ಕೊಲೆಸ್ಟೆರಾಲ್ ಇಳಿಸುವ ‘ಸ್ಟಾಟಿನ್’ ಔಷಧ: ವಾಸ್ತವ ಗೊತ್ತೇ?

Cholesterol-Lowering ‘Statin’ Medications: Do You Know the Real Story?

ನಮ್ಮ ಆಸ್ಪತ್ರೆಯಲ್ಲಿ ಆಗಾಗ 30 ರಿಂದ 45 ವರ್ಷದ ಯುವಕರು ಹಾರ್ಟ್ ಅಟ್ಯಾಕ್ ಆಗಿ ಬರುವುದನ್ನು ನೋಡುತ್ತಿರುತ್ತೇನೆ. ದಿನಬೆಳಗಾದರೆ ಪತ್ರಿಕೆಗಳಲ್ಲೂ ಇಂತಹ ಎಳೆಯ ವಯಸ್ಸಿನ ಸಾವುಗಳ ಬಗ್ಗೆ ಓದುತ್ತೇವೆ. ನನಗೆ ಇದು ನಿಜಕ್ಕೂ ನೋವು ತರುವ ವಿಚಾರ. ನಮ್ಮ ರಕ್ತನಾಳಗಳ ಅನಾರೋಗ್ಯದಿಂದ ಬರುವ ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ತಡೆಗಟ್ಟಬಹುದಾದ ತೊಂದರೆಗಳು ಪ್ರಪಂಚದಲ್ಲೇ ಅತಿ ಹೆಚ್ಚು ಜನರನ್ನು ಬಲಿಪಡೆಯುತ್ತಿವೆ.

ನಮ್ಮ ಭಾರತದ ಪರಿಸ್ಥಿತಿಯಂತೂ ಇನ್ನೂ ಚಿಂತೆ ಮೂಡಿಸುವಂತಿದೆ. ಪ್ರಪಂಚದಲ್ಲಿ ಹೃದಯ ಕಾಯಿಲೆಯಿಂದ ಸಾಯುವ ಪ್ರತಿ 5 ಜನರಲ್ಲಿ ಒಬ್ಬರು ನಮ್ಮವರೇ ಆಗಿದ್ದಾರೆ. ಪಾಶ್ಚಿಮಾತ್ಯ ದೇಶಗಳಲ್ಲಿ ಈ ತೊಂದರೆಗಳು ಕಾಣಿಸಿಕೊಳ್ಳುವ ವಯಸ್ಸಿನ 10 ರಿಂದ 15 ವರ್ಷ ಮುಂಚಿತವಾಗಿಯೇ ನಮ್ಮಲ್ಲಿ ಹಾರ್ಟ್ ಅಟ್ಯಾಕ್ ಕಾಣಿಸಿಕೊಳ್ಳುತ್ತಿದೆ. ನಮ್ಮ ಅಜ್ಜನ ಪೀಳಿಗೆಯವರಿಗೆ 60 ವರ್ಷಕ್ಕೆ ಬರುವ ಕಾಯಿಲೆ, ನಮ್ಮಲ್ಲಿ ಈಗ 30 ಕ್ಕೇ ಬರುತ್ತಿದೆ. ಯಾಕೆ ಹೀಗಾಗುತ್ತಿದೆ?

ನಮ್ಮ ಊಟದ ಅಭ್ಯಾಸಗಳು ಸಂಪೂರ್ಣ ಬದಲಾಗಿವೆ. ಪ್ರಾಸೆಸ್ಡ್ ಫುಡ್, ಎಣ್ಣೆ, ಸಕ್ಕರೆ ಜಾಸ್ತಿಯಾಗಿದೆ ಮತ್ತು ದೈಹಿಕ ಶ್ರಮ ಕಡಿಮೆಯಾಗಿದೆ. ಅನುಕೂಲ ಹೆಚ್ಚಾಗಿ ನಮ್ಮ ಆರಾಮವೇ ನಮಗೆ ಮುಳುವಾಗಿದೆ. ಬದುಕು ಎಷ್ಟು ಆರಾಮವಾಯಿತೋ, ಆರೋಗ್ಯ ಅಷ್ಟೇ ಜಟಿಲವಾಗುತ್ತಿದೆ. ಇವು ‘ಜೀವನಶೈಲಿಯ ಕಾಯಿಲೆ’ಗಳಲ್ಲ, ‘ಸೌಲಭ್ಯ-ಪ್ರೇರಿತ’ ಕಾಯಿಲೆಗಳು.

ಆದರೆ, ಇಲ್ಲಿ ನಾನು ಇನ್ನೊಂದು ಮಾತನ್ನು ಸ್ಪಷ್ಟಪಡಿಸಬೇಕು. ಪ್ರತಿಯೊಬ್ಬರಿಗೂ ಈ ಮಾತು ಖಂಡಿತ ಅನ್ವಯಿಸುವುದಿಲ್ಲ. ಕೆಲವರಿಗೆ, ಅವರು ಎಷ್ಟೇ ಒಳ್ಳೆ ಆಹಾರ, ವ್ಯಾಯಾಮ ಮಾಡಿದರೂ ಕೊಲೆಸ್ಟೆರಾಲ್ ಹೆಚ್ಚಾಗುವ ತೊಂದರೆ ಇರುತ್ತದೆ. ಇದನ್ನು ‘ಫೆಮಿಲಿಯಲ್ ಹೈಪರ್‌ಕೊಲೆಸ್ಟೆರಾಲೀಮಿಯಾ’, ಅಂದರೆ ವಂಶಪಾರಂಪರ್ಯವಾಗಿ ಬರುವ ಅಧಿಕ ಕೊಲೆಸ್ಟೆರಾಲ್ ಸಮಸ್ಯೆ ಎನ್ನುತ್ತೇವೆ.

