ಈ ಲೇಖನ ಉದಯವಾಣಿ ದಿನಪತ್ರಿಕೆಯ ‘ಆರೋಗ್ಯವಾಣಿ’ ಪುರವಣಿಯಲ್ಲಿ ಪ್ರಕಟವಾಗಿದೆ. Read this article in English
ಆಸ್ಪತ್ರೆಯ ನಿಶ್ಯಬ್ದ ತಪಾಸಣಾ ಕೊಠಡಿಯೊಳಗೆ ಆ ನಡು ವಯಸ್ಸಿನ ವ್ಯಕ್ತಿ ಕಾಲಿಟ್ಟಾಗ, ಅವರ ನಡಿಗೆಯಲ್ಲಿ ಕೊಂಚ ಹಿಂದೇಟು ಹಾಗೂ ಮುಖದಲ್ಲಿ ಬಹಳಷ್ಟು ಅನುಮಾನಗಳಿದ್ದವು. ಕುರ್ಚಿಯ ತುದಿಯಲ್ಲಿ ಕುಳಿತು, ತಮ್ಮ ಆತಂಕವನ್ನು ಮುಚ್ಚಿಡಲು ಯತ್ನಿಸುತ್ತಾ ಅವರು ಕೇಳಿದರು, “ಡಾಕ್ಟರ್, ಇತ್ತೀಚೆಗೆ ಎಲ್ಲರೂ ನಿಯಮಿತ ಆರೋಗ್ಯ ತಪಾಸಣೆ (regular health check-ups) ಮಾಡಿಸಬೇಕು ಎನ್ನುತ್ತಾರೆ. ಆದರೆ ನನಗೆ ಯಾವ ತೊಂದರೆಯೂ ಇಲ್ಲ, ಸಂಪೂರ್ಣ ಆರೋಗ್ಯವಾಗಿದ್ದೇನೆ ಎನಿಸುತ್ತಿದೆ; ಹಾಗಿದ್ದ ಮೇಲೆ ಸುಮ್ಮನೆ ತಪಾಸಣೆ ಏಕೆ ಮಾಡಿಸಬೇಕು?”
ಇದು ಬಹಳ ಸಹಜವಾದ ಪ್ರಶ್ನೆ, ಅನೇಕರು ಹೀಗೆಯೇ ಯೋಚಿಸುತ್ತಾರೆ. ನಾವು ಮೇಲ್ನೋಟಕ್ಕೆ ಆರೋಗ್ಯವಾಗಿದ್ದೇವೆ ಎಂದುಕೊಳ್ಳುವುದು ಮುಖ್ಯವೇ, ಆದರೆ ವಾಸ್ತವ ಬೇರೆಯೇ ಇರುತ್ತದೆ. ಡಯಾಬಿಟಿಸ್, ಹೈ ಬಿಪಿ (high blood pressure) ಅಥವಾ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳು ಶುರುವಾಗುವಾಗ ಯಾವುದೇ ಮುನ್ಸೂಚನೆ ಅಥವಾ ಲಕ್ಷಣಗಳನ್ನು ತೋರಿಸುವುದಿಲ್ಲ. ಲಕ್ಷಣಗಳು ಕಾಣಿಸಿಕೊಳ್ಳುವ ಹೊತ್ತಿಗೆ, ಅವು ದೇಹದ ಅಂಗಾಂಗಗಳಿಗೆ ಸಾಕಷ್ಟು ಹಾನಿ ಮಾಡಿರಬಹುದು ಅಥವಾ ಬೇರೆ ಅಂಗಗಳಿಗೂ ಹರಡಿರಬಹುದು.
“ಅದೇ ನನ್ನ ಪ್ರಶ್ನೆ ಡಾಕ್ಟರ್, ಏನಾದರೂ ಆಗುವುದಿದ್ದರೆ ಹಾಗೆ ಆಗಿಯೇ ಆಗುತ್ತದಲ್ಲವೇ? ಲಕ್ಷಣಗಳೇ ಇಲ್ಲದಿರುವಾಗ ಸುಮ್ಮನೆ ಪರೀಕ್ಷೆ ಏಕೆ?” ಎಂದು ಅವರು ಮರುಪ್ರಶ್ನಿಸಿದರು.
