ನಾವು ರಸ್ತೆ ಗುಂಡಿಗಳ ಬಗ್ಗೆ ಮಾತನಾಡುವಾಗ ಸಾಮಾನ್ಯವಾಗಿ ಬೆನ್ನುನೋವು, ವಾಹನದ ರಿಪೇರಿ ಖರ್ಚು ಅಥವಾ ಟ್ರಾಫಿಕ್ ಕಿರಿಕಿರಿಯ ಬಗ್ಗೆ ಮಾತ್ರ ಯೋಚಿಸುತ್ತೇವೆ. ನಾವೆಲ್ಲರೂ ಈ ಗುಂಡಿಗಳಿಗೆ ಎಷ್ಟರಮಟ್ಟಿಗೆ ಒಗ್ಗಿಹೋಗಿದ್ದೇವೆಂದರೆ, ಗುಂಡಿ ಕಂಡಾಕ್ಷಣ ಬ್ರೇಕ್ ಹಾಕುವುದು, ಗೇರ್ ಬದಲಾಯಿಸುವುದು ನಮ್ಮ ದೈನಂದಿನ ಅಭ್ಯಾಸವೇ ಆಗಿಬಿಟ್ಟಿದೆ. ಆದರೆ, ಈ ‘ಅಭ್ಯಾಸ’ದ ಹಿಂದಿರುವ ಒಂದು ಬಹುದೊಡ್ಡ ಆರ್ಥಿಕ ಸತ್ಯದ ಕಡೆಗೆ ನಮ್ಮ ಗಮನ ಸಾಮಾನ್ಯವಾಗಿ ಹೋಗುವುದೇ ಇಲ್ಲ.
ಹನಿ ಹನಿ ಕೂಡಿದರೆ… ಹಳ್ಳ!
ಒಂದು ವಾಹನ ರಸ್ತೆ ಗುಂಡಿ ಎದುರಾದಾಗ ಬ್ರೇಕ್ ಹಾಕಿ, ವೇಗ ತಗ್ಗಿಸಿ, ಗುಂಡಿ ದಾಟಿದ ಮೇಲೆ ಮತ್ತೆ ಆಕ್ಸಿಲರೇಟರ್ ಒತ್ತಿದಾಗ, ಸಹಜವಾಗಿ ಒಂದಷ್ಟು ಹೆಚ್ಚು ಇಂಧನ ಖರ್ಚಾಗುತ್ತದೆ. ಒಂದು ವಾಹನ, ಈ ರೀತಿ ಗುಂಡಿಗಳನ್ನು ದಾಟುವಾಗ ಹೆಚ್ಚೆಂದರೆ ಒಂದೆರಡು ಚಮಚೆಯಷ್ಟು ಪೆಟ್ರೋಲ್ ವ್ಯರ್ಥವಾಗಬಹುದು.
ಆದರೆ, ಸ್ವಲ್ಪ ಲೆಕ್ಕ ಹಾಕಿ ನೋಡಿ. ಇಡೀ ದೇಶದಲ್ಲಿ ದಿನನಿತ್ಯ ಲಕ್ಷಾಂತರ ವಾಹನಗಳು, ಕೋಟ್ಯಂತರ ರಸ್ತೆ ಗುಂಡಿಗಳನ್ನು ದಾಟುತ್ತವೆ. ನಮ್ಮಲ್ಲಿ “ಹನಿ ಹನಿ ಕೂಡಿದರೆ ಹಳ್ಳ” ಎಂಬ ಮಾತಿದೆ. ಆದರೆ ನಮ್ಮ ರಸ್ತೆಗಳ ವಿಷಯದಲ್ಲಿ, ಈ ‘ಹಳ್ಳ’ಗಳೇ ನಮ್ಮ ಇಂಧನದ ಹನಿಗಳನ್ನು ಪ್ರತಿದಿನ ಲಕ್ಷಾಂತರ ಲೀಟರ್‌ಗಳ ಲೆಕ್ಕದಲ್ಲಿ ನುಂಗಿಹಾಕುತ್ತಿವೆ!
ಜಾಗತಿಕ ಬಿಕ್ಕಟ್ಟು ಮತ್ತು ನಮ್ಮ ರಸ್ತೆಗಳು!
ಇಂದಿನ ಜಾಗತಿಕ ಮಟ್ಟದ ರಾಜಕೀಯ ಬಿಕ್ಕಟ್ಟುಗಳ ಸಮಯದಲ್ಲಿ ಕಚ್ಚಾತೈಲ ಮತ್ತು ಎಲ್‌ಪಿಜಿ ಪೂರೈಕೆ ಎಷ್ಟು ಕಷ್ಟಕರ ಮತ್ತು ದುಬಾರಿ ಎಂಬುದು ನಮಗೆಲ್ಲರಿಗೂ ಗೊತ್ತಾಗುತ್ತಿದೆ. ನಾವು ಬೇರೆ ದೇಶಗಳನ್ನು ಅವಲಂಬಿಸಿದ್ದೇವಲ್ಲದೇ, ತೈಲಕ್ಕಾಗಿ ಸಾವಿರಾರು ಕೋಟ್ಯಂತರ ರೂಪಾಯಿಗಳ ಅಮೂಲ್ಯ ವಿದೇಶಿ ವಿನಿಮಯವನ್ನು ಖರ್ಚು ಮಾಡುತ್ತಿದ್ದೇವೆ.
