ಅರ್ಥಶಾಸ್ತ್ರದಲ್ಲಿ ಕೌಟಿಲ್ಯ ಹೇಳಿದ ಒಂದು ಸಾರ್ವಕಾಲಿಕ ಸತ್ಯ ಇಲ್ಲಿದೆ: “ಪ್ರಜಾ ಸುಖೇ ಸುಖಂ ರಾಜ್ಞಃ ಪ್ರಜಾನಾಂ ಚ ಹಿತೇ ಹಿತಂ.” ಅಂದರೆ, ಪ್ರಜೆಗಳ ಸುಖದಲ್ಲೇ ರಾಜನ ಸುಖವಿದೆ, ಪ್ರಜೆಗಳ ಹಿತದಲ್ಲೇ ರಾಜನ ಹಿತವಿದೆ. ಆಗಿನ ಕಾಲದಲ್ಲಿ ಬಜೆಟ್ ಅಥವಾ ಖಜಾನೆಯ ಆಯ-ವ್ಯಯ ಎಂದರೆ ಕೇವಲ ಲೆಕ್ಕಾಚಾರದ ಪಟ್ಟಿಯಾಗಿರಲಿಲ್ಲ, ಅದೊಂದು ನೈತಿಕ ಕರ್ತವ್ಯವಾಗಿತ್ತು. ಇಂದಿಗೂ ಅಷ್ಟೇ, ಬಜೆಟ್ ಎಂದರೆ ಕೇವಲ ಜಮೆ ಮತ್ತು ಖರ್ಚಿನ ಪುಸ್ತಕವಲ್ಲ. ಈಗಿನ ಕಾಲದಲ್ಲಿ ಸರ್ಕಾರವೇ ಕೌಟಿಲ್ಯನ ಕಾಲದ ರಾಜ – “ಪ್ರಜಾ ಸುಖೇ ಸುಖಂ ಸರ್ಕಾರಸ್ಯ ಪ್ರಜಾನಾಂ ಚ ಹಿತೇ ಹಿತಂ”. ಆದ್ದರಿಂದ, ಒಂದು ಸರ್ಕಾರ ತನ್ನ ನಾಗರಿಕರ ಘನತೆ ಮತ್ತು ಬದುಕಿಗೆ ಯಾವುದನ್ನು ಮುಖ್ಯವೆಂದು ಪರಿಗಣಿಸುತ್ತದೆ ಎನ್ನುವುದರ ಘೋಷಣೆಯೇ ಬಜೆಟ್ .
ಆರೋಗ್ಯ ನಾಗರಿಕರ ಘನತೆ ಮತ್ತು ಬದುಕಿಗೆ ಕೇಂದ್ರಬಿಂದು. ಯಾಕೆಂದರೆ, ಜನ ಅನಾರೋಗ್ಯದಿಂದಿದ್ದರೆ ಮಿಕ್ಕೆಲ್ಲವೂ ಕುಸಿಯುತ್ತದೆ. ಮಕ್ಕಳು ಕಾಯಿಲೆ ಬಿದ್ದರೆ ಶಾಲೆಗೆ ಹೋಗಲಾರರು, ಶಿಕ್ಷಣ ಕುಂಟುತ್ತದೆ. ಕಾರ್ಮಿಕರು ರೋಗಿಗಳಾದರೆ ಫ್ಯಾಕ್ಟರಿಗಳು ನಡೆಯುವುದಿಲ್ಲ. ಚಿಕಿತ್ಸೆಗಾಗಿ ಸಾಲ ಮಾಡಿ ಕುಟುಂಬಗಳು ಬೀದಿಗೆ ಬರುತ್ತವೆ. ಈ ಬಾರಿಯ ಬಜೆಟ್ ಅನ್ನು ನಾವು ಯಾರನ್ನೂ ದೂಷಿಸುವ ದೃಷ್ಟಿಯಿಂದಲ್ಲ, ಆದರೆ ಅತ್ಯಂತ ಜವಾಬ್ದಾರಿಯಿಂದ ನೋಡಬೇಕಿದೆ.