ನಮ್ಮ ವಾಹನದ ಇಂಜಿನ್ ಕೆಟ್ಟು ನಿಂತು ಶಬ್ದ ಮಾಡುವವರೆಗೆ ನಾವು ಕಾಯುವುದಿಲ್ಲ, ಎಲ್ಲವೂ ಸರಿಯಿದ್ದಾಗಲೇ ಸರ್ವಿಸ್ ಮಾಡಿಸುತ್ತೇವೆ ಅಲ್ಲವೇ? ನಮ್ಮ ದೇಹಕ್ಕೂ ಇಂಥದ್ದೇ ನಿಯಮಿತ ತಪಾಸಣೆಯ ಅಗತ್ಯವಿದೆ. ಆರ್ಥಿಕ ಮುಗ್ಗಟ್ಟು ಬಂದಾಗಲಷ್ಟೇ ನಾವು ಹಣದ ಬಗ್ಗೆ ಯೋಚಿಸುವುದಿಲ್ಲ; ಮುಂದೆ ಕಷ್ಟ ಬರಬಾರದು ಎಂದೇ ಮೊದಲೇ ಹೂಡಿಕೆ, ವಿಮೆ ಮತ್ತು ಟ್ಯಾಕ್ಸ್ ರಿಟರ್ನ್ಸ್ ಮಾಡುತ್ತೇವೆ.
ಆರೋಗ್ಯ ತಪಾಸಣೆ ಕೂಡ ಆರ್ಥಿಕ ಲೆಕ್ಕಪರಿಶೋಧನೆಯಿದ್ದಂತೆ; ಭವಿಷ್ಯದಲ್ಲಿ ‘ಆರೋಗ್ಯದ ದಿವಾಳಿತನ’ (health bankruptcy) ಎದುರಾಗದಂತೆ ಇದು ನಮ್ಮನ್ನು ಕಾಪಾಡುತ್ತದೆ. ಶುಗರ್ ಏರಿಕೆ ಇರುವುದನ್ನು ಬೇಗನೆ ಪತ್ತೆ ಮಾಡಿದರೆ ಮುಂದೆ ಕಿಡ್ನಿ ಹಾಳಾಗುವುದನ್ನು ತಡೆಯಬಹುದು. ಸಣ್ಣದೊಂದು ಸ್ಕ್ಯಾನ್, ಕ್ಯಾನ್ಸರ್ ಗಡ್ಡೆಯಾಗಿ ಬೆಳೆಯುವ ಮುನ್ನವೇ ಅಪಾಯವನ್ನು ತೋರಿಸಬಲ್ಲದು.
ಆರೋಗ್ಯ ತಪಾಸಣೆ ಕೂಡ ಆರ್ಥಿಕ ಲೆಕ್ಕಪರಿಶೋಧನೆಯಿದ್ದಂತೆ; ಭವಿಷ್ಯದಲ್ಲಿ ‘ಆರೋಗ್ಯದ ದಿವಾಳಿತನ’ ಎದುರಾಗದಂತೆ ಇದು ನಮ್ಮನ್ನು ಕಾಪಾಡುತ್ತದೆ.
“ಹಾಗಾದರೆ ಈ ತಪಾಸಣೆಯಲ್ಲಿ ಬರೀ ರಕ್ತಪರೀಕ್ಷೆ ಮಾತ್ರ ಇರುತ್ತದೆಯೇ?” ಎನ್ನುವ ಕುತೂಹಲ ಅವರದು.
ನಿಯಮಿತ ತಪಾಸಣೆ ಎನ್ನುವುದು ಕೇವಲ ರಕ್ತಪರೀಕ್ಷೆ ಅಲ್ಲ.
ತಪಾಸಣೆಯಲ್ಲಿ ಏನೇನಿರುತ್ತದೆ?