ಹೆಚ್ಚಿನ ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್‌ಗಳಿಗೆ ಅಸಲಿ ಕಾರಣ ಅಥೆರೋಸ್ಕ್ಲಿರೋಸಿಸ್. ರಕ್ತನಾಳಗಳ ಒಳಗೆ ಹಲವಾರು ವರ್ಷಗಳ ಕಾಲ ಕೆಟ್ಟ ಕೊಲೆಸ್ಟೆರಾಲ್ ಶೇಖರಣೆಯಾಗಿ ಗಂಟಾಗುವ ಪ್ರಕ್ರಿಯೆಗೆ ನಾವು ಅಥೆರೋಸ್ಕ್ಲಿರೋಸಿಸ್ ಎನ್ನುತ್ತೇವೆ. ಈ ಜಿಡ್ಡು ಅಥವಾ ಕೊಬ್ಬಿನ ಗಂಟುಗಳು (ಪ್ಲಾಕ್) ಸದ್ದಿಲ್ಲದೆ ಬೆಳೆಯುತ್ತವೆ. ಯಾವುದೋ ಒಂದು ದಿನ ಇದ್ದಕ್ಕಿದ್ದಂತೆ ಈ ಕೊಬ್ಬಿನ ಗಂಟು ಒಡೆದು, ಅದರ ಮೇಲೆ ರಕ್ತ ಹೆಪ್ಪುಗಟ್ಟಿ, ಆ ಹೆಪ್ಪು ರಕ್ತನಾಳವನ್ನು ಸಂಪೂರ್ಣವಾಗಿ ಮುಚ್ಚಿಹಾಕುತ್ತದೆ. ಇದು ಹೃದಯದ ರಕ್ತನಾಳದಲ್ಲಿ ಆದರೆ ಹಾರ್ಟ್ ಅಟ್ಯಾಕ್. ಮೆದುಳಿನ ರಕ್ತನಾಳದಲ್ಲಿ ಆದರೆ ಸ್ಟ್ರೋಕ್.

ಇದರ ಅತಿ ದೊಡ್ಡ ಅಪಾಯ ಏನು ಗೊತ್ತೇ? ಯಾವುದೇ ಲಕ್ಷಣಗಳನ್ನೂ ನಿಮಗೆ ತೋರಿಸಿಕೊಳ್ಳದೇ ಈ ಪ್ರಕ್ರಿಯೆ ದಶಕಗಳ ಕಾಲ ನಿಮ್ಮ ದೇಹದೊಳಗೆ ಸದ್ದಿಲ್ಲದೆ ನಡೆಯುತ್ತಿರಬಹುದು.

ಈ ಸ್ಟಾಟಿನ್ ಔಷಧಗಳು ಏನು ಮಾಡುತ್ತವೆ?

ಸ್ಟಾಟಿನ್ ಅಂದರೆ ಕೊಲೆಸ್ಟೆರಾಲ್ ನಿಯಂತ್ರಣ ಮಾಡುವ ಅತಿ ಮುಖ್ಯವಾದ ಔಷಧಗಳು. ನಮ್ಮಲ್ಲಿ ಸಾಮಾನ್ಯವಾಗಿ ‘ಅಟೊರ್ವಾಸ್ಟಾಟಿನ್’ ಮತ್ತು ‘ರೊಸುವಾಸ್ಟಾಟಿನ್’ ಎಂಬ ಔಷಧಗಳನ್ನು ಹೆಚ್ಚಾಗಿ ಬಳಸುತ್ತೇವೆ. ಇವು ಲಿವರ್‌ನಲ್ಲಿ ನಮಗೆ ಬೇಕಿದ್ದಕ್ಕಿಂತ ಹೆಚ್ಚು ಕೊಲೆಸ್ಟೆರಾಲ್ ಉತ್ಪಾದನೆ ಮಾಡುತ್ತಿರುವ ಎಂಜೈಮ್‌ಗಳ ಕೆಲಸವನ್ನು ನಿಯಂತ್ರಣ ಮಾಡುತ್ತವೆ. ಉತ್ಪಾದನೆ ಕಡಿಮೆಯಾದಾಗ, ರಕ್ತದಲ್ಲಿರುವ ‘ಕೆಟ್ಟ ಕೊಲೆಸ್ಟೆರಾಲ್’ (ಎಲ್.ಡಿ.ಎಲ್) ಅನ್ನು ಲಿವರ್ ತನ್ನತ್ತ ಎಳೆದುಕೊಳ್ಳುತ್ತದೆ. ಇದರಿಂದಾಗಿ ರಕ್ತದಲ್ಲಿ ನಿಮ್ಮ ಎಲ್.ಡಿ.ಎಲ್ ಕೊಲೆಸ್ಟೆರಾಲ್ ಮಟ್ಟ ಶೇಕಡಾ 30 ರಿಂದ 50 ರಷ್ಟು ಕಡಿಮೆಯಾಗಿ, ರಕ್ತನಾಳಗಳಲ್ಲಿ ಕೊಬ್ಬಿನ ಗಂಟು ಕಟ್ಟುವ ಪ್ರಕ್ರಿಯೆ ನಿಧಾನವಾಗುತ್ತದೆ.

ಇನ್ನೂ ಒಂದು ವಿಷಯ. ಈ ಸ್ಟಾಟಿನ್ ಮದ್ದು ಕೇವಲ ಕೊಲೆಸ್ಟೆರಾಲ್ ಇಳಿಸುವುದು ಮಾತ್ರವಲ್ಲ, ರಕ್ತನಾಳಗಳ ಮೇಲೆ ಬೇರೆ ಅನೇಕ ಒಳ್ಳೆಯ ಪರಿಣಾಮಗಳನ್ನೂ ಮಾಡುತ್ತದೆ. ಈ ಔಷಧಗಳು ರಕ್ತನಾಳಗಳ ಒಳಪದರವನ್ನು ಆರೋಗ್ಯವಾಗಿಡುತ್ತವೆ. ಕೊಬ್ಬಿನ ಗಂಟು ಬೆಳೆಯಲು ಕಾರಣವಾಗುವ ಉರಿಯೂತವನ್ನು ಕಡಿಮೆ ಮಾಡುತ್ತವೆ. ಈಗಾಗಲೇ ಆಗಿರುವ ಕೊಬ್ಬಿನ ಗಂಟುಗಳು ಒಡೆದು ಹೋಗದಂತೆ ಭದ್ರಪಡಿಸುತ್ತವೆ. ಜೊತೆಗೆ ರಕ್ತ ಹೆಪ್ಪುಗಟ್ಟುವ ಅಪಾಯವನ್ನೂ ಸ್ವಲ್ಪ ಮಟ್ಟಿಗೆ ತಪ್ಪಿಸುತ್ತವೆ. ಕೇವಲ ಕೊಲೆಸ್ಟೆರಾಲ್ ಇಳಿಸುವುದಕ್ಕಿಂತಲೂ ಹೆಚ್ಚಾಗಿ, ಸ್ಟಾಟಿನ್ ಒಟ್ಟಾರೆ ಹೃದಯವನ್ನು ರಕ್ಷಿಸುತ್ತದೆ.

ರಿಪೋರ್ಟ್ ನಾರ್ಮಲ್ ಬಂದ ತಕ್ಷಣ ಔಷಧ ನಿಲ್ಲಿಸಬೇಡಿ

ಹಲವರು ಮಾಡುವ ಅತಿ ದೊಡ್ಡ ತಪ್ಪು ಇದು. ಎರಡು ತಿಂಗಳು ಸ್ಟಾಟಿನ್ ತೆಗೆದುಕೊಂಡ ಮೇಲೆ ರಕ್ತಪರೀಕ್ಷೆ ಮಾಡಿಸಿದಾಗ ಕೊಲೆಸ್ಟೆರಾಲ್ ರಿಪೋರ್ಟ್ ‘ನಾರ್ಮಲ್’ ಬರುತ್ತದೆ. ತಕ್ಷಣ, “ನನ್ನ ಕಾಯಿಲೆ ವಾಸಿಯಾಯಿತು” ಎಂದು ವೈದ್ಯರನ್ನು ಕೇಳದೆಯೇ ಔಷಧ ನಿಲ್ಲಿಸಿಬಿಡುತ್ತಾರೆ. ನಿಮ್ಮ ರಿಪೋರ್ಟ್ ನಾರ್ಮಲ್ ಆಗಿರುವುದೇ ಆ ಮಾತ್ರೆಯಿಂದ ಎನ್ನುವುದನ್ನು ಮರೆಯಬೇಡಿ. ಮಾತ್ರೆ ನಿಲ್ಲಿಸಿದರೆ ಕೇವಲ ಕೆಲವೇ ವಾರಗಳಲ್ಲಿ ನಿಮ್ಮ ಕೊಲೆಸ್ಟೆರಾಲ್ ಮತ್ತೆ ಮೊದಲಿನ ಅಪಾಯಕಾರಿ ಮಟ್ಟಕ್ಕೆ ಹೋಗುತ್ತದೆ.

ಜನಸಾಮಾನ್ಯರ ಭಯ ಮತ್ತು ಅಸಲಿ ಸತ್ಯ

ಇಂಟರ್ನೆಟ್‌ನಲ್ಲಿ ಓದಿ ಅಥವಾ ಯಾರೋ ಹೇಳಿದ್ದನ್ನು ಕೇಳಿ ಅನೇಕರು ಈ ಔಷಧ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಾರೆ. ನಮ್ಮ ಆಸ್ಪತ್ರೆಯಲ್ಲಿ ಇಂಥವರನ್ನು ನಾನು ಆಗಾಗ ನೋಡುತ್ತೇನೆ. ನಮ್ಮ ಜನರಲ್ಲಿರುವ ಸಾಮಾನ್ಯ ಅನುಮಾನಗಳೇನು ಮತ್ತು ಅದರ ಹಿಂದಿನ ವೈಜ್ಞಾನಿಕ ಸತ್ಯವೇನು ಎಂದು ನೋಡೋಣ.

“ಸ್ಟಾಟಿನ್ ತಗೊಂಡರೆ ಡಯಾಬಿಟಿಸ್ ಬರುತ್ತದೆಯಂತೆ.”

ಇದು ಜನರನ್ನು ಕಾಡುವ ಅತಿ ದೊಡ್ಡ ಭಯ. ಇದರಲ್ಲಿ ಸ್ವಲ್ಪ ನಿಜವಿದೆ, ಆದರೆ ಇದರ ಅಸಲಿ ಲೆಕ್ಕಾಚಾರ ಬಹಳ ಜನರಿಗೆ ಗೊತ್ತಿಲ್ಲ. ನಾನು ನಿಮಗೆ ಇದನ್ನು ಬಹಳ ಸರಳವಾಗಿ ಬಿಡಿಸಿ ಹೇಳುತ್ತೇನೆ, ಗಮನಿಸಿ.

ವಯಸ್ಸಾದಂತೆ ನಮ್ಮೆಲ್ಲರಿಗೂ ಸಹಜವಾಗಿಯೇ ಡಯಾಬಿಟಿಸ್ ಬರುವ ಸಾಧ್ಯತೆ ಇದ್ದೇ ಇರುತ್ತದೆ, ಹೌದಲ್ಲವೇ? ಉದಾಹರಣೆಗೆ, ಮುಂದಿನ 4 ವರ್ಷಗಳಲ್ಲಿ ನಿಮಗೆ ಶುಗರ್ ಕಾಯಿಲೆ ಬರುವ ಸಹಜ ಸಾಧ್ಯತೆ ಶೇಕಡಾ 12 (12%) ಇದೆ ಎಂದುಕೊಳ್ಳೋಣ. ಸ್ಟಾಟಿನ್ ಈ ಅಪಾಯವನ್ನು ಶೇಕಡಾ 9 ರಷ್ಟು ಹೆಚ್ಚಿಸುತ್ತದೆ ಎನ್ನುತ್ತದೆ ವಿಜ್ಞಾನ. ‘ಶೇಕಡಾ 9’ ಅಂದಾಕ್ಷಣ ಜನ ಗಾಬರಿಯಾಗುತ್ತಾರೆ. ಆದರೆ ಈ ಅಪಾಯ 12% ಇದ್ದದ್ದು ದಿಢೀರನೆ 21% ಆಗುವುದಿಲ್ಲ, 12 ರ ಒಂಬತ್ತು ಪರ್ಸೆಂಟ್ ಅಂದರೆ ಕೇವಲ 1.08% ಮಾತ್ರ ಹೆಚ್ಚಾಗಬಹುದು! ಅಂಕಿ-ಅಂಶಗಳ ಭಾಷೆಯಲ್ಲಿ, ತೋರಿಕೆಯ ಅಪಾಯ (ರಿಲೇಟಿವ್ ರಿಸ್ಕ್) ಮತ್ತು ನಿಜವಾದ ಅಪಾಯಗಳ (ಅಬ್ಸೊಲ್ಯೂಟ್ ರಿಸ್ಕ್) ನಡುವಿನ ಅಸಲಿ ವ್ಯತ್ಯಾಸವೇ ಇದು.

ಅಂದರೆ, ನಿಮ್ಮ ನಿಜವಾದ ರಿಸ್ಕ್ 12% ಇಂದ 13% ಗೆ ಏರುತ್ತದೆ (13.08%). ಆದರೆ ಇದೇ ಔಷಧ ನಿಮ್ಮ ದೇಹವನ್ನು ಹಾರ್ಟ್ ಅಟ್ಯಾಕ್ ಮತ್ತು ಸ್ಟ್ರೋಕ್‌ನಿಂದ ಕಾಪಾಡುವ ಲಾಭ ಇದೆಯಲ್ಲ, ಅದು ಈ 1% ರಿಸ್ಕ್‌ಗಿಂತ ನೂರಾರು ಪಟ್ಟು ಹೆಚ್ಚು. ತೆಗೆದುಕೊಳ್ಳುವಾಗ ಆಗಾಗ ಶುಗರ್ ಟೆಸ್ಟ್ ಮಾಡಿಸಬೇಕೇ? ಖಂಡಿತ ಹೌದು. ಆದರೆ ಈ ಒಂದು ಪರ್ಸೆಂಟ್ ಭಯಕ್ಕೆ, ಆರೋಗ್ಯ ಮತ್ತು ಪ್ರಾಣ ಕಾಪಾಡುವ ಔಷಧ ಬಿಡುವುದು ಬುದ್ಧಿವಂತಿಕೆಯೇ? ನೀವೇ ಯೋಚಿಸಿ.

“ಇದರಿಂದ ಮರೆವು ಮತ್ತು ಡಿಮೆನ್ಶಿಯಾ ಬರುತ್ತದೆಯಂತೆ.”

ಇದು ಶುದ್ಧ ಸುಳ್ಳು. ವಾಸ್ತವವಾಗಿ ವೈದ್ಯಕೀಯ ಪುರಾವೆಗಳು ಇದರ ವಿರುದ್ಧವಾಗಿವೆ. 2025 ರಲ್ಲಿ 55 ಬೇರೆ ಬೇರೆ ಅಧ್ಯಯನಗಳ 70 ಲಕ್ಷಕ್ಕೂ ಹೆಚ್ಚು ರೋಗಿಗಳ ಮಾಹಿತಿಯನ್ನು ಪರಿಶೀಲಿಸಲಾಯಿತು. ಸ್ಟಾಟಿನ್ ತೆಗೆದುಕೊಳ್ಳುವವರಲ್ಲಿ ಡಿಮೆನ್ಶಿಯಾ ಬರುವ ಅಪಾಯ ಶೇಕಡಾ 14 ರಷ್ಟು ಕಡಿಮೆಯಾಗಿತ್ತು. ಅಲ್ಝೈಮರ್ ಕಾಯಿಲೆಯ ಅಪಾಯವಂತೂ ಶೇಕಡಾ 18 ರಷ್ಟು ಕಡಿಮೆ ಇತ್ತು! ಮೆದುಳಿಗೆ ಹಾನಿ ಮಾಡುವ ಬದಲು, ರಕ್ತಸಂಚಾರವನ್ನು ಉತ್ತಮಗೊಳಿಸಿ ಮತ್ತು ಉರಿಯೂತವನ್ನು ತಡೆದು ಈ ಸ್ಟಾಟಿನ್ ಮೆದುಳನ್ನು ರಕ್ಷಿಸುತ್ತದೆ.

“ಮೈಕೈ ಮತ್ತು ಸ್ನಾಯು ನೋವು ಶುರುವಾಗುತ್ತದೆ.”

ಸ್ಟಾಟಿನ್ ತೆಗೆದುಕೊಳ್ಳುವ ಶೇಕಡಾ 5 ರಿಂದ 10 ರಷ್ಟು ಜನರಲ್ಲಿ ಸ್ನಾಯು ನೋವು ಬರುವುದು ನಿಜ. ಇದನ್ನು ನೀವು ನಿಮ್ಮ ವೈದ್ಯರ ಗಮನಕ್ಕೆ ತರಬೇಕು. ಆದರೆ ಅಪಾಯಕಾರಿ ಮಟ್ಟದ ಸ್ನಾಯು ಹಾನಿ ಆಗುವುದು ಲಕ್ಷದಲ್ಲಿ ಒಬ್ಬರಿಗೆ ಮಾತ್ರ. ಬಹುತೇಕ ಸಂದರ್ಭಗಳಲ್ಲಿ, ವೈದ್ಯರು ಮಾತ್ರೆಯ ಡೋಸ್ ಬದಲಾಯಿಸಿ, ಅಥವಾ ಬೇರೆ ಔಷಧ ಕೊಟ್ಟು ಈ ಸಮಸ್ಯೆಯನ್ನು ಸುಲಭವಾಗಿ ಬಗೆಹರಿಸುತ್ತಾರೆ. ಇದರ ಭಯಕ್ಕೆ ಸ್ಟಾಟಿನ್ ಬೇಡ ಎನ್ನಬೇಡಿ.

“ಲಿವರ್ ಹಾಳಾಗುತ್ತದೆಯಂತೆ.”

ಈಗಿನ ಸ್ಟಾಟಿನ್ ಔಷಧಗಳಿಂದ ಲಿವರ್‌ಗೆ ಗಂಭೀರ ಹಾನಿಯಾಗುವುದು ಅತಿ ವಿರಳ. ಆದ್ದರಿಂದಲೇ ಈಗೀಗ ಪದೇ ಪದೇ ಲಿವರ್ ಟೆಸ್ಟ್ ಮಾಡಿಸುವ ಅಗತ್ಯವಿಲ್ಲ ಎಂದು ಬಹುತೇಕ ವೈದ್ಯಕೀಯ ಮಾರ್ಗಸೂಚಿಗಳು ಹೇಳುತ್ತವೆ. ಲಿವರ್‌ಗೆ ಹಾನಿ ಮಾಡುವುದು ಹಾಗಿರಲಿ, ಈಗೀಗ ಹೆಚ್ಚುತ್ತಿರುವ ‘ಫ್ಯಾಟಿ ಲಿವರ್’ ತೊಂದರೆಯನ್ನು ಗುಣಪಡಿಸುವಲ್ಲಿಯೂ ಈ ಸ್ಟಾಟಿನ್ ನಮಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡುತ್ತವೆ.

“ಕೊಲೆಸ್ಟೆರಾಲ್ ದೇವರ ಸೃಷ್ಟಿ, ಅದು ಒಳ್ಳೆಯದೇ ಅಲ್ಲವೇ?”

ಇದೊಂದು ಬಹಳ ಮುಖ್ಯವಾದ ವಿಚಾರ. ನೀವು ಕೆಲವರು ಹೇಳುವುದನ್ನು, ಅದರಲ್ಲೂ ಕೆಲವೊಮ್ಮೆ ಹಿರಿಯರೂ ಸಹ ಹೇಳುವುದನ್ನು ಕೇಳಿರಬಹುದು, “ಕೊಲೆಸ್ಟೆರಾಲ್ ದೇಹಕ್ಕೆ ಒಳ್ಳೆಯದು. ಹಾರ್ಮೋನುಗಳ ಉತ್ಪತ್ತಿಗೂ ಕೊಲೆಸ್ಟೆರಾಲ್ ಬೇಕು. ದೇವರು ನಮ್ಮ ದೇಹದಲ್ಲಿ ಕೊಲೆಸ್ಟೆರಾಲ್ ಸುಮ್ಮನೆ ಸೃಷ್ಟಿ ಮಾಡಿದ್ದಾನೆಯೇ? ಅದಿಲ್ಲದೆ ಜೀವಕೋಶಗಳೇ ಇಲ್ಲ. ಹಾಗಿದ್ದ ಮೇಲೆ ಅದನ್ನು ಮಾತ್ರೆ ನುಂಗಿ ಕಡಿಮೆ ಯಾಕೆ ಮಾಡಬೇಕು?”

ಮೇಲ್ನೋಟಕ್ಕೆ ಈ ಮಾತು ಬಹಳ ಸರಿ ಅನ್ನಿಸುತ್ತದೆ, ಅಲ್ಲವೇ? ಹೌದು, ಕೊಲೆಸ್ಟೆರಾಲ್ ನಮ್ಮ ದೇಹಕ್ಕೆ ಅತ್ಯಗತ್ಯ. ಜೀವಕೋಶಗಳ ರಚನೆಗೆ ಅದು ಬೇಕೇ ಬೇಕು. ಆದರೆ, ಪ್ರತಿಯೊಂದಕ್ಕೂ ಒಂದು ‘ಮಿತಿ’ ಅಂತ ಇದೆಯಲ್ಲವೇ?

ಒಮ್ಮೆ ಯೋಚಿಸಿ ನೋಡಿ. ರಕ್ತದಲ್ಲಿನ ಸಕ್ಕರೆ ಅಂಶ (ಗ್ಲುಕೋಸ್) ಕೂಡ ನಮ್ಮ ದೇಹಕ್ಕೆ ಶಕ್ತಿ ಕೊಡಲು ಬೇಕೇ ಬೇಕು. ಅದೂ ದೇವರ ಸೃಷ್ಟಿಯೇ. ಹಾಗೆಂದ ಮಾತ್ರಕ್ಕೆ, ಆ ಸಕ್ಕರೆ ಮಿತಿ ಮೀರಿ ‘ಡಯಾಬಿಟಿಸ್’ ಆದಾಗ, “ಇದು ದೇವರು ಕೊಟ್ಟ ಸಕ್ಕರೆ, ಇರಲಿ ಬಿಡಿ” ಅಂತ ನಾವು ಕೈಕಟ್ಟಿ ಕೂರುತ್ತೇವಾ? ಥೈರಾಯ್ಡ್‌ನಂತಹ ಹಾರ್ಮೋನ್‌ಗಳು ನಮ್ಮ ದೇಹವನ್ನು ಕಾಪಾಡುತ್ತವೆ ನಿಜ. ಆದರೆ ಅವುಗಳ ಸಮತೋಲನ ತಪ್ಪಿದಾಗ ನಾವು ಹಾಗೇ ಬಿಡಬೇಕೇ? ಕೊಲೆಸ್ಟೆರಾಲ್ ಕಥೆಯೂ ಅಷ್ಟೇ. ಮಿತಿ ಮೀರಿದಾಗ ಅದು ರಕ್ತನಾಳಗಳಲ್ಲಿ ಕೊಬ್ಬಿನ ಗಂಟಾಗಿ ಪ್ರಾಣಕ್ಕೆ ಸಂಚಕಾರ ತರುತ್ತದೆ.

ಇನ್ನು, “ದೇವರ ಸೃಷ್ಟಿಯಲ್ಲಿ ಇರುವುದೆಲ್ಲಾ ಒಳ್ಳೆಯದೇ, ಅದಕ್ಕೆ ನಾವು ಅಡ್ಡಿಪಡಿಸಬಾರದು” ಎನ್ನುವ ವಾದಕ್ಕೆ ಬರೋಣ. ಈ ಜಗತ್ತಿನಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳನ್ನು ಸೃಷ್ಟಿ ಮಾಡಿದವನೂ ಅದೇ ದೇವರು, ಹೌದಲ್ಲವೇ? ಹಾಗಾದರೆ, ನಮಗೆ ನ್ಯುಮೋನಿಯಾ ಬಂದಾಗ, “ಪಾಪ, ಈ ಬ್ಯಾಕ್ಟೀರಿಯಾಗಳೂ ದೇವರ ಸೃಷ್ಟಿಯೇ. ಅವುಗಳಿಗೇಕೆ ತೊಂದರೆ ಕೊಡುವುದು? ಯಾವತ್ತಿದ್ದರೂ ಒಂದು ದಿನ ಸಾಯುವವರೇ, ಇವತ್ತು ಈ ಬ್ಯಾಕ್ಟೀರಿಯಾದ ಇನ್ಫೆಕ್ಷನ್‌ನಿಂದಲೇ ಪ್ರಾಣ ಹೋಗಲಿ” ಎಂದು ನಾವು ಔಷಧ ಬಿಡುತ್ತೇವಾ? ಖಂಡಿತ ಇಲ್ಲ. ದಯವಿಟ್ಟು ಹಾಗೆ ಮಾಡಬೇಡಿ.

ದೇವರು ನಮಗೆ ಅತ್ಯದ್ಭುತವಾದ ದೇಹವನ್ನು ಕೊಟ್ಟಿದ್ದಾರೆ, ಜೊತೆಗೆ ಆ ದೇಹದಲ್ಲಿ ಏನಾದರೂ ಏರುಪೇರಾದರೆ ಅದನ್ನು ಸರಿಪಡಿಸಿಕೊಳ್ಳುವ ವಿವೇಕವನ್ನೂ (ಮತ್ತು ವಿಜ್ಞಾನವನ್ನೂ) ಕೊಟ್ಟಿದ್ದಾರೆ. ದೇಹದ ನಿಯಮಗಳು ಮಿತಿ ಮೀರಿದಾಗ, ಸೂಕ್ತ ಚಿಕಿತ್ಸೆಯ ಮೂಲಕ ಅದನ್ನು ಹತೋಟಿಗೆ ತಂದು, ನಮ್ಮ ಭವಿಷ್ಯವನ್ನು ಕಾಪಾಡಿಕೊಳ್ಳುವುದು ಅಸಲಿ ವಿವೇಕವೇ ಹೊರತು, ಇಂತಹ ಕುರುಡು ವಾದವಲ್ಲ.

ಜೀವನಶೈಲಿಯೇ ಮೊದಲ ಹೆಜ್ಜೆ

ನಾವೆಲ್ಲ ಅರ್ಥ ಮಾಡಿಕೊಳ್ಳಬೇಕಾದ ಬಹುಮುಖ್ಯ ವಿಚಾರ ಒಂದಿದೆ. ಸ್ಟಾಟಿನ್ ಔಷಧ ಒಳ್ಳೆಯ ಜೀವನಶೈಲಿಗೆ ಬದಲಿ ಅಲ್ಲ. ಅದು ನಿಮ್ಮ ದಿನನಿತ್ಯದ ಪ್ರಯತ್ನಕ್ಕೆ ನೀಡುವ ಒಂದು ಹೆಚ್ಚುವರಿ ಬೆಂಬಲ ಮಾತ್ರ.

ಹೃದಯದ ಆರೋಗ್ಯಕ್ಕೆ ಪ್ರತಿದಿನದ ವ್ಯಾಯಾಮ (ಕನಿಷ್ಠ 30 ನಿಮಿಷ ಬಿರುಸಿನ ನಡಿಗೆ), ತರಕಾರಿ, ಹಣ್ಣು, ಕಾಳುಗಳು ಮತ್ತು ನಾರಿನಂಶವಿರುವ ಸಮತೋಲಿತ ಆಹಾರ, ಧೂಮಪಾನದಿಂದ ದೂರವಿರುವುದು ಹಾಗೂ ಸರಿಯಾದ ತೂಕ ಕಾಯ್ದುಕೊಳ್ಳುವುದು ತಳಪಾಯವಿದ್ದಂತೆ. ಇವು ನಿಮ್ಮ ಹೃದಯವನ್ನು ಮಾತ್ರವಲ್ಲ, ನಿಮ್ಮ ನಿದ್ದೆ, ಉತ್ಸಾಹ ಮತ್ತು ಮನಸ್ಥಿತಿಯನ್ನೂ ಉತ್ತಮಗೊಳಿಸುತ್ತವೆ.

ಎಲ್ಲರಿಗೂ ಸ್ಟಾಟಿನ್ ಅಗತ್ಯವಿರುವುದಿಲ್ಲ. ನಿಮ್ಮ ಅಪಾಯದ ಮಟ್ಟ ಕಡಿಮೆ ಇದ್ದರೆ, ಕೇವಲ ಜೀವನಶೈಲಿಯ ಬದಲಾವಣೆಯೇ ಸಾಕು. ಆದರೆ ನಿಮ್ಮ ರಿಸ್ಕ್ ಎಷ್ಟಿದೆ ಎಂದು ನೀವು ಮೊದಲು ತಿಳಿದುಕೊಳ್ಳಬೇಕು. ಹಾರ್ಟ್ ರಿಸ್ಕ್ ಕ್ಯಾಲ್ಕುಲೇಟರ್ (https://mediscuss.org/heart-risk) ಬಳಸಿ ನಿಮ್ಮ ಹೃದಯ ರೋಗದ ರಿಸ್ಕ್ ಲೆಕ್ಕ ಹಾಕಿ ಮತ್ತು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.

ಹೃದಯದ ಬಗ್ಗೆ ಇಷ್ಟೆಲ್ಲ ಕಾಳಜಿ ಯಾಕೆ ಬೇಕು?

ಏಕೆಂದರೆ, ಒಂದು ಬಾರಿ ನಿಮ್ಮ ರಕ್ತನಾಳದ ಒಳಗೆ ಹಾನಿಯಾದರೆ, ಅದನ್ನು ಮತ್ತೆ ಮೊದಲಿನಂತೆ ಮಾಡುವುದು ಬಹಳ ಕಷ್ಟ. ಹಾಗಾಗಿ ರೋಗ ಬರದಂತೆ ತಡೆಯುವುದೇ ಅಸಲಿ ಚಿಕಿತ್ಸೆ.

ಹೃದಯದ ರಿಸ್ಕ್ ಕಡಿಮೆ ಮಾಡಲು ನಾವು ಹಲವಾರು ಅಸ್ತ್ರಗಳನ್ನು ಒಟ್ಟಾಗಿ ಬಳಸುತ್ತೇವೆ. ಜೀವನಶೈಲಿಯ ಬದಲಾವಣೆ ಎಲ್ಲಕ್ಕಿಂತ ಶಕ್ತಿಶಾಲಿ ಮತ್ತು ಮೊದಲನೆಯದು. ಸ್ಟಾಟಿನ್, ಬಿಪಿ ಔಷಧಗಳು ಮತ್ತು ಡಯಾಬಿಟಿಸ್ ಔಷಧಗಳು ನಿರ್ದಿಷ್ಟ ಸಮಸ್ಯೆಗಳನ್ನು ಗುರಿಯಾಗಿಸುತ್ತವೆ. ಆಸ್ಪಿರಿನ್ ನಂತಹ ರಕ್ತ ತೆಳುವಾಗಿಸುವ ಔಷಧಗಳನ್ನು, ಈಗಾಗಲೇ ಹಾರ್ಟ್ ಅಟ್ಯಾಕ್ ಅಥವಾ ಸ್ಟ್ರೋಕ್ ಆದವರಿಗೆ ಮಾತ್ರ ಕೊಡುತ್ತೇವೆ.

ನಮ್ಮ ಗುರಿ ಕೇವಲ ಒಂದು ರಿಪೋರ್ಟ್ ನಂಬರ್ ಸರಿಪಡಿಸುವುದಲ್ಲ. ನಿಮ್ಮ ಆಹಾರ, ವ್ಯಾಯಾಮ, ಧೂಮಪಾನ, ಬಿಪಿ, ಕೊಲೆಸ್ಟೆರಾಲ್ ಮತ್ತು ಶುಗರ್… ಇವೆಲ್ಲವನ್ನೂ ಒಟ್ಟಾಗಿ ನಿಭಾಯಿಸಿ ಯಾವುದೋ ದೊಡ್ಡ ಅನಾಹುತ ಆಗುವವರೆಗೂ ಕಾಯದೇ ನಿಮ್ಮ ಒಟ್ಟಾರೆ ರಿಸ್ಕ್ ಕಡಿಮೆ ಮಾಡುವುದೇ ಗುರಿ. ನಿಮ್ಮ ಕುಟುಂಬಕ್ಕೆ ನೀವು ಬೇಕಲ್ಲವೇ?

ಕಡೇ ಮಾತು

ಸ್ಟಾಟಿನ್ ಔಷಧಗಳ ಬಗ್ಗೆ, ಅವುಗಳ ಲಾಭದ ಬಗ್ಗೆ, ಅವುಗಳಿಂದ ಆಗಬಹುದಾದ ತೊಂದರೆಗಳ ಬಗ್ಗೆ ವಿಜ್ಞಾನ ಏನು ಹೇಳುತ್ತದೋ ಅದನ್ನೆಲ್ಲಾ ಮುಚ್ಚುಮರೆಯಿಲ್ಲದೆ ನಿಮ್ಮ ಮುಂದಿಟ್ಟಿದ್ದೇನೆ.

ನೋಡಿ, ನಾನೇನು ಕೃಷ್ಣನಲ್ಲ ಬಿಡಿ, ನೀವೇನು ಅರ್ಜುನನೂ ಅಲ್ಲ. ಆದರೆ, ಭಗವದ್ಗೀತೆಯಲ್ಲಿ ಜೀವನದ ಸತ್ಯವನ್ನೆಲ್ಲಾ ಬಿಡಿಸಿ ಹೇಳಿದ ಮೇಲೆ ಕೃಷ್ಣ ಅರ್ಜುನನಿಗೆ ಒಂದು ಮಾತು ಹೇಳುತ್ತಾನೆ: “ಯಥೇಚ್ಛಸಿ ತಥಾ ಕುರು”. ಅಂದರೆ, “ನಾನು ಹೇಳಬೇಕಾದ್ದನ್ನು ಹೇಳಿದ್ದೇನೆ, ಇನ್ನು ನಿನಗೆ ಹೇಗೆ ಒಳಿತೆನಿಸುತ್ತದೋ ಹಾಗೆ ಮಾಡು” ಅಂತ.

ನಾನು ನಿಮಗೆ ಹೇಳುವುದೂ ಇದನ್ನೇ. ನನ್ನ ವೈದ್ಯಕೀಯ ಜವಾಬ್ದಾರಿಯನ್ನು ನಾನು ಮಾಡಿದ್ದೇನೆ. ಇನ್ನು ನಿಮಗೆ ಹೇಗೆ ಮನಸ್ಸೋ, ನಿಮಗೆ ಯಾವುದು ಸರಿ ಅನ್ನಿಸುತ್ತದೋ ಹಾಗೇ ಮಾಡಿ. ನಿರ್ಧಾರ ನಿಮ್ಮ ಕೈಯಲ್ಲಿದೆ.

Found this useful?

Get new articles once a week: one short email with what we published and why it matters.

No spam, and you can leave with one click.

Author profile

Shashikiran Umakanth Avatar

108 articlesEverything by Shashikiran Umakanth

2 responses to “ಕೊಲೆಸ್ಟೆರಾಲ್ ಇಳಿಸುವ ‘ಸ್ಟಾಟಿನ್’ ಔಷಧ: ವಾಸ್ತವ ಗೊತ್ತೇ?”

  1. Next year book is hypertension and Indians July 27 release , And best book award at the conference .
    Your time starts now 😀

    1. Shashikiran Umakanth Avatar
      Shashikiran Umakanth

      Thank you very much for your comment and your confidence in me, Dr Indira 🙏🏻

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to the top