ಈ ಲೇಖನ ವಿಶ್ವವಾಣಿ ದಿನಪತ್ರಿಕೆಯ ‘ಕ್ಷ ಕಿರಣ’ ಅಂಕಣದಲ್ಲಿ 2026ರ ಅಕ್ಟೋಬರ್ 4ರಂದು ಪ್ರಕಟವಾಗಿದೆ. Read this article in English
ಮೊನ್ನೆಯಷ್ಟೇ, ಅಂದರೆ ಸೆಪ್ಟೆಂಬರ್ 29ರಂದು ‘ವಿಶ್ವ ಹೃದಯ ದಿನ’ ಮುಗಿಯಿತು. ಅಂದು ದಿನವಿಡೀ ವಾಟ್ಸಪ್, ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ಗಳಲ್ಲಿ ಕೆಂಪು-ಗುಲಾಬಿ ಬಣ್ಣದ ಹೃದಯದ ಚಿತ್ರಗಳನ್ನು ಹಾಕಿ, “ಹೃದಯವನ್ನು ಕಾಪಾಡಿಕೊಳ್ಳಿ”, “ಹೃದಯಕ್ಕೊಂದು ಸಲಾಂ” ಎಂದೆಲ್ಲಾ ಸ್ಟೇಟಸ್‌ಗಳು ಹರಿದಾಡಿದವು. ಇದೆಲ್ಲಾ ನೋಡಿದಾಗ ಒಬ್ಬ ವೈದ್ಯನಾಗಿ ನನಗೆ ಖುಷಿಯಾಗುತ್ತದೆ. ಆದರೆ, ದಿನನಿತ್ಯ ಆಸ್ಪತ್ರೆಗೆ ಬರುವ ರೋಗಿಗಳನ್ನು ಮಾತನಾಡಿಸಿದಾಗ ಅಥವಾ ಕೆಲವು ಪರಿಚಯಸ್ಥರು ಚರ್ಚೆ ಮಾಡುವುದನ್ನು ಕೇಳಿದಾಗ ನನಗನ್ನಿಸುವುದು ಒಂದೇ: ನಮ್ಮ ಜನರಿಗೆ ಹೃದಯದ ಬಗ್ಗೆ ಅಪಾರ ಪ್ರೀತಿ ಇದೆ, ಆದರೆ ಅದರ ಸಮಸ್ಯೆಗಳ ಬಗ್ಗೆ ಸಿಕ್ಕಾಪಟ್ಟೆ ಗೊಂದಲಗಳಿವೆ!
ಉದಾಹರಣೆಗೆ, ಯಾರಾದರೂ ಯುವಕ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ದಿಢೀರ್ ಕುಸಿದುಬಿದ್ದು ತೀರಿಕೊಂಡರೆ, ಜನ ತಕ್ಷಣ “ಅಯ್ಯೋ, ಪಾಪ ಅಷ್ಟು ಸಣ್ಣ ವಯಸ್ಸಿಗೆ ಹಾರ್ಟ್ ಅಟ್ಯಾಕ್ ಆಯ್ತಂತೆ” ಅಂತ ಬೇಸರ ಮಾಡಿಕೊಳ್ಳುತ್ತಾರೆ. ಆದರೆ ಅದೇ ಸುದ್ದಿಯನ್ನು ಟಿವಿ ನ್ಯೂಸ್ ಚಾನೆಲ್‌ನವರು ‘ಕಾರ್ಡಿಯಾಕ್ ಅರೆಸ್ಟ್‌ನಿಂದ ಸಾವು’ ಅಂತ ಬ್ರೇಕಿಂಗ್ ನ್ಯೂಸ್ ಹಾಕ್ತಾರೆ. ಪತ್ರಿಕೆಗಳಲ್ಲಿ ಇನ್ನೆಲ್ಲೋ ‘ಹಾರ್ಟ್ ಫೇಲ್ಯೂರ್‌ನಿಂದ ಯುವಕನ ನಿಧನ’ ಅಂತ ಬರೆದಿರುತ್ತಾರೆ.