- ನಿಮ್ಮ ವೈದ್ಯಕೀಯ ಇತಿಹಾಸ, ಜೀವನಶೈಲಿ, ಆಹಾರ, ಒತ್ತಡ, ನಿದ್ದೆ, ವ್ಯಾಯಾಮ, ಧೂಮಪಾನ ಅಥವಾ ಮದ್ಯಪಾನದ ಅಭ್ಯಾಸಗಳು ಹಾಗೂ ಕುಟುಂಬದಲ್ಲಿರುವ ಕಾಯಿಲೆಗಳ ಬಗ್ಗೆ ವೈದ್ಯರು ವಿವರವಾಗಿ ಕೇಳಿ ತಿಳಿಯುತ್ತಾರೆ. ಈ ಅಂಶಗಳು ನಮ್ಮ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಹೆಚ್ಚಿನವರಿಗೆ ಅರಿವಿರುವುದಿಲ್ಲ.
- ನಂತರ ಸಂಪೂರ್ಣ ದೈಹಿಕ ತಪಾಸಣೆ ನಡೆಯುತ್ತದೆ; ಹೃದಯ, ಶ್ವಾಸಕೋಶ, ನರಮಂಡಲ, ಕೀಲುಗಳು ಹಾಗೂ ಚರ್ಮದ ತಪಾಸಣೆಯೂ ಅಗತ್ಯಕ್ಕೆ ತಕ್ಕಂತೆ ನಡೆಯುತ್ತದೆ.
- ರಕ್ತದಲ್ಲಿ ಶುಗರ್, ಕೊಲೆಸ್ಟ್ರಾಲ್, ಲಿವರ್ ಮತ್ತು ಕಿಡ್ನಿಯ ಕಾರ್ಯಕ್ಷಮತೆ, ಥೈರಾಯ್ಡ್, ಮತ್ತು ಅಗತ್ಯವಿದ್ದರೆ ವಿಟಮಿನ್ ಡಿ ಹಾಗೂ ಬಿ12 ಪರೀಕ್ಷೆಗಳನ್ನು ಮಾಡಲಾಗುತ್ತದೆ.
- ವಯಸ್ಸು ಮತ್ತು ಲಿಂಗಕ್ಕೆ ಅನುಗುಣವಾಗಿ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಪತ್ತೆಗೆ ಮ್ಯಾಮೊಗ್ರಫಿ (mammography) ಮತ್ತು ಗರ್ಭಕೋಶದ ಕೊರಳಿನ ಕ್ಯಾನ್ಸರ್‌ಗೆ ಪ್ಯಾಪ್ ಸ್ಮಿಯರ್ (Pap smear), ಪುರುಷರಿಗೆ ಪ್ರೋಸ್ಟೇಟ್ ಆರೋಗ್ಯ ತಿಳಿಯಲು ಪಿಎಸ್‌ಎ (PSA) ಪರೀಕ್ಷೆ ಸೂಚಿಸಲಾಗುತ್ತದೆ.
- ೫೦ ವರ್ಷ ದಾಟಿದ ಮೇಲೆ, ಕರುಳಿನ ಕ್ಯಾನ್ಸರ್ ಪತ್ತೆ ಹಚ್ಚಲು ಕೊಲೊನೋಸ್ಕೋಪಿ (colonoscopy) ಅಥವಾ ಮಲದ ಪರೀಕ್ಷೆ, ಶ್ವಾಸಕೋಶ ಮತ್ತು ಹೊಟ್ಟೆಯ ಭಾಗದ ಎಕ್ಸ್-ರೇ ಹಾಗೂ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಅಗತ್ಯವಿರುತ್ತದೆ.
“ಕಳೆದ ಬಾರಿ ನನ್ನ ತಾಯಿಯನ್ನು ಕರೆತಂದಾಗ ನೀವು ವಯಸ್ಕರ ಲಸಿಕೆಗಳ ಬಗ್ಗೆ ಹೇಳಿದ್ದಿರಿ. ಲಸಿಕೆ ಕೇವಲ ಮಕ್ಕಳಿಗೆ ಮಾತ್ರ ಅಂದುಕೊಂಡಿದ್ದೆ” ಎಂದರು.