ಲೆಕ್ಕದ ಆಟ ಮತ್ತು ಕಠೋರ ಸತ್ಯ
ಕೇಂದ್ರ ಬಜೆಟ್‌ನ ಅಂಕಿಅಂಶಗಳನ್ನು ನೋಡಿದರೆ, ಕಳೆದ ಕೆಲವು ದಶಕಗಳಲ್ಲಿ ಆರೋಗ್ಯಕ್ಕೆ ನೀಡುವ ಹಣದಲ್ಲಿ ಏರಿಕೆಯಾಗಿರುವುದು ನಿಜ. ೨೦೨೬-೨೭ರ ಸಾಲಿಗೆ ಇದು ಒಂದು ಲಕ್ಷ ಕೋಟಿ ರೂಪಾಯಿ ದಾಟಿದೆ. ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳು ಬಡವರಿಗೆ ರಕ್ಷಾಕವಚವಾಗಿವೆ. ಆದರೆ, ಒಬ್ಬ ವೈದ್ಯನಾಗಿ ಅಂಕಿಗಳ ಆಳಕ್ಕೆ ಇಳಿದಾಗ ನನಗೆ ಸ್ವಲ್ಪ ಆತಂಕವಾಗುವುದಂತೂ ನಿಜ.
ರಾಷ್ಟ್ರೀಯ ಆರೋಗ್ಯ ನೀತಿಯ (NHP 2017) ಶಿಫಾರಸಿನ ಪ್ರಕಾರ, ದೇಶದ ಒಟ್ಟು ಆರೋಗ್ಯ ವೆಚ್ಚ ನಮ್ಮ ಜಿಡಿಪಿಯ ಕನಿಷ್ಠ ಶೇ. 2.5 ರಷ್ಟಿರಬೇಕು. ಇದನ್ನು ಸಾಮಾನ್ಯ ಭಾಷೆಯಲ್ಲಿ ಹೇಳುವುದಾದರೆ, ಸರ್ಕಾರ ತನ್ನ ಖಜಾನೆಯಿಂದ ಖರ್ಚು ಮಾಡುವ ಪ್ರತಿ 100 ರೂಪಾಯಿಯಲ್ಲಿ ಕನಿಷ್ಠ 6 ರೂಪಾಯಿಯನ್ನಾದರೂ ಜನರ ಆರೋಗ್ಯಕ್ಕಾಗಿ ಮೀಸಲಿಡಬೇಕು. ಆದರೆ, ಈಗ ಸಿಗುತ್ತಿರುವುದು ಕೇವಲ ೨ ರೂಪಾಯಿ (1.99%) ಮಾತ್ರ. ಹೀಗಾಗಿ, ಕೇಂದ್ರ ಮತ್ತು ರಾಜ್ಯಗಳೆರಡೂ ಸೇರಿದರೂ ನಮ್ಮ ದೇಶದ ಒಟ್ಟು ಆರೋಗ್ಯ ಹೂಡಿಕೆ ಇನ್ನೂ ನಿರೀಕ್ಷಿತ ಮಟ್ಟವನ್ನು ತಲುಪಿಲ್ಲ.
ಈ ರೀತಿಯಾಗಿ ಹಣದ ಹಂಚಿಕೆಯ ಏರಿಕೆ ಆಮೆ ವೇಗದಲ್ಲಿದ್ದರೆ, ನಮ್ಮ ಸಮಾಜದಲ್ಲಿ ಕಾಯಿಲೆಗಳ ಏರಿಕೆ ಚಿರತೆ ವೇಗದಲ್ಲಿದೆ. ಸಕ್ಕರೆ ಕಾಯಿಲೆ, ರಕ್ತದೊತ್ತಡ, ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳು ಹೆಚ್ಚುತ್ತಿವೆ. ಇವಕ್ಕೆ ಜೀವನಪೂರ್ತಿ ದುಬಾರಿ ಚಿಕಿತ್ಸೆ ಬೇಕು. ಹೀಗಿರುವಾಗ ಶೇ. ೬ ರಷ್ಟು ಸಿಗಬೇಕಾದ ಹಣ ಆರೋಗ್ಯ ಕ್ಷೇತ್ರಕ್ಕೆ ಇನ್ನೂ ಸಿಗುತ್ತಿಲ್ಲವೇಕೆ?