ಇದನ್ನ ಕೇಳಿ ಜನಸಾಮಾನ್ಯರಿಗೆ ತಲೆ ಗಿರ್ ಎನ್ನುವುದು ಖಂಡಿತ. ಈ ಹಾರ್ಟ್ ಅಟ್ಯಾಕ್, ಹಾರ್ಟ್ ಫೇಲ್ಯೂರ್, ಕಾರ್ಡಿಯಾಕ್ ಅರೆಸ್ಟ್ – ಇವೆಲ್ಲವೂ ಒಂದೇ ಕಾಯಿಲೆಯ ಬೇರೆ ಬೇರೆ ಹೆಸರುಗಳಾ? ಡಾಕ್ಟರ್‌ಗಳು ಯಾಕೆ ಹೀಗೆ ಬೇರೆ ಬೇರೆ ಹೆಸರು ಹೇಳಿ ಕನ್‌ಫ್ಯೂಸ್ ಮಾಡ್ತಾರೆ ಅಂತ ನಿಮಗೆ ಅನ್ನಿಸಿರಬಹುದು. ಆದರೆ ವೈದ್ಯಕೀಯ ವಿಜ್ಞಾನದಲ್ಲಿ ಇವು ಮೂರೂ ಸಂಪೂರ್ಣ ವಿಭಿನ್ನ ಸಮಸ್ಯೆಗಳು. ಇವುಗಳ ಹಿಂದಿರುವ ಕಾರಣ, ಲಕ್ಷಣ ಮತ್ತು ನೀಡಬೇಕಾದ ಚಿಕಿತ್ಸೆ ಎಲ್ಲವೂ ಬೇರೆ ಬೇರೆಯೇ. ಬನ್ನಿ, ಇವತ್ತು ಈ ಗೊಂದಲಕ್ಕೆ ಒಂದು ಶಾಶ್ವತವಾದ ಫುಲ್ ಸ್ಟಾಪ್ ಇಡೋಣ.
ಈ ತೊಂದರೆಗಳು ಮತ್ತು ಹೆಸರುಗಳು ಸುಲಭವಾಗಿ ಅರ್ಥ ಮಾಡಿಕೊಳ್ಳಲು ನಮ್ಮ ದೇಹವನ್ನು ಒಂದು ಸುಂದರವಾದ ವಾಹನ ಅಂತ ಅಂದುಕೊಳ್ಳೋಣ. ಈ ವಾಹನಕ್ಕೆ ಹೃದಯವೇ ‘ಎಂಜಿನ್’. ಈ ಎಂಜಿನ್‌ಗೆ ಬರುವ ಮೂರು ಬೇರೆ ಬೇರೆ ರೀತಿಯ ಸಮಸ್ಯೆಗಳೇ ಈ ಮೂರು ಕಾಯಿಲೆಗಳು.
1. ಹಾರ್ಟ್ ಅಟ್ಯಾಕ್ (ಹೃದಯಾಘಾತ): ಇದು “ಪ್ಲಂಬಿಂಗ್” (ಪೈಪ್‌ಲೈನ್) ಸಮಸ್ಯೆ!
ನಮ್ಮ ವಾಹನದ ಎಂಜಿನ್ (ಹೃದಯ) ಕೆಲಸ ಮಾಡಬೇಕಾದರೆ ಅದಕ್ಕೂ ಇಂಧನ (ರಕ್ತ) ಬೇಕಲ್ಲವೇ? ಎಂಜಿನ್‌ಗೆ ಪೆಟ್ರೋಲ್ ಸಪ್ಲೈ ಮಾಡುವ ಪೈಪ್‌ನಲ್ಲಿ ಕಸ ಸಿಲುಕಿ ಬ್ಲಾಕ್ ಆದ ಹಾಗೆ, ಹೃದಯದ ಸ್ನಾಯುಗಳಿಗೆ ರಕ್ತವನ್ನು ಪೂರೈಸುವ ‘ಕೊರೊನರಿ ರಕ್ತನಾಳ’ಗಳಲ್ಲಿ ಹಲವರಿಗೆ ಕೊಬ್ಬು (ಕೊಲೆಸ್ಟ್ರಾಲ್) ಶೇಖರಣೆಯಾಗಿ ಪೈಪ್ ಬ್ಲಾಕ್ ಆಗುತ್ತದೆ. ಆಗ ಹೃದಯದ ಸ್ನಾಯುಗಳ ಒಂದು ನಿರ್ದಿಷ್ಟ ಭಾಗಕ್ಕೆ ರಕ್ತ ಸಂಚಾರ ದಿಢೀರನೆ ನಿಂತುಹೋಗುತ್ತದೆ. ಆ ಸ್ನಾಯುವಿನ ಜೀವಕೋಶಗಳು ಆಮ್ಲಜನಕವಿಲ್ಲದೆ ಸಾಯಲು ಶುರುಮಾಡುತ್ತವೆ. ಇದನ್ನೇ ನಾವು “ಹಾರ್ಟ್ ಅಟ್ಯಾಕ್” ಎನ್ನುತ್ತೇವೆ.