ವಯಸ್ಕರ ಲಸಿಕೆ
ವಯಸ್ಕರ ಲಸಿಕೆ ಎನ್ನುವುದು ಆರೋಗ್ಯದ ಅತ್ಯಂತ ನಿರ್ಲಕ್ಷಿತ ವಿಭಾಗ. ವಯಸ್ಸಾದಂತೆ ನಮ್ಮ ರೋಗನಿರೋಧಕ ಶಕ್ತಿ ಕಡಿಮೆಯಾಗುವುದರಿಂದ ಇನ್‌ಫ್ಲುಯೆಂಜಾ, ನ್ಯುಮೋನಿಯಾ, ಹೆಪಟೈಟಿಸ್ ಬಿ, ಮತ್ತು ಸರ್ಪ ಸುತ್ತು (herpes zoster) ನಂತಹ ಸೋಂಕುಗಳು ಕಾಡಬಹುದು.
ವಾರ್ಷಿಕ ಫ್ಲೂ ಲಸಿಕೆ, ೧೦ ವರ್ಷಕ್ಕೊಮ್ಮೆ ಟೆಟನಸ್, ಹಾಗೂ ೬೦ ವರ್ಷದ ನಂತರ ನ್ಯುಮೋಕಾಕಲ್ ಲಸಿಕೆ ಪಡೆಯುವುದರಿಂದ ಗಂಭೀರ ಕಾಯಿಲೆಗಳನ್ನು ತಡೆಯಬಹುದು. ಯುವತಿಯರು ಎಚ್‌ಪಿವಿ (HPV) ಲಸಿಕೆ ಪಡೆಯುವುದರಿಂದ ಗರ್ಭಕೋಶದ ಕೊರಳಿನ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
“ಹಾಗಾದರೆ ಎಷ್ಟು ವರ್ಷಗಳಿಗೊಮ್ಮೆ ಈ ತಪಾಸಣೆ ಮಾಡಿಸಬೇಕು?” ಎಂದು ಕೇಳಿದರು.
ಎಷ್ಟು ವರ್ಷಗಳಿಗೊಮ್ಮೆ?
- ೩೦ರ ಹರೆಯದ ಆರೋಗ್ಯವಂತರು ೨ ರಿಂದ ೩ ವರ್ಷಗಳಿಗೊಮ್ಮೆ ತಪಾಸಣೆ ಮಾಡಿಸಬಹುದು.
- ಆದರೆ ೪೦ ವರ್ಷ ದಾಟಿದ, ಸದಾ ಕುಳಿತು ಕೆಲಸ ಮಾಡುವ ಉದ್ಯೋಗಿಗಳು ವರ್ಷಕ್ಕೊಮ್ಮೆ ಮಾಡಿಸಿಕೊಳ್ಳುವುದು ಒಳಿತು.
- ೬೦ ವರ್ಷದ ನಂತರ ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪತ್ತೆಹಚ್ಚಲು ಇನ್ನೂ ಹೆಚ್ಚು ಬಾರಿ ತಪಾಸಣೆ ಬೇಕಾಗಬಹುದು.
ತಮ್ಮ ಕೈಬೆರಳುಗಳನ್ನು ಹಿಸುಕಿಕೊಳ್ಳುತ್ತಾ ಅವರು ನುಡಿದರು, “ನಿಜ ಹೇಳಬೇಕೆಂದರೆ, ಡಾಕ್ಟರ್, ನನಗೇನೋ ಭಯ. ವರದಿಯಲ್ಲಿ ಏನಾದರೂ ಕೆಟ್ಟದ್ದು ಬಂದರೆ ಎದುರಿಸಲು ಸಿದ್ಧನಿದ್ದೇನೆಯೋ ಇಲ್ಲವೋ ತಿಳಿಯದು.”
ಈ ಭಯ ಬಹಳ ಸಹಜ; ಇದೇ ಕಾರಣಕ್ಕೆ ಬಹಳಷ್ಟು ಜನರು ತಪಾಸಣೆಯಿಂದ ದೂರ ಉಳಿಯುತ್ತಾರೆ. ಆದರೆ, ಕಾಯಿಲೆಯನ್ನು ಬೇಗ ಪತ್ತೆ ಹಚ್ಚುವುದು ಒಂದು ಆಶೀರ್ವಾದವೇ ಸರಿ, ಏಕೆಂದರೆ ಈಗ ಕಾಣುವ ಸಣ್ಣ ಸಮಸ್ಯೆಯನ್ನು ಸುಲಭವಾಗಿ ಗುಣಪಡಿಸಬಹುದು.