ನಮ್ಮ ಕೈಕಟ್ಟಿರುವ ‘ಬಡ್ಡಿ’ಯ ಸರಪಳಿ
ನಮಗೆ ಆರೋಗ್ಯ ಕ್ಷೇತ್ರಕ್ಕೆ ಬೇಕಾದ ಆ ಶೇ. 6 ರಷ್ಟು ಹಣವನ್ನು ಕೊಡಲು ಸರ್ಕಾರಕ್ಕೆ ಕಷ್ಟವೇಕೆ? ಗಮನಿಸಿ, ಇಲ್ಲಿರುವುದೇ ಅಸಲಿ ಸಮಸ್ಯೆ. ನಮ್ಮ ಬಜೆಟ್ ದಾಖಲೆಗಳನ್ನು ನೋಡಿದರೆ ಎಂಥವರಿಗಾದರೂ ಎದೆ ಧಸಕ್ ಎನ್ನುತ್ತದೆ. ನಮ್ಮ ಒಟ್ಟು ಬಜೆಟ್‌ನ ಸುಮಾರು ಶೇ. 24 ಕ್ಕೂ ಹೆಚ್ಚು ಭಾಗ ಕೇವಲ ಹಳೆಯ ಸಾಲಗಳಿಗೆ ಬಡ್ಡಿ ಕಟ್ಟಲಷ್ಟೇ ಖರ್ಚಾಗುತ್ತಿದೆ!
ನಾವು ಅಭಿವೃದ್ಧಿಗಾಗಿ ಹಿಂದೆ ಮಾಡಿದ ಸಾಲಗಳಿಗೆ ಈಗ ಬಡ್ಡಿ ಕಟ್ಟಲೇಬೇಕು, ಅದು ಅನಿವಾರ್ಯ. ಆದರೆ ಯೋಚಿಸಿ ನೋಡಿ, ನಮ್ಮ ಆದಾಯದ ಕಾಲು ಭಾಗ ಬಡ್ಡಿಗೇ ಹೋದರೆ, ಇನ್ನುಳಿದ ಹಣದಲ್ಲಿ ರಕ್ಷಣೆ, ಶಿಕ್ಷಣ, ರಸ್ತೆ ಮತ್ತು ಆರೋಗ್ಯಕ್ಕೆ ಹಂಚುವುದಾದರೂ ಹೇಗೆ? ಹೀಗಾಗಿ ಆರೋಗ್ಯ ಕ್ಷೇತ್ರಕ್ಕೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. ಬಡ್ಡಿಯ ಭಾರ ನಮ್ಮ ಸಾರ್ವಜನಿಕ ಆರೋಗ್ಯದ ಮೇಲೆ ಬರೆ ಎಳೆಯುತ್ತಿದೆ.
ಆದರೆ, ನಾವು ಆರೋಗ್ಯವನ್ನು ಕೇವಲ ಖರ್ಚು ಎಂದು ನೋಡಬಾರದು. ಅದೊಂದು ಬಂಡವಾಳ. ರೋಗಮುಕ್ತ ಸಮಾಜವಿದ್ದರೆ ಜನರು ಹೆಚ್ಚು ಕೆಲಸ ಮಾಡಲು ಸಮರ್ಥರಾಗುತ್ತಾರೆ ಮತ್ತು ಹೆಚ್ಚು ಸಂಪಾದಿಸುತ್ತಾರೆ. ಆರೋಗ್ಯಕ್ಕಾಗಿ ಮಾಡುವ ಖರ್ಚು ಆರ್ಥಿಕ ನಷ್ಟವಲ್ಲ, ಅದು ದೇಶದ ದೀರ್ಘಕಾಲದ ಲಾಭ.