ಇಲ್ಲಿ ಎಂಜಿನ್ ಸಂಪೂರ್ಣವಾಗಿ ಆಫ್ ಆಗಿರುವುದಿಲ್ಲ, ಆದರೆ ಇಂಧನ ಸಿಗದೆ ಅದು ಒದ್ದಾಡುತ್ತಿರುತ್ತದೆ. ರೋಗಿ ಈ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡಿರುವುದಿಲ್ಲ. ಎದೆಯ ಮಧ್ಯಭಾಗದಲ್ಲಿ ವಿಪರೀತ ಭಾರ, ಒಂದು ಆನೆಯೇ ಅವರ ಎದೆಯ ಮೇಲೆ ಕಾಲನ್ನಿಟ್ಟು ಒತ್ತಿದಂತೆ ಭಾರವಾದ ನೋವು, ವಿಪರೀತ ಬೆವರುವುದು (ಏಸಿ ರೂಮಿನಲ್ಲಿದ್ದರೂ ಬೆವರುತ್ತಾರೆ), ಮತ್ತು ಉಸಿರುಗಟ್ಟಿದ ಅನುಭವ ಆಗುತ್ತದೆ. ನೋವು ಎಡಗೈಗೆ ಅಥವಾ ದವಡೆಗೆ ಹರಡಬಹುದು.
ಪರಿಹಾರ
ಇಂತಹ ಹೊತ್ತಲ್ಲಿ ರೋಗಿ ಎದೆನೋವು ಅಥವಾ ಎದೆ ಭಾರ ಅಂತ ಸ್ಪಷ್ಟವಾಗಿ ಹೇಳಿಕೊಳ್ಳುತ್ತಾರೆ. ತಕ್ಷಣ ಆಸ್ಪತ್ರೆಗೆ ಹೋದರೆ, ಬ್ಲಾಕ್ ಆದ ರಕ್ತನಾಳವನ್ನು ಆಂಜಿಯೋಗ್ರಾಮ್ ಮೂಲಕ ಪತ್ತೆಹಚ್ಚಿ, ‘ಸ್ಟೆಂಟ್’ ಎಂಬ ಸ್ಪ್ರಿಂಗ್ ಹಾಕುವ ಮೂಲಕ ಸರಿಪಡಿಸಿ ಜೀವ ಉಳಿಸಬಹುದು. ಇಲ್ಲಿ ‘ಗೋಲ್ಡನ್ ಅವರ್’ (ಮೊದಲ ಒಂದೆರಡು ಗಂಟೆ) ಬಹಳ ಮುಖ್ಯ. ಎಷ್ಟು ಬೇಗ ಚಿಕಿತ್ಸೆ ಸಿಗುತ್ತದೆಯೋ ಅಷ್ಟು ಹೃದಯದ ಸ್ನಾಯುಗಳನ್ನು ಹಾಗೂ ಜೀವವನ್ನು ಉಳಿಸಿಕೊಳ್ಳಬಹುದು.
2. ಕಾರ್ಡಿಯಾಕ್ ಅರೆಸ್ಟ್: ಇದು “ಎಲೆಕ್ಟ್ರಿಕಲ್” (ವಿದ್ಯುತ್) ಸಮಸ್ಯೆ!
ಹೃದಯವು ಒಂದು ನಿರ್ದಿಷ್ಟ ಲಯದಲ್ಲಿ ನಿರಂತರವಾಗಿ ಬಡಿಯಲು ಅದರದ್ದೇ ಆದ ಒಂದು ಅತ್ಯಂತ ಸೂಕ್ಷ್ಮವಾದ ವಿದ್ಯುತ್ ವ್ಯವಸ್ಥೆ ಇದೆ. ಈ ಎಲೆಕ್ಟ್ರಿಕಲ್ ಸಿಸ್ಟಮ್‌ನಲ್ಲಿ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಆದಾಗ, ಹೃದಯ ಬಡಿಯುವುದು ದಿಢೀರನೆ ಸಂಪೂರ್ಣವಾಗಿ ನಿಂತುಹೋಗುತ್ತದೆ. ಇದೇ ಕಾರ್ಡಿಯಾಕ್ ಅರೆಸ್ಟ್.
ನೂರು ಕಿಲೋಮೀಟರ್ ವೇಗದಲ್ಲಿ ಹೋಗುತ್ತಿರುವ ಕಾರಿನ ಬ್ಯಾಟರಿ ಅಥವಾ ಎಲೆಕ್ಟ್ರಾನಿಕ್ ಸಿಸ್ಟಮ್ ಒಮ್ಮೆಲೇ ಫೇಲ್ ಆಗಿ, ಕಾರು ದಿಢೀರನೆ ಆಫ್ ಆಗಿ ನಡುರಸ್ತೆಯಲ್ಲಿ ನಿಂತುಹೋದ ಹಾಗೆ! ಇಲ್ಲಿ ರೋಗಿಗೆ ನೋವು ಹೇಳಿಕೊಳ್ಳಲೂ ಸಮಯವಿರುವುದಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೆ ತಕ್ಷಣ ಮರ ಕಡಿದು ಬಿದ್ದ ಹಾಗೆ ಪ್ರಜ್ಞೆ ತಪ್ಪಿ ಬೀಳುತ್ತಾನೆ. ನಾಡಿ ಬಡಿತ (ಪಲ್ಸ್) ಇರುವುದಿಲ್ಲ ಮತ್ತು ಉಸಿರಾಟ ಸಂಪೂರ್ಣವಾಗಿ ನಿಂತುಹೋಗಿರುತ್ತದೆ.
ಪರಿಹಾರ
ಇದೊಂದು ಅತ್ಯಂತ ತುರ್ತು ಪರಿಸ್ಥಿತಿ. ತಕ್ಷಣವೇ ರೋಗಿಯ ಎದೆಗೆ ಎರಡೂ ಕೈಗಳಿಂದ ಬಲವಾಗಿ ಒತ್ತುತ್ತಾ ಸಿಪಿಆರ್ (CPR – Cardiopulmonary Resuscitation) ಮಾಡದಿದ್ದರೆ ಅಥವಾ ಡಿಫಿಬ್ರಿಲೇಟರ್ (ಶಾಕ್ ಕೊಡುವ ಯಂತ್ರ) ಬಳಸದಿದ್ದರೆ, ಕೇವಲ ಮೂರರಿಂದ ಐದು ನಿಮಿಷಗಳಲ್ಲಿ ಮೆದುಳಿಗೆ ರಕ್ತ ಹೋಗದೆ ಸಾವು ಸಂಭವಿಸುತ್ತದೆ.
ಗಮನಿಸಿ: ಹಲವು ಬಾರಿ ದೊಡ್ಡ ಮಟ್ಟದ ಹಾರ್ಟ್ ಅಟ್ಯಾಕ್ ಆದಾಗ, ಅದು ಎಲೆಕ್ಟ್ರಿಕಲ್ ಸಿಸ್ಟಮ್ ಅನ್ನು ಹಾಳುಮಾಡಿ ಕಾರ್ಡಿಯಾಕ್ ಅರೆಸ್ಟ್‌ಗೆ ದಾರಿ ಮಾಡಿಕೊಡಬಹುದು.
ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರೂ ಸಿಪಿಆರ್ ಮಾಡುವುದನ್ನು ಕಲಿತುಕೊಂಡಿರಬೇಕಾದ್ದು ಇಂದಿನ ಅಗತ್ಯ.
3. ಹಾರ್ಟ್ ಫೇಲ್ಯೂರ್: ಇದು “ಮೆಕ್ಯಾನಿಕಲ್” (ಯಾಂತ್ರಿಕ) ಸಮಸ್ಯೆ!
‘ಫೇಲ್ಯೂರ್’ ಅಂದ ತಕ್ಷಣ ಹೃದಯ ತನ್ನ ಕೆಲಸವನ್ನೇ ನಿಲ್ಲಿಸಿದೆ, ಇನ್ನು ಕಥೆ ಮುಗಿಯಿತು ಎಂದು ಜನ ಗಾಬರಿಯಾಗುತ್ತಾರೆ. ಆದರೆ ಹಾರ್ಟ್ ಫೇಲ್ಯೂರ್ ಎಂದರೆ ಹೃದಯ ನಿಂತಿದೆ ಎಂದರ್ಥವಲ್ಲ! ಬದಲಾಗಿ, ನಮ್ಮ ದೇಹಕ್ಕೆ ಎಷ್ಟು ರಕ್ತ ಬೇಕೋ ಅಷ್ಟು ರಕ್ತವನ್ನು ಪಂಪ್ ಮಾಡುವ ಶಕ್ತಿಯನ್ನು ಹೃದಯ ಕಳೆದುಕೊಂಡಿದೆ (ದುರ್ಬಲ ಆಗಿದೆ) ಎಂದರ್ಥ.
ವಾಹನದ ಎಂಜಿನ್ ತುಂಬಾ ಹಳೆಯದಾಗಿ, ಸವೆದು ಹೋಗಿ ತನ್ನ ಶಕ್ತಿಯನ್ನು ಕಳೆದುಕೊಂಡ ಹಾಗೆ. ಸಮತಟ್ಟಾದ ರಸ್ತೆಯಲ್ಲಿ ಅದು ಸುಮಾರಾಗಿ ಓಡಿದರೂ, ಕಡಿದಾದ ಗುಡ್ಡ ಹತ್ತಲು ಆ ಎಂಜಿನ್‌ಗೆ ಶಕ್ತಿ ಇರುವುದಿಲ್ಲ, ಉಸಿರು ಕಟ್ಟಿದಂತೆ ಒದ್ದಾಡುತ್ತದೆ. ದೀರ್ಘಕಾಲದ ಹೈ ಬಿಪಿ (ರಕ್ತದೊತ್ತಡ), ಹಿಂದಿನ ಹಾರ್ಟ್ ಅಟ್ಯಾಕಿನಿಂದಾಗಿ ಸ್ನಾಯುಗಳಿಗೆ ಆದ ಹಾನಿ, ಅಥವಾ ವಯಸ್ಸಾಗುತ್ತಾ ಹೋದಂತೆ ಹೃದಯದ ಸ್ನಾಯುಗಳು ದುರ್ಬಲವಾದಾಗ ಈ ಸಮಸ್ಯೆ ಬರುತ್ತದೆ.
ಪಂಪಿಂಗ್ ಸಾಮರ್ಥ್ಯ ಕಡಿಮೆಯಾದಾಗ, ನೀರು ಶ್ವಾಸಕೋಶದಲ್ಲಿ ಮತ್ತು ಕಾಲುಗಳಲ್ಲಿ ಶೇಖರಣೆಯಾಗಲು ಶುರುವಾಗುತ್ತದೆ. ರೋಗಿಗೆ ಸ್ವಲ್ಪ ನಡೆದರೂ ವಿಪರೀತ ಆಯಾಸ, ಉಸಿರಾಟದ ತೊಂದರೆ ಮತ್ತು ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ರಾತ್ರಿ ಮಲಗಿದಾಗ ಉಸಿರುಕಟ್ಟಿದಂತಾಗಿ ಎಚ್ಚರವಾಗುತ್ತದೆ.
ಪರಿಹಾರ
ಇದು ತಕ್ಷಣವೇ ಪ್ರಾಣ ತೆಗೆಯುವುದಿಲ್ಲ. ಸರಿಯಾದ ಮಾತ್ರೆಗಳ ಮೂಲಕ ಮತ್ತು ಜೀವನಶೈಲಿಯ ಬದಲಾವಣೆಯ ಮೂಲಕ ಇದನ್ನು ಯಶಸ್ವಿಯಾಗಿ ನಿಯಂತ್ರಣದಲ್ಲಿ ಇಡಬಹುದು.
ಸರಳ ಸೂತ್ರ
ಒಟ್ಟಾರೆಯಾಗಿ ನೀವು ನೆನಪಿಟ್ಟುಕೊಳ್ಳಬೇಕಾದ ಸರಳ ಸೂತ್ರ ಇಲ್ಲಿದೆ ನೋಡಿ:
- ರಕ್ತನಾಳ ಬ್ಲಾಕ್ ಆಗಿ ರಕ್ತ ಪೂರೈಕೆ ನಿಂತು ಸ್ನಾಯುಗಳಿಗೆ ಹಾನಿಯಾದರೆ ಅದು ಹಾರ್ಟ್ ಅಟ್ಯಾಕ್ (ಪ್ಲಂಬಿಂಗ್ ಸಮಸ್ಯೆ).
- ಹೃದಯದ ಎಲೆಕ್ಟ್ರಿಕ್ ಸಿಸ್ಟಮ್ ಹಾಳಾಗಿ ಬಡಿತವೇ ಏಕಾಏಕಿ ನಿಂತು ಹೋದರೆ ಅದು ಕಾರ್ಡಿಯಾಕ್ ಅರೆಸ್ಟ್ (ಎಲೆಕ್ಟ್ರಿಕಲ್ ಸಮಸ್ಯೆ).
- ಹೃದಯ ತನ್ನ ಪಂಪಿಂಗ್ ಸಾಮರ್ಥ್ಯ ಕಳೆದುಕೊಂಡು ವೀಕ್ ಆಗಿದ್ದರೆ ಅದು ಹಾರ್ಟ್ ಫೇಲ್ಯೂರ್ (ಮೆಕ್ಯಾನಿಕಲ್ ಸಮಸ್ಯೆ).
ಈ ವ್ಯತ್ಯಾಸಗಳನ್ನು ತಿಳಿದುಕೊಳ್ಳುವುದು ಕೇವಲ ನಮ್ಮ ವೈದ್ಯಕೀಯ ಜ್ಞಾನ ಹೆಚ್ಚಿಸಿಕೊಳ್ಳಲು ಮಾತ್ರವಲ್ಲ, ಬದಲಾಗಿ ತುರ್ತು ಪರಿಸ್ಥಿತಿಯಲ್ಲಿ ಸರಿಯಾಗಿ ಸ್ಪಂದಿಸಲು. ಕಾರ್ಡಿಯಾಕ್ ಅರೆಸ್ಟ್ ಆದಾಗ ತಕ್ಷಣ ಸಿಪಿಆರ್ ಮಾಡುವುದು ಎಷ್ಟು ಮುಖ್ಯವೋ, ಹಾರ್ಟ್ ಅಟ್ಯಾಕ್ ಆದಾಗ ‘ಗೋಲ್ಡನ್ ಅವರ್’ನಲ್ಲಿ ರೋಗಿಯನ್ನು ಆಸ್ಪತ್ರೆಗೆ ತಲುಪುವುದು ಅಷ್ಟೇ ಮುಖ್ಯ.
ವಿಶ್ವ ಹೃದಯ ದಿನದ ಸಂದೇಶ ಇಷ್ಟೇ: ಇನ್ನೊಮ್ಮೆ ಯಾರಾದರೂ ಈ ಪದಗಳನ್ನು ತಪ್ಪಾಗಿ ಬಳಸಿದರೆ, ಅವರಿಗೆ ನಮ್ಮ ‘ಎಂಜಿನ್’ನ ಕಥೆಯನ್ನು ಹೇಳಿ ಅರ್ಥ ಮಾಡಿಸಿ! ನಿಮ್ಮ ದೇಹವೆಂಬ ವಾಹನದ ಎಂಜಿನ್ ಆದ ಈ ‘ಹೃದಯ’ವನ್ನು ಚೆನ್ನಾಗಿ ಸರ್ವೀಸ್ ಮಾಡಿಸಿಟ್ಟುಕೊಳ್ಳಿ. ಸಾತ್ವಿಕ ಆಹಾರ, ನಿತ್ಯದ ವ್ಯಾಯಾಮ ಮತ್ತು ನಗುನಗುತ್ತಾ ಖುಷಿಯಾಗಿರುವುದೇ ಇದಕ್ಕೆ ಅತ್ಯುತ್ತಮ ಎಂಜಿನ್ ಆಯಿಲ್.










Leave a Reply