ಕಾಯಿಲೆಯನ್ನು ಬೇಗ ಪತ್ತೆ ಹಚ್ಚುವುದು ಒಂದು ಆಶೀರ್ವಾದವೇ ಸರಿ.
“ವರದಿಗಳೆಲ್ಲಾ ನಾರ್ಮಲ್ ಬಂದರೆ, ಮುಂದಿನ ಐದು ವರ್ಷಗಳ ಕಾಲ ನಾನು ಸಂಪೂರ್ಣ ಸುರಕ್ಷಿತ ಎಂದುಕೊಳ್ಳಬಹುದೇ?”
ಆರೋಗ್ಯ ತಪಾಸಣೆ ಎನ್ನುವುದು ಯಾವುದೇ ವಾರಂಟಿ ಕಾರ್ಡ್ ನೀಡುವುದಿಲ್ಲ. ಅದು ನಿಮ್ಮ ಪ್ರಸ್ತುತ ಆರೋಗ್ಯದ ಸ್ಥಿತಿಯನ್ನು (snapshot) ಮಾತ್ರ ಹೇಳುತ್ತದೆ. ಒತ್ತಡ, ಆಹಾರ, ವಯಸ್ಸು ಹಾಗೂ ಪರಿಸರ ನಮ್ಮ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತಿರುವುದರಿಂದ, ಆರ್ಥಿಕ ಯೋಜನೆ ಅಥವಾ ವಾಹನದ ನಿರ್ವಹಣೆಯಂತೆ ಆರೋಗ್ಯವನ್ನು ‘ಅಪ್‌ಡೇಟ್’ ಮಾಡಿಕೊಳ್ಳುತ್ತಿರಬೇಕು.
“ಆದರೆ ಮಿತಿಮೀರಿದ ಪರೀಕ್ಷೆಗಳಿಂದ (overtesting) ಗೊಂದಲ ಹೆಚ್ಚಾಗುತ್ತದೆ ಎಂದು ಕೇಳಿದ್ದೇನೆ. ಜೊತೆಗೆ, ನನಗಂತೂ ಇಡೀ ದಿನ ರಜೆ ಹಾಕಲು ಸಮಯವೇ ಇಲ್ಲ” ಎಂದರು.
ಹೌದು, ಕಾರಣವಿಲ್ಲದೆ ಎಲ್ಲ ಪರೀಕ್ಷೆಗಳನ್ನು ಮಾಡಿಸಿದರೆ ಅನಗತ್ಯ ಗೊಂದಲ, ಸುಖಾಸುಮ್ಮನೆ ಚಿಕಿತ್ಸೆ ಪಡೆಯುವ (overdiagnosis) ಪರಿಸ್ಥಿತಿ ಬರಬಹುದು. ಪ್ರತಿಯೊಬ್ಬರಿಗೂ ಎಲ್ಲ ಪರೀಕ್ಷೆಗಳ ಅಗತ್ಯವಿರುವುದಿಲ್ಲ.
ಇನ್ನು ಸಮಯದ ಬಗ್ಗೆ ಹೇಳುವುದಾದರೆ, ಮುಂಚಿತವಾಗಿ ಅಪಾಯಿಂಟ್‌ಮೆಂಟ್ ಪಡೆದುಕೊಂಡರೆ ಕೇವಲ ೩ ರಿಂದ ೫ ಗಂಟೆಗಳಲ್ಲಿ ತಪಾಸಣೆ ಮುಗಿಯುತ್ತದೆ. ಭವಿಷ್ಯದ ದೃಷ್ಟಿಯಿಂದ ಒಂದು ದಿನದ ರಜೆ ಹಾಕಿದರೂ ಅದು ಅತ್ಯುತ್ತಮ ಹೂಡಿಕೆಯೇ ಸರಿ.
ಆರೋಗ್ಯ ತಪಾಸಣೆ ಎನ್ನುವುದು ಯಾವುದೇ ವಾರಂಟಿ ಕಾರ್ಡ್ ನೀಡುವುದಿಲ್ಲ.