ಮುಂದಿನ ಹಾದಿ ಹೇಗಿರಲಿ?
ಮುಂದಿನ ಹಾದಿ ಹೀಗಿರಲಿ:
ಬರೇ ಟೀಕೆ ಮಾಡದೆ, ಮುಂದಿನ ಐದು ವರ್ಷಗಳ ಕಾಲ ನಮ್ಮ ಸರ್ಕಾರಗಳು ಮತ್ತು ನಾವು ಈ ಪ್ರಮುಖ ಕೆಲಸಗಳನ್ನು ಮಾಡಬೇಕಿದೆ:
- ಗುರಿ ಮುಟ್ಟಲೇಬೇಕು: ಎಷ್ಟೇ ಕಷ್ಟವಾದರೂ 2031 ರ ವೇಳೆಗೆ ಆರೋಗ್ಯ ವೆಚ್ಚವನ್ನು ಜಿಡಿಪಿಯ ಶೇ. 3 ಕ್ಕಾದರೂ ಏರಿಸಲೇಬೇಕು.
- ಕಟ್ಟಡಕ್ಕಿಂತ ನಿರ್ವಹಣೆ ಮುಖ್ಯ: ಆಸ್ಪತ್ರೆ ಕಟ್ಟಿದರೆ ಕೆಲಸ ಮುಗಿಯಲಿಲ್ಲ, ಅದು ಅರ್ಧ ಕೆಲಸವಷ್ಟೇ. ವೆಂಟಿಲೇಟರ್ ಕೊಂಡರೆ ಸಾಲದು, ಅದನ್ನು ನಡೆಸುವ ಟೆಕ್ನಿಷಿಯನ್ ಹಾಗೂ ವೈದ್ಯರು ಬೇಕು. ಯಂತ್ರಗಳನ್ನು ಕೊಟ್ಟು, ನಿರ್ವಹಣೆಗೆ ಹಣ ಕೊಡದಿದ್ದರೆ ಆಸ್ಪತ್ರೆಗಳು ಬರೀ ಪ್ರದರ್ಶನಾಲಯಗಳಾಗುತ್ತವೆ.
- ತಡೆಗಟ್ಟುವಿಕೆಯೇ ಮದ್ದು: ರೋಗ ಬಂದ ಮೇಲೆ ಲಕ್ಷ ಖರ್ಚು ಮಾಡುವ ಬದಲು, ಅದು ಬರದಂತೆ ತಡೆಯುವ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸಬೇಕು. ಇಂದು ಮೂವತ್ತು ರೂಪಾಯಿ ಖರ್ಚು ಮಾಡಿ ಬಿಪಿ – ಶುಗರ್ ಕಂಟ್ರೋಲ್ ಮಾಡಿದರೆ, ಮುಂದೆ ಮೂರು ಲಕ್ಷದ ಹಾರ್ಟ್ ಆಪರೇಷನ್ ತಪ್ಪಿಸಬಹುದು.
- ವಿಜ್ಞಾನವೇ ಮಾನದಂಡವಾಗಲಿ: ಚಿಕಿತ್ಸಾ ಪದ್ಧತಿ ಯಾವುದೇ ಇರಲಿ.. ಆಧುನಿಕವೋ ಅಥವಾ ಸಾಂಪ್ರದಾಯಿಕವೋ.. ಅದಕ್ಕೆ ಸರ್ಕಾರದ ಅನುದಾನ ಸಿಗಬೇಕಾದರೆ ವೈಜ್ಞಾನಿಕ ಸಾಕ್ಷ್ಯ ಮತ್ತು ಸುರಕ್ಷತೆಯ ದೃಢೀಕರಣ ಕಡ್ಡಾಯವಿರಲಿ.”