ಆದರೆ ವಿಪರ್ಯಾಸ ನೋಡಿ! ಅಷ್ಟು ಕಷ್ಟಪಟ್ಟು, ದುಬಾರಿ ಬೆಲೆ ತೆತ್ತು ಆಮದು ಮಾಡಿಕೊಂಡ ಇಂಧನವನ್ನು ನಾವು ಸರಾಗವಾಗಿ ಚಲಿಸಲು ಅಥವಾ ನಮ್ಮ ಸರಕು ಸಾಗಾಣಿಕೆಗಾಗಿ ಮಾತ್ರ ಬಳಸುತ್ತಿಲ್ಲ… ನಮ್ಮದೇ ರಸ್ತೆಗಳ ಗುಂಡಿಗಳನ್ನು ಇಳಿಸಿ-ಹತ್ತಿಸುವ ದೈನಂದಿನ ಕಸರತ್ತಿಗೂ ಸುಡುತ್ತಿದ್ದೇವೆ!
ಗುಂಡಿ ಮುಚ್ಚುವುದರ ಅಸಲಿ ಲಾಭ!
ಈ ದೃಷ್ಟಿಕೋನದಿಂದ ನೋಡಿದಾಗ, ರಸ್ತೆ ಗುಂಡಿಗಳನ್ನು ಮುಚ್ಚುವುದರಿಂದ ಆಗುವ ಅತಿದೊಡ್ಡ ಲಾಭ ಸಾರ್ವಜನಿಕರ ಬೆನ್ನು ನೋವು ಕಡಿಮೆ ಮಾಡುವುದಾಗಲೀ ಅಥವಾ ಸುಗಮ ಸಂಚಾರವಷ್ಟೇ ಅಲ್ಲ. ವಾಸ್ತವದಲ್ಲಿ, ಇದೊಂದು ಅತ್ಯುತ್ತಮವಾದ ಆರ್ಥಿಕ ಉಳಿತಾಯದ ತಂತ್ರ!
ಜನರ ಬೆನ್ನುನೋವು ಕಡಿಮೆಯಾಗುತ್ತದೆಯೋ ಇಲ್ಲವೋ, ವಾಹನದ ಆಯಸ್ಸು ಉಳಿಯುತ್ತದೆಯೋ ಇಲ್ಲವೋ… ಆದರೆ ರಸ್ತೆಗಳು ಸುಸ್ಥಿತಿಯಲ್ಲಿದ್ದರೆ, ಪ್ರತಿ ಬ್ರೇಕ್ ಮತ್ತು ಆಕ್ಸಿಲರೇಷನ್ ನಡುವೆ ವಿನಾಕಾರಣ ಪೋಲಾಗುವ ಆ ಅಮೂಲ್ಯ ಇಂಧನ ಖಂಡಿತ ಉಳಿಯುತ್ತದೆ. ನಮ್ಮ ದೇಶಕ್ಕೆ ತೈಲ ಆಮದಿನ ಹೊರೆ ತುಂಬಾ ಕಡಿಮೆಯಾಗುತ್ತದೆ.
ಹಾಗಾಗಿ, ರಸ್ತೆಗಳನ್ನು ಗುಂಡಿಮುಕ್ತಗೊಳಿಸುವುದು ಕೇವಲ ಒಂದು ನಾಗರಿಕ ಸೌಲಭ್ಯವಲ್ಲ, ಅದೊಂದು ‘ತೈಲ ಉಳಿತಾಯ’ದ ಬೃಹತ್ ಯೋಜನೆ ಕೂಡಾ. ರಸ್ತೆಗಳು ಸುಗಮವಾಗಿದ್ದರೆ, ವಾಹನಗಳು ಮಾತ್ರವಲ್ಲ, ದೇಶದ ಆರ್ಥಿಕತೆಯ ಹಾದಿಯೂ ಸುಗಮವಾಗುತ್ತದೆ!
ನಮ್ಮ ವಿದೇಶಿ ವಿನಿಮಯ ರಸ್ತೆ ಗುಂಡಿಗಳಲ್ಲಿ ಮುಚ್ಚಳ ತೆಗೆದಿಟ್ಟ ಪೆಟ್ರೋಲಿನ ಹಾಗೆ ಆವಿಯಾಗುವುದೂ ತಪ್ಪುತ್ತದೆ.









Leave a Reply