“ಕೆಲವರು ಇದನ್ನೆಲ್ಲಾ ಆಸ್ಪತ್ರೆಗಳ ಹಣ ಮಾಡುವ ತಂತ್ರ ಎನ್ನುತ್ತಾರೆ. ಮತ್ತೆ ಕೆಲವರು, ‘ದೇವರ ಮೇಲೆ ಭಾರ ಹಾಕು, ಆಗುವುದು ಆಗಿಯೇ ತೀರುತ್ತದೆ’ ಎನ್ನುತ್ತಾರೆ. ಅದೂ ನಿಜವಲ್ಲವೇ?” ಎಂದು ಅವರು ಕೊನೆಯ ಅಸ್ತ್ರ ಬಿಟ್ಟರು.
ವೈದ್ಯಕೀಯ ಕ್ಷೇತ್ರದಲ್ಲಿ ವ್ಯವಹಾರಿಕ ಪ್ರಭಾವ ಇರುವುದು ನಿಜ, ಹಾಗಾಗಿ ನಂಬಿಕಸ್ಥ ವೈದ್ಯರು ಮತ್ತು ಆಸ್ಪತ್ರೆಯನ್ನು ಆರಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ.
ದೇವರ ಮೇಲಿನ ನಂಬಿಕೆ ಕಷ್ಟದ ಸಮಯದಲ್ಲಿ ನೆಮ್ಮದಿ ಕೊಡುತ್ತದೆ, ಪ್ರಸಾದ ಬುದ್ಧಿಯಿಂದ ಎಲ್ಲವನ್ನೂ ಸ್ವೀಕರಿಸುವುದು ಒಳ್ಳೆಯದೇ. ಆದರೆ ನಂಬಿಕೆ ಮತ್ತು ಕರ್ಮ ಪರಸ್ಪರ ವಿರುದ್ಧವಲ್ಲ. ಭಗವದ್ಗೀತೆಯ ೨ನೇ ಅಧ್ಯಾಯದ ೪೭ನೇ ಶ್ಲೋಕ ‘ಕರ್ಮಣ್ಯೇವಾಧಿಕಾರಸ್ತೇ…’ ಹೇಳುವಂತೆ, ನಮಗೆ ಕರ್ಮ ಮಾಡುವ ಅಧಿಕಾರವಿದೆ, ಫಲದ ಮೇಲಲ್ಲ. ಕರ್ಮ ಮಾಡದಿರುವುದು ಕೂಡ ಒಂದು ರೀತಿಯ ಅಕರ್ಮವೇ; ‘ಮಾ ತೇ ಸಂಗೋಸ್ತ್ವಕರ್ಮಣಿ’ ಎಂದು ಗೀತೆ ಎಚ್ಚರಿಸುತ್ತದೆ.
ನಮ್ಮ ದೇಹವನ್ನು ಕಾಪಾಡಿಕೊಳ್ಳುವುದು, ನಿಯಮಿತ ತಪಾಸಣೆ ಮಾಡಿಸುವುದು, ಎಚ್ಚರಿಕೆಯಿಂದ ಆಹಾರ ಸೇವಿಸುವುದು, ವ್ಯಾಯಾಮ ಮಾಡುವುದು – ಇವೆಲ್ಲವೂ ದೇಹದ ಬಗ್ಗೆ ನಮಗಿರುವ ಕರ್ತವ್ಯಗಳು. ಕಳ್ಳ ಬರುತ್ತಾನೆಂದಲ್ಲ, ಆದರೆ ಅಪಾಯವನ್ನು ತಪ್ಪಿಸಲು ನಾವು ರಾತ್ರಿ ಬಾಗಿಲು ಹಾಕುವಂತೆ, ಆರೋಗ್ಯ ತಪಾಸಣೆ ಎನ್ನುವುದು ಭಯವಲ್ಲ, ಅದು ಮುಂದಾಲೋಚನೆ. ನಮ್ಮ ಕೈಯಲ್ಲಿರುವುದನ್ನು ನಾವು ಮಾಡೋಣ, ಉಳಿದದ್ದನ್ನು ದೇವರಿಗೆ ಬಿಡೋಣ.
ಆರೋಗ್ಯ ತಪಾಸಣೆ ಎನ್ನುವುದು ಭಯವಲ್ಲ, ಅದು ಮುಂದಾಲೋಚನೆ.
“ಬಹಳ ಚೆನ್ನಾಗಿ ಹೇಳಿದಿರಿ ಡಾಕ್ಟರ್, ನಾನೆಂದೂ ಈ ದೃಷ್ಟಿಕೋನದಲ್ಲಿ ಯೋಚಿಸಿಯೇ ಇರಲಿಲ್ಲ” ಎಂದು ಅವರು ನಿರಾಳರಾದರು. ಆರೋಗ್ಯವೆನ್ನುವುದು ಒಂದು ಪಯಣ; ತಪಾಸಣೆ ಆ ಪಯಣದ ಒಂದು ಸರಿಯಾದ ಹೆಜ್ಜೆ ಮಾತ್ರ.
ಸಂಭಾಷಣೆಯ ಪ್ರಮುಖ ಅಂಶಗಳು
- ನಿಯಮಿತ ತಪಾಸಣೆಯು ರೋಗಲಕ್ಷಣಗಳು ಕಾಣಿಸಿಕೊಳ್ಳುವ ಮೊದಲೇ ಗುಪ್ತ ಕಾಯಿಲೆಗಳನ್ನು ಪತ್ತೆ ಮಾಡುತ್ತದೆ.
- ಮೇಲ್ನೋಟಕ್ಕೆ ಆರೋಗ್ಯವಾಗಿರುವುದು ಎಂದರೆ ಸಂಪೂರ್ಣ ಆರೋಗ್ಯವಂತರಾಗಿರುವುದು ಎಂದರ್ಥವಲ್ಲ, ಅನೇಕ ಕಾಯಿಲೆಗಳು ಸದ್ದಿಲ್ಲದೆ ಶುರುವಾಗುತ್ತವೆ.
- ವಯಸ್ಸು, ಜೀವನಶೈಲಿ, ಪ್ರಸ್ತುತ ಆರೋಗ್ಯ ಮತ್ತು ಕುಟುಂಬದ ಕಾಯಿಲೆಗಳ ಹಿನ್ನೆಲೆಯನ್ನು ಆಧರಿಸಿ ಪರೀಕ್ಷೆಗಳನ್ನು ನಿರ್ಧರಿಸಲಾಗುತ್ತದೆ.
- ವಯಸ್ಕರ ಲಸಿಕೆಗಳು ಅತ್ಯಗತ್ಯ ಮತ್ತು ಅವುಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ.
- ತಪಾಸಣೆಯ ನಾರ್ಮಲ್ ವರದಿಯು ಕೇವಲ ಪ್ರಸ್ತುತ ಸ್ಥಿತಿಯನ್ನು ಹೇಳುತ್ತದೆಯೇ ಹೊರತು ಜೀವಿತಾವಧಿಯ ಗ್ಯಾರಂಟಿಯನ್ನಲ್ಲ.
- ಖರ್ಚು, ಭಯ ಮತ್ತು ಸಮಯದ ಬಗೆಗಿನ ಆತಂಕಗಳು ಸಹಜವಾದರೂ, ಸರಿಯಾದ ಮಾರ್ಗದರ್ಶನದಿಂದ ಅವುಗಳನ್ನು ನಿಭಾಯಿಸಬಹುದು.
- ನೈತಿಕ ವೈದ್ಯಕೀಯ ಆರೈಕೆಯು ರೋಗಿಗೆ ಅಗತ್ಯವಿರುವ ಪರೀಕ್ಷೆಗಳತ್ತ ಗಮನ ಹರಿಸುತ್ತದೆಯೇ ಹೊರತು ಮಿತಿಮೀರಿದ ಪರೀಕ್ಷೆಗಳಿಗಲ್ಲ.
- ರೋಗ ತಡೆಗಟ್ಟುವ ಕಾಳಜಿಯು ನಮ್ಮನ್ನು ನಾವು ಗೌರವಿಸಿಕೊಳ್ಳುವ ಪ್ರಾಯೋಗಿಕ ವಿಧಾನವಾಗಿದೆ.









Leave a Reply