ಕೊನೆಯ ಮಾತು: ಸಮೃದ್ಧಿಯ ನಿಜವಾದ ಲೆಕ್ಕಾಚಾರ
ಅಂತಿಮವಾಗಿ, ನಾವು ಒಂದು ದೇಶವಾಗಿ ಅಭಿವೃದ್ಧಿಯನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಎನ್ನುವುದೇ ಮುಖ್ಯ ಪ್ರಶ್ನೆ. ಬಜೆಟ್ ಎನ್ನುವುದು ಕೇವಲ ರಸ್ತೆ, ಸೇತುವೆ ಅಥವಾ ಕಟ್ಟಡಗಳ ನಿರ್ಮಾಣವಲ್ಲ; ಅದು ಆ ರಸ್ತೆಗಳಲ್ಲಿ ನಡೆಯುವ ಜನರ ಧಮನಿಯಲ್ಲಿ ಹರಿಯುವ ಚೈತನ್ಯವೂ ಹೌದು.
ಒಬ್ಬ ವೈದ್ಯನಾಗಿ ಮತ್ತು ಪ್ರಜೆಯಾಗಿ ನಾನಿದನ್ನು ಹೀಗೆ ನೋಡುತ್ತೇನೆ: “ಹಣಕಾಸಿನ ಶಿಸ್ತು” ದೇಶದ ಮೆದುಳಿದ್ದಂತೆ, ಆದರೆ “ಸಾರ್ವಜನಿಕ ಆರೋಗ್ಯ” ದೇಶದ ಹೃದಯವಿದ್ದಂತೆ. ಮೆದುಳು ಲೆಕ್ಕ ಹಾಕುತ್ತಿರಲಿ, ಆದರೆ ಹೃದಯ ಬಡಿದುಕೊಳ್ಳುವುದೇ ವ್ಯತ್ಯಾಸವಾದರೆ ಅಥವಾ ನಿಂತರೆ ಆ ಲೆಕ್ಕಾಚಾರಕ್ಕೆ ಅರ್ಥವಿರುವುದಿಲ್ಲ.
ಬಜೆಟ್ ಪುಸ್ತಕದಲ್ಲಿ ಹಣಕಾಸಿನ ಕೊರತೆ ಇರುವುದು ಸಹಜ. ಆದರೆ ಆ ಕೊರತೆಯನ್ನು ತುಂಬುವ ಭರದಲ್ಲಿ, ಸಮಾಜದಲ್ಲಿ ಸರಿಪಡಿಸಲಾಗದ ಮಾನವ ಸಂಪನ್ಮೂಲದ ಕೊರತೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದೇ ನಿಜವಾದ ಧರ್ಮ. ಏಕೆಂದರೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕಿಂತಲೂ ಬೆಲೆಬಾಳುವ ಇಂಧನವೊಂದಿದ್ದರೆ, ಅದು ನಮ್ಮ ಯುವಜನರ ಆರೋಗ್ಯ ಮತ್ತು ಹಿರಿಯರ ನೆಮ್ಮದಿ.
ರೋಗಗ್ರಸ್ತ ಸಮಾಜ ದೇಶಕ್ಕೆ ಹೊರೆ, ಅದೇ ರೋಗಮುಕ್ತ ಸಮಾಜ ದೇಶದ ಅತ್ಯಮೂಲ್ಯ ಆಸ್ತಿ. ಆದ್ದರಿಂದ ನಮ್ಮ ಸರ್ಕಾರದ ಲೆಕ್ಕಾಚಾರ ಕೇವಲ ರೂಪಾಯಿಗಳ ಉಳಿತಾಯವಾಗಿರದೆ, ಜೀವಗಳ ರಕ್ಷಣೆಯಾಗಿರಲಿ.
ಮೂಲ ಪ್ರಕಟಣೆ










Leave a Reply