಂತಹ ಈ ಬದಲಾವಣೆಗಳು ಭಾರೀ ವ್ಯಾಯಾಮ ಅಥವಾ ಒತ್ತಡದ ಸಮಯಗಳಲ್ಲಿ ಹಠಾತ್ ಹೃದಯದ ಸಮಸ್ಯೆಗಳಿಗೆ ಕಾರಣವಾಗಬಹುದು.

4. ಬದಲಾದ ಜೀವನಶೈಲಿಯ ಪ್ರಭಾವ

ಇಂದಿನ ಯುವಜನರಲ್ಲಿ ಅತೀ ಹೆಚ್ಚಾಗಿ ಕಾಣುತ್ತಿರುವ ಕಳಪೆ ಜೀವನಶೈಲಿಯ ಬಗ್ಗೆ ಎಷ್ಟು ಹೇಳುವುದು? ನಮಗೆ ಗೊತ್ತಿರುವುದನ್ನೇ ಇವರು ಮತ್ತೆ ಮತ್ತೆ ಹೇಳುತ್ತಿದ್ದಾರೆ ಎನ್ನಿಸಬಹುದು.

  • ಕಳಪೆ ಆಹಾರ ಪದ್ಧತಿ
  • ಜಂಕ್ ಆಹಾರಗಳು
  • ದೀರ್ಘಕಾಲ ಕುಳಿತೇ ಕೆಲಸ
  • ಮಲಗುವ ಮುನ್ನ ಮೊಬೈಲ್ ಫೋನ್‌ನಲ್ಲಿ ವೀಡಿಯೊಗಳನ್ನು ನೋಡುತ್ತಲೇ ಇರುವುದರಿಂದ ನಿದ್ರಾಹೀನತೆ
  • ವಿದೇಶಗಳ ಸಮಯ ವಲಯಕ್ಕೆ ಕೆಲಸದ ಹೊಂದಾಣಿಕೆಯ ಪ್ರಯತ್ನದಿಂದ ನಿದ್ರಾಹೀನತೆ
  • ವ್ಯಾಯಾಮದ ಕೊರತೆ
  • ಕ್ರಮೇಣ ಅಭ್ಯಾಸವಿಲ್ಲದೆ ಸ್ವಲ್ಪ ಸಮಯ ಸಿಕ್ಕಾಗ ಮಾತ್ರ ಹಠಾತ್ ಭಾರೀ ವ್ಯಾಯಾಮ
  • ಒತ್ತಡದ ಜೀವನ, ಧೂಮಪಾನ, ಮದ್ಯವ್ಯಸನ, ಮಾದಕದ್ರವ್ಯಗಳ ವ್ಯಸನ, ಇತ್ಯಾದಿ.

ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ, ವಿಶೇಷವಾಗಿ ಹೃದಯ ಹಾಗೂ ರಕ್ತನಾಳದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಈ ಕಳಪೆ ಜೀವನಶೈಲಿಗಿಂದಾಗಿ ದೇಹದ ಬೊಜ್ಜು, ಹೊಟ್ಟೆಯ ಬೊಜ್ಜು, ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಇತರ ಕಾಯಿಲೆಗಳು ಶುರುವಾಗಿ ಅದರಿಂದ ಹೃದಯದ ಹಾಗೂ ಯಕೃತ್ತಿನ ಕಾಯಿಲೆಗಳ ಅಪಾಯ ಹೆಚ್ಚಾಗುತ್ತವೆ.

ಹಾಗಾದರೆ ನಿಜವೇನು? ಈಗೇನು ಮಾಡಬೇಕು?

ಯಾವುದೇ ವೈದ್ಯಕೀಯ ಚಿಕಿತ್ಸೆಯೂ ಶೇ. 100 ಪರಿಣಾಮಕಾರಿಯಲ್ಲ, ಆದರೆ ಅವೆಲ್ಲವೂ ಬಹುತೇಕ ಜೀವ ಉಳಿಸುವ ಕೆಲಸವನ್ನೇ ಮಾಡುತ್ತವೆ. ಕೋವಿಡ್ ಲಸಿಕೆಗಳು ಸಹಾ ಅದೇ ರೀತಿ. ಈಗ ಲಭ್ಯವಿರುವ ಅಧ್ಯಯನಗಳು ಸ್ಪಷ್ಟವಾಗಿ ತೋರಿಸುತ್ತಿರುವಂತೆ ಲಸಿಕೆಗಳಿಂದ ಸಾವಿನ ಪ್ರಮಾಣ ಕಡಿಮೆಯಾಗಿದೆ, ಹೆಚ್ಚಿಲ್ಲ. ಈ ಲಸಿಕೆಗಳು ಕೋವಿಡ್ ಸಾಂಕ್ರಾಮಿಕವನ್ನು ಕ್ಷಿಪ್ರವಾಗಿ ನಿಯಂತ್ರಣಕ್ಕೆ ತರಲು ಮಹತ್ವದ ಪಾತ್ರ ವಹಿಸಿದ್ದವು.

ಇತ್ತೀಚೆಗೆ ಹಠಾತ್ ಸಾವುಗಳ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ ಎಂಬುದು ನಿಜ. ಆದರೆ ಅದರ ಹಿಂದೆ ಕೆಲವು ಪ್ರಮುಖ ಕಾರಣಗಳಿವೆ:

  • ಕೋವಿಡ್ ಸೋಂಕಿನ ನಂತರ ಹೃದಯದಲ್ಲಿ ಉಂಟಾಗುವ ಬದಲಾವಣೆಗಳು
  • ರೋಗಗಳನ್ನು ಪತ್ತೆ ಹಚ್ಚುವ ವೈದ್ಯಕೀಯ ಕ್ಷೇತ್ರದ ಸಾಮರ್ಥ್ಯದ ಸುಧಾರಣೆ
  • ಕಳಪೆ ಜೀವನ ಶೈಲಿಯಾದಂತಹ ನಿದ್ರೆ ಕೊರತೆ, ವ್ಯಾಯಾಮದ ಕೊರತೆ, ಹಠಾತ್ ಭಾರೀ ವ್ಯಾಯಾಮ, ಅಹಿತಕರ ಆಹಾರ, ಮದ್ಯಪಾನ, ಧೂಮಪಾನ ಇತ್ಯಾದಿ.

ನಾವಿಂದು ನಿಜವಲ್ಲದ ಶಂಕೆಗಳ ಹಿಂದೆ ಓಡುತ್ತಾ ಕಾಲ ನಷ್ಟ ಮಾಡಬಾರದು. ವಾಸ್ತವ ಸತ್ಯವಿಲ್ಲದ ಆರೋಪಗಳನ್ನು ಪುನಃ ಪುನಃ ಚರ್ಚಿಸಿ ಸಮಯ ಹಾಳುಮಾಡಬಾರದು. ಈಗ ನಾವು ಗಮನಹರಿಸಬೇಕಾಗಿರುವುದು: ನಮ್ಮ ಯುವಜನರ ಆರೋಗ್ಯವನ್ನು ಹೇಗೆ ಕಾಪಾಡಬಹುದು ಹಾಗೂ ಹಠಾತ್ ಮರಣಗಳನ್ನು ಹೇಗೆ ತಡೆಯಬಹುದು ಎಂಬುದರ ಮೇಲೆ ಮಾತ್ರ.

  • ಆರೋಗ್ಯಕರ ಜೀವನ ಶೈಲಿ
  • ಸಮಯಕ್ಕೆ ನಿದ್ರೆ
  • ಸಮತೋಲಿತ ಆಹಾರ
  • ನಿರಂತರ ಚಟುವಟಿಕೆ ಹಾಗೂ ವ್ಯಾಯಾಮ
  • ಮಾನಸಿಕ ಶಾಂತಿ

ಇವುಗಳು ಯಾವುದೇ ಔಷಧಿಗಿಂತ ಶಕ್ತಿ ಉಳ್ಳದ್ದಾಗಿವೆ, ಆದರೆ ಅತೀ ನಿರ್ಲಕ್ಷಿತವಾಗಿವೆ. ಈಗ ಅವುಗಳತ್ತ ತಿರುಗಿ ನೋಡುವ ಸಮಯ.

ಇದು ಭಯಪಡುವ ಕಾಲವಲ್ಲ. ಇದು ಜಾಣತನದಿಂದ ಮುಂದೆ ನಡೆಯುವ ಸಮಯ.

ಈ ಅನಾಗತ ದುರಂತಗಳನ್ನು ತಪ್ಪಿಸಬೇಕಾದರೆ, ಈಗಿನಿಂದಲೇ ತೊಡಗಿಕೊಂಡು ಆರೋಗ್ಯ ಸಾಕ್ಷರತೆಯನ್ನು (health literacy) ಬೆಳೆಸಿ, ನಂಬಿಕೆಯನ್ನೂ, ಜವಾಬ್ದಾರಿಯನ್ನೂ ಹೆಚ್ಚಿಸೋಣ. ಇವತ್ತಿನಿಂದಲೇ ಆರೋಗ್ಯದತ್ತ ಮುನ್ನಡೆಯೋಣ.


ವಿಶ್ವವಾಣಿಯಲ್ಲಿ ಪ್ರಕಟವಾದ ‘ಯುವಜನರಲ್ಲಿ ಹಠಾತ್ ಸಾವುಗಳು: ನಿಜವಾದ ಕಾರಣವೇನು?’ ಲೇಖನದ ಪುಟ
ವಿಶ್ವವಾಣಿಯಲ್ಲಿ ಪ್ರಕಟವಾದ ಪುಟ. ದೊಡ್ಡದಾಗಿ ನೋಡಲು ಚಿತ್ರವನ್ನು ಒತ್ತಿ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

129 articlesEverything by Shashikiran Umakanth